ರಾಯಚೂರು: ಮೇ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುವಾವಣೆಗೆ ಕಳೆದ ಶನಿವಾರ ಬಿಸಿಲ ನಾಡಲ್ಲಿ ರಣ ಕಹಳೆ ಊದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ರಾಯಚೂರಿನ ಒಂದು ಸಣ್ಣ ಹೋಟೆಲ್ ನಲ್ಲಿ ಉತ್ತರ ಕರ್ನಾಟಕದ ವಿಶೇಷ ತಿಂಡಿ ಒಗ್ಗರಣಿ ಹಾಗೂ ಬಜಿ ಸವಿದರು.
ಹೊಸಪೇಟೆಯಿಂದ ಆರಂಭವಾದ ಜನಾರ್ಶೀವಾದ ಯಾತ್ರೆಯ ಮೂರನೇ ದಿನ ರಾಯಚೂರು ತಾಲೂಕಿನ ಕಲ್ಮಲ ಬಳಿ ಬಸ್ ನಿಲ್ಲಿಸಿದ ರಾಹುಲ್ ಗಾಂಧಿ, ಅಲ್ಲಿ ಒಗ್ಗರಣಿ ಮತ್ತು ಬಜಿ ಸವಿದರು. ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಹಾಗೂ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸಾಥ್ ನೀಡಿದರು.
ಹೋಟೆಲ್ ಮಾಲೀಕ ಮೌಲಾ ಸಾಬ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಂಡಕ್ಕಿಯಿಂದ ಮಾಡಿದ ಒಗ್ಗರಣಿ ಮತ್ತು ಮಿರ್ಜಿ ಬಜಿಯನ್ನು ನೀಡಿದರು.
ಉತ್ತರ ಕರ್ನಾಟಕದ ವಿಶೇಷ ತಿಂಡಿ ಸವಿದ ಬಳಿಕ ರಾಹುಲ್ ಗಾಂಧಿ ಕಲ್ಮಲದ ಮಹಿಳೆಯರೊಂದಿಗೆ ಕೆಲಕಾಲ ಸಂವಾದ ನಡೆಸಿದರು.