ರಾಷ್ಟ್ರೀಯ

ಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸದ್ಯಕ್ಕೆ ನಕಾರ

Pinterest LinkedIn Tumblr

ನವದೆಹಲಿ: ರಾಜ್ಯದ ಕರಾವಳಿಯ ಜನಪ್ರಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದ್ದು, ಕೋಣಗಳ ವಾರ್ಷಿಕ ಓಟದ ಸ್ಪರ್ಧೆ ನಿರಾಂತಕವಾಗಿ ಮುಂದುವರೆಯಲಿದೆ.

ಕಂಬಳಕ್ಕೆ ತಡೆ ಕೋರಿ ಪೆಟಾ (ಪ್ರಾಣಿ ದಯಾ ಸಂಘ), ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಕಂಬಳಕ್ಕೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಈ ಕುರಿತ ಅಂತಿಮ ವಿಚಾರಣೆಯನ್ನು ಮಾರ್ಚ್‌ 12ರಂದು ನಿಗದಿ ಪಡಿಸಿದ್ದಾರೆ.

ಕರಾವಳಿಯಲ್ಲಿ ಕಂಬಳ ಪ್ರತಿವರ್ಷ ಡಿಸೆಂಬರ್ ನಲ್ಲಿ ಆರಂಭವಾಗಿ ಮಾರ್ಚ್ ವರೆಗೆ ನಡೆಯುತ್ತದೆ. ಕಂಬಳವನ್ನು ರಾಜ್ಯ ಸರ್ಕಾರ ಕಾನೂನುಬದ್ಧಗೊಳಿಸಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಪೆಟಾ, ಕಂಬಳ ಕ್ರೀಡೆ ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಆಶಯಗಳಿಗೆ ವಿರುದ್ಧವಾಗಿದೆ. ಅಷ್ಟೇ ಅಲ್ಲದೆ, ಸಂವಿಧಾನದಹ ಹಲವು ಕಲಂಗಳಿಗೂ ವಿರುದ್ಧವಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಪೇಟಾ ಸಂಘಟನೆ ಸಲ್ಲಿಸಿದ್ದ ಮನವಿಗೆ ಮೂರು ವಾರಗಳೊಳಗೆ ಉತ್ತರಿಸುವಂತೆ ಕಳೆದ ಡಿಸೆಂಬರ್ 12ರಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ತಿಳಿಸಿದ್ದು, ಪೇಟಾ ಸಂಘಟನೆಗೆ 2 ವಾರಗಳೊಳಗೆ ಪ್ರತಿವಾದವನ್ನು ಮಂಡಿಸಲು ಕಾಲಾವಕಾಶ ನೀಡಿತ್ತು.

Comments are closed.