ಕರ್ನಾಟಕ

ಯುವಕನೊಬ್ಬನ ತಲೆಗೆ ಶಸ್ತ್ರಚಿಕಿತ್ಸೆ ನಡೆಸಿದ ನಂತರ ತಲೆ ಚಿಪ್ಪು ಕಸದ ಬುಟ್ಟಿಗೆ ಎಸೆದ ವೈದ್ಯರು !

Pinterest LinkedIn Tumblr

ಬೆಂಗಳೂರು: ಯುವನೊಬ್ಬನ ತಲೆಗೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ತಲೆ ಚಿಪ್ಪನ್ನು ಕಸದ ಬುಟ್ಟಿಗೆ ಎಸೆದಿರುವುದಾಗಿ ಹೇಳಿ ನಿರ್ಲಕ್ಷ್ಯ ತೋರಿದ ಆರೋಪದಲ್ಲಿವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಇಬ್ಬರು ನ್ಯೂರೋ ಸರ್ಜನ್‌ಗಳ ವಿರುದ್ಧ ವೈಟ್‌ಫೀಲ್ಡ್‌ ಠಾಣೆಯಲ್ಲಿಎಫ್‌ಐಆರ್‌ ದಾಖಲಾಗಿದೆ.

ಆಸ್ಪತ್ರೆಯಲ್ಲಿಶಸ್ತ್ರಚಿಕಿತ್ಸೆಗೆ ಒಳಗಾದ ಚಿಕ್ಕಮಗಳೂರು ಮೂಲದ ಯುವಕ ಮಂಜುನಾಥನ (25) ತಾಯಿ ರುಕ್ಮಿಣಿಯಮ್ಮ ಅವರು ನೀಡಿದ ದೂರು ಆಧರಿಸಿ ವೈದ್ಯರಾದ ಡಾ.ಬಿ.ಜಿ ಗುರುಪ್ರಸಾದ್‌ ಮತ್ತು ಡಾ.ರಾಜೇಶ್‌.ಆರ್‌ ರಾಯ್ಕರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

”ನಿರಂತರವಾಗಿ ತಲೆನೋವು ಉಂಟಾಗುತ್ತಿತ್ತು. ತಾಯಿ ವೈದೇಹಿ ಆಸ್ಪತ್ರೆಗೆ ಕರೆದೊಯ್ದಿದ್ದರು. ತುರ್ತು ಶಸ್ತ್ರಚಿಕಿತ್ಸೆ ನಡೆಸಬೇಕು. ಮೆದುಳಿನಲ್ಲಿಉಂಟಾಗಿರುವ ರಕ್ತ ಹೆಪ್ಪುಗಟ್ಟುವಿಕೆಯನ್ನು ಸರಿಪಡಿಸಬೇಕು ಎಂದು ವೈದ್ಯರು ಹೇಳಿದರು. ಶಸ್ತ್ರಚಿಕಿತ್ಸೆಯ ನಂತರ ಮೆದುಳಿನಲ್ಲಿಊತ ಉಂಟಾಗಿದೆ. ಹೀಗಾಗಿ, ತಲೆ ಬುರುಡೆಯ ಸ್ವಲ್ಪ ಭಾಗವನ್ನು ತೆರವುಗೊಳಿಸಿ, ಮೆದುಳು ಸಾಮಾನ್ಯ ಸ್ಥಿತಿಗೆ ಬಂದ ನಂತರ ಅದನ್ನು ಮತ್ತೆ ಜೋಡಿಸುವುದಾಗಿ ಹೇಳಿದ್ದರು. ಶಸ್ತ್ರಚಿಕಿತ್ಸೆಯ ನಂತರ ಕೆಲ ದಿನಗಳ ಬಳಿಕ ಆಸ್ಪತ್ರೆಗೆ ತೆರಳಿ ಚಿಪ್ಪು ಅಳವಡಿಸುವಂತೆ ಕೋರಿದೆವು. ಆದರೆ, ಊತ ಇನ್ನೂ ಇರುವ ಕಾರಣ ಚಿಪ್ಪು ಅಳವಡಿಸಲು ಆಗದು ಎಂದರು. ಹೀಗಾಗಿ, ಕೆಲ ದಿನ ನಂತರ ಮತ್ತೆ ಆಸ್ಪತ್ರೆಗೆ ತೆರಳಿದಾಗ ಚಿಪ್ಪನ್ನು ಡಸ್ಟ್‌ಬಿನ್‌ಗೆ ಬಿಸಾಡಿದ್ದಾಗಿ ಹೇಳಿದ್ದಾರೆ,” ಎಂದು ಮಂಜುನಾಥ ಆರೋಪಿಸಿದ್ದಾರೆ.

ವೈದ್ಯರು ಹೇಳುವುದೇನು?

ಆಸ್ಪತ್ರೆಗೆ ಮಂಜುನಾಥನನ್ನು ಕರೆ ತಂದಾಗ ಪರಿಸ್ಥಿತಿ ಚಿಂತಾಜನಕವಾಗಿತ್ತು. ಬಲಭಾಗದ ಕಾರೋಡಿಟ್‌ ಆರ್ಟೆರಿ ಸಂಪೂರ್ಣವಾಗಿ ಬ್ಲಾಕ್‌ ಆಗಿತ್ತು. ಈ ಕಾರಣದಿಂದ ಆತನಿಗೆ ದೇಹದ ಎಡಭಾಗದ ಮೇಲೆ ನಿಯಂತ್ರಣವೇ ಇರಲಿಲ್ಲ. ಇದರಿಂದಾಗಿ ಮೆದುಳಿನ ಮೇಲೆ ಒತ್ತಡ ಉಂಟಾಗಿತ್ತು. ಹೀಗಾಗಿ, ಶಸ್ತ್ರಚಿಕಿತ್ಸೆ ನಡೆಸಿ ಬ್ಲಾಕ್‌ ಅನ್ನು ಸರಿಪಡಿಸಲಾಯಿತು. 24 ತಾಸಿನಲ್ಲೇ ರೋಗಿಗೆ ಜ್ಞಾನ ಬಂದಿತ್ತು. ಈ ಮೂಲಕ ಆತನನ್ನು ಉಳಿಸಿದ್ದೇವೆ. ನಂತರ ಆತ 20 ದಿನ ಆಸ್ಪತ್ರೆಯಲ್ಲಿಇದ್ದ ಎಂದು ಡಾ. ಗುರುಪ್ರಸಾದ್‌ ಹೇಳಿದರು.

”ತಲೆ ಚಿಪ್ಪನ್ನು ತೆರವುಗೊಳಿಸಿದ 2 ವಾರದಲ್ಲಿ ಮತ್ತೆ ಜೋಡಿಸಬಹುದಾದ ಅವಕಾಶವಿತ್ತು. ಆದರೆ, ನಾಲ್ಕು ವಾರಗಳ ಬಳಿಕ ಮಂಜುನಾಥ ಆಸ್ಪತ್ರೆಗೆ ಬಂದಿದ್ದ. ಈ ವೇಳೆ ಆತನಿಗೆ ಮೂಳೆ ಜಾಗದಲ್ಲಿ’ಟೈಟಾನಿಯಂ’ ನ ಮೆಶ್‌ ಕೂರಿಸುವುದಾಗಿ ಹೇಳಿದೆವು. ಆದರೆ, ಆತ ತಲೆ ಬುರುಡೆ ಚಿಪ್ಪನ್ನೇ ಜೋಡಿಸಬೇಕು ಎಂದು ಕೇಳಿದ್ದ. ಶಸ್ತ್ರಚಿಕಿತ್ಸೆ ವೇಳೆ ತೆರವುಗೊಳಿಸಲಾದ ತಲೆಚಿಪ್ಪುನ್ನು ಮತ್ತೆ ಅದೇ ಜಾಗಕ್ಕೆ ಕೂರಿಸಲು ಆಗದು ಎಂದು ಕುಟುಂಬದವರಿಗೆ ತಿಳಿಸಿ ಹೇಳಿದ್ದೆವು. ಅದಕ್ಕೆ ಪೂರಕವಾಗಿ ನಮ್ಮಲ್ಲಿದಾಖಲೆಗಳು ಇವೆ,” ಎಂದು ಡಾ.ಗುರುಪ್ರಸಾದ್‌ ಹೇಳಿದರು.

ಶೀಘ್ರ ವಿಚಾರಣೆ:

”ಘಟನೆಗೆ ಸಂಬಂಧಿಸಿದಂತೆ ದೂರುದಾರ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಕೇಳಿದ್ದೇವೆ. ಆರೋಪಿತರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಲಭಿಸುತ್ತಿದ್ದಂತೆ ಆರೋಪಿತರನ್ನು ಕರೆದು ವಿಚಾರಣೆ ನಡೆಸುತ್ತೇವೆ” ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ವಿಳಂಬವಾದರೆ ಅಳವಡಿಕೆ ಅಸಾಧ್ಯ :

ವೈದ್ಯರ ಕಡೆಯಿಂದ ತಪ್ಪಾದಂತೆ ಅನ್ನಿಸುತ್ತಿಲ್ಲ ಎಂದು ಬೆಂಗಳೂರಿನ ಹಿರಿಯ ನ್ಯೂರೋಸರ್ಜನ್‌ ಒಬ್ಬರು ಹೇಳಿದ್ದಾರೆ. ಶಸ್ತ್ರಚಿಕಿತ್ಸೆಯ ನಾಲ್ಕು ವಾರಗಳ ನಂತರ ಮೂಳೆ ಚಿಪ್ಪನ್ನು ಮತ್ತೆ ಅದೇ ಜಾಗಕ್ಕೆ ಕೂರಿಸಲು ಆಗುವುದಿಲ್ಲ ಎಂದು ಅವರು ದೃಢಪಡಿಸಿದ್ದಾರೆ.

Comments are closed.