ಕರ್ನಾಟಕ

ಸಂತೋಷ್‌ ಕೊಲೆ ಪ್ರಕರಣ ಸಿಸಿಬಿಗೆ; ಇಂದು ಬಿಜೆಪಿ ಪ್ರತಿಭಟನೆ

Pinterest LinkedIn Tumblr


ಬೆಂಗಳೂರು: ಬುಧವಾರ ರಾತ್ರಿ ಜೆ.ಸಿ. ನಗರದ ಚಿನ್ನಪ್ಪ ಗಾರ್ಡನ್‌ನಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್‌ (28) ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ದೊರಕಿದ್ದು, ಗಾಂಜಾ ಸೇವನೆ ವಿರೋಧಿಸಿದ್ದೆ ಕೊಲೆಗೆ ಕಾರಣ ಎನ್ನುವ ಮಾತು ಕೇಳಿ ಬಂದಿದೆ.

ಸಂತೋಷ್‌ ಸ್ನೇಹಿತರಾದ ರಾಜೇಶ್‌ ಮತ್ತು ಅಶೋಕ್‌ ಹೇಳಿಕೆ ನೀಡಿದ್ದು, ಗಾಂಜಾ ಸೇವನೆ ವಿರೋಧಿಸಿದ್ದಕ್ಕೆ ಸಂತೋಷ್‌ ಹತ್ಯೆ ನಡೆದಿದೆ ಎಂದಿದ್ದಾರೆ.

ನಾಲ್ವರು ಆರೋಪಿಗಳ ಬಂಧನ
ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ವರು ಆರೋಪಿಗಳನ್ನು ಈಗಾಗಲೆ ವಶಕ್ಕೆ ಪಡೆಯಲಾಗಿದ್ದು, ಪ್ರಮುಖ ಆರೋಪಿ ರಾಮಸ್ವಾಮಿ ಪಾಳ್ಯ ವಾರ್ಡ್‌ನ ಕಾಂಗ್ರೆಸ್‌ ಅಧ್ಯಕ್ಷ ಖಾದರ್‌ ಪುತ್ರ ವಾಸೀಂ, ಆತನ ಸ್ನೇಹಿತ ಫಿಲಿಪ್ಸ್‌ ನನ್ನು ಬುಧವಾರ ರಾತ್ರಿಯೆ ವಶಕ್ಕೆ ಪಡೆಯಲಾಗಿತ್ತು.

ಇನ್ನಿಬ್ಬರು ಆರೋಪಿಗಳಾದ ಇರ್ಫಾನ್‌ ಮತ್ತು ಉಮರ್‌ ನನ್ನು ವಶಕ್ಕೆ ಚೇತನ್‌ ಸಿಂಗ್‌ ರಾಠೊಡ್‌ ನೇತೃತ್ವದ ಪೊಲೀಸರ ತಂಡ ಗುರುವಾರ ಮಧ್ಯಾಹ್ನ ವಶಕ್ಕೆ ಪಡೆದಿದೆ.

ಹತ್ಯೆ ಆರೋಪಿ ವಾಸೀಂ ಆಗಾಗ ಬಂದು ಸಂತೋಷ್‌ಗೆ ಕಾಂಗ್ರೆಸ್‌ ಸೇರುವಂತೆ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೆ ಗಾಂಜಾ ವ್ಯಸನಿಯಾಗಿರುವ ವಾಸೀಂಗೆ ಉತ್ತಮ ನಡತೆ ಹೊಂದುವಂತೆ ಸಂತೋಷ್‌ ಬುದ್ಧಿ ಹೇಳಿದ್ದ. ಇದೇ ವಿಷಯದ ಸಂಬಂಧ ಸ್ಥಳೀಯ ಬೇಕರಿ ಬಳಿ ಜಗಳವಾಗಿದ್ದು ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಂದಿರುವುದಾಗಿ ಜೆ.ಸಿ.ನಗರ ಪೊಲೀಸರು ತಿಳಿಸಿದ್ದಾರೆ.

ಮೃತ ದೇಹ ಹಸ್ತಾಂತರ

ಬಿಜೆಪಿ ಕಾರ್ಯಕರ್ತರ ವ್ಯಾಪಕ ಆಕ್ರೋಶದ ನಡುವೆಯೂ ಸಂತೋಷ್‌ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ , ಮನೆಯವರಿಗೆ ಹಸ್ತಾಂತರಿಸಲಾಗಿದೆ. ನೂರಾರು ಬಿಜೆಪಿ ಕಾರ್ಯಕರ್ತರು ಮನೆ ಬಳಿ ಜಮಾವಣೆಗೊಂಡಿದ್ದಾರೆ. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪ್ರಕರಣ ಸಿಸಿಬಿಗೆ
ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ಅವರು ಮಾತನಾಡಿ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಹತ್ಯೆಗೀಡಾದ ಸಂತೋಷ್‌ ಮನೆಯವರು ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದಿರುವ ಕಾರಣಕ್ಕಾಗಿ ಪ್ರಕರಣವನ್ನು ಈಗಾಗಲೆ ಸಿಸಿಬಿಗೆ ವರ್ಗಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯಾಧ್ಯಂತ ಪ್ರತಿಭಟನೆ

ಸಂತೋಷ್‌ ಹತ್ಯೆ ಖಂಡಿಸಿ ಬಿಜೆಪಿ ಘಟಕ ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ದಲಿತ ವರ್ಗಕ್ಕೆ ಸೇರಿರುವ ಸಂತೋಷ್‌ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಬೇಕು ಮತ್ತು ಕೂಡಲೇ 5 ಲಕ್ಷ ಪರಿಹಾರ ಘೋಷಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

-ಉದಯವಾಣಿ

Comments are closed.