ಕರ್ನಾಟಕ

ಹಿಂದೂಗಳ ಮೇಲೆ ನಿಜವಾಗಲೂ ಪ್ರೀತಿ, ಕಾಳಜಿ ಇದ್ದರೆ ಗೋಹತ್ಯೆಯನ್ನು ನಿಷೇಧಿಸಲಿ: ಸಿದ್ಧರಾಮಯ್ಯರಿಗೆ ಯೋಗಿ ಆದಿತ್ಯನಾಥ್ ಸವಾಲು

Pinterest LinkedIn Tumblr

ಬೆಂಗಳೂರು: ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹಿಂದೂತ್ವ ನೆನಪಾಗುತ್ತಿದೆ. ಹಿಂದೂಗಳ ಮೇಲೆ ಅವರಿಗೆ ನಿಜವಾಗಲೂ ಪ್ರೀತಿ, ಕಾಳಜಿ ಇದ್ದರೆ ಗೋಹತ್ಯೆಯನ್ನು ನಿಷೇಧಿಸಲಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸವಾಲು ಹಾಕಿದರು.

ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರಿಗೆ ದೇವಸ್ಥಾನಗಳು ಹಾಗೂ ಮಂದಿರಗಳು ನೆನಪಾಗುತ್ತದೆ. ಸಿದ್ಧರಾಮಯ್ಯನವರಿಗೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಹಿಂದೂಗಳು ಹಾಗೂ ಹಿಂದುತ್ವದ ಸ್ಮರಣೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಹಿಂದುತ್ವ ಎಂಬುದು ಒಂದು ಉತ್ಕೃಷ್ಟ ಜೀವನ ಶೈಲಿ. ಯಾವುದೇ ಜಾತಿ ಮತ ಸಂಸತ್‌ಗೆ ಸೇರಿದ್ದಲ್ಲ. ಅದು ಜೀವನ ಕ್ರಮ ಇದನ್ನು ಸಿದ್ಧರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಗೋಹತ್ಯೆ ಪರ ವಕಾಲತ್ತು ವಹಿಸಿದೆ ಗೋ ಹತ್ಯೆ ನಿಷೇಧಿಸಲಿ ಎಂದು ಹೇಳಿದರು.

ನಗರಗದ ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿಂದ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಪಕ್ಷಕ್ಕೆ ಎಟಿಎಂ ಇದ್ದಂತೆ. ದೇಶದ ಯಾವ ದೊಡ್ಡ ರಾಜ್ಯದಲ್ಲೂ ಕಾಂಗ್ರೆಸ್ ಆಡಳಿತದಲ್ಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಿಂದಲೇ ಆರ್ಥಿಕ ಪೋಷಣೆ. ಸಿದ್ಧರಾಮಯ್ಯ ಸರ್ಕಾರ ಕಾಂಗ್ರೆಸ್‌ನ ಎಟಿಎಂ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ಜಾತಿಗಳನ್ನು ಒಡೆಯುತ್ತಿದೆ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿಯಲ್ಲಿ ರಾಜ್ಯ ಹಿಂದೆ ಬಿದ್ದಿದೆ. ಪ್ರಧಾನಿ ಮೋದಿ ಅವರ ಸದೃಢ ದೇಶ ಕಟ್ಟುವ ಕನಸು ಸಹಕಾರಗೊಳ್ಳಬೇಕಾದರೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಸಮಾನ ವಿಚಾರಧಾರೆ, ಸಮಾನ ಮನಸ್ಕ ಸರ್ಕಾರಗಳು ಇದ್ದರೆ ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತದೆ. ಕೇಂದ್ರ ಯೋಜನೆಗಳು ಸಮರ್ಥವಾಗಿ ಅನುಷ್ಠಾನಗೊಳ್ಳುತ್ತವೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದಿರುವ ಪರಿವರ್ತನಾಯ ಯಾತ್ರೆ ರಾಜ್ಯದಲ್ಲಿ ಪರಿವರ್ತನೆಗೆ ನಾಂದಿ ಹಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವದು ನಿಶ್ಚಿತ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ದೇಶಕ್ಕೆ ಒಂದು ಸಮಸ್ಯೆ ಇದ್ದಂತೆ. ಅವರ ವಿನಾಶ ನೀತಿಗಳು ಭ್ರಷ್ಟ ಆಡಳಿತದಿಂದ ದೇಶ ಅಭಿವೃದ್ಧಿಯಲ್ಲಿ ಹಿಂದೆ ಬೀಳುವಂತಾಗಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶ ವಿಕಾಸದ ಹಾದಿಗೆ ಮರಳಿದೆ ಎಂದರು.

ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ, ಮೆಟ್ರೋ ಸೇರಿದಂತೆ ಹಲವು ಯೋಜನೆಗಳು ಸಿಕ್ಕಿದ್ದವು. ಈಗಲೂ ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಜನ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮಾದರಿ ಆಡಳಿತದಿಂದಲೇ ಗುಜರಾತ್‌ನಲ್ಲಿ ಆರನೇ ಬಾರಿ ಅಧಿಕಾರಕ್ಕೆ ಬಂದಿದ್ದು, ಕರ್ನಾಟಕ ಹನುಮಾನ್ ರವರ ಜನ್ಮಸ್ಥಳ, ಶ್ರೀರಾಮನ ರಾಜಧಾನಿ ಇದ್ದ ಹಾಗೆ. ಹಾಗಾಗಿ ಹನುಮನ ನಾಡಿನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.

ಕರ್ನಾಟಕಕ್ಕೂ ಉತ್ತರಪ್ರದೇಶದ ಗೋರಕ್‌‌ನಾಥ್ ಪೀಠಕ್ಕೆ ಅವಿನಾಭಾವ ಸಂಬಂಧವಿದೆ. ಗೋರಕ್‌ನಾಥನನ್ನು ಮಂಜುನಾಥ ಎಂದು ರಾಜ್ಯದಲ್ಲಿ ಕರೆಯಲಾಗುತ್ತಿದೆ. ಧರ್ಮಸ್ಥಳದ ಮಂಜುನಾಥನೆ ಗೋರಕನಾಥ ಎಂದು ಹೇಳಿದ ಅವರು, ಆದಿಚುಂಚನಗಿರಿ ಮಠ ಸಹ ನಾಡ ಪರಂಪರೆಯ ಮಠವಾಗಿದೆ ಎಂದು ಹೇಳಿದರು.

ನವ ಕರ್ನಾಟಕ ನಿರ್ಮಾಣಕ್ಕಾಗಿ ಯಡಿಯೂರಪ್ಪನವರು ರಾಜ್ಯಾದ್ಯಂತ ಪರಿವರ್ನತಾ ಯಾತ್ರೆ ನಡೆಸಿದ್ದಾರೆ. ಅವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಪುನರುಚ್ಛರಿಸಿದ ಅವರು, ರಾಜ್ಯದ ಜನತೆಗೆ ಬಿಜೆಪಿ ಸರ್ಕಾರದ ಅವಶ್ಯಕತೆ ಇದೆ. ಕಾಂಗ್ರೆಸ್ ಕೇಂದ್ರ ಸರ್ಕಾರದ ಯೋಜನೆಗಳ ಮಹತ್ವ ಅರಿಯದೇ ರಾಜಕೀಯಕ್ಕಾಗಿ ಅದನ್ನು ವಿರೋಧಿಸುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗಟ್ಟಿದ್ದು, ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ ಎಂದು ಟೀಕಿಸಿದ ಅವರು, ಉತ್ತರ ಪ್ರದೇಶದಲ್ಲೂ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ನಮ್ಮ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಇದುವರೆಗೂ ಯಾವುದೇ ಗಲಭೆ ಗಲಾಟೆಗಳು ನಡೆದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಜನತೆಯ ಆಶೀರ್ವಾದದಿಂದ ಈಗಾಗಲೇ 160 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ನಡಸಿದ್ದೇವೆ. ಸುಮಾರು ಒಂದೂವರೆ ಕೋಟಿ ಜನರನ್ನು ಉದ್ದೇಶಿಸಿ ಮಾತನಾಡಿದ್ದೇನೆ. ದೇಶದ ಇತಿಹಾಸದಲ್ಲೇ ಇಂಥ ಯಾತ್ರೆ ನಡೆದಿರಲಿಲ್ಲ ಎಂದರು.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಬೆಂಗಳೂರು ಮಾದರಿ ನಗರವನ್ನಾಗಿಸುವ ಗುರಿ ನನ್ನದು. ಜನ ಚುನಾವಣೆಯಲ್ಲಿ ಬಿಜೆಪಿಯನ್ನು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ಜಾತಿ ವಿಷ ಬಿತ್ತುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಒಂದೆಡೆ ಬಸವಣ್ಣನ ಹೆಸರು ಹೇಳುತ್ತಾರೆ, ಮತ್ತೊಂದೆಡೆ ಜಾತಿ ವಿಸರ್ಜಿಸುತ್ತಾರೆ ಎಂದು ವಾಗ್ದಾಳಿ ನಡೆಸಿರದು. ಚುನಾವಣೆಯಲ್ಲಿ ಗೆಲ್ಲಲ್ಲು ಕಾಂಗ್ರೆಸ್ ವಾಮಮಾರ್ಗವನ್ನು ಅನುಸರಿಸುತ್ತಿದೆ. ಬ್ಲಾಂಗಾ ದೇಶದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕೆಲಸವನ್ನು ಸಚಿವ ಕೆ.ಜೆ. ಜಾರ್ಜ್ ಮತ್ತು ಬೈರತಿ ಬಸವರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಮಾವೇಶದಲ್ಲಿ ಕೇಂದ್ರ ಸಚಿವರುಗಳಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ, ವಿಪಕ್ಷ ನಾಯಕರಾದ ಜಗದೀಶ್‌ಶೆಟ್ಟರ್, ಈಶ್ವರಪ್ಪ, ಆರ್. ಅಶೋಕ್, ಸಿ.ಟಿ. ರವಿ, ಸಂಸದರಾದ ಶೋಭಕರಂದ್ಲಾಜೆ, ಪಿ.ಸಿ. ಮೋಹನ್, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ಶಾಸಕರು ಮತ್ತು ಮುಖಂಡರುಗಳು ಭಾಗವಹಿಸಿದ್ದರು.

Comments are closed.