ಕರ್ನಾಟಕ

ಗಲಭೆ ಹಿಂದೆ ಅನಂತ್‌ ಹೆಗಡೆ ಪ್ರಚೋದನೆ

Pinterest LinkedIn Tumblr


ರಾಯಚೂರು/ಹೊಸಪೇಟೆ: ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಪ್ರಚೋಚನೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಹೊಸಪೇಟೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ ಕೇಂದ್ರ ಸಚಿವರು ಕುಮ್ಮಕ್ಕು ನೀಡುತ್ತಿದ್ದಾರೆ. ಕರಾವಳಿ ಪ್ರದೇಶದಲ್ಲಿ ಜೆಡಿಎಸ್‌ಗೆ ಅಸ್ತಿತ್ವವಿಲ್ಲ. ಬಿಜೆಪಿಯಿಂದ ಒಬ್ಬರು ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದನ್ನು ಸಹಿಸದ ಬಿಜೆಪಿ, ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತ ಅಡ್ಡದಾರಿ ಹಿಡಿದಿದೆ ಎಂದರು.

ಹೊನ್ನಾವರದಲ್ಲಿ ಯುವಕನ ಶವ ಸಿಕ್ಕ ತಕ್ಷಣ, ಮುಸ್ಲಿಮರು ಕೊಲೆ ಮಾಡಿದ್ದಾರೆ ಅನ್ನೋದು ಎಷ್ಟು ಸರಿ? ಬಿಜೆಪಿಯವರು ನೋಡಿದ್ದಾರಾ?, ಇವರು ಮುಖ್ಯ ಸಾಕ್ಷಿನಾ? ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ, ಅದು ಕೊಲೆಯೋ ಅಥವಾ ಸಹಜ
ಸಾವೋ ಎಂದು ತಿಳಿಯುತ್ತದೆ. ಆದರೆ, ಬಿಜೆಪಿ ಯವರಿಗೆ ಈ ಸಾಮಾನ್ಯ ಜ್ಞಾನವೂ ಇಲ್ಲ. ಇದನ್ನೆಲ್ಲ ತಿಳಿಯೋ ಬದಲು ಅವರು ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ದೂರಿದರು.

ಖಾಲಿ ಬುಟ್ಟಿಗೆ ಪುಂಗಿ ಊದುತ್ತಿರುವ ಬಿಎಸ್‌ವೈ: ಈ ಮಧ್ಯೆ, ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಸಿಎಂ, ನವ ಕರ್ನಾಟಕ ಪರಿವರ್ತನೆ ಯಾತ್ರೆ ಮೂಲಕ ಸಿದ್ದರಾಮಯ್ಯನವರ ಭ್ರಷ್ಟಾಚಾರ ಬಯಲಿಗೆಳೆಯುತ್ತೇನೆ ಎನ್ನುತ್ತಿರುವ ಯಡಿಯೂರಪ್ಪ ಖಾಲಿ ಬುಟ್ಟಿಗೆ ಪುಂಗಿ ಊದಿಕೊಂಡು ತಿರುಗಾಡುತ್ತಿದ್ದಾರೆ. ಯಡಿಯೂರಪ್ಪ ಹತಾಶರಾಗಿದ್ದಾರೆ. ಕಾಂಗ್ರೆಸ್‌ ವಿರುದ್ಧ ಮಾತನಾಡಲು ಅವರಿಗೆ ಏನೂ ಸಿಗುತ್ತಿಲ್ಲ. ಹೀಗಾಗಿ ಭ್ರಷ್ಟಾಚಾರ ಬಯಲಿಗೆಳೆಯುವ ಮಾತನಾಡುತ್ತಿದ್ದಾರೆ ಎಂದರು.

ನಾವೇ ಅಧಿಕಾರಕ್ಕೆ: ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಚೈತನ್ಯ ಬಂದಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಜನಪರ ಆಡಳಿತ ನೀಡಿದ್ದೇವೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಾವೇ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಭವಿಷ್ಯ ನುಡಿದರು. ಗುಜರಾತ್‌ನಲ್ಲಿ ಮತದಾರರು ಯಾರಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಈಗಲೇ ಹೇಳಲಾ ಗದು. ಮೇಲ್ನೋಟಕ್ಕೆ ಕಾಣುತ್ತಿರುವ ಸ್ಥಿತಿ ಅಲ್ಲಿಲ್ಲ. ಹೀಗಾಗಿ ಈ ಬಾರಿ ಅಲ್ಲಿ ಕಾಂಗ್ರೆಸ್‌ ಗೆದ್ದರೂ ಆಶ್ಚರ್ಯವಿಲ್ಲ. ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಆದರೆ, ಈ ಸಮೀಕ್ಷೆಗಳು ಕೆಲವೊಮ್ಮೆ ಉಲ್ಟಾ ಆಗಬಹುದು ಎಂದರು.

ಬಿಜೆಪಿಯವರಿಗೆ ಬೆಂಕಿ ಹಚ್ಚೋ ಕೆಲಸ: ಖಾದರ್‌
ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಉತ್ತಮ ಆಡಳಿತ ಸಹಿಸದ ಬಿಜೆಪಿಯವರು ಮುಖ್ಯಮಂತ್ರಿ ಹಾಗೂ ಪಕ್ಷಕ್ಕೆ ಕೆಟ್ಟ ಹೆಸರು ತರಲು ಕರಾವಳಿ ಸೇರಿ ವಿವಿಧ ಭಾಗಗಳಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಸಚಿವ ಯು.ಟಿ.ಖಾದರ್‌ ಗಂಭೀರ ಆರೋಪ ಮಾಡಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರಾವಳಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಶಾಂತವಿದೆ. ಎರಡೂ ಸಮಾಜದ ಜನರು ಒಂದಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕೆಲ ಘಟನೆಗಳು ನಡೆದರೂ ಅಲ್ಲಿಯೇ ಪರಿಹಾರ ಕಾಣುತ್ತಿವೆ. ಆದರೆ ಕರಾವಳಿ ಜನರು ಶಾಂತಿಯಿಂದಿರುವುದು ಕೆಲವರಿಗೆ ಬೇಡವಾಗಿದೆ. ಮುಖ್ಯವಾಗಿ ಬಿಜೆಪಿಯವರಿಗೆ ಈಗ ಬೇರೆ ವಿಷಯವೇ ಇಲ್ಲ. ಹೇಗಾದರೂ ಮಾಡಿ ಮುಖ್ಯಮಂತ್ರಿಗೆ ಕೆಟ್ಟ ಹೆಸರು ತರಬೇಕು ಎಂಬುದು ಉದ್ದೇಶ. ಇದೇ ಕಾರಣದಿಂದ ರಾಜ್ಯದ ವಿವಿಧ ಕಡೆ ಗಲಭೆ ಹುಟ್ಟು
ಹಾಕುತ್ತಿದ್ದಾರೆ ಎಂದರು.

ಪ್ರತಾಪ, ಅನಂತಕುಮಾರ್‌ ಆಯ್ಕೆ ದುರಂತ: ಪ್ರಿಯಾಂಕ
ಯಾದಗಿರಿ: ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕರು ಚುನಾವಣೆ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ. ಸಂಸದ ಅನಂತಕುಮಾರ್‌ ಹೆಗಡೆ ಹಾಗೂ ಪ್ರತಾಪ್‌ ಸಿಂಹ ಅವರಂಥ ನಾಯಕರನ್ನು ಜನರು ಆಯ್ಕೆ ಮಾಡಿದ್ದು ದೊಡ್ಡ ದುರಂತ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಯಾದಗಿರಿಯಲ್ಲಿ ಶ್ರೀರಾಮ ಸೇನೆ ಹಮ್ಮಿಕೊಂಡ ವಿರಾಟ್‌ ಸಮಾವೇಶದಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದವರ ಮೇಲೆ ಪೊಲೀಸರು ಸ್ವಹಿತಾಸಕ್ತಿ ಯಡಿ ಪ್ರಕರಣ ದಾಖಲಿಸಿದ್ದಾರೆ. ತೆಲಂಗಾಣದ ಶಾಸಕ ರಾಜಾಸಿಂಗ್‌ ಠಾಕೂರ್‌, ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ, ಸಿದ್ಧಲಿಂಗ ಸ್ವಾಮೀಜಿ, ಜಿಲ್ಲಾಧ್ಯಕ್ಷ ವಿಜಯ ಪಾಟೀಲ್‌ ಸೇರಿ ಇತರರ ಮೇಲೆ ನಗರ ಪೊಲೀಸ್‌
ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿರಾಟ್‌ ಹಿಂದೂ ಸಮಾವೇಶಕ್ಕೆ ಅನುಮತಿ ಕೊಡದಿದ್ದರೆ, ಅನುಮತಿ ಕೊಟ್ಟಿಲ್ಲವೆಂದು ಅಪಪ್ರಚಾರ ಮಾಡುತ್ತಾರೆ. ಅನುಮತಿ ಕೊಟ್ಟರೆ ಅವಿವೇಕಿಗಳು ಬಂದು ಹೀಗೆ ಮಾತನಾಡುತ್ತಾರೆ. ಪ್ರಚೋದನಾಕಾರಿ ಭಾಷಣ ಖಂಡನೀಯವಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಈ ರೀತಿ ಮಾತನಾಡಬಾರದು ಎಂದರು.

ಸರ್ಕಾರ ವೀರಶೈವ ಅಥವಾ ಲಿಂಗಾಯತ ಸೇರಿದಂತೆ ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಕುರಿತಂತೆ ಐದು ಅರ್ಜಿಗಳು ಬಂದಿವೆ. ಐದು ಅರ್ಜಿಗಳನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಕಳುಹಿಸಿಕೊಡಲಾಗಿದೆ. ಒಳ ಮೀಸಲಾತಿ ಕುರಿತಂತೆ ಸಚಿವರು, ಶಾಸಕರು ಹಾಗೂ ಮುಖಂಡರೊಂದಿಗೆ ಕುಳಿತು ಚರ್ಚೆ ಮಾಡಲಾಗುವುದು.
●ಸಿದ್ದರಾಮಯ್ಯ, ಸಿಎಂ

-ಉದಯವಾಣಿ

Comments are closed.