ಕರ್ನಾಟಕ

ಧಾರವಾಡ ಬಳಿ ಶೂಟೌಟ್: ಸಚಿವ ವಿನಯ ಕುಲಕರ್ಣಿ ಹತ್ಯೆಗೆ ಸಂಚು?

Pinterest LinkedIn Tumblr

ಧಾರವಾಡ: ಇಲ್ಲಿನ ನವಲೂರ ಸಮೀಪದ ರೆಸಾರ್ಟ್‌ ಬಳಿ ಮಂಗಳವಾರ ರಾತ್ರಿ ಕೆಲವರು ಗುಂಡು ಹಾರಿಸಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ಆರೋಪಿಗಳು ಸಚಿವ ವಿನಯ ಕುಲಕರ್ಣಿ ಇಲ್ಲವೆ ಯೋಗೀಶಗೌಡ ಗೌಡರ ಕೊಲೆ ಆರೋಪಿ ಬಸವರಾಜ ಮುತ್ತಗಿ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಪೊಲೀಸ್‌ ಇಲಾಖೆ ಸಂಶಯ ವ್ಯಕ್ತಪಡಿಸಿದೆ.

ಗುಂಡು ಹಾರಿಸಿದ ಪ್ರಕರಣ ಕುರಿತಂತೆ ಧಾರವಾಡ ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿಬುಧವಾರ ಹುಬ್ಬಳ್ಳಿಧಾರವಾಡ ಮಹಾನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ್‌ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

”ಮೂವರು ಆರೋಪಿಗಳು ಏಕಾಏಕಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ರೆಸಾರ್ಟ್‌ನಲ್ಲಿಬಸವರಾಜ ಮುತ್ತಗಿ ಇದ್ದರು. ಸಚಿವರೂ ಮದುವೆ ಆರತಕ್ಷತೆಗೆ ಇನ್ನೇನು ಬರುವವರಿದ್ದರು ಎಂಬ ಮಾಹಿತಿ ಇದೆ. ಹೀಗಾಗಿ ಏತಕ್ಕೆ ಗುಂಡು ಹಾರಿಸಲಾಯಿತು ಎಂಬುದರ ಕುರಿತು ತನಿಖೆ ನಂತರ ಸ್ಪಷ್ಟತೆ ಸಿಗಲಿದೆ,” ಎಂದು ತಿಳಿಸಿದರು.

”ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಮಲಪ್ರಭಾ ನಗರದ ಹನುಮಂತಗೌಡ ಪಾಟೀಲ, ಆರೋಗ್ಯ ನಗರದ ರಾಘವೇಂದ್ರ ಹಾಗೂ ನಾಗರಾಜ್‌ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ 307 (ಕೊಲೆಗೆ ಯತ್ನ) ಪ್ರಕರಣ ದಾಖಲಿಸಲಾಗಿದೆ. ಬಂಧಿತರ ಬಳಿ 5.4 ಲಕ್ಷ ರೂ. ಸಿಕ್ಕಿದೆ. ಈ ಹಣ ಎಲ್ಲಿಯದು ಎಂಬುದರ ಕುರಿತೂ ವಿಚಾರಣೆ ನಡೆದಿದೆ. ಆರೋಪಿಗಳಿಂದ ಒಂದು ರಿವಾಲ್ವರ್‌, 4 ಜೀವಂತ ಗುಂಡು, 2 ಹಾರಿದ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ,” ಎಂದರು.

ಘಟನೆ ಹಿನ್ನೆಲೆ ಏನು?

”ರೆಸಾರ್ಟ್‌ನಲ್ಲಿವಿವಾಹ ಆರತಕ್ಷತೆ ಮಂಗಳವಾರ ನಡೆದಿತ್ತು. ಇಲ್ಲಿಬಸವರಾಜ ಮುತ್ತಗಿ ಸಹ ಇದ್ದರು. ಈ ವೇಳೆ ರೆಸಾರ್ಟ್‌ ಬಳಿಯ ಪಾನ್‌ಶಾಪ್‌ ಎದುರು ಆರೋಪಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ. ಈ ವಿಷಯವನ್ನು ಸಾರ್ವಜನಿಕರೇ ಪೊಲೀಸರಿಗೆ ತಿಳಿಸಿದ್ದಾರೆ. ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾಗಿ ಆರೋಪಿಗಳು ಹೇಳುತ್ತಿದ್ದಾರಾದರೂ ಅವರ ಮೇಲೆ ದಾಳಿ ನಡೆಸಲು ಯಾರೂ ಬೆನ್ನು ಬಿದ್ದಿರಲಿಲ್ಲ. ಹೀಗಾಗಿ ಸಚಿವರೋ, ಮುತ್ತಗಿಯೋ, ಅಥವಾ ಬೇರೆ ಯಾರಾದಾದರೂ ಕೊಲೆಗೆ ಬಂಧಿತರು ಸಂಚು ರೂಪಿಸಿದ್ದರೇ ಎಂಬುದು ದೃಢಪಟ್ಟಿಲ್ಲ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, 45 ದಿನಗಳಲ್ಲಿತನಿಖೆ ಪೂರ್ಣಗೊಳಿಸಲಾಗುವುದು,” ಎಂದರು.

ಕೊಲೆ ಸುತ್ತ ಗಿರಕಿ:

”ಇದೀಗ ಗುಂಡು ಹಾರಿಸಿದ ಪ್ರಕರಣದಲ್ಲಿಭಾಗಿಯಾಗಿರುವ ಹನುಮಂತಗೌಡ ಪಾಟೀಲ, ಯೋಗೀಶಗೌಡರ ಜತೆ ನಿಕಟ ಸಂಪರ್ಕಹೊಂದಿದ್ದ. ಸಪ್ತಾಪುರದಲ್ಲಿರುವ ಯೋಗೀಶಗೌಡರ ಮಾಲೀಕತ್ವದ ಜಿಮ್‌ನಲ್ಲಿಯೇ ಇರುತ್ತಿದ್ದ. ಜಿಪಂ ಚುನಾವಣೆಯಲ್ಲಿಯೋಗೀಶಗೌಡರ ಪರವಾಗಿ ಪ್ರಚಾರ ಕೂಡ ನಡೆಸಿದ್ದ. ಹೀಗಾಗಿ ಯೋಗೀಶಗೌಡರ ಕೊಲೆಯ ಪ್ರತೀಕಾರವಾಗಿ ಈ ಸಂಚು ನಡೆದಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು,” ಎಂದು ಪೊಲೀಸ ಆಯುಕ್ತರು ತಿಳಿಸಿದರು.

ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸ್‌ ಅಧಿಕಾರಿಗಳ ತಂಡಕ್ಕೆ 5 ಸಾವಿರ ರೂ. ಬಹುಮಾನ ಘೋಷಿಸಿದರು. ಡಿಸಿಪಿ ರೇಣುಕಾ ಸುಕುಮಾರ, ಎಸಿಪಿ ಎಂ.ಎನ್‌. ರುದ್ರಪ್ಪ, ಇನ್‌ಸ್ಪೆಕ್ಟರ್‌ ಮಹಾಂತೇಶ ಹೊಸಪೇಟೆ, ಮುರುಗೇಶ ಚೆನ್ನಣ್ಣವರ ಇದ್ದರು.

ಧಾರವಾಡದ ರೆಸಾರ್ಟ್‌ನಲ್ಲಿ2 ಸುತ್ತು ಗುಂಡು ಹಾರಿಸಿದ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ರೆಸಾರ್ಟ್‌ನಲ್ಲಿನಡೆದ ಮದುವೆಯ ಆಮಂತ್ರಣ ನನಗೆ ಬಂದಿರಲಿಲ್ಲ. ಪ್ರಕರಣ ಕುರಿತು ಪೊಲೀಸ್‌ ಇಲಾಖೆಯಿಂದ ಮಾಹಿತಿ ಪಡೆಯುತ್ತೇನೆ.
ವಿನಯ ಕುಲಕರ್ಣಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ

ಸಾರ್ವಜನಿಕ ಪ್ರದೇಶದಲ್ಲಿಗುಂಡು ಹಾರಿಸಿರುವುದು ಸಾಮಾನ್ಯ ಅಲ್ಲ. ಹೀಗಾಗಿ ಹನುಮಂತಗೌಡ ಅವರ ಗನ್‌ ಲೈಸೆನ್ಸ್ ರದ್ದುಗೊಳಿಸಲು ಆದೇಶಿಸಲಾಗಿದೆ. ಆರೋಪಿಗಳ ವಿರುದ್ಧ ಈ ಹಿಂದೆ ಯಾವುದಾದರೂ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆದಿದೆ.
ಎಂ.ಎನ್‌. ನಾಗರಾಜ್‌, ಪೊಲೀಸ್‌ ಆಯುಕ್ತ
*****************************************************************

ಸಂಧಾನ ಆಯ್ತು, ಈಗ ಗುಂಡು ಹಾರಿಸಿದ ಪ್ರಕರಣದ ಚರ್ಚೆ

ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೇ ರಾಜೀ ಸಂಧಾನಕ್ಕೆ ಯತ್ನಿಸಿದ್ದರು ಎಂಬ ಸುದ್ದಿ ವ್ಯಾಪಕಗೊಂಡಿರುವ ಮಧ್ಯೆಯೇ ಈಗ ನಡೆದ ಗುಂಡು ಹಾರಿಸಿದ ಪ್ರಕರಣ ಹಲವು ಚರ್ಚೆಗಳಿಗೆ ಆಸ್ಪದ ನೀಡಿದೆ. ಕಳೆದ ತಿಂಗಳು ಡಿವೈಎಸ್ಪಿ ತುಳಜಪ್ಪ ಸುಲ್ಫಿ , ಬಿ.ಎಸ್‌. ಚಂದ್ರಶೇಖರ ಅವರು ಸಂಧಾನದ ನೇತೃತ್ವ ವಹಿಸಿದ್ದರು. ಇಲ್ಲಿಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರೂ ಇದ್ದರು ಎಂಬುದು ಗಂಭೀರವಾಗಿತ್ತು. ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ ಬಿಜೆಪಿ ಯೋಗೀಶಗೌಡ ಕೊಲೆ ಪ್ರಕರಣದಲ್ಲಿಸಚಿವರ ಕೈವಾಡವಿದೆ. ಈ ಕುರಿತು ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ ನ್ಯಾಯವಾದಿ ಆನಂದ ಎಂಬುವವರಿಗೆ ಸಚಿವರು ಇದೇ ವಿಚಾರವಾಗಿ ಧಮುಕಿ ಹಾಕಿದ್ದರು ಎಂಬ ಆರೋಪ ರಾಜಕೀಯ ವಲಯದಲ್ಲಿಸಂಚಲನ ಮೂಡಿಸಿತ್ತು.

Comments are closed.