ಕರ್ನಾಟಕ

ಮಾಜಿ ಸಚಿವ ಉಮೇಶ್ ಕತ್ತಿ ಹೇಳಿಕೆ: ಬಿಜೆಪಿ ನಾಯಕರಲ್ಲಿ ಇರಿಸುಮುರುಸು

Pinterest LinkedIn Tumblr

ಬೆಂಗಳೂರು: ಲಿಂಗಾಯತ ಸಮಾವೇಶದಲ್ಲಿ ತಮ್ಮನ್ನು ಭಾಗವಹಿಸಲು ಪಕ್ಷದ ಹಿರಿಯ ಮುಖಂಡರು ಬಿಡುತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿ ನೀಡಿರುವ ಹೇಳಿಕೆ ಪಕ್ಷದ ನಾಯಕರಲ್ಲಿ ಇರಿಸುಮುರುಸನ್ನುಂಟುಮಾಡಿದೆ. ಮಾಜಿ ಸಚಿವ ಉಮೇಶ್ ಕತ್ತಿಯವರು ಸಂದರ್ಭದಿಂದ ಹೊರತುಪಡಿಸಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದರೂ ಕೂಡ ಪಕ್ಷದ ನಾಯಕರೊಳಗಿನ ಭಿನ್ನಾಭಿಪ್ರಾಯವನ್ನು ತಕ್ಷಣವೇ ಕಾಂಗ್ರೆಸ್ ಗುರುತಿಸಿದೆ.

ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡುವ ಸಂದರ್ಭದಲ್ಲಿ ಉಮೇಶ್ ಕತ್ತಿಯವರು ತಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡುವಾಗ ಅಂಸವಿಧಾನಿಕ ಪದವನ್ನು ಬಳಸಿದ್ದರು. ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ರ್ಯಾಲಿಯಲ್ಲಿ ತಾವು ಭಾಗವಹಿಸಲು ಪಕ್ಷದ ನಾಯಕರು ಬಿಡುತ್ತಿಲ್ಲ ಎಂದು ಆರೋಪಿಸಿದ್ದರು.

ಉಮೇಶ್ ಕತ್ತಿಯವರ ಈ ಅಭಿಪ್ರಾಯ ಪಕ್ಷದ ನಿಲುವಿಗೆ ವಿರುದ್ಧವಾಗಿದೆ. ಈ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ಹೊತ್ತಿಗೆ ಬಿಜೆಪಿ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಆಗಿರುವ ಹಾನಿಯನ್ನು ಸರಿಪಡಿಸಲೆತ್ನಿಸಿ ಹೇಳಿಕೆ ನೀಡಿದರು.

ನಾನು ಕತ್ತಿಯವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಮಾಧ್ಯಮದ ಒಂದು ವರ್ಗ ಕತ್ತಿಯವರ ಹೇಳಿಕೆಯನ್ನು ತಿರುಚಿದೆ. ಬಿಜೆಪಿಯಲ್ಲಿ ಲಿಂಗಾಯತ ಮತ್ತು ವೀರಶೈವ ಧರ್ಮವನ್ನು ಸಮಾನವೆಂದು ಪರಿಗಣಿಸಲಾಗುತ್ತದೆ. ಅದನ್ನು ಕತ್ತಿಯವರಿಗೂ ಮನದಟ್ಟು ಮಾಡಲಾಗಿದ್ದು ಅವರು ಕೂಡ ಅರ್ಥ ಮಾಡಿಕೊಂಡಿದ್ದಾರೆ ಎಂದರು.

ಈ ಬಗ್ಗೆ ನಿನ್ನೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಉಮೇಶ್ ಕತ್ತಿಯವರ ಈ ಹೇಳಿಕೆ ಇತ್ತೀಚಿನ ಸಾಕ್ಷಿಯಾಗಿದೆ. ಬಿಜೆಪಿಯಲ್ಲಿ ಇನ್ನೂ ಹಲವು ನಾಯಕರು ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ನಾಯಕರು ಎಂದು ಒಪ್ಪಿಕೊಂಡಿಲ್ಲ. ಪಕ್ಷದೊಳಗಿನ ಭಿನ್ನಮತ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅದರ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರಲಿದೆ ಎಂದರು.

Comments are closed.