ಕರ್ನಾಟಕ

ಪಾಲಿಕೆ ರಹಸ್ಯ ಖಾತೆಗಳಲ್ಲಿ ಸಿಕ್ಕಿದ್ದು 1800 ಕೋಟಿ ರೂ!

Pinterest LinkedIn Tumblr


ಬೆಂಗಳೂರು: ಬಿಬಿಎಂಪಿಯಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ 418 ಬ್ಯಾಂಕ್‌ ಖಾತೆಗಳಲ್ಲಿ ಈವರೆಗೆ ಸುಮಾರು 1800 ಕೋಟಿ ರೂ. ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆಯ ಹೆಸರಿನಲ್ಲಿ ತೆರೆಯಲಾಗಿರುವ ಖಾತೆಗಳ ಮಾಹಿತಿ ನೀಡುವಂತೆ ಬ್ಯಾಂಕ್‌ಗಳಿಗೆ ಪತ್ರ ಬರೆಯಲು ಪಾಲಿಕೆ ಮುಂದಾಗಿದೆ.

ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ಪಾಲಿಕೆಯ ಎಂಟೂ ವಲಯಗಳಲ್ಲಿ 418 ರಹಸ್ಯ ಬ್ಯಾಂಕ್‌ ಖಾತೆಗಳಿದ್ದು, ಪಾಲಿಕೆಯ ಅಧಿಕಾರಿಗಳಿಗೆ ಆ ಕುರಿತ ಮಾಹಿತಿಯಿಲ್ಲ ಎಂದು ಹಿಂದಿನ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾ ನಾರಾಯಣ್‌ ಆರೋಪಿಸಿದ್ದರು. ಜತೆಗೆ 418 ಖಾತೆಗಳಲ್ಲಿರುವ ಹಣದ ಮಾಹಿತಿ ನೀಡುವಂತೆ ಹಲವು ಬಾರಿ ಪತ್ರ ಬರೆದಿದ್ದರು.

ಪಾಲಿಕೆಯಲ್ಲಿದ್ದ ನೂರಾರು ಬ್ಯಾಂಕ್‌ ಖಾತೆಗಳನ್ನು ಮುಚ್ಚಿಸಿ ಒಂದೇ ಬ್ಯಾಂಕ್‌ನಲ್ಲಿ 27 ಖಾತೆಗಳನ್ನು ತೆಗೆದ ನಂತರವೂ 418 ರಹಸ್ಯ ಬ್ಯಾಂಕ್‌ ಖಾತೆಗಳು ಪತ್ತೆಯಾಗಿದ್ದು, ಅಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತು. ಇದರೊಂದಿಗೆ 418 ಖಾತೆಗಳಿಗೆ ಜಮೆಯಾಗಿರುವ ಮೊತ್ತ ಹಾಗೂ ವೆಚ್ಚದ ಕುರಿತ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಶಂಕೆಯನ್ನು ಹಲವು ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದರು.

ಆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಾಲಿಕೆಯ ಅಧಿಕಾರಿಗಳು ಖಾತೆಗಳ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದು, ಈವರೆಗೆ ಸುಮಾರು 1700 ರಿಂದ 1800 ಕೋಟಿ ರೂ. ಹಣವಿರುವ ಮಾಹಿತಿ ಕಲೆ ಹಾಕಿದ್ದಾರೆ. ಖಾತೆಗಳ ಪರಿಶೀಲನಾ ಕಾರ್ಯ ಮುಂದುವರಿಸಿದ್ದು, ಉಳಿದ ಖಾತೆಗಳಲ್ಲಿ ಎಷ್ಟು ಹಣವಿದೆ ಎಂಬುದು ಇನ್ನು ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಪ್ರಾದೇಶಿಕ ಪ್ರಧಾನ ಕಚೇರಿಗಳಿಗೆ ಪತ್ರ ಬರೆದು ಪಾಲಿಕೆಯ ಹೆಸರಿನಲ್ಲಿರುವ ಖಾತೆಗಳ ಮಾಹಿತಿ ಪಡೆಯಲು ಲೆಕ್ಕ ಪರಿಶೋಧನಾ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಬ್ಯಾಂಕ್‌ ಖಾತೆಗಳ ಮಾಹಿತಿ
ಪಾಲಿಕೆಯಲ್ಲಿ 2015ರವರೆಗೆ ಹಣಕಾಸು ವ್ಯವಹಾರಗಳಿಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 900ಕ್ಕೂ ಅಧಿಕ ಖಾತೆಗಳನ್ನು ತೆಗೆಯಲಾಗಿತ್ತು. ಆ ಖಾತೆಗಳ ಮೂಲಕವೇ ಹಣಕಾಸು ವ್ಯವಹಾರ ನಡೆಸಲಾಗುತ್ತಿತ್ತು. ಆರ್ಥಿಕ ವಹಿವಾಟಿನ ಲೆಕ್ಕಾಚಾರ ಇಡಲು ಮುಖ್ಯ ಲೆಕ್ಕಾಧಿಕಾರಿ ಅವರಿಗೂ ಕಷ್ಟವಾಗಿತ್ತು. ಜತೆಗೆ ಹಲವು ಅವ್ಯವಹಾರಗಳಿಗೂ ಈ ಖಾತೆಗಳು ದಾರಿ ಮಾಡಿಕೊಟ್ಟಿದ್ದವು.

ಆ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ತರಲು ನಿರ್ಧರಿಸಿದ ಬಿಬಿಎಂಪಿ ಅದಕ್ಕೆ ಪೂರಕವಾಗಿ ಒಂದೇ ಬ್ಯಾಂಕ್‌ ಮೂಲಕ ಆರ್ಥಿಕ ವಹಿವಾಟು ನಡೆಸಲು ಆರಂಭಿಸಿತ್ತು. ಅದರಂತೆ ಕೆನರಾ ಬ್ಯಾಂಕ್‌ನ ಬಿಸಿಸಿ ಶಾಖೆಯಲ್ಲಿ 27 ಉಳಿತಾಯ ಖಾತೆಗಳನ್ನು ತೆಗೆದು, ಆ ಖಾತೆಗಳ ಮೂಲಕವೇ ಎಲ್ಲ ರೀತಿಯ ಆರ್ಥಿಕ ವಹಿವಾಟುಗಳನ್ನು ಆರಂಭಿಸಿಲಾಗಿತ್ತು.

ಪಾಲಿಕೆಯ ಎಂಟೂ ವಲಯಗಳಲ್ಲಿ ಸುಮಾರು 632 ಬ್ಯಾಂಕ್‌ ಖಾತೆಗಳನ್ನು ಗುರುತಿಸಿ, ಖಾತೆಗಳಲ್ಲಿದ್ದ ಹಣವನ್ನು ಕೆನರಾ ಬ್ಯಾಂಕ್‌ನ ಉಳಿತಾಯ ಖಾತೆಗೆ ಜಮೆ ಮಾಡಲಾಯಿತು. ಆ ನಂತರವೂ ಪಾಲಿಕೆಯಲ್ಲಿ 418 ಖಾತೆಗಳು ಪತ್ತೆಯಾಗಿದ್ದು, ಈವರೆಗೆ 1800 ಕೋಟಿ ರೂ. ಪತ್ತೆಯಾಗಿದ್ದು, ಉಳಿದ ಖಾತೆಗಳಲ್ಲಿ ಎಷ್ಟು ಹಣವಿದೆ? ಖಾತೆಗಳ ನಿರ್ವಹಣೆ ಮಾಡುತ್ತಿರುವುದು ಯಾರು? ಎಂಬುದು ತನಿಖೆಯಿಂದ ಹೊರಬರಬೇಕಿದೆ.

ರಹಸ್ಯ ಖಾತೆಗಳಲ್ಲಿ ಈವರೆಗೆ 1700 ಕೋಟಿ ರೂ. ಪತ್ತೆಯಾಗಿದ್ದು, ಉಳಿದ ಖಾತೆಗಳಲ್ಲಿ 100 ಕೋಟಿ ರೂ. ಇರಬಹುದೆಂದು ಅಂದಾಜಿಸಲಾಗಿದೆ. ಇನ್ನಷ್ಟು ರಹಸ್ಯ ಖಾತೆಗಳಿರುವ ಬಗ್ಗೆ ಮಾಹಿತಿಯಿದ್ದು, ಎಲ್ಲ ಬ್ಯಾಂಕ್‌ಗಳ ಪ್ರಾದೇಶಿಕ ಪ್ರಧಾನ ಕಚೇರಿಗಳಿಗೆ ಪತ್ರ ಬರೆದು ಪಾಲಿಕೆಯ ಹೆಸರಲ್ಲಿ ತೆಗೆದಿರುವ ಖಾತೆಗಳು ಹಾಗೂ ಲಭ್ಯವಿರುವ ಹಣದ ಮಾಹಿತಿ ಕೋರಲಾಗುವುದು.
-ಮಹದೇವ, ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ

ಇನ್ನೆಷ್ಟು ರಸಹ್ಯ ಖಾತೆಗಳಿವೆ?
ಪಾಲಿಕೆಯ ಹೆಸರಿನಲ್ಲಿ ಎಂಟೂ ವಲಯಗಳಲ್ಲಿ ಅಧಿಕಾರಿಗಳಿಗೆ ಮಾಹಿತಿಯಿಲ್ಲದ 418 ಬ್ಯಾಂಕ್‌ ಖಾತೆಗಳು ಪತ್ತೆಯಾಗಿವೆ. ಅದರಂತೆ ಖಾತೆಗಳ ಪರಿಶೀಲನೆ ಕಾರ್ಯಕ್ಕೆ ಮುಂದಾದ ಅಧಿಕಾರಿಗಳಿಗೆ ಪಾಲಿಕೆಯ ಹೆಸರಿನಲ್ಲಿ ಮತ್ತಷ್ಟು ರಹಸ್ಯ ಖಾತೆಗಳಿರುವ ಅಘಾತಕಾರಿ ವಿಷಯ ತಿಳಿದಿದ್ದು, ಎಂಟು ವಲಯಗಳ ಅಧಿಕಾರಿಗಳು ತಮಗೆ ಇಷ್ಟ ಬಂದ ಹಾಗೆ ಬ್ಯಾಂಕ್‌ ಖಾತೆ ತೆರೆದು ನಿರ್ವಹಣೆ ಮಾಡುತ್ತಿರುವುದು ತಿಳಿದಿದೆ. ಆ ಮೂಲಕ ಭಾರಿ ಅವ್ಯವಹಾರ ನಡೆಸಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಪತ್ತೆಯಾದ ಬ್ಯಾಂಕ್‌ ಖಾತೆಗಳು
ಕೇಂದ್ರ ಕಚೇರಿ 46
ದಕ್ಷಿಣ ವಲಯ 32
ಮಹದೇವಪುರ 16
ಪಶ್ಚಿಮ ವಲಯ 64
ಬೊಮ್ಮನಹಳ್ಳಿ 17
ದಾಸರಹಳ್ಳಿ 13
ರಾಜರಾಜೇಶ್ವರಿ ನಗರ 15
ಪೂರ್ವ ವಲಯ 91
ಶಿಕ್ಷಣ ವಿಭಾಗದ 92
ಹಣಕಾಸು ವಿಭಾಗ 4
ಜನನ, ಮರಣ ನೋಂದಣಿ 4
ಅರಣ್ಯ, ಕೆರೆ ನಿರ್ವಹಣೆ 2
ಒಟ್ಟು 418

*  ವೆಂ. ಸುನೀಲ್‌ ಕುಮಾರ್‌

 

-ಉದಯವಾಣಿ

Comments are closed.