ಬೆಂಗಳೂರು: ಒಂಟಿ ಮಹಿಳೆಯರಿರುವ ಮನೆಗಳೇ ಆತನ ಟಾರ್ಗೆಟ್. ಆತನ ಸಂಚುಗಳೆಲ್ಲವೂ ರೂಪಿತವಾಗುತ್ತಿದ್ದುದು ಮೊಬೈಲ್ ಮೂಲಕವೇ. ಇದಕ್ಕಾಗಿಯೇ 50 ಸಿಮ್ ಖರೀದಿಸಿದ್ದ ಆತ, ಮೊಬೈಲ್ ಬಳಕೆ ಮಾಡುತ್ತಿದ್ದುದು ಮಾತ್ರ ವಾರಕ್ಕೆ ಒಂದೇ ದಿನ! ಅದೂ ಕೇವಲ 2 ಗಂಟೆ ಮಾತ್ರ! ಅದು ಶುಕ್ರವಾರವೇ ಕುಳಿತು ಮಾತನಾಡಿ, ಇಡೀ ವಾರದ ಸಂಚು ರೂಪಿಸುತ್ತಿದ್ದ.
ಹೌದು, ಇತ್ತೀಚೆಗೆ ನಗರದಲ್ಲಿ ನಡೆದಿದ್ದ ಮನೆಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಚರಣೆ ನಡೆಸಿದ ಕೊಡಿಗೇಹಳ್ಳಿ ಪೊಲೀಸರಿಗೆ ಖತರ್ನಾಕ್ ಕಳ್ಳರ ಬಂಡವಾಳ ಬಯಲಾಗಿದೆ. ತೆಲಂಗಾಣದ ಹೈದರಾಬಾದ್ ನಿವಾಸಿ ಸಮೀರ್ ಖಾನ್ (31) ಮತ್ತು ಆತನ ಸಹಚರ ಮೊಹಮ್ಮದ್ ಫೈರೋಜ್(30)ರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಬಂಧಿತರಿಂದ 13.50 ಲಕ್ಷ ರೂ. ಮೌಲ್ಯದ 440 ಗ್ರಾಂ ಚಿನ್ನಾಭರಣ ಹಾಗೂ ಒಂದು ಅಪಾಚಿ ಬೈಕ್, ಮನೆ ಬಾಗಿಲು ಒಡೆಯಲು ಬಳಸುತ್ತಿದ್ದ ಕಬ್ಬಿಣ ರಾಡ್ ವಶಕ್ಕೆ ಪಡೆಯಲಾಗಿದೆ.
ಸಮೀರನ ಕಥೆ: ಆರೇಳು ವರ್ಷಗಳಿಂದ ಒಂಟಿ ಮಹಿಳೆಯರ ದರೋಡೆ ಮತ್ತು ಮನೆಕಳವು ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಸಮೀರ್ ಖಾನ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರ ಅತಿಥಿಯಾಗಿ ಜೈಲಿಗೆ ಹೋಗಿದ್ದ. ಈ ಸಂದರ್ಭದಲ್ಲಿ ಮೊಹಮ್ಮದ್ ಫೈರೋಜ್ ಪರಿಚಯವಾಗಿದ್ದು, ನಂತರ ಇಬ್ಬರೂ ಸೇರಿ ಬೆಂಗಳೂರು ಮತ್ತು ತೆಲಂಗಾಣದಲ್ಲಿ ಮನೆಕಳವು ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಕಳವು ಮಾಡುತ್ತಿದ್ದ ವಸ್ತುವನ್ನು ಹೈದರಾಬಾದ್‌ನಲ್ಲಿ, ಹೈದರಾಬಾದ್‌ನಲ್ಲಿ ಕಳವು ಮಾಡುತ್ತಿದ್ದ ವಸ್ತುಗಳನ್ನು ಬೆಂಗಳೂರಿನಲ್ಲಿ ಅಡವಿಟ್ಟು ಐಷಾರಾಮಿ ಜೀವನ ನಡೆಸುತ್ತಿದ್ದರು.
ಆರೋಪಿ ಸಮೀರ್ ಖಾನ್ ಮನೆಕಳವು ಮಾಡಲೆಂದೇ ಸುಮಾರು 40ರಿಂದ 50 ಸಿಮ್‌ಗಳನ್ನು ಖರೀದಿಸಿದ್ದ. ಆದರೆ, ಮೊಬೈಲ್ ಬಳಸುತ್ತಿದ್ದುದು ವಾರಕ್ಕೊಮ್ಮೆ ಮಾತ್ರ. ಶುಕ್ರವಾರ ಪ್ರಾರ್ಥನೆ ಮುಗಿಸಿದ ಬಳಿಕ ಕೇವಲ ಎರಡು ಗಂಟೆ ಅವಧಿಯಲ್ಲಿ ಫೈರೋಜ್‌ಗೆ ಕರೆ ಮಾಡಿ ನಿರ್ದಿಷ್ಟ ಸ್ಥಳಕ್ಕೆ ಬರಲು ಹೇಳುತ್ತಿದ್ದ. ನಂತರ ಇಬ್ಬರೂ ಹೈದರಾಬಾದ್‌ನಿಂದ 10 ಕಿ.ಮೀ. ದೂರದ ಪ್ರದೇಶಕ್ಕೆ ಹೋಗಿ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು. ಪ್ರತಿ ಬಾರಿ ಮಾತನಾಡುವಾಗಲೂ ಆತ ಬೇರೆ ಬೇರೆ ಸಿಮ್‌ಗಳನ್ನು ಬಳಸುತ್ತಿದ್ದ.
ಅದರಂತೆ ಹೈದರಾಬಾದ್‌ನಲ್ಲಿ ಕಳ್ಳತನ ಎಸಗಿ ರೈಲು ಅಥವಾ ಬಸ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಇಬ್ಬರೂ ಅಲ್ಲಿ ಕದ್ದ ಚಿನ್ನಾಭರಣಗಳನ್ನು ಇಲ್ಲಿ ಅಡವಿಟ್ಟು ಹಣ ಪಡೆಯುತ್ತಿದ್ದರು. ನಂತರ ಬೈಕ್‌ಗಳಲ್ಲಿ ಪ್ರಮುಖ ಪ್ರದೇಶಗಳಲ್ಲಿ ಸುತ್ತಾಡಿ ಒಂಟಿ ಮಹಿಳೆಯರಿರುವ ಮನೆಗಳನ್ನು ಗುರುತಿಸುತ್ತಿದ್ದರು. ಬಳಿಕ ಆ ಭಾಗದಲ್ಲಿ ಜನಸಂದಣಿ ಕಡಿಮೆಯಾಗುತ್ತಿದ್ದಂತೆ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದರು. ಬಳಿಕ ಹೈದರಾಬಾದ್‌ಗೆ ವಾಪಸಾಗಿ ಬೆಂಗಳೂರಿನಲ್ಲಿ ಕಳ್ಳತನ ಮಾಡಿದ್ದ ಆಭರಣಗಳನ್ನು ಅಡವಿಡುತ್ತಿದ್ದರು.
ಕೆಲ ದಿನಗಳ ಹಿಂದೆ ಲಕ್ಷ್ಮಮ್ಮ ಎಂಬುವರ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದ್ದು, ಈ ಕುರಿತು ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್ ರಾಜಣ್ಣ ನೇತೃತ್ವದ ವಿಶೇಷ ತಂಡ ತಾಂತ್ರಿಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇವರಿಬ್ಬರ ಬಂಧನದಿಂದ ಸಂಪಿಗೆಹಳ್ಳಿ, ವೈಯಾಲಿಕಾವಲ್, ಕೊಡಿಗೇಹಳ್ಳಿ ಹಾಗೂ ಆಂಧ್ರಪ್ರದೇಶದ ರಾಜೇಂದ್ರನಗರ, ಶಾಹೀದ್ ನಗರ ಠಾಣೆಗಳಲ್ಲಿ ದಾಖಲಾಗಿದ್ದ ಹಲವು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಫಿಂಗರ್ ಪ್ರಿಂಟ್ ಕೊಟ್ಟ ಮಾಹಿತಿ:
ಲಕ್ಷ್ಮಮ್ಮ ಅವರ ಮನೆಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಆರೋಪಿಯ ಬೆರಳಚ್ಚು ಸಿಕ್ಕಿದ್ದು, ಅದನ್ನು ವಿಧಿವಿಜ್ಞಾನ ಪರೀಕ್ಷಾ ಕೇಂದ್ರದಲ್ಲಿ ಪರಿಶೀಲಿಸಿದಾಗ ಆರೋಪಿಯ ಸಂಪೂರ್ಣ ಮಾಹಿತಿ ಪತ್ತೆಯಾಯಿತು. ಇದನ್ನಾಧರಿಸಿ ಆರೋಪಿಯ ಚಲನವಲನ ಹಾಗೂ ಮೊಬೈಲ್ ನೆಟವರ್ಕ್‌ವನ್ನು ನಿರಂತರವಾಗಿ ಪರಿಶೀಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ, ಸಂಬಂಧಿಕರಿಗೆ ಪ್ರತ್ಯೇಕ ಸಿಮ್
ಕಳ್ಳತನಕ್ಕಾಗಿ 40ರಿಂದ 50 ಸಿಮ್‌ಗಳನ್ನು ಬಳಸುತ್ತಿದ್ದ ಸಮೀರ್ ಖಾನ್ ತನ್ನ ಪತ್ನಿ ಮತ್ತು ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಪ್ರತ್ಯೇಕ ಮೊಬೈಲ್ ಹಾಗೂ ಸಿಮ್‌ಕಾರ್ಡ್ ಹೊಂದಿದ್ದ. ಈ ಸಂಖ್ಯೆ ಆತನ ಸಹಚರ ಮೊಹಮ್ಮದ್ ಫೈರೋಜ್‌ಗೂ ಗೊತ್ತಿರಲಿಲ್ಲ. ಆದರೆ, ಈ ಮೊಬೈಲ್ ಸಂಖ್ಯೆಯನ್ನು ಹೈದರಾಬಾದ್‌ನಲ್ಲಿದ್ದಾಗ ಮಾತ್ರ ಬಳಸುತ್ತಿದ್ದ. ಇತ್ತ ಸಮೀರ್ ಖಾನ್ ಬಂಧನವಾಗುತ್ತಿದ್ದಂತೆ ಆತನ ಪತ್ನಿಯ ಮೊಬೈಲ್ ಸಿಮ್ ಇನಾಕ್ಟಿವ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ.
-ಉದಯವಾಣಿ