ಕರ್ನಾಟಕ

ಕನ್ನಡ ಪತ್ರಿಕೋದ್ಯಮದ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ನಿಧನ

Pinterest LinkedIn Tumblr

ಬೆಂಗಳೂರು: ಕನ್ನಡ ಪತ್ರಿಕೋದ್ಯಮದ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೈಸೂರಿನ ಆಂದೋಲನ ದಿನಪತ್ರಿಕೆ ಸಂಪಾದಕರಾಗಿದ್ದ ಕೋಟಿ ಅವರಿಗೆ 71 ವರ್ಷ ವಯಸ್ಸಾಗಿತ್ತು. ಪತ್ನಿ, ಒಬ್ಬ ಪುತ್ರ ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ಹಿಂದಿರುಗುವ ಸಮಯದಲ್ಲಿ ಹೃದಯಾಘಾತವಾಗಿದೆ. ತಕ್ಷಣವೇ ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಾಯಿತಾದರೂ ಫಲಕಾರಿಯಾಗಲಿಲ್ಲ. ಕೋಟಿ ಅವರ ಪಾರ್ಥೀವ ಶರೀರವನ್ನು ಮೈಸೂರಿನ ಸ್ವಗೃಹಕ್ಕೆ ತರಲಾಗಿದೆ.

ಪ್ರಗತಿಪರ ವಿಚಾರಧಾರೆಯ ಕೋಟಿ ಎಪ್ಪತ್ತರ ದಶಕದಲ್ಲಿ ಧಾರವಾಡದಿಂದ ಮೈಸೂರಿಗೆ ಬಂದು “ಆಂದೋಲನ” ವಾರಪತ್ರಿಕೆ ಆರಂಭ ಮಾಡಿದವರು. 1975ರ ತುರ್ತುಪರಿಸ್ಥಿತಿಯಲ್ಲಿ ಪತ್ರಿಕೆ ಇಂದಿರಾಗಾಂಧಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಆಗ ಕೋಟಿ, ಪತ್ರಿಕೆ ಭೂಗತವಾಗಿದ್ದರು.

ಪತ್ರಿಕೋದ್ಯಮದಲ್ಲಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದ ರಾಜಶೇಖರ ಕೋಟಿಯವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಟಿಎಸ್ಆರ್ ಪ್ರಶಸ್ತಿ ಸತ್ಯಕಾಮ ಪ್ರಶಸ್ತಿ, ಮುರಾಘಾಶ್ರೀ ಪ್ರಶಸ್ತಿ, ಜನಮಿತ್ರ ಹೀಗೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ.
ಸುಮಾರು 42 ವರ್ಷಗಳಷ್ಟು ಕಾಲ ಮೈಸೂರು ಜಿಲ್ಲೆ ಹಾಗೂ ಪ್ರಾದೇಶಿಕ ಮಟ್ಟದ ಪತ್ರಿಕೋದ್ಯಮಕ್ಕೆ ಅವರು ನೀಡಿರುವ ಕೊಡುಗೆ ಅಪಾರ.

Comments are closed.