ಕರ್ನಾಟಕ

ಉದ್ಯಮಿಯ ಫೇಸ್ ಬುಕ್ ಪಾಸ್‍ವರ್ಡ್ ಕದ್ದು, ಅಶ್ಲೀಲ ಫೋಟೋ ಅಪ್ಲೋಡ್: ರೂಪದರ್ಶಿ ಸೇರಿದಂತೆ ಇಬ್ಬರ ಬಂಧನ

Pinterest LinkedIn Tumblr

ಬೆಂಗಳೂರು: ಉದ್ಯಮಿಯೊಬ್ಬರ ಫೇಸ್‍ಬುಕ್ ಖಾತೆಯ ಪಾಸ್‍ವರ್ಡ್ ಕದ್ದು, ಆ ಖಾತೆಯಲ್ಲಿದ್ದ ವೈಯಕ್ತಿಕ ಛಾಯಾಚಿತ್ರಗಳನ್ನು ಅಳಿಸಿಹಾಕಿ ಅಶ್ಲೀಲ ಫೋಟೋ ಗಳನ್ನು ಅಪ್ಲೋಡ್ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಇಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿಯ ಕರಿಷ್ಮಾ ಕುಶಾಲಪ್ಪ (24) ಹಾಗೂ ದೂರವಾಣಿ ನಗರದ ಪ್ರಥ್ವಿನ್ ಅಲಿಯಾಸ್ ಎಲ್. ಪವನ್ ಕುಮಾರ್ (24) ಬಂಧಿತ ಆರೋಪಿಗಳು. ಬಂಧಿತರಿಂದ ಲ್ಯಾಪ್‍ಟಾಪ್, ಮೂರು ಮೊಬೈಲ್ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಏನಿದು ಪ್ರಕರಣ?
ಇಬ್ಬರು ಆರೋಪಿಗಳಿಗೆ ಒಂದು ವರ್ಷದ ಹಿಂದೆ ಉದ್ಯಮಿಯೊಬ್ಬರ ಪರಿಚಯವಾಗಿತ್ತು. ಉದ್ಯಮಿ ಆಗಾಗ ಕರಿಷ್ಮಾ ಮತ್ತು ಪವನ್ ರನ್ನು ಭೇಟಿ ಮಾಡುತ್ತಿದ್ದರು. ಒಮ್ಮೆ ಉದ್ಯಮಿ ತಮ್ಮ ಸ್ಯಾಮ್ ಸಂಗ್ ಫೋನಿನಲ್ಲಿ ಫೇಸ್‍ಬುಕ್ ಗೆ ಲಾಗಿನ್ ಆಗಿದ್ದರು. ಈ ವೇಳೆ ಪಾಸ್‍ವರ್ಡ್ ನೋಡಿಕೊಂಡಿದ್ದ ಆರೋಪಿಗಳು ಬಳಿಕ ಖಾತೆಯನ್ನು ದುರ್ಬಳಕೆ ಮಾಡುತ್ತಿದ್ದರು.

ಇವರಿಬ್ಬರು ತನ್ನ ಎಫ್‍ಬಿಗೆ ಲಾಗಿನ್ ಆಗಿದ್ದ ವಿಚಾರ ಉದ್ಯಮಿಗೆ ತಿಳಿದಿರಲಿಲ್ಲ. ಉದ್ಯಮಿ ಅವರ ಖಾಸಗಿ ಮಾಹಿತಿ ಮತ್ತು ನೋಟಿಫಿಕೇಶನ್ ಗಳನ್ನು ಇಬ್ಬರು ನೋಡುತ್ತಿದ್ದರು.

ಗೊತ್ತಾಗಿದ್ದು ಹೇಗೆ?
ಕೆಲ ದಿನಗಳ ಹಿಂದೆ ಕರಿಷ್ಮಾ ಉದ್ಯಮಿಯ ಫೇಸ್‍ಬುಕ್ ನಲ್ಲಿ ಪ್ರೊಫೈಲ್ ಫೋಟೋ ಅಪ್ಲೋಡ್ ಮಾಡಿದ್ದಳು. ಇದರಿಂದ ಅನುಮಾನಗೊಂಡು ಲಾಗಿನ್ ಹಿಸ್ಟರಿ ಚೆಕ್ ಮಾಡಿದಾಗ ಐಫೋನ್ ನಲ್ಲಿ ಖಾತೆ ಲಾಗಿನ್ ಆಗಿರುವುದು ಗೊತ್ತಾಗಿದೆ. ಕೂಡಲೇ ಉದ್ಯಮಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಐಪಿ ವಿಳಾಸದ ಆಧಾರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಈಗ ಯಶಸ್ವಿಯಾಗಿದ್ದಾರೆ.

ಕರಿಷ್ಮಾ ರೂಪದರ್ಶಿ ಆಗಿದ್ದರೆ, ಪವನ್ ಕುಮಾರ್ ಇವೆಂಟ್ ಮ್ಯಾನೇಜ್‍ಮೆಂಟ್ ಕಂಪೆನಿಯ ಸಂಘಟಕನಾಗಿದ್ದ. ಕರಿಷ್ಮಾ ತಾಯಿ ಉದ್ಯಮಿಯಿಂದ 1 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. ಸಾಲವನ್ನು ನೀಡದ ಹಿನ್ನೆಲೆಯಲ್ಲಿ ಉದ್ಯಮಿಯ ತಾಯಿ ಬಳಿ ಹಣ ನೀಡುವಂತೆ ಒತ್ತಡ ಹಾಕುತ್ತಿದ್ದರು. ಹೀಗಾಗಿ ಉದ್ಯಮಿಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಕರಿಷ್ಮಾ ಫೇಸ್‍ಬುಕ್ ಪಾಸ್ ವರ್ಡ್ ಕದ್ದು ಅದರಲ್ಲಿ ಅಶ್ಲೀಲ ಪೋಸ್ಟ್ ಹಾಕುತ್ತಿದ್ದಳು. ಕಾರ್ಯಕ್ರಮ ಸಂಘಟಿಸುವ ವಿಚಾರದ ಬಗ್ಗೆ ಇವರಿಬ್ಬರು ಭೇಟಿ ಆಗುತ್ತಿದ್ದರು. ಅದರೆ ಉದ್ಯೋಗಿಯ ಜೊತೆ ಜಗಳ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಇವರಿಬ್ಬರು ದೂರವಾಗಿದ್ದರು.

ಮಹಿಳೆಯೊಬ್ಬರ ಜತೆಗೆ ಸಲುಗೆಯಿಂದಿದ್ದ ವ್ಯಕ್ತಿಯೊಬ್ಬರ ದೃಶ್ಯವನ್ನು ಸೆರೆಹಿಡಿದಿದ್ದ ಪವನ್ ಮತ್ತು ಆತನ ಸ್ನೇಹಿತರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಸಂಬಂಧ ಆರೋಪಿ ಪವನ್‍ಕುಮಾರ್ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ 2015ರಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಜಾಮೀನಿನ ಮೇಲೆ ಪವನ್ ಕುಮಾರ್ ಮತ್ತು ಸ್ನೇಹಿತರು ಬಿಡುಗಡೆಯಾಗಿದ್ದರು.

Comments are closed.