
ಬೆಳಗಾವಿ: ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಇದ್ದರೆ ಮತ್ತೊಂದೆಡೆ ಪ್ರತಿವರ್ಷ ರಾಜ್ಯೋತ್ಸವ ದಿನದಂದು ಆಚರಿಸುವ ಕರಾಳ ದಿನಾಚರಣೆಗೆ ಎಂಇಎಸ್ ಷರತ್ತುಬದ್ಧ ಅನುಮತಿಯನ್ನು ಪಡೆದಿದೆ. ಏತನ್ಮಧ್ಯೆ ಕೆಲವು ಮರಾಠಿ ಯುವಕರು ಬಿಡುಗಡೆ ಮಾಡಿರುವ ಪ್ರೋಮೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನವೆಂಬರ್ 1ರ ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ಮರಾಠಿ ಭಾಷೆಯಲ್ಲಿ ತಯಾರಿಸಿರುವ ಪ್ರೋಮೊದಲ್ಲಿ ಮರಾಠಿ ಭಾಷೆಯ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುವ ಹಾಗೂ ಕನ್ನಡ ಭಾಷೆಯನ್ನೇ ಪ್ರಶ್ನಿಸಿ,ಕೆಣಕುವ ಪ್ರಶ್ನೆಗಳನ್ನು ಎತ್ತಲಾಗಿದೆ.
ಮರಾಠಿ ಪ್ರೋಮೊದಲ್ಲಿರುವ ಸಾರಾಂಶ ಇಲ್ಲಿದೆ:
ಕರ್ನಾಟಕದಲ್ಲಿ ಮರಾಠಿಗರಿಗೆ ಗೌರವ ಸಿಗುತ್ತಿಲ್ಲ. ನನ್ನ ಒಂದು ಸಾಮಾನ್ಯ ಪ್ರಶ್ನೆ, ಬೆಳಗಾಂವ್ ಎಂಬುದನ್ನು ಬೆಳಗಾವಿ ಯಾಕೆ ಬದಲಾಯಿಸಿದ್ರಿ? ನಮ್ಮ ಆಕ್ರೋಶ ಯಾವ ಭಾಷೆಯ ಮೇಲಿಲ್ಲ. ನಮ್ಮ ಅನ್ಯಾಯದ ವಿರುದ್ಧ ಹೋರಾಟ ಮಾಡ್ತಿದ್ದೇವೆ. 1956ರವರೆಗೆ ಮರಾಠಿ ರಾಜ್ಯದಲ್ಲಿ ಇದ್ದೇವು. ಎಲ್ಲಾ ಸರ್ಕಾರಿ ಕಾರ್ಯ ಕಲಾಪಗಳು ಮರಾಠಿಯಲ್ಲೇ ನಡೆಯುತ್ತಿದ್ದವು. ದಾಖಲೆಗಳು ಕೂಡ ಮರಾಠಿಯಲ್ಲೇ ಸಿಗುತ್ತಿತ್ತು. ಆದರೆ ಈಗ ಕನ್ನಡಮಯವಾಗಿದೆ ಯಾಕೆ? ಭಾಷಾ ನ್ಯಾಯಕ್ಕಾಗಿ ಹೋರಾಟ ಮಾಡಿದ ನನ್ನ ಜೊತೆಗಾರರ ಮೇಲೆ ಸುಳ್ಳು ಪ್ರಕರಣಗಳು ದಾಖಲಿಸುತ್ತಾರೆ. ನ್ಯಾಯಾಲಯದ ಮೆಟ್ಟಿಲು ಹತ್ತಿ ಅವರ ಜೀವನವೇ ಹಾಳಾಗಿದೆ.. ಮಿತ್ರ ಪರಶುರಾಮ್ ಪಾಟೀಲ್ ಇದೆಲ್ಲದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ. ಇನ್ನೂ ಎಷ್ಟು ಜನರ ಬಲಿ ತೆಗೆದುಕೊಳ್ಳುತ್ತೀರಿ? ನಾವು ಮಹಾರಾಷ್ಟ್ರದಲ್ಲಿ ಬಹುಸಂಖ್ಯಾತರಾಗಿ ಬದುಕುತ್ತಿದ್ದೇವೆ. ಹಾಗಾದ್ರೆ ಕರ್ನಾಟಕದಲ್ಲಿ ಅಲ್ಪಸಂಖ್ಯಾತರಾಗಿ ಯಾಕೆ ಇರಬೇಕು?ಬೆಳಗಾಂವ್, ಕಾರವಾರ್, ನಿಪ್ಪಾಣಿ, ಬೀದರ್, ಭಾಲ್ಕಿ, ಸಂತಪೂರ್, ಹುಮನಾಬಾದ್ ಸೇರಿದಂತೆ ಎಲ್ಲ ಪ್ರಾಂತ್ಯವೂ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು. ನಾವು ಗಡಿ ಪ್ರಾಂತ್ಯದವರು… ನಾವು ಭಾಷಿಕರು!
-ಉದಯವಾಣಿ
Comments are closed.