ಕರ್ನಾಟಕ

ಸಿದ್ದರಾಮಯ್ಯ ವಿರುದ್ಧ ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್‌ಗೆ 1 ಸಾವಿರ ಕೋಟಿ ರೂಪಾಯಿ ಸಂದಾಯ ವಿಚಾರ ಸಂಬಂಧ ತಾವು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಸ್ತಾಪಿಸಿದ ವಿಷಯ ಸುಳ್ಳಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೋಮವಾರ ಸವಾಲು ಹಾಕಿದ್ದಾರೆ.

ಅಂಧರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಸತತ ಎರಡನೇ ಬಾರಿ ಗೆಲುವು ಸಾಧಿಸಿದ ಭಾರತೀಯ ತಂಡಕ್ಕೆ ಅಭಿನಂದನೆ ಸಲ್ಲಿಸಿ ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಮಾತನಾಡಿದರು.

ಒಂದೊಮ್ಮೆ ನಾನು ಮಾಡಿದ ಎಲ್ಲಾ ವಿವರಗಳು ಸತ್ಯ ಅಂತಾದರೆ ನೀವು ಸಿಎಂ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತೀರಾ? ಸಿಎಂ ಖುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್ ನಾಯಕರಿಗೆ ಸಿದ್ದರಾಮಯ್ಯ ಹಣ ನೀಡಿದ್ದಾರೆ ಎನ್ನುವ ಮಾತಿಗೆ ನಾನು ಈಗಲೂ ಬದ್ಧವಾಗಿದ್ದೇನೆ. ಕಾಂಗ್ರೆಸ್ ಹೈಕಮಂಡ್‌ಗೆ ನೀವು ಸಾವಿರ ಕೋಟಿ ನೀಡಿದ್ದೀರಿ ಎಂದು ಯಡಿಯೂರಪ್ಪ ಪುನರುಚ್ಛರಿಸಿದರು.

ಉಕ್ಕಿನ ಸೇತುವೆ ವಿಚಾರ ಸಂಬಂಧ ಕೂಡ 65 ಕೋಟಿ ರೂ. ಈಗಾಗಲೇ ಸಿಎಂಗೆ ಸಂದಾಯವಾಗಿದೆ. ಇದು ಎಂಎಲ್‌ಸಿ ಗೋವಿಂದರಾಜು ಡೈರಿಯಲ್ಲಿ ನಮೂದಾಗಿದೆ. ಡೈರಿ ವಿವರಗಳು ಬಹಿರಂಗವಾದರೆ ನೀವು ನಿಮ್ಮ ಸ್ಥಾನ ತ್ಯಜಿಸುತ್ತೀರಾ? ನಾನು ಹೇಳಿದ್ದು ಸುಳ್ಳಾದರೆ ಕೂಡಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲೆಸೆದಿದ್ದಾರೆ.

ನಾನು ನೀಡುತ್ತಿರುವ ಎಲ್ಲಾ ವಿವರ ಸತ್ಯ. ನನ್ನ ವಿರುದ್ಧ ಅನಗತ್ಯ ಆರೋಪ ಮಾಡುವುದನ್ನು, ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ ಎಂದು ಯಡಿಯೂರಪ್ಪ ತಿಳಿಸಿದರು.

ದೃಡ ವಿಶ್ವಾಸ, ಮಹಾಪ್ರಯತ್ನಗಳ ಮೂಲಕ ಮಹತ್ತರ ಸಾಧನೆ ಸಾಧ್ಯ ಎನ್ನುವುದನ್ನು ಅ೦ಧರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಜಯಸಿರುವುದೇ ಸಾಕ್ಷಿಯಾಗಿದೆ. ಇದರಿಂದಾಗಿ ಇವರನ್ನು ಮನೆಗೆ ಆಮ೦ತ್ರಿಸಿ, ಆತ್ಮೀಯವಾಗಿ ಸತ್ಕರಿಸಿ ಅಭಿನ೦ದಿಸಿದ್ದೇನೆ. ತಮ್ಮ ನ್ಯೂನತೆಗಳನ್ನು ಗೆದ್ದು ಮಹಾಸಾಧನೆ ಮಾಡಿರುವ ತ೦ಡದ ಪ್ರತಿಯೊಬ್ಬ ಆಟಗಾರ ಇಡೀ ದೇಶಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ ಎ೦ದು ಯಡಿಯೂರಪ್ಪ ಹೇಳಿದರು.

Comments are closed.