ಕರ್ನಾಟಕ

ಭೂತದ ಬಾಯಲ್ಲಿ ಭಗವದ್ಗೀತೆ: ಯಡಿಯೂರಪ್ಪ ವಿರುದ್ಧ ಗುಡುಗಿದ ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು, ಫೆ. ೧೨ – ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಹಾಭಂಡ ವ್ಯಕ್ತಿ. ಇವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಇಂದು ಬೆಳಿಗ್ಗೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಯಡಿಯೂರಪ್ಪನವರ ಹೇಳಿಕೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದಲ್ಲದೆ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಹಗರಣಗಳಿಗೆ ಸಿಲುಕಿ ಜೈಲಿಗೆ ಹೋಗಿ ಬಂದಿದ್ದನ್ನು ಮರೆತಿದ್ದಾರೆ. ಪ್ರಸ್ತುತ ಅವರ ಮೇಲೆ 15 ಎಫ್‍ಐಆರ್ ದಾಖಲಾಗಿದ್ದರೂ, ಭಂಡತನದಿಂದ ವರ್ತಿಸುತ್ತಿದ್ದಾರೆ. ನೈತಿಕತೆ ಇಲ್ಲದ ವ್ಯಕ್ತಿ ಬಾಯಿಗೆ ಬಂದಂತೆ ಆರೋಪಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಿದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರವಿದ್ದದ್ದರೆ ಬಿಎಸ್‍ವೈ ಪುನಃ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಅವರ ಸರ್ಕಾರ ಇರುವುದರಿಂದ ಎಲ್ಲಾ ಕೇಸ್‍ಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಮತ್ತೊಬ್ಬರ ವಿರುದ್ಧ ಆರೋಪ ಮಾಡುವಾಗ ಅಗತ್ಯ ಮಾಹಿತಿ ನೀಡುವುದು ಒಳ್ಳೆಯದು. ವಿನಾಕಾರಣ ಟೀಕೆಗೆ ಸೊಪ್ಪು ಹಾಕುವುದಿಲ್ಲ ಎಂದು ಗುಡುಗಿದರು.

ದೇಶದಲ್ಲಿ ಕಾಂಗ್ರೆಸ್‍ನವರನ್ನೆ ಗುರಿಯಗಾಸಿಕೊಂಡು ಐಟಿ ದಾಳಿ ನಡೆಸಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಐಟಿ ದಾಳಿಗಳೆ ನಡೆಯುತ್ತಿಲ್ಲ. ಇದನ್ನು ಗಮನಿಸಿದರೆ ಸೇಡಿನ ರಾಜಕೀಯ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಸಚಿವ ರಮೇಶ್ ಜಾರಕಿಹೋಳಿ ಮನೆಯಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲಿ 150 ಕೋಟಿ ಹಣ, ಚಿನ್ನಾಭರಣ ಸಿಕ್ಕಿದೆ ಎಂಬ ಸುದ್ದಿ ಬಿಂಬಿಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡುವಂತೆ ಐಟಿ ಅಧಿಕಾರಿಗಳನ್ನು ಕೇಳಿದ್ದೆ. ಆದರೆ ಅವರು ಇನ್ನೂಸಹ ತನಿಖೆ ಪ್ರಗತಿಯಲ್ಲಿದೆ ಎಂದಷ್ಟೇ ಉತ್ತರ ನೀಡುತ್ತಿದ್ದಾರೆ. ಪ್ರಧಾನ ಮಂತ್ರಿಗಳು ಉತ್ತರ ಪ್ರದೇಶದಲ್ಲಿ ಭಾಷಣದ ವೇಳೆ ಜಾರಕಿ ಹೋಳಿ ಮನೆಯಲ್ಲಿ 150 ಕೋಟಿ ಸಿಕ್ಕಿದೆ ಎಂದು ಮಾತನಾಡುತ್ತಾರೆ. ಇದರ ಅರ್ಥ ಏನು ? ಎಂದು ಪ್ರಶ್ನಿಸಿದ ಅವರು, ಪ್ರಧಾನ ಮಂತ್ರಿಗಳಿಗೆ ಸ್ಪಷ್ಟ ಚಿತ್ರಣದ ಅರಿವಿಲ್ಲ ಎಂದು ದೂರಿದರು.

ಎಲ್ಲಾ ಶಾಸಕರು ಹಾಗೂ ಸಚಿವರು ನನಗೆ ಆಪ್ತರೇ. ದಾಳಿಯಾದಾಗ ಮುಖ್ಯಮಂತ್ರಿಗಳ ಆಪ್ತರು ಎಂದು ನಮೂದಿಸುತ್ತಾರೆ. ಈ ಬಗ್ಗೆ ಬಿಎಸ್‍ವೈ ಬೇಜವಾಬ್ದಾರಿ, ಆಧಾರ ರಹಿತ ರಾಜಕೀಯ ದುರುದ್ದೇಶ ಇಟ್ಟುಕೊಂಡು ನೀಡುವ ಹೇಳಿಕೆಗಳಿಗೆ ನಾನು ಉತ್ತರ ನೀಡುವ ಅಗತ್ಯವಿಲ್ಲ. ಅನ್ನಭಾಗ್ಯ ವಿಚಾರದಲ್ಲಿಯೂ ಅಕ್ರಮ ನಡೆದಿದೆ ಎಂಬ ಬಿಎಸ್‍ವೈ ಆರೋಪದಲ್ಲಿ ಹುರುಳಿಲ್ಲ ಎಂದರು.

ನೋಟು ಅಮಾನ್ಯದಿಂದ ಕಪ್ಪು ಹಣ ನಿಯಂತ್ರಿಸಲಾಗಿದೆ ಎಂದು ಪ್ರಧಾನಿ ಅವರು ಹೇಳುತ್ತಿದ್ದಾರೆ. ಇದೇ ರೀತಿ ಅಕ್ರಮ ಚಿನ್ನಾಭರಣ ಹಾಗೂ ಆಸ್ತಿ ಪಾಸ್ತಿಗಳ ಮೇಲೆ ದಾಳಿ ನಡೆಸಿ ವಶಕ್ಕೆ ತೆಗೆದುಕೊಳ್ಳಲಿ. ಇದರಿಂದ ದೇಶದ ಬೊಕ್ಕಸಕ್ಕೆ ಹಣ ಸಂಗ್ರಹವಾಗುತ್ತದೆ. ಆದರೆ ಇದರ ಬಗ್ಗೆ ಪ್ರಧಾನಿಯವರು ಚಕಾರವೆತ್ತದೆ ಕೇವಲ ನೋಟಿನ ಅಮಾನ್ಯದ ಬಗ್ಗೆ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವಸ್ತಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಗೆ ವೀರೇಶ್, ಮೂಡಾ ಅಧ್ಯಕ್ಷ ಧೃವಕುಮಾರ್, ವಿಜಿಕುಮಾರ್, ರವಿಶಂಕರ್ ಹಾಜರಿದ್ದರು.

Comments are closed.