ಕರ್ನಾಟಕ

ದಾಳಿ ಸಂದರ್ಭದಲ್ಲಿ ಮುಖ್ಯಮಂತ್ರಿ ಆಪ್ತ ಶಾಸಕನ ಮನೆಯಲ್ಲಿ 10 ಕೆ.ಜಿ ಚಿನ್ನ-1.10 ಕೋಟಿ ಹಣ ಪತ್ತೆ!

Pinterest LinkedIn Tumblr

ಬೆಂಗಳೂರು: ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಂ.ಟಿ.ಬಿ. ನಾಗರಾಜ್‌ ಅವರ ಮನೆಯಲ್ಲಿ 10 ಕೆ.ಜಿ ಚಿನ್ನ ಮತ್ತು ದಾಖಲೆಗಳಿಲ್ಲದ ₹ 1.10 ಕೋಟಿ ಹಣ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಪತ್ತೆಯಾಗಿದೆ.

ಮುಖ್ಯಮಂತ್ರಿ ಆಪ್ತವಲಯದಲ್ಲಿ ನಾಗರಾಜ್‌ ಗುರುತಿಸಿಕೊಂಡಿದ್ದು, ಬೆಂಗಳೂರಿನ ಮಹದೇವಪುರದ ಗರುಡಾಚಾರ್‌ ಪಾಳ್ಯದಲ್ಲಿರುವ ಮನೆ ಮೇಲೆ ಫೆ. 9ರಂದು ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಆಸ್ತಿ ಮಾಲೀಕತ್ವ ಮತ್ತು ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ದಾಳಿ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಅವುಗಳ ಪರಿಶೀಲನೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ನಾಗರಾಜ್‌ ಮತ್ತು ಅವರ ಕುಟುಂಬದ ಸದಸ್ಯರು ಹೊಂದಿದ ಆಸ್ತಿ ಮೌಲ್ಯ ₹ 120 ಕೋಟಿಗೂ ಹೆಚ್ಚು ಎನ್ನುವ ಅಂಶವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಆಸ್ಪತ್ರೆ, ವಾಸದ ಮನೆ ಮೇಲೆ ಭಾರಿ ಮೊತ್ತದ ಹಣ ಹೂಡಿಕೆ ಮಾಡಿರುವ ಅವರು, ತೆರಿಗೆ ತಪ್ಪಿಸುವ ಉದ್ದೇಶದಿಂದ ಯಾವುದೇ ಭದ್ರತೆ ಇಲ್ಲದ ನಕಲಿ ಸಾಲ ಪತ್ರ ಸೃಷ್ಟಿಸಿರುವುದು ಗೊತ್ತಾಗಿದೆ. ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ಆಸ್ತಿ ವ್ಯವಹಾರದಲ್ಲಿ ನಾಗರಾಜ್‌ ಅವರು ಕೋಟ್ಯಂತರ ಹಣ ಹೂಡಿಕೆ ಮಾಡಿದ್ದಾರೆ. ಅಲ್ಲದೆ, ವಿವಿಧ ಭೂ ಮಾಲೀಕರು ₹ 70 ಕೋಟಿಗೂ ಹೆಚ್ಚು ಹಣ ಮರುಪಾವತಿಸಿರುವ ದಾಖಲೆಗಳೂ ಮನೆಯಲ್ಲಿ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ನಾಗರಾಜ್‌ ಅವರು ವಿಶೇಷ ಆರ್ಥಿಕ ವಲಯ (ಎಸ್‌ಇಝೆಡ್‌) ಸ್ಥಾಪಿಸುವ ಉದ್ದೇಶದಿಂದ ಹಲವು ವರ್ಷಗಳ ಹಿಂದೆ ₹ 125 ಕೋಟಿಗೂ ಹೆಚ್ಚು ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆದಿರುವ ದಾಖಲೆ ಪತ್ತೆಯಾಗಿದೆ. ಆದರೆ ಇದು ಸುಳ್ಳು ಎಂಬ ಅಂಶವೂ ಅಧಿಕಾರಿಗಳ ಗಮನಕ್ಕೆ ಬಂದಿದೆ. ನಾಗರಾಜ್‌ ಅವರ ಒಡೆತನದಲ್ಲಿರುವ 3,500 ಆಸ್ತಿಗಳ ದಾಖಲೆ ಪತ್ರಗಳೂ ಪತ್ತೆಯಾಗಿವೆ. ಈ ಎಲ್ಲ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದೂ ಮೂಲಗಳು ತಿಳಿಸಿವೆ.

Comments are closed.