ಕರ್ನಾಟಕ

ಎಸ್.ಎಂ.ಕೃಷ್ಣ ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ಗೊಂದಲದ ಹೇಳಿಕೆ ನೀಡಿದ ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ತೀವ್ರ ಅಸಮಾಧಾನಗೊಂಡು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಇದೀಗ ತಮ್ಮ ಹೇಳಿಕೆ ಕುರಿತಂತೆ ‘ಯೂ-ಟರ್ನ್’ ಹೊಡೆದಿದ್ದಾರೆ.

ಎಸ್.ಎಂ. ಕೃಷ್ಣ ಅವರ ಬಿಜೆಪಿ ಸೇರ್ಪಡೆ ಕುರಿತಂತೆ ನಿನ್ನೆಯಷ್ಟೇ ಸ್ಪಷ್ಟನೆ ನೀಡಿರುವ ಅವರು, ಬಿಜೆಪಿ ಸೇರ್ಪಡೆ ಕುರಿತಂತೆ ಈ ವರೆಗೂ ಎಸ್.ಎಂ. ಕೃಷ್ಣಾ ಅವರೊಂದಿಗೆ ಮಾತುಕತೆ ನಡೆಸಿಲ್ಲ. ಎಸ್.ಎಂ.ಕೃಷ್ಣ ಅವರೇ ಸ್ವತಃ ತಮ್ಮ ನಿಲುವಿನ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕವಷ್ಟೇ ಈ ಬಗ್ಗೆ ನಾನು ಪ್ರತಿಕ್ರಿಯೆಯನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.

ಮೂಲಗಳು ತಿಳಿಸಿರುವ ಪ್ರಕಾರ, ಬಿಜೆಪಿ ಸೇರ್ಪಡೆ ಅಗತ್ಯವೆನಿಸಿದ್ದೇ ಆದರೆ, ಮುಂದಿನ ನಿರ್ಧಾರಗಳ ಕುರಿತಂತೆ ಎಸ್.ಎಂ.ಕೃಷ್ಣಾ ಅವರು ಪ್ರಧಾನಮಂತ್ರ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಯಡಿಯೂರಪ್ಪ ಅವರು, “ಎಸ್ ಎಂ ಕೃಷ್ಣ ಅವರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದ್ದರಿಂದ ಕಾಂಗ್ರೆಸ್ ತೊರೆದಿರುವುದಾಗಿ ಹೇಳಿದ್ದಾರೆ. ಅಂತೆಯೇ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರ ಗೌರವವಿದ್ದು, ಇತ್ತೀಚೆಗಷ್ಟೇ ಅಂದರೆ ನೋಟು ನಿಷೇಧವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಚರ್ಚೆ ನಡೆಸಿದ್ದರು. ಪ್ರಧಾನಿ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿದೆ ಎಂದು ಕೃಷ್ಣಾ ನಂಬಿದ್ದಾರೆ. ಹೀಗಾಗಿ ಅವರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಸಿದ್ದು, ಮತ್ತೊಮ್ಮೆ ಚರ್ಚೆ ನಡೆಸಿ ಈ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದ್ದರು.

Comments are closed.