ಕರ್ನಾಟಕ

ಎಟಿಎಂನಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊನೆಗೂ ಸಿಕ್ಕಿಬಿದ್ದ ಆರೋಪಿ ಮಧುಕರ್ ರೆಡ್ಡಿಯ ‘ರಕ್ತ ಚರಿತ್ರೆ’ ಇಲ್ಲಿದೆ…

Pinterest LinkedIn Tumblr

ಬೆಂಗಳೂರು: ಕಾರ್ಪೋರೇಷನ್ ಎಟಿಎಂ ನಲ್ಲಿ ಜ್ಯೋತಿ ಉದಯ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಮೂರುವರೆ ವರ್ಷಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ಆರೋಪಿ ಮಧುಕರ್ ರೆಡ್ಡಿ 2011 ರಿಂದ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ.

ಹಣಕ್ಕಾಗಿ ಆರು ವರ್ಷಗಳಲ್ಲಿ ಐದು ಕೊಲೆ ಮಾಡಿದ್ದ ಈತ ಎರಡು ಕೊಲೆ ಯತ್ನಗಳಲ್ಲೂ ಭಾಗಿಯಾಗಿದ್ದಾನೆ.

ಮಧುಕರ್ ರೆಡ್ಡಿಯ ಪಾತಕ ಕೃತ್ಯ ಆರಂಭವಾಗಿದ್ದು 2005ರಲ್ಲಿ. ಆತ 20 ವರ್ಷದವನಾಗಿದ್ದಾಗ, ರಾಯಲ ಸೀಮೆಯಲ್ಲಿ ಐದು ಬಾರಿ ಶಾಸಕನಾಗಿದ್ದ ಮಾಜಿ ರೌಡಿ ಪರಿಟಾಲ ರವಿ ಅಪರಾಧ ಹಾಗೂ ಹಿಂಸಾಚಾರದ ಕಥೆಗಳಿಂದ ಅಪರಾಧ ಮಾಡಲು ಉತ್ತೇಜಿತನಾಗಿದ್ದ.

2005ರಲ್ಲಿ ಪರಿಟಾಲ ರವಿಯ ಹತ್ಯೆ ನಡೆದ ವರ್ಷವೇ ಮಧುಕರ್ ರೆಡ್ಡಿ, ಕುಡಿಯವ ನೀರಿನ ವಿಚಾರವಾಗಿ ಆನಂದ ರೆಡ್ಡಿ ಎಂಬುವನ ಜೊತೆ ಜಗಳ ಮಾಡಿಕೊಂಡು ತಂಬಾಲಪಲ್ಲೆ ಎಂಬಲ್ಲಿ ಕಚ್ಚಾ ಬಾಂಬ್ ಸಿಡಿಸಿ ಆತನನ್ನು ಹತ್ಯೆ ಮಾಡಿದ್ದ. ಮದನಪಲ್ಲೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸು ದಾಖಲಾಗಿತ್ತು.

2005ರಲ್ಲಿ ಮಧುಕರ್ ರೆಡ್ಡಿಯನ್ನು ಬಂಧಿಸಲಾಗಿತ್ತು. ಸ್ಥಳೀಯ ಕೋರ್ಟ್ ಈತನಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆತನನ್ನು ಕಡಪ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಡಿಸೆಂಬರ್ 13 2011 ರಲ್ಲಿ ಹಲ್ಲು ನೋವು ಎಂದು ನೆಪ ಹೇಳಿದ ರೆಡ್ಡಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ.

ಅಲ್ಲಿಂದ ಹೈದರಾಬಾದ್ ಗೆ ತೆರಳಿದ್ದ ಮಧುಕರ್ ರೆಡ್ಜಿ 2013 ರಲ್ಲಿ ಮಾಲ್ ವೊಂದರಲ್ಲಿ ಒಬ್ಬ ಮಹಿಳೆ ಹಾಗೂ ಪುರುಷನನ್ನು ಕೊಂದು ಅವರಿಂದ ಹಣ ದೋಚಿ ತೆಲಂಗಾಣದ ಮೆಹಬೂಬ್ ನಗರಕ್ಕೆ ಓಡಿಹೋಗಿದ್ದ. ಮತ್ತೆ ನವೆಂಬರ್ 13 ರಂದು ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದು ಅನಂತಪುರ ಜಿಲ್ಲೆಯ ಧರ್ಮಾವರಂ ಗೆ ಓಡಿಹೋಗಿದ್ದ. ಅಲ್ಲಿ ಮತ್ತೊಬ್ಬ ವೃದ್ಧ ಮಹಿಳೆಯನ್ನು ಕೊಂದು ಆಕೆಯ ಎಟಿಎಂ ಕಾರ್ಡ್ ಕದ್ದೊಯ್ದಿದ್ದ.

ಅತನ ಬಳಿಯಿದ್ದ ಹಣವೆಲ್ಲಾ ಖಾಲಿಯಾದ ಮೇಲೆ ಬೆಂಗಳೂರಿಗೆ ಬಂದಿದ್ದ ಆರೋಪಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದ. ಪ್ರಕರಣದ ನಂತರ ಮುಳಬಾಗಿಲು, ಚಿತ್ರದುರ್ಗಗಳಲ್ಲಿ ತಲೆ ಮರೆಸಿಕೊಂಡಿದ್ದ ಮಧುಕರ್ ರೆಡ್ಡಿ ಕೇರಳಗೆ ತೆರಳಿ ಅಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ.

2015 ರ ಡಿಸೆಂಬರ್ ನಲ್ಲಿ ಅನಾರೋಗ್ಯದ ಕಾರಣ ಆರೋಪಿ ರೆಡ್ಡಿ ತನ್ನ ಹುಟ್ಟೂರಿಗೆ ತೆರಳಿದ್ದ. ಫೆಬ್ರವರಿ 2 ರಂದು ಆಭರಣ ಮಳಿಗೆಯೊಂದರಲ್ಲಿ ದರೋಡೆ ನಡೆಸಲು ಸ್ಕೆತ್ ಆಗಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇಷ್ಟು ವರ್ಷಗಳಲ್ಲಿ ರೆಡ್ಡಿ ಸತತವಾಗಿ ತನ್ನ ಮೊಬೈಲ್ ನಂಬರ್ ಗಳನ್ನು ಬದಲಾಯಿಸಿಕೊಂಡಿದ್ದ.

Comments are closed.