
ಬೆಳಗಾವಿ(ಫೆ.02): ಆ ಆರು ಮಂದಿ ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ನಂಟು ಹೊಂದಿದ್ದರು. ಹಿಂಡಲಗಾ ಜೈಲಿನಲ್ಲಿರುವ ಪಾತಕಿ ದಿನೇಶ ಶೆಟ್ಟಿಯನ್ನ ಬಿಡಿಸಿಕೊಂಡು ಹೋಗಲು ಆ ನಟೋರಿಯಸ್ ಶಾರ್ಪ್ ಶೂಟರ್ಸ್ ಬಂದಿದ್ದರು. ಆದರೆ, ಬೆಳಗಾವಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಹೆಡೆಮುರಿ ಕಟ್ಟಿ ಭಾರೀ ಸಂಚೊಂದನ್ನು ವಿಫಲಗೊಳಿಸಿದ್ದಾರೆ.
ಬೆಳಗಾವಿಯಲ್ಲಿ 6 ಶಾರ್ಪ್ ಶೂಟರ್ಗಳ ಸೆರೆ: ಪೊಲೀಸ್ ಕಾರ್ಯಾಚರಣೆಯಿಂದ ತಪ್ಪಿದ ಸಂಚು
ನಿನ್ನೆ ಸಂಜೆ ಬೆಳಗಾವಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ವಲ್ಪ ಯಾಮಾರಿದರೆ ಭಾರೀ ರಕ್ತದೋಕುಳಿ ನಡೆದು ಹೋಗುತ್ತಿತ್ತು. ಭಾರೀ ಪ್ರಮಾಣದ ಸ್ಫೋಟಕ ಮತ್ತು ಪಿಸ್ತೂಲ್ ಹಿಡಿದಿದ್ದ ಶಾರ್ಪ್ ಶೂಟರ್ಸ್ ಹಣೆಗೇ ಗನ್ ಟ್ರಿಗರ್ ಒತ್ತಿ ಹಿಡಿದೇ ಪೊಲೀಸರು ವ್ಯವಸ್ಥಿತ ಸಂಚನ್ನ ವಿಫಲಗೊಳಿಸಿದ್ದಾರೆ. ಈ ಆಪರೇಷನ್ ಸಮಯದಲ್ಲಿ ಯಾವುದೇ ಅಪಾಯ ಆಗದಂತೆ DCP ಅಮರನಾಥ ರೆಡ್ಡಿ, ACP ಜಯಕುಮಾರ ನೇತೃತ್ವದ ಟೀಮ್ ಸಕ್ಸಸ್ ಆಗಿದೆ.
6 ಕುಖ್ಯಾತಿಗಳ ಬಂಧನ, ಒಬ್ಬ ಎಸ್ಕೇಪ್!
ಅಸಲಿಗೆ ಕುಂದಾನಗರಿಗೆ ಶಾರ್ಪ್ ಶೂಟರ್ ಗ್ಯಾಂಗ್ ಬಂದಿರುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಪೊಲೀಸರು ಸಾಕಷ್ಟು ಅಲರ್ಟ್ ಆಗಿದ್ದರು. ಯಾವಾಗ ಆರೋಪಿಗಳು ತಂಗಿರುವ ಲಾಡ್ಜ್, ಓಡಾಡುತ್ತಿರುವ ಪ್ರದೇಶದ ಸುಳಿವು ಸಿಕ್ಕಿತೋ, ಸ್ವಲ್ಪವೂ ತಡ ಮಾಡದೇ ಪೊಲೀಸರು ಫೀಲ್ಡಿಗೆ ಬಂದರು. ಬೆಂಗಳೂರಿನ ವೀರ ಮದನರೆಡ್ಡಿ, ಮುಂಬೈನವರಾದ ಅವಿನಾಶ ಮಾರ್ಕೆ, ಅಮ್ಜದ್ ಸಯ್ಯದ್, ಪುತ್ತೂರಿನವರಾದ ಮಹ್ಮಮದ್ಹನೀಫ್, ಅಬ್ದುಲ್ ಕರೀಂನನ್ನ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೆರೆ ಹಿಡಿದರು. 6ನೇ ಆರೋಪಿಯಾದ ತಾಹೀರ್ ಹುಸೇನ್ ಅಲಿಯಾಸ್ ಅನುಪಗೌಡನನ್ನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್ ಅಂದರ್!
ಇನ್ನು ಬಂಧಿತರು ರವಿ ಪೂಜಾರಿ ಗ್ಯಾಂಗಿಗೆ ಸೇರಿದವರು ಅಂತ ಗೊತ್ತಾಗಿದೆ. ಹಿಂಡಲಗಾ ಜೈಲಿನಲ್ಲಿದ್ದ ದಿನೇಶ ಶೆಟ್ಟಿಯನ್ನು ಆಸ್ಪತ್ರೆಗೆ ಕರೆ ತಂದಾಗ ಪೊಲೀಸರ ಮೇಲೆ ಅಟ್ಯಾಕ್ ಮಾಡಿ, ಬಿಡಿಸಿಕೊಂಡು ಹೋಗುವಂತಹ ಖತರ್ನಾಕ್ ಸಂಚು ರೂಪಿಸಿದ್ದರು. ಬಂಧಿತರಿಂದ 5 ಪಿಸ್ತೂಲ್, 29 ಬುಲೆಟ್, 15 ಮೊಬೈಲ್, ಒಂದು ಕಾರು ಹಾಗೂ ಹಲವು ಬಗೆಯ ಮಾರಕಾಸ್ತ್ರಗಳನ್ನ ಜಪ್ತಿ ಮಾಡಲಾಗಿದೆ.
ಒಟ್ಟಿನಲ್ಲಿ ಕುಂದಾನಗರಿಯಲ್ಲಿ ಹಾಡಹಗಲೇ ಅಟ್ಟಹಾಸ ಮೆರೆಯಲು ರೆಡಿಯಾಗಿದ್ದ ಪಾತಕಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರಿಂದ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ
Comments are closed.