ಕರ್ನಾಟಕ

ಕುಡಿಯುವ ನೀರಿಗಾಗಿ ಖಾಸಗಿ ಬೋರ್ ವೆಲ್ ಬಳಸಿ: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಬರಪೀಡಿತ ಪ್ರದೇಶಗಳಲ್ಲಿ ಖಾಸಗಿ ಬೋರ್ ವೆಲ್ ಗಳಿಂದ ನೀರನ್ನು ಪಡೆದುಕೊಂಡು ಕುಡಿಯುವ ನೀರು ಪೂರೈಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಜೊತೆ ಪರಾಮರ್ಶೆ ಸಭೆ ನಡೆಸಿದ ಅವರು, ಕುಡಿಯುವ ನೀರು ಪೂರೈಕೆ ಮಾಡುವುದು ಮುಖ್ಯವಾಗಿದ್ದು ಖಾಸಗಿ ಬೋರ್ ವೆಲ್ ಗಳನ್ನು ಅದಕ್ಕೆ ಬಳಸಿಕೊಳ್ಳಬೇಕು. ಕೃಷಿ ಚಟುವಟಿಕೆಗಳಿಗೆ ಬೋರ್ ವೆಲ್ ನೀರು ಬಳಸಲು ಬಿಡಬಾರದು ಎಂದು ಹೇಳಿದರು.
ರಾಜ್ಯದ ಬರಗಾಲ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳ ಪರಾಮರ್ಶೆ ನಡೆಸಲು ನಾಲ್ಕು ಸಂಪುಟ ಉಪ ಸಮಿತಿ ಪ್ರವಾಸ ಕೈಗೊಳ್ಳಲಿದೆ. ಈ ವರ್ಷದ ಖಾರಿಫ್ ಮತ್ತು ರಬಿ ಋತುವಿನಲ್ಲಿ ಬರಗಾಲದಿಂದ ಸುಮಾರು 25,000 ಕೋಟಿ ರೂಪಾಯಿ ನಷ್ಟವುಂಟಾಗಿದೆ ಎಂದು ವಿವರ ನೀಡಿದರು.
ಕೇಂದ್ರ ಸರ್ಕಾರದಿಂದ ಪರಿಹಾರ ಧನ ಬಂದಿದ್ದರೂ ರಾಜ್ಯ ಸರ್ಕಾರ ಅದನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ವಿರೋಧ ಪಕ್ಷಗಳು ಸುಳ್ಳು ವದಂತಿಯನ್ನು ಹಬ್ಬಿಸುತ್ತಿವೆ. ಅಧಿಕಾರಿಗಳು ಏಕೆ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತಿಲ್ಲ? ಕೇಂದ್ರದಿಂದ ಬರಬೇಕಾಗಿದ್ದ 1,782.44 ಕೋಟಿ ರೂಪಾಯಿ ಇನ್ನೂ ಬಿಡುಗಡೆಯಾಗಿಲ್ಲ. ಅಧಿಕಾರಿಗಳು ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂದರು.
ಬೇರೆ ರಾಜ್ಯಗಳಿಗೆ ಮೇವನ್ನು ಸಾಗಾಟ ಮಾಡುವುದನ್ನು ನಿಲ್ಲಿಸಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಿದರು. ರೈತರು ವಲಸೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಉದ್ಯೋಗ ನೀಡುವಂತೆ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲಹೆ ನೀಡಿದರು.

Comments are closed.