ಕರ್ನಾಟಕ

ಎಸ್.ಎಂ. ಕೃಷ್ಣಗೆ ಜೆಡಿಎಸ್ ಗೆ ಆಹ್ವಾನವಿಲ್ಲ: ದೇವೇಗೌಡ

Pinterest LinkedIn Tumblr


ಹುಬ್ಬಳ್ಳಿ, ಜ 30- ಕಾಂಗ್ರೆಸ್ ಜೊತೆಗಿನ ತಮ್ಮ ಬಾಂಧವ್ಯವನ್ನು ಕಡಿದುಕೊಂಡಿರುವ ಮಾಜಿ ಮುಖ್ಯಮಂತ್ರಿ, ಹಾಗೂ ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರನ್ನು ಜೆಡಿಎಸ್ ಪಕ್ಷಕ್ಕೆ ಆಹ್ವಾನಿಸುವುದಿಲ್ಲವೆಂದು ಪಕ್ಷದ ರಾಷ್ಟ್ರೀಯ ನಾಯಕ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಇಂದಿಲ್ಲಿ ಸ್ಪಷ್ಟಪಡಿಸಿದರು.
ನಗರದಲ್ಲಿಂದು ಆಯೋಜಿತ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ಅವರನ್ನು ನಿಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಆಹ್ವಾನಿಸುವಿರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ಕೃಷ್ಣ ಓರ್ವ ಹಿರಿಯ ಹಾಗೂ ಮುತ್ಸದ್ದಿ ರಾಜಕಾರಣಿಯಾಗಿದ್ದು ಪ್ರಸಕ್ತ ಬೆಳವಣಿಗೆಗಳ ಕುರಿತಂತೆ ಅವರೇ ನಿರ್ಧಾರ ಕೈಕೊಳ್ಳಲಿ ಎಂದಷ್ಟೇ ದೇವೇಗೌಡ ಹೇಳಿದರು.
ಇಬ್ಬರ ಸ್ಪರ್ಧೆ
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದಿಂದ ಕಣಕ್ಕಿಳಿವವರು ಇಬ್ಬರೇ ಮಾತ್ರ ಎಂದು ಹೇಳಿದ ಅವರು, ಈ ಚುನಾವಣೆಯಲ್ಲಿ ಭವಾನಿ ರೇವಣ್ಣ, ಪ್ರಜ್ವಲ ರೇವಣ್ಣ ಅವರಾರೂ ಸ್ಪರ್ಧೆಗಿಳಿಯಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣಾ ಸ್ಪರ್ಧಾಕಾಂಕ್ಷಿ ಅಭ್ಯರ್ಥಿಗಳಿಗೆ ತಾವೇ ಬಿ ಫಾರಂ ನೀಡಲಿದ್ದು ಈ ಕುರಿತಂತೆ ಈಗಾಗಲೇ ಸ್ಪಷ್ಟಪಡಿಸಿದ್ದಾಗಿ ಅವರು ತಿಳಿಸಿದರು.
ಮೈತ್ರಿಯಿಲ್ಲ
ತಮ್ಮ ಪಕ್ಷವು ಎಲ್ಲ 224 ಕ್ಷೇತ್ರಗಳಲ್ಲೂ ಸ್ಪರ್ಧೆಗಿಳಿಯಲಿದೆ, ಆದರೆ ಯಾರೊಂದಿಗೂ ಮೈತ್ರಿ ಹೊಂದುವುದಿಲ್ಲ. ಈ ಬಾರಿ ತಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಅವರು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ 1964 ರಲ್ಲಿ ವಿಧಾನ ಸಭೆಯಲ್ಲಿ ಮಾಡಲಾದ ಠರಾವಿಗೆ ಅಂದಿನ ಕೇಂದ್ರ ಸರ್ಕಾರ ಸಹಮತ ವ್ಯಕ್ತಪಡಿಸಲಿಲ್ಲ. ಅಷ್ಟು ಸಾಲದೆಂಬಂತೆ ಇದುವರೆಗಿನ ಪ್ರಧಾನಿಗಳೂ ಈ ಯೋಜನೆಯ ಸಮರ್ಪಕ ನಿಭಾವಣೆಗೆ ಮನಸ್ಸು ಮಾಡುತ್ತಿಲ್ಲ ಎಂದು ವಿಷಾದಿಸಿದ ಅವರು, ಈ ಯೋಜನೆಯಿಂದ ನಮ್ಮ ರೈತರ ಜಮೀನುಗಳಿಗೆ ಅಗತ್ಯವಾದ ನೀರು ಉಣಿಸಲು ಸಾಧ್ಯವಾಗದಿರುವುದು ದೌರ್ಭಾಗ್ಯದ ಸಂಗತಿ ಎಂದರು.
ಅನ್ಯಾಯ
ಕಾವೇರಿ ಹಾಗೂ ಮಹದಾಯಿ ವಿಚಾರದಲ್ಲಿಯೂ ಸಹ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ.
ಈ ಕುರಿತಂತೆ ಎರಡೂ ಪಕ್ಷಗಳ ಬಗ್ಗೆ ಜನತೆಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಅದು ಬರುವ ಚುನಾವಣೆ ಕಾಲಕ್ಕೆ ಹೊರಬೀಳಲಿದೆ ಎಂದು ದೇವೇಗೌಡರು ನುಡಿದರು.

Comments are closed.