ಕರ್ನಾಟಕ

ಅಮೃತಮಹಲ್ ತಳಿ ರಾಸುಗಳು ಮೇವಿಲ್ಲದೇ ಸಾಯುತ್ತಿವೆ

Pinterest LinkedIn Tumblr


ಚಿಕ್ಕಮಗಳೂರು, ಜ. ೨೯- ಅಪರೂಪವಾದ ದೇಶದ ಅಮೃತಮಹಲ್ ತಳಿ ರಾಸುಗಳು ಮೇವಿಲ್ಲದೇ ಸಾಲು ಸಾಲಾಗಿ ಸಾವನ್ನಪ್ಪುತ್ತಿರುವುದು ನಿಜಕ್ಕೂ ದುರಂತವೇ ಸರಿ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರದ ಅಮೃತ್ ಮಹಲ್ ತಳಿಯ ರಾಸುಗಳು ರಾಜ್ಯದ ಮೊದಲ ತಳಿ.
ವಿಜಯನಗರದ ಅರಸರ ಕಾಲದಲ್ಲಿ ಈ ಸಂತತಿಯ ರಕ್ಷಣೆಗೆ 4 ಲಕ್ಷ ಎಕರೆ ಅಧಿಕ ಜಮೀನಿತ್ತು. ಆದ್ರೆ, ಇಂದು ಉಳಿದಿರೋದು 50-60 ಸಾವಿರ ಎಕರೆಯಷ್ಟೆ. ಈ ಪೈಕಿ, ಅಜ್ಜಂಪುರದಲ್ಲಿ 651 ಎಕರೆ ಪ್ರದೇಶದಲ್ಲಿ ಗೋ ತಳಿ ಸಂವರ್ಧನಾ ಕಾರ್ಯ ನಡೆಯುತ್ತಿದೆ. ಆದ್ರೀಗ, ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇಲ್ಲಿನ ರಾಸುಗಳು ತಿನ್ನೋಕು ಮೇವಿಲ್ಲದೆ ಸರದಿ ಸಾಲಲ್ಲಿ ಸಾವನ್ನಪ್ಪುತ್ತಿವೆ.
ಈ ಅಪರೂಪದ ತಳಿಯ ರಾಸುಗಳು ಮೇವಿಲ್ಲದೆ ಹಸಿವಿನಿಂದ ಬಳಲಿ ಸಾವನ್ನಪ್ಪುತ್ತಿದ್ದು, ಕಳೆದ ಮೂರು ತಿಂಗಳಲ್ಲಿ 10 ಕ್ಕೂ ಹೆಚ್ಚು ರಾಸುಗಳು ಸಾವನ್ನಪ್ಪಿವೆ. ಅಧಿಕಾರಿಗಳ ನಿರ್ಲಕ್ಷ್ಯ ಹೀಗೆ ಮುಂದುವರೆದ್ರೆ ಈ ತಳಿ ವಿನಾಶವಾದ್ರು ಆಶ್ಚರ್ಯವಿಲ್ಲ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಹಣ ಬರುತ್ತದೆ. ಮಳೆಗಾಲದಲ್ಲಿ ಮೇವಿಗೆ ಅಗತ್ಯವಿರೋ ಮೆಕ್ಕೆಜೋಳ, ಹುಲ್ಲನ್ನು ಬೆಳೆಯಬೇಕು. ಆದರೂ‍, ರಾಸುಗಳು ಹೀಗೆ ಸಾಯುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಅಮೃತ್ ಮಹಲ್ ಕಾವಲ್‌ಗಳಿವೆ. ಇದರಲ್ಲಿ ಚಿಕ್ಕಮಗಳೂರಿನ ಅಜ್ಜಂಪುರದ್ದು ಒಂದು. ಇಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ರಾಸುಗಳು ಇಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇವಿಲ್ಲದೇ ಬಡಕಲಾಗಿವೆ. ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆಯಿಂದ ಮೇವು ಬೆಳೆಯಲು ಸಾಧ್ಯವಾಗ್ತಿಲ್ಲ. ಮೇವು ತಯಾರಿಸಲು ವಿದೇಶಗಳಿಂದ ತರಿಸಿಕೊಂಡಿದ್ದ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಮೇವು ತಯಾರಿಕಾ ತೊಟ್ಟಿಗಳು ಪಾಳು ಬಿದ್ದಿವೆ. ಇಲ್ಲಿನ ವ್ಯವಸ್ಥೆ ಸಂಪೂರ್ಣ ಹಾಳಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಈ ಅಪರೂಪದ ಅಮೃತ ಮಹಲ್ ತಳಿಗಳು ವಿನಾಶದ ಅಂಚಿನಲ್ಲಿರುವುದು ವಿಪರ್ಯಾಸ.
ಈ ನಡುವೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿ ಹಿನ್ನಲೆಯಲ್ಲಿ ಈಗ ಎಚ್ಚೆತ್ತುಕೊಂಡಿರುವ ಪಶುಪಾಲನಾ ಇಲಾಕೆಗೆ ನಿರ್ದೇಶಕ ಡಾ.ಜಫ್ರುಲ್ಲಾಖಾನ್, ತಕ್ಷಣ ರಾಸುಗಳಿಗೆ ಮೇವು ಪೂರೈಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಅಜ್ಜಂಪುರದ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರಕ್ಕೆ ಧಾವಿಸಿದ್ದ ಅವರು, ಇಲ್ಲಿನ ಸಮಸ್ಯೆಗಳ ಬಗ್ಗೆ ಯಾರೂ ತಮ್ಮ ಗಮನಕ್ಕೆ ತಂದಿಲ್ಲ. ಕನಿಷ್ಠ ಎರಡು ತಿಂಗಳಿಗೆ ಸಾಕಾಗುವಷ್ಟು ಮೇವನ್ನು ತಕ್ಷಣ ಸಂಗ್ರಹಿಸಬೇಕು. ಒಂದು ರಾಸುಗೆ ಪ್ರತಿದಿನ 7 ಕೆ ಜಿ ಯಂತೆ 475 ರಾಸುಗಳಿಗೆ ಮೂರುವರೆ ಟನ್ ಒಣಹುಲ್ಲು ಅಗತ್ಯವಿದ್ದು, ತಕ್ಷಣ 50 ಟನ್ ಹುಲ್ಲನ್ನು ಖರೀದಿಸಲು ಆದೇಶ ನೀಡಿದ್ದಾರೆ.

Comments are closed.