ಕರ್ನಾಟಕ

ಕಂಬಳದ ಪರ ಭಾರೀ ಬೆಂಬಲ…ಸಿಎಂ ಸೇರಿದಂತೆ ಯಾರೆಲ್ಲ ಏನು ಹೇಳಿದ್ದಾರೆ ನೋಡಿ…

Pinterest LinkedIn Tumblr

ಬೆಂಗಳೂರು: ಜಲ್ಲಿಕಟ್ಟು ಕ್ರೀಡೆಗೆ ಒಗ್ಗಟ್ಟು ಪ್ರದರ್ಶಿಸಿ ಭಾರೀ ಹೋರಾಟ ನಡೆಸಿ ಕೊನೆಗೂ ಕೇಂದ್ರದ ಮನವೊಲಿಸುವಲ್ಲಿ ತಮಿಳುನಾಡು ಜನತೆ ಯಶಸ್ವಿಯಾಗಿರುವ ಬೆನ್ನಲ್ಲೇ ಇದೀಗ ರಾಜ್ಯದಲ್ಲೂ ಕರಾವಳಿಯ ಜಾನಪದ ಕ್ರೀಡೆಗೆ ಕಂಬಳದ ಪರ ಭಾರೀ ಬೆಂಬಲಗಳು ವ್ಯಕ್ತವಾಗತೊಡಗಿವೆ.

ಬಿಜೆಪಿ ನಾಯಕ ಸದಾನಂದ ಗೌಡ ಸೇರಿದಂದೆ ರಾಜಕೀಯ ವಲಯದ ಗಣ್ಯರು, ನಟ ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಹಲವು ಗಣ್ಯರು ಕಂಬಳದ ಪರವಾಗಿ ದನಿಯೆತ್ತುತ್ತಿದ್ದಾರೆ.

ಕಂಬಳದ ಮೇಲಿನ ನಿಷೇಧ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಸಾಂಪ್ರದಾಯಿಕ ಕ್ರೀಡೆಗೆ ಆಚರಣೆಗೆ ಬೇಡಿಕೆಗಳು ವ್ಯಾಪಕವಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಕಂಬಳದ ಪರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಕಂಬಳದ ಪರ ರಾಜ್ಯದ ಹಲವೆಗೆ ಭಾರೀ ಪ್ರತಿಭಟನೆ ನಡೆಸಲು ಸಿದ್ಧತೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕಂಬಳದ ಪರವಾಗಿ ಅವರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಇದಕ್ಕೆ ನಾವು ಕೂಡ ಬೆಂಬಲವನ್ನು ವ್ಯಕ್ತಪಡಿಸುತ್ತೇವೆಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಸಭೆ ನಡೆಸಿದ ಕಂಬಳ ಸಮಿತಿ ಪ್ರತಿಭಟನೆಗಳಿಗೆ ಯೋಜನೆಗಳನ್ನು ರೂಪಿಸಿದೆ. ಜನವರಿ 28 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸಚಿವ ಸದಾನಂದ ಗೌಡ ಅವರು ಕಂಬಳ ಕ್ರೀಡೆ ಕುರಿತಂತೆ ಮಾತಾನಾಡಿದ್ದು, ಕಂಬಳ ವಿಚಾರ ಪ್ರಸ್ತುತ ನ್ಯಾಯಾಲಯದ ಅಂಗಳದಲ್ಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಮಧ್ಯಪ್ರವೇಶ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕಂಬಳದ ಪರವಾಗಿ ನಾನು ಬೆಂಬಲ ವ್ಯಕ್ತಪಡಿಸುತ್ತೇನೆ. ವಿಚಾರ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಮಾತುಕತೆ ನಡೆಸುತ್ತೇನೆಂದು ತಿಳಿಸಿದ್ದಾರೆ.

ಬಿಜೆಪಿ ನಾಯಕರೂ ಕೂಡ ಕಂಬಳಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಬಿ.ಎಸ್ ಯಡಿಯೂರಪ್ಪ. ಸಿ.ಟಿ. ರವಿ ಹಾಗೂ ಅರವಿಂದ ಲಿಂಬಾವಳಿಯವರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಅವರು ಮಾತನಾಡಿ, ಕಂಬಳ ಕ್ರೀಡೆ ಸಾಂಪ್ರದಾಯಿಕ ಹಬ್ಬವಾಗಿದ್ದು, ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಕಂಬಳದೊಂದಿಗೆ ಜನರು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಕಂಬಳ ವಿಚಾರ ಪ್ರಸ್ತುತ ನ್ಯಾಯಾಲಯದಲ್ಲಿದ್ದು, ಜನರು ಸಂಯಮದಿಂದ ಇರಬೇಕಿದೆ. ಕಂಬಳದ ಪರವಾಗಿ ದನಿಯೆತ್ತುತ್ತಿರುವ ಜನರ ಪರವಾಗಿಯೇ ನ್ಯಾಯಾಲಯ ತೀರ್ಪು ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ನಟ ಶಿವರಾಜ್ ಕುಮಾರ್ ಅವರು ಮಾತನಾಡಿ, ರಾಜ್ಯದ ಮೂಲೆಮೂಲೆಯಲ್ಲಿರುವ ಜನರು ಕಂಬಳದ ಪರವಾಗಿ ಬೆಂಬಲವನ್ನು ವ್ಯಕ್ತಪಡಿಸಬೇಕಿದೆ. ತಮಿಳುನಾಡು ಜನತೆಯಂತೆಯೇ ರಾಜ್ಯದ ಜನರೂ ಕೂಡ ಒಗ್ಗೂಡಬೇಕಿದೆ. ಪೆಟಾ ಮಾಡುತ್ತಿರುವ ವಾದ ನಿಜಕ್ಕೂ ಹಾಸ್ಯವೆಂದೇ ಹೇಳಬಹುದು. ಪೆಟಾಗೆ ನಿಜಕ್ಕೂ ಧೈರ್ಯವಿರುವುದೇ ಆದರೆ, ಬಿರಿಯಾನಿ ವಿರುದ್ಧ ಹೋರಾಟ ಮಾಡಲಿ ಎಂದು ಹೇಳಿದ್ದಾರೆ.

ಜೆಡಿಎಸ್ ಅಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಕಂಬಳ ಕುರಿತಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಜಲ್ಲಿಕಟ್ಟು ಕ್ರೀಡೆಗಾಗಿ ರಾಜಕೀಯ ರಂಗವನ್ನು ಬದಿಗೊತ್ತಿ ತಮಿಳುನಾಡು ಜನತೆ ತಮ್ಮ ಪ್ರತಿಭಟನೆ ನಡೆಸಿತ್ತು. ಕರ್ನಾಟಕದ ಜನತೆ ಕೂಡ ಕಂಬಳದ ಪರವಾಗಿ ಒಗ್ಗಟ್ಟು ಪ್ರದರ್ಶಿಸಬೇಕಿದೆ. ತಮಿಳುನಾಡು ಜನತೆಯಂತೆಯೇ ಎಲ್ಲರೂ ಕೈಜೋಡಿಸಿ ಹೋರಾಟ ಮಾಡಿ ಕಂಬಳದ ಹಾದಿಯನ್ನು ಸುಗಮವಾಗುವಂತೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

Comments are closed.