ಕರ್ನಾಟಕ

ಮೋದಿಯಿಂದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳ ನಾಶ: ಪ್ರಶಾಂತ್ ಭೂಷಣ್

Pinterest LinkedIn Tumblr


ಬೆಂಗಳೂರು, ಜ.೨೨: ಪ್ರಧಾನಿ ನರೇಂದ್ರ ಮೋದಿ ದೇಶದ ಭ್ರಷ್ಟ್ರಾಚಾರ ನಿಗ್ರಹ ಸಂಸ್ಥೆಗಳನ್ನು ನಾಶ ಮಾಡಲು ಹೊರಟಿದ್ದಾರೆ. ನೋಟು ಅಮಾನ್ಯ ನಿರ್ಧಾರದಿಂದ ಖಾಸಗಿ ಬಂಡವಾಳಗಾರರಿಗೆ ಲಾಭವಾಗಿದೆಯೇ ಹೊರತು ಯಾವುದೇ ಕಪ್ಪುಹಣ ಹೊರಬಂದಿಲ್ಲ. ಎನ್‌ಡಿಎ ಸರ್ಕಾರ ದೇಶದ ಇತಿಹಾಸದಲ್ಲೇ ಅತ್ಯಂತ ಸಂವೇದನಾಶೂನ್ಯ ಸರ್ಕಾರವಾಗಿದೆ ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಹಾಗೂ ಸ್ವರಾಜ್ ಆಂದೋಲನದ ಮುಖ್ಯಸ್ಥ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ನಗರದ ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿಂದು ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಮತ್ತು ಸ್ವರಾಜ್ ಅಭಿಯಾನ ವತಿಯಿಂದ ಏರ್ಪಡಿಸಿದ್ದ ನೋಟು ಅಮಾನ್ಯ ನಿರ್ಧಾರದ ಸಾಧಕ-ಬಾಧಕಗಳ ಕುರಿತ ಮುಕ್ತ ಸಂವಾದದಲ್ಲಿ ಅವರು ಮಾತನಾಡಿದರು.
ಕಪ್ಪು ಹಣ ತಡೆ ಹಾಗೂ ಭಯೋತ್ಪಾದಕರಿಗೆ ಸರಬರಾಜಾಗುತ್ತಿರುವ ಹಣವನ್ನು ತಡೆಗಟ್ಟುವುದು ನೋಟು ರದ್ದತಿಯ ಹಿಂದಿರುವ ಉದ್ದೇಶ ಎಂದು ಈ ಹಿಂದೆ ಹೇಳಲಾಯಿತು. ಆದರೆ ಈಗ ಉದ್ದೇಶ ಬದಲಾಗಿದೆ. ನಗದುರಹಿತ ವ್ಯವಸ್ಥೆ ರೂಪಿಸುವುದು ನೋಟು ಅಮಾನ್ಯದ ಹಿಂದಿರುವ ಉದ್ದೇಶ ಎಂದು ಜನರನ್ನು ನಂಬಿಸಲಾಗುತ್ತಿದೆ. ದೇಶದ ಶೇಕಡಾ ೫೦ರಷ್ಟು ಜನರಲ್ಲಿ ಬ್ಯಾಂಕ್ ಖಾತೆಯೇ ಇಲ್ಲ. ಇಂತಹ ಸನ್ನಿವೇಶದಲ್ಲಿ ನಗದುರಹಿತ ಆರ್ಥಿಕತೆ ನಿರ್ಮಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದರು.
ನೋಟು ಅಮಾನ್ಯ ನಿರ್ಧಾರದ ಬಳಿಕ ಉತ್ಪಾದನಾ ವಲದಯಲ್ಲಿ ಶೇಕಡಾ ೩೫ರಷ್ಟು ಉದ್ಯೋಗ ಸೃಷ್ಟಿ ಕಡಿಮೆಯಾಗಿದೆ. ಆದಾಯ ಗಳಿಕೆಯಲ್ಲಿ ಶೇಕಡಾ ೫೦ರಷ್ಟು ಇಳಿಕೆಯಾಗಿದೆ. ಮುಂದಿನ ಒಂದು ವರ್ಷದಲ್ಲಿ ದೇಶದ ಅಭಿವೃದ್ಧಿ ದರ ಋಣಾತ್ಮಕವಾಗಲಿದೆ ಎಂದು ಎಚ್ಚರಿಸಿದ ಅವರು, ನೋಟು ಅಮಾನ್ಯ ನಿರ್ಧಾರ ಪ್ರಕಟಗೊಂಡ ಮರುದಿನವೇ ಪೇಟಿಯಂನ ಜಾಹೀರಾತಿನಲ್ಲಿ ಪ್ರಧಾನಿ ಅವರು ಭಾವಚಿತ್ರ ಪ್ರಕಟಗೊಳ್ಳುತ್ತದೆ. ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಮೊದಲು ಯಾವ ಪರಿಣಿತರು, ಆರ್ಥಿಕ ತಜ್ಞರೊಂದಿಗೆ ಚರ್ಚೆ ನಡೆಸಿಲ್ಲ. ಮಾತ್ರವಲ್ಲ ಯಾವ ಪೂರ್ವಸಿದ್ಧತೆಗಳನ್ನೂ ಕೈಗೊಂಡಿರಲಿಲ್ಲ ಎಂದು ಹೇಳಿದರು.
ರಾಜಕೀಯ ಪಕ್ಷಗಳ ವ್ಯವಹಾರ ನಗದುರಹಿತವಾಗಲಿ
ಸಾಮಾನ್ಯ ಜನರ ವ್ಯವಹಾರ ನಗದರಹಿತವಾಗುವ ಮೊದಲು ರಾಜಕೀಯ ಪಕ್ಷಗಳ ಹಣಕಾಸು ವ್ಯವಹಾರ ನಗದರಹಿತವಾಗಲಿ ಎಂದು ಆಗ್ರಹಿಸಿದ ಪ್ರಶಾಂತ್ ಭೂಷಣ್, ಮಾರುಕಟ್ಟೆಯಿಂದ ಹಿಂದೆ ಪಡೆಯಲಾದ ಹಣದ ಮೊತ್ತದಷ್ಟು ಹೊಸ ನೋಟು ಮುದ್ರಿಸಲು ಕನಿಷ್ಠ ೯ ತಿಂಗಳು ಬೇಕು. ಅಷ್ಟರವರೆಗೆ ಬಡಜನರಿಗೆ ಕಷ್ಟ ತಪ್ಪಿದ್ದಲ್ಲ. ನಿಮ್ಮನ್ನು ಕೊಲ್ಲುತ್ತಿರುವುದು ನಿಮ್ಮ ಒಳಿತಿಗಾಗಿ ಎಂಬಂತೆ ಜನರ ಕಷ್ಟವನ್ನು ಅವರ ಒಳ್ಳೆಯದಕ್ಕೆ ಎಂಬಂತೆ ಬಿಂಬಿಸಲಾಗುತ್ತಿದೆ. ಸಾಧ್ಯವಿರುವಷ್ಟು ಮಟ್ಟಿಗೆ ಭ್ರಷ್ಟಾಚಾರ ತಡೆಯುವ ಸಂಸ್ಥೆಗಳನ್ನು ನಾಶ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಧಾನಿ ಅವರು ತಮ್ಮನ್ನು ಕಪ್ಪು ಹಣ ತಡೆಯುವ ಹೀರೊನಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಇದು ಕಪ್ಪು ಹಣದ ಮೇಲಿನ ದಾಳಿ ಎಂದು ಹೇಳಲಾಗುತ್ತಿದೆ. ಪ್ರಧಾನಿ ಅವರಿಗೆ ಬದ್ಧತೆ ಇದ್ದರೆ ಮಾರಿಷಸ್, ಸಿಡ್ಜರ್‌ಲ್ಯಾಂಡ್‌ಗಳಲ್ಲಿರುವ ಹಣದ ಮೂಲವನ್ನು ಮತ್ತು ಅಲ್ಲಿಂದ ಬೇನಾಮಿ ಹೆಸರಿನಲ್ಲಿ ಭಾರತದಲ್ಲಿ ಹೂಡಿಕೆಯಾಗಿರುವ ಹಣದ ಮೂಲವನ್ನು ಬಹಿರಂಗಪಡಿಸಲಿ. ಈ ಬಗ್ಗೆ ತಾವು ಪ್ರಧಾನಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದೆ. ಆದರೆ ಅಲ್ಲಿಂದ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಟೀಕಿಸಿದರು.
ಸಿಂಗಾಪುರ, ಮಾರಿಷಸ್ ದೇಶಗಳಲ್ಲಿ ಒಮ್ಮೆ ತೆರಿಗೆ ಪಾವತಿಸಿ ಕೋಟ್ಯಂತರ ಡಾಲರ್ ಹಣ ಇಡಲಾಗುತ್ತಿದೆ. ಅಲ್ಲಿಂದ ಅದು ನೇರವಾಗಿ ಭಾರತದಲ್ಲಿ ಬೇನಾಮಿ ಕಂಪನಿಗಳ ಹೆಸರಿನಲ್ಲಿ ಹೂಡಿಕೆಯಾಗುತ್ತಿವೆ. ಇಂತಹ ಬೇನಾಮಿ ಹೂಡಿಕೆ ಹೆಚ್ಚಾಗಿ ರಿಯಲನ್ಸ್ ಕಂಪನಿಗಳಲ್ಲಿ ಹೂಡಿಕೆಯಾಗುತ್ತಿವೆ ಎಂದು ದೂರಿದ ಅವರು, ಸಹಾರಾ ಡೈರಿಯಲ್ಲಿ ಹಣ ಪಡೆದವರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರ ಹೆಸರು ಸ್ಪಷ್ಟವಾಗಿದ್ದರೂ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದರು.

Comments are closed.