ಕರ್ನಾಟಕ

ಮಂತ್ರಿ ಮಾಲ್‌ ಗೋಡೆ ಕುಸಿತ: ತಾಂತ್ರಿಕ ತಜ್ಞರ ಸಮಿತಿ ರಚನೆ

Pinterest LinkedIn Tumblr


ಬೆಂಗಳೂರು: ಮಲ್ಲೇಶ್ವರದ ಮಂತ್ರಿ ಸ್ಕ್ವೇರ್‌ ಗೋಡೆ (ಪ್ಯಾರಾಪೆಟ್‌ ವಾಲ್‌) ಕುಸಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಸದೃಢತೆಯ ಬಗ್ಗೆ ವರದಿ ಪಡೆಯಲು ತಾಂತ್ರಿಕ ತಜ್ಞರ ಸಮಿತಿಯನ್ನು ಬಿಬಿಎಂಪಿ ರಚಿಸಿದೆ. ಸಮಿತಿ ವರದಿ ನೀಡುವ ವರೆಗೂ ಮಂತ್ರಿ ಮಾಲ್‌ ಬಂದ್‌ ಆಗಿ ಇರಲಿದೆ.

ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಾಧಾಕೃಷ್ಣ, ಸಿವಿಲ್‌ ಏಡ್‌ ಟೆಕ್ನೋ ಕ್ಲಿನಿಕ್‌ ಪ್ರೈವೇಟ್‌ ಲಿಮಿಟೆಡ್‌ನ ಮುಖ್ಯಸ್ಥ ಡಾ.ಕೆ.ಎಸ್‌. ಜಯಸಿಂಹ, ತಾಂತ್ರಿಕ ನಿರ್ದೇಶಕ ಡಾ.ಆರ್‌.ನಾಗೇಂದ್ರ, ಹಿರಿಯ ನಿರ್ದೇಶಕ ಡಾ.ಎಂ.ಎಸ್‌. ಸುದರ್ಶನ್‌ ಸಮಿತಿಯಲ್ಲಿದ್ದಾರೆ. ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅವರು ಸಮಿತಿಯ ಅಧ್ಯಕ್ಷ ಹಾಗೂ ನಗರ ಯೋಜನೆ ಹೆಚ್ಚುವರಿ ನಿರ್ದೇಶಕರು ಸಂಚಾಲಕರಾಗಿದ್ದಾರೆ.

‘ಸಮಿತಿಯು ಸ್ಥಳ ಪರಿವೀಕ್ಷಣೆ ಮಾಡಿ, ಕಟ್ಟಡದ ಸದೃಢತೆ ಮತ್ತು ಸುರಕ್ಷತೆಗೆ ಅವಶ್ಯವಿರುವ ಐ.ಎಸ್‌ ಮಾನದಂಡದ ಪ್ರಕಾರ ಪರೀಕ್ಷೆಗಳನ್ನು ನಡೆಸಲಿದ್ದಾರೆ. 15 ದಿನಗಳಲ್ಲಿ ತಾಂತ್ರಿಕ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ. ಮಂಗಳವಾರ ಘಟನಾ ಸ್ಥಳಕ್ಕೆ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಪಿ.ಆರ್.ಪಳಂಗಪ್ಪ ಸೇರಿದಂತೆ ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪಳಂಗಪ್ಪ, ‘ಮಂತ್ರಿ ಸ್ಕ್ವೇರ್‌ ಅನ್ನು ಸಂಪೂರ್ಣ ನೆಲಸಮ ಮಾಡುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಕಟ್ಟಡದ ಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ತಜ್ಞರ ಸಮಿತಿ ತನಿಖೆ ನಡೆಸಲಿದೆ. ತನಿಖಾ ವರದಿ ಬಂದ ಬಳಿಕ ಕಟ್ಟಡ ನೆಲಸಮ ಮಾಡಬೇಕೋ? ಹಾನಿಗೊಳಗಾದ ಭಾಗವನ್ನಷ್ಟೇ ತೆರವುಗೊಳಿಸಬೇಕೋ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

‘ಮಾಲ್‌ ಹಿಂಭಾಗದ ನಾಲ್ಕನೇ ಮಹಡಿಯ ಸರ್ವೀಸ್ ಕಾರಿಡಾರ್ ಗೋಡೆ ಕುಸಿದಿದೆ. ಹೀಗಾಗಿ ನಾಲ್ಕನೇ ಮಹಡಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಮೂರನೇ ಮಹಡಿಯ ಗೋಡೆಯ ಕೆಲ ಭಾಗವೂ ಕುಸಿದಿದೆ. ಎರಡೂ ಮಹಡಿಯ ಗೋಡೆಗಳು ಬಿರುಕು ಬಿಟ್ಟಿವೆ. ಆದರೆ, ಒಂದು ಭಾಗದ ದುರ್ಬಲತೆಯನ್ನು ಇಡೀ ಕಟ್ಟಡಕ್ಕೆ ಅನ್ವಯಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಸದ್ಯ ಕಟ್ಟಡದ ಸ್ವಾಧೀನಪತ್ರವನ್ನು (ಆಕ್ಯುಪೆನ್ಸಿ ಸರ್ಟಿಫಿಕೇಟ್‌) ಹಿಂಪಡೆಯಲಾಗಿದೆ. ಮಾಲ್‌ ಸಂಪೂರ್ಣ ಬಂದ್ ಆಗಿದೆ. ತನಿಖೆ ನಂತರ ವಿಶ್ವಾಸ ಮೂಡಿದರೆ ಮಾತ್ರ ಸ್ವಾಧೀನಪತ್ರವನ್ನು ನೀಡುತ್ತೇವೆ. ಇಲ್ಲವಾದರೆ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಅವಕಾಶ ಮಾಡಿಕೊಡುತ್ತೇವೆ’ ಎಂದು ತಿಳಿಸಿದರು.

ಕುಸಿದ ಗೋಡೆ ನೋಡಲು ಕಾತರ: ಗೋಡೆ ಕುಸಿದಿರುವ ಜಾಗವನ್ನು ನೋಡಲು ಕೆಲವರು ಮಾಲ್‌ನ ಬಳಿ ಬಂದು ಹೋಗುತ್ತಿದ್ದರು. ಆದರೆ, ಮಾಲ್‌ ಒಳಗೆ ಅಥವಾ ಆವರಣದ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್‌ ಹೋಗುತ್ತಿದ್ದ ದೃಶ್ಯ ಕಂಡುಬಂತು.

ಟಿಕೆಟ್‌ ಬುಕ್‌ ಮಾಡಿದವರಿಗೆ ನಿರಾಸೆ: ಮಂತ್ರಿ ಸ್ಕ್ವೇರ್‌ನಲ್ಲಿ 7ಡಿ ಸಿನಿಮಾ, ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಿವೆ. ಇಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಲನಚಿತ್ರಗಳ ವೀಕ್ಷಣೆಗೆ ಟಿಕೆಟ್‌ ಬುಕ್‌ ಮಾಡಿದ್ದವರು, ಮಾಲ್‌ ಬಳಿ ಬರುತ್ತಿದ್ದ ದೃಶ್ಯ ಕಂಡು ಬಂತು. ಮಾಲ್‌ ಬಂದ್‌್ ಆಗಿರುವ ಸುದ್ದಿ ತಿಳಿದು ನಿರಾಸೆಯಿಂದ ವಾಪಸ್‌ ಹೋದರು.

ಸಂಚಾರ ದಟ್ಟಣೆ ಕಡಿಮೆ: ಮಂತ್ರಿ ಸ್ಕ್ವೇರ್‌ ಅನ್ನು ತಾತ್ಕಾಲಿಕವಾಗಿ ಬಂದ್‌ ಮಾಡಿರುವುದರಿಂದ ಸಂಪಿಗೆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಮಾಲ್‌ಗೆ ನಿತ್ಯ ಸಾವಿರಾರು ಜನರು ಬರುತ್ತಿದ್ದರು. ಇದರಿಂದ ಸಂಪಿಗೆ ರಸ್ತೆಯಲ್ಲಿ ವಾಹನ ದಟ್ಟಣೆ ಕಂಡುಬರುತ್ತಿತ್ತು.

ಪೊಲೀಸ್‌ ಬಂದೋಬಸ್ತ್‌: ಮುಂಜಾಗ್ರತಾ ಕ್ರಮವಾಗಿ ಮಾಲ್‌ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು, ಪೊಲೀಸ್‌ ಹಿರಿಯ ಅಧಿಕಾರಿಗಳನ್ನು ಹೊರತುಪಡಿಸಿ ಮಾಲ್‌ ಒಳಗೆ ಯಾರನ್ನೂ ಬಿಡುತ್ತಿಲ್ಲ.

ಅವಶೇಷಗಳ ಸಂಗ್ರಹ: ಸೋಮವಾರ ಮಧ್ಯಾಹ್ನ ಮಾಲ್‌ನ ಮೂರು ಹಾಗೂ ನಾಲ್ಕನೇ ಮಹಡಿಯ ಗೋಡೆ ಕುಸಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಮಲ್ಲೇಶ್ವರ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಸುಮಾರು 20 ಅಡಿ ಉದ್ದದ ಗೋಡೆ ಕುಸಿದಿತ್ತು. ಇನ್ನೂ 30 ಅಡಿ ಉದ್ದದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡು ಬೀಳುವ ಸ್ಥಿತಿಯಲ್ಲಿತ್ತು. ಇದರಿಂದ ಸ್ಥಳಕ್ಕೆ ಸಾರ್ವಜನಿಕರು ಹೋಗದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರು.

ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿದ ಅಗ್ನಿಶಾಮಕ ಸಿಬ್ಬಂದಿ, ಅವುಗಳನ್ನು ಮಾಲ್‌ ಬಳಿ ಹಾದು ಹೋಗಿರುವ ಮೆಟ್ರೊ ರೈಲು ಮಾರ್ಗದ ಕೆಲಭಾಗದಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ‘ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಈ ಅವಶೇಷಗಳು ಸಹಾಯಕ್ಕೆ ಬರಲಿದೆ. ಹೀಗಾಗಿ ಅವಶೇಷಗಳನ್ನು ಜೋಪಾನ ಮಾಡಲಾಗಿದೆ’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

ಗಾಯಾಳುಗಳು ಮನೆಗೆ
ಘಟನೆಯಲ್ಲಿ ಗಾಯಗೊಂಡು ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ಅಮರೀನ್‌ ಬೇಗಂ ಮತ್ತು ಯಶೋದಮ್ಮ ಅವರು ಮನೆಗೆ ತೆರಳಿದ್ದಾರೆ. ಅಮರೀನ್‌ ಅವರ ಕೈ, ಕಾಲುಗಳಿಗೆ ತರಚಿದ ಗಾಯಗಳಾಗಿದ್ದವು. ಯಶೋದಮ್ಮ ಅವರ ಮೊಣಕೈ ಭಾಗದಲ್ಲಿ ಊತ ಕಂಡು ಬಂದಿತ್ತು. ಮತ್ತೊಬ್ಬ ಮಹಿಳೆ ಲಕ್ಷ್ಮಮ್ಮ ಎಂಬುವರು ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಲೀಕರ ವಿರುದ್ಧ ಎಫ್‌ಐಆರ್‌
ಮಂತ್ರಿ ಸ್ಕ್ವೇರ್‌ ಗೋಡೆ ಕುಸಿತ ಪ್ರಕರಣ ಸಂಬಂಧ ನಿರ್ಲಕ್ಷ್ಯದ ಆರೋಪದಡಿ ಮಾಲೀಕರ ವಿರುದ್ಧ ಮಲ್ಲೇಶ್ವರ ಪೊಲೀಸರು ಮಂಗಳವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

‘ಈಗ ನಿರ್ಲಕ್ಷ್ಯದ ಆರೋಪದಡಿ (ಐಪಿಸಿ 337) ಮಾಲ್‌ನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಗೋಡೆ ಕುಸಿತಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವರದಿ ಸಲ್ಲಿಸಿದ ಬಳಿಕ, ಘಟನೆಗೆ ಕಾರಣ ಯಾರೆಂಬುದು ತಿಳಿಯಲಿದೆ. ಬಳಿಕ ಕಟ್ಟಡ ಗುತ್ತಿಗೆದಾರರು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಸೇರಿಸುತ್ತೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮಾಲ್‌ ರಚನಾತ್ಮಕವಾಗಿ ಸುರಕ್ಷಿತ
‘ಗೋಡೆ ಕುಸಿದ ಬಳಿಕ ಇನ್ನೋಟೆಕ್‌ ಎಂಜಿನಿಯರಿಂಗ್‌ ಕನ್ಸಲ್ಟ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್‌.ಗುರುರಾಜ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಲ್‌ನ ಪ್ರತಿ ಮಹಡಿಗೂ ತೆರಳಿ ತಪಾಸಣೆ ನಡೆಸಿದರು. ಶಾಪಿಂಗ್‌ ಪ್ರದೇಶಗಳು, ಸಾರ್ವಜನಿಕರ ಪ್ರದೇಶಗಳು, ಮಲ್ಟಿಪ್ಲೆಕ್ಸ್‌ ಮತ್ತು ಆಹಾರ ಮಳಿಗೆಗಳು ಸುರಕ್ಷಿತವಾಗಿವೆ ಎಂದು ಅವರು ತಿಳಿಸಿದ್ದಾರೆ’ ಎಂದು ಮಂತ್ರಿ ಸ್ಕ್ವೇರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

‘ಎ.ಸಿ. ಪೈಪ್‌ನಿಂದ ನೀರು ಸೋರಿಕೆಯಾಗಿ ಗೋಡೆ ಕುಸಿದಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ’ ಎಂದು ಹೇಳಿದೆ. ‘ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಮಾಲ್‌ ಮುಚ್ಚಲಾಗಿದೆ. ಘಟನೆ ಸಂಬಂಧ ತಜ್ಞರು ತನಿಖೆ ನಡೆಸುತ್ತಿದ್ದಾರೆ. ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗಿದ್ದು, ಹಾನಿಗೊಳಗಾದ ಭಾಗವನ್ನು ದುರಸ್ತಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಮಂತ್ರಿ ಡೆವಲಪರ್ಸ್‌ನ ವಾಣಿಜ್ಯ ವಿಭಾಗದ ಸಿಇಒ ಆದಿತ್ಯ ಸಿಕ್ರಿ ತಿಳಿಸಿದ್ದಾರೆ.

Comments are closed.