ಕರ್ನಾಟಕ

ಅಂಗವಿಕಲರ ಮರು ಸಮೀಕ್ಷೆ ನಡೆಸಿ ಹೆಚ್ಚಿನ ನೆರವಿನ ಹಸ್ತ ಘೋಷಿಸಿದ ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು, ಜ. ೧೪- ಅಂಗವಿಕಲರ ಕಲ್ಯಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಅಂಗವಿಕಲರು ಗೌರವದಿಂದ ಬದುಕಲು ಅಗತ್ಯವಾದ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. ಅಂಗವಿಕಲರ ಮರು ಸಮೀಕ್ಷೆ ನಡೆಸಿ ಎಲ್ಲರಿಗೂ ಸವಲತ್ತು, ಸೌಲಭ್ಯಗಳನ್ನು ವಿತರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮುಂದಿನ ಬಜೆಟ್‌ನಲ್ಲಿ ಅಂಗವಿಕಲರ ಮಾಸಾಶನ, ಗೌರವ ಧನ, ಅಂಗವಿಕಲರ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ವೇತನ ಏರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಇದರ ಜತೆಗೆ ಅಂಗವಿಕಲರಿಗೆ ಉದ್ಯೋಗ, ತರಬೇತಿ, ವಸತಿಗಳನ್ನು ಒದಗಿಸಲು ಸರ್ಕಾರ ಗರಿಷ್ಠ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.
ರಾಜ್ಯದ ಆರೋಗ್ಯ ಇಲಾಖೆ ಹಾಗೂ ವಿಕಲಚೇತನರ ಇಲಾಖೆ ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿಂದು ಆಯೋಜಿಸಿದ್ದ ಅಂಗವಿಕಲರಿಗೆ ಅಗತ್ಯ ಪರಿಕರ ಹಾಗೂ ಸಾಧನಗಳನ್ನು ವಿತರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲರೂ ಪರಿಪೂರ್ಣವಾಗಿರುವುದಿಲ್ಲ. ಅಂಗವಿಕಲರಾದ ತಕ್ಷಣ ಅವರಿಗೆ ಭವಿಷ್ಯ ಇಲ್ಲವೆಂದು ಭಾವಿಸುವುದು ತಪ್ಪು. ಅಂಗವಿಕಲರಿಗೆ ಸವಲತ್ತು ಒದಗಿಸುವುದು ಅವರಿಗೆ ತೋರಿಸುವ ಅನುಕಂಪ ಅಲ್ಲ. ಅದು ಅವರ ಹಕ್ಕು ಎಂದರು.
ರಾಜ್ಯದ ಜನಸಂಖ್ಯೆಯಲ್ಲಿ ಶೇ. 3 ರಷ್ಟು ಅಂಗವಿಕಲರಿದ್ದಾರೆ. ರಾಜ್ಯಾದ್ಯಂತ ಮರು ಸಮೀಕ್ಷೆ ನಡೆಸಿ ಎಲ್ಲರಿಗೂ ಅಂಗವಿಕಲರ ಪರಿಕರಗಳನ್ನು ವಿತರಿಸಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಂಗವಿಕಲರ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅವರನ್ನು ಮುಖ್ಯ ವಾಹಿನಿಗೆ ಸೇರಿಸುವ ಪ್ರಯತ್ನ ನಡೆದಿದೆ ಎಂದರು.
ಮುಂದಿನ ಬಜೆಟ್‌ನಲ್ಲಿ ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅಂಗವಿಕಲರಿಗೆ ಶೇ. 3 ರಷ್ಟು ಅನುದಾನ ನೀಡುವುದನ್ನು ಕಡ್ಡಾಯ ಮಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.
ಎಲ್ಲರಿಗೂ ಪರಿಕರ
ಇದೇ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರು, ಇನ್ನು 6 ತಿಂಗಳಲ್ಲಿ ರಾಜ್ಯದ ಎಲ್ಲ ಅಂಗವಿಕಲರಿಗೂ ಪರಿಕರಗಳನ್ನು ವಿತರಿಸಲಾಗುವುದು. ಎಲ್ಲಾ ಅಂಗವಿಕಲರಿಗೂ ಒಮ್ಮೆಗೆ ಸಹಾಯ ಮಾಡಲಾಗುತ್ತಿಲ್ಲ. ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆಯಿಂದ ಅಂಗವಿಕಲರಿಗೆ ನೀಡುವ ಶೇ. 3 ರಷ್ಟು ಅನುದಾನ ಕ್ರೂಢೀಕರಣ ಆಗಿಲ್ಲ. ಮುಂದಿನ ದಿನಗಳಲ್ಲಿ ಈ ಅನುದಾನ ಸಿಗುವಂತಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಉಮಾಶ್ರೀ ಮಾತನಾಡಿ, ಅಂಗವಿಕಲರಿಗೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ತ್ರಿಚಕ್ರ ವಾಹನಗಳನ್ನು ದೊಡ್ಡ ಪ್ರಮಾಣದಲ್ಲಿ ವಿತರಿಸಿದೆ. ಈ ವರ್ಷ 2 ಸಾವಿರ ತ್ರಿಚಕ್ರ ವಾಹನಗಳನ್ನು ಇನ್ನು ಕೆಲವೇ ದಿನಗಳಲ್ಲಿ ವಿತರಿಸಲಾಗುವುದು. ವಿಕಲಚೇತನರು ವಿವಾಹವಾಗುವ ಸಂದರ್ಭದಲ್ಲಿ ಅವರಿಗೆ 50 ಸಾವಿರ ರೂ. ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದರಿಂದ ಅಂಗವಿಕಲರು ತಮ್ಮದೇ ಆದ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದರು.
ಸಮಾರಂಭದಲ್ಲಿ ಸಚಿವರುಗಳಾದ ರೋಷನ್‌ಬೇಗ್, ಕೆ.ಜೆ.ಜಾರ್ಜ್, ಮೇಯರ್ ಪದ್ಮಾವತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್, ಆರೋಗ್ಯ ಇಲಾಖೆ ಆಯುಕ್ತ ಸುಬೋದ್ ಯಾದವ್, ನಿರ್ದೇಶಕ ಡಾ. ಬಿ.ಎಲ್. ನಟರಾಜು, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ. ರತನ್‌ ಖೇಲ್‌ಕರ್ ಮತ್ತಿತರರು ಉಪಸ್ಥಿತರಿದ್ದರು.

Comments are closed.