ಕರ್ನಾಟಕ

ಕೆ.ಎಸ್. ಈಶ್ವರಪ್ಪ ಬಿಜೆಪಿಗೆ ಗುಡ್‌ಬೈ?

Pinterest LinkedIn Tumblr


ಬೆಂಗಳೂರು, ಜ. ೧೧- ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿರುವುದು ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಅಲ್ಲ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನೀಡಿರುವ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳನ್ನು ನಿಲ್ಲಿಸದೆ ಪಕ್ಷದ ವರಿಷ್ಠರ ಆದೇಶವನ್ನು ಧಿಕ್ಕರಿಸಿರುವ ಈಶ್ವರಪ್ಪನವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದರೂ ಪಂಚರಾಜ್ಯಗಳ ಚುನಾವಣೆಯಲ್ಲಿ ವರಿಷ್ಠ ನಾಯಕರು ತೊಡಗಿಕೊಂಡಿರುವುದರಿಂದ ಈಶ್ವರಪ್ಪ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವುದು ತಡವಾಗಲಿದೆ. ಮುಂದಿನ ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೂ ಈಶ್ವರಪ್ಪ ಸ್ವಲ್ಪ ಮಟ್ಟಿಗೆ ನಿರಾಳ ಸ್ಥಿತಿಯಲ್ಲಿ ಇರಬಹುದು.

ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ವರಿಷ್ಠರು ರಾಜ್ಯದ ಬೆಳವಣಿಗೆಗಳತ್ತ ಗಮನ ಹರಿಸಲಿದ್ದು, ಈಶ್ವರಪ್ಪನವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಈಶ್ವರಪ್ಪ ಅವರ ಈಗಾಗಲೇ ಏಕಾಂಗಿಯಾಗಿದ್ದಾರೆ. ಅವರ ಬೆಂಬಲಕ್ಕೆ ಯಾವುದೇ ಪ್ರಮುಖ ನಾಯಕರು ನಿಂತಿಲ್ಲ. ಕೇಂದ್ರ ಸಚಿವ ಅನಂತ್ ಕುಮಾರ್, ಸದಾನಂದಗೌಡ ಸೇರಿದಂತೆ ಎಲ್ಲಾ ಪ್ರಮುಖ ನಾಯಕರುಗಳು ಬ್ರಿಗೇಡ್ ವಿಚಾರದಲ್ಲಿ ಅಸಮಾಧಾನ ಹೊಂದಿರುವುದು ಸುಳ್ಳಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ಪಕ್ಷದ ಕಾರ್ಯಕರ್ತರಿಗೆ ಗೊಂದಲವಾಗುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನಿಲುವಿಗೆ ಪಕ್ಷದಲ್ಲಿ ಬಹುತೇಕ ಸಹಮತ ಇದೆ. ಹಾಗಾಗಿಯೇ ಈಶ್ವರಪ್ಪನವರ ಬಗ್ಗೆ ಪ್ರಮುಖ ನಾಯಕರುಗಳು ಒಳಗೊಳಗೆ ಅಸಮಾಧಾನಗೊಂಡಿದ್ದಾರೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಎಲ್ಲಾ ವರಿಷ್ಠರ ಗಮನಕ್ಕೆ ತರಲಾಗಿದೆ. ವರಿಷ್ಠರ ಅಂಗಳದಲ್ಲಿ ಚೆಂಡು ಇದ್ದು, ವರಿಷ್ಠರೆ ಈಶ್ವರಪ್ಪನವರ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ.

ಪಂಚರಾಜ್ಯಗಳ ಚುನಾವಣೆ ನಂತರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಗೊಂದಲಗಳಿಗೆ ವರಿಷ್ಠರು ತೆರೆ ಎಳೆಯುತ್ತಾರೆ ಎಂಬ ವಿಶ್ವಾಸವನ್ನು ಬಿಜೆಪಿ ನಾಯಕರುಗಳು ಹೊಂದಿದ್ದಾರೆ.

ರಾಯಣ್ಣ ಬ್ರಿಗೇಡ್ ಸಂಘಟನೆಯಲ್ಲಿ ತೊಡಗಿರುವ ಬಗ್ಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದರೂ ಲೆಕ್ಕಿಸದೆ ಸಂಘಟನೆಯಲ್ಲಿ ಈಶ್ವರಪ್ಪ ತೊಡಗಿರುವ ಬಗ್ಗೆ ಪಕ್ಷದ ವಲಯದಲ್ಲಿ ಈಶ್ವರಪ್ಪ ಬಿಜೆಪಿ ತೊರೆಯಲು ಮುಂದಾಗಿದ್ದಾರೆ ಎನ್ನುವ ಗುಸುಗುಸು ಸುದ್ದಿ ಎಲ್ಲೆಡೆ ಹಬ್ಬಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಗತ್ಯ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯುವುದನ್ನು ತಪ್ಪಿಸಲು ಈಶ್ವರಪ್ಪ ಅವರನ್ನು ದಾಳವಾಗಿ ಉಪಯೋಗಿಸಿಕೊಳ್ಳಲು ಅಧಿಕಾರ ಹಂಚಿಕೊಳ್ಳಲು ಆಸೆಪಟ್ಟಿರುವ ಪಕ್ಷದ ನಾಯಕರು ತಂತ್ರಗಾರಿಕೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಕ್ಷದ ನಾಯಕರ ಅಣತಿಯಂತೆ ವರ್ತಿಸುತ್ತಿರುವ ಈಶ್ವರಪ್ಪ ಅನಿವಾರ್ಯ ಪರಿಸ್ಥಿತಿ ಎದಿರಾದರೆ ಬಿಜೆಪಿ ತೊರೆಯಲು ಸಿದ್ಧರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಯಾವುದೇ ಪಕ್ಷಕ್ಕೂ ಬಹುಮತ ಬರಬಾರದು, ಸಮ್ಮಿಶ್ರ ಸರ್ಕಾರ ರಚನೆಯಾದರೆ ತಮಗೆ ಕಿಮ್ಮತ್ತು ಎಂದು ಅರಿತಿರುವ ರಾಜಕೀಯ ಪಕ್ಷವೊಂದು ಈಶ್ವರಪ್ಪನವರ ಬೆನ್ನಿಗೆ ನಿಂತು, ಪಕ್ಷದ ನಾಯಕತ್ವದ ವಿರುದ್ಧ ಈಶ್ವರಪ್ಪನವರನ್ನು ಎತ್ತಿ ಕಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಬಹುಮತ ಬಾರದಿದ್ದರೇ ತಮಗೆ `ದೊಡ್ಡ ಅಧಿಕಾರ’ ಸಿಗಬಹುದು ಎಂಬ ಆಸೆ ಹೊಂದಿರುವ ಬಿಜೆಪಿಯ ಹಾಗೂ ಸಂಘ ಪರಿವಾರದ ನಾಯಕರೊಬ್ಬರು ಈಶ್ವರಪ್ಪನವರ ಬೆಂಬಲಕ್ಕೂ ನಿಂತಿರುವುದು ಗುಟ್ಟೇನಲ್ಲ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ಪಕ್ಷದ ಕಾರ್ಯಕರ್ತರಲ್ಲಿ ನಾಯಕತ್ವದ ಬಗ್ಗೆ ಗೊಂದಲ ಮೂಡಿಸಿದರೆ ಬಿಜೆಪಿಗೆ ಬಹುಮತ ಬರುವುದನ್ನು ತಡೆಯಬಹುದು. ಆ ಮೂಲಕ ಸಮ್ಮಿಶ್ರ ಸರ್ಕಾರ ರಚನೆಯ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಿ, ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ತಪ್ಪಿಸುವ ರಾಜಕೀಯ ಹುನ್ನಾರವನ್ನು ನಡೆಸಲಾಗುತ್ತಿದೆ ಎಂಬ ಮಾತುಗಳು ಬಿಜೆಪಿಯಲ್ಲಿ ದಟ್ಟವಾಗಿವೆ. ಒಂದು ವೇಳೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಈಶ್ವರಪ್ಪನವರ ವಿರುದ್ಧ ಬಿಜೆಪಿ ವರಿಷ್ಠರು ಕ್ರಮ ಕೈಗೊಂಡರೆ ಅವರನ್ನು ಪಕ್ಷಕ್ಕೂ ಬರಮಾಡಿಕೊಂಡು `ರಾಜ್ಯಾಧ್ಯಕ್ಷ’ರನ್ನಾಗಿಸುವ ಭರವಸೆಯನ್ನು ರಾಜಕೀಯ ಪಕ್ಷವೊಂದು ನೀಡಿದೆ ಎನ್ನಲಾಗಿದೆ.

ಈ ಸಂಬಂಧ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಕೆಲ ಮುಖಂಡರು ರಾಜಕೀಯ ಪಕ್ಷದ ವರಿಷ್ಠ ನಾಯಕರ ಜೊತೆ 2-3 ಬಾರಿ ಮಾತುಕತೆಯನ್ನು ನಡೆಸಿರುವುದು ಸುಳ್ಳಲ್ಲ. ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ `ದೊಡ್ಡ ಅಧಿಕಾರದ’ ಕನಸಿನಲ್ಲಿರುವ ಈಶ್ವರಪ್ಪ ಯಡಿಯೂರಪ್ಪನವರ ವಿರುದ್ಧ ನೇರವಾಗಿಯೇ ತಿರುಗಿ ಬಿದ್ದು, ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಎಂಬ ರಾಗ ಬದಲಾಯಿಸಿ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವುದು ಬ್ರಿಗೇಡ್ ಗುರಿ ಅಲ್ಲ ಎಂದು ಗುಡುಗಿದ್ದಾರೆ.

ಬಿಜೆಪಿ ಬಿಡುವುದಿಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದರೂ, ತೆರೆಮರೆಯಲ್ಲಿ ಬೇರೆ ಪಕ್ಷದ ಮುಖಂಡರ ಜೊತೆ ಪರ್ಯಾಯ ರಾಜಕೀಯದ ಬಗ್ಗೆ ಸಮಾಲೋಚನೆ ನಡೆಸಿರುವುದು ಸ್ಪಷ್ಟ. ಹಾಗಾಗಿಯೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ತಮ್ಮದೇ ಸಂಘಟನೆಗೆ ಈಶ್ವರಪ್ಪ ಮುಂದಾಗಿದ್ದಾರೆ.

ಪಂಚರಾಜ್ಯಗಳ ಚುನಾವಣೆ ನಂತರ ಈಶ್ವರಪ್ಪನವರು ಬಿಜೆಪಿಯಲ್ಲಿರುತ್ತಾರೆಯೊ? ಅಥವಾ ಬೇರೆ ಪಕ್ಷವನ್ನು ಅಪ್ಪಿಕೊಳ್ಳುತ್ತಾರೆಯೊ? ಎಂಬುದು ಸ್ಪಷ್ಟವಾಗಲಿದೆ. ಅಲ್ಲಿಯವರೆಗೂ ಬಿಜೆಪಿಯಲ್ಲಿನ ಆಂತರಿಕ ಕದನ, ಮುಸುಕಿನ ಗುದ್ದಾಟಗಳು ಮುಂದುವರಿಯಲಿದೆ.

Comments are closed.