ಕರ್ನಾಟಕ

2031ರ ಬೆಂಗಳೂರಿನ ಮಹಾ ಯೋಜನೆಯಲ್ಲಿ ಏನು ಇರಲಿವೆ

Pinterest LinkedIn Tumblr


ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರಿಷ್ಕೃತ ಮಹಾ ಯೋಜನೆ 2031ರ ಮುಖ್ಯಾಂಶವನ್ನು ಬಹಿರಂಗಗೊಳಿಸಿ ಅಂತಿಮ ಯೋಜನೆ ತಯಾರಿಕೆಯ ಸಲುವಾಗಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

ನಗರದ ಹತ್ತು ಕಡೆಗಳಲ್ಲಿ ಜ.15ರಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಪ್ರಸ್ತುತ ಒಂದು ಕೋಟಿ ಮೀರಿರುವ ನಗರದ ಜನಸಂಖ್ಯೆ 2031ರ ವೇಳೆಗೆ 2.03 ಕೋಟಿ ಆಗುವ ಸಾಧ್ಯತೆ ಇದೆ. ನಗರದ ಕ್ಷಿಪ್ರ ಬೆಳವಣಿಗೆಯಿಂದಾಗಿ 42 ಹೊಸ ಯೋಜನಾ ಜಿಲ್ಲೆಗಳ ಸ್ಥಾಪನೆಗೆ ಬಿಡಿಎ ಉದ್ದೇಶಿಸಿದೆ.

ಹೊಸ ಯೋಜನಾ ಜಿಲ್ಲೆಗಳ ಪರಿಕಲ್ಪನೆ ಕುರಿತು ವಿವರಿಸಿರುವ ಬಿಡಿಎ, ‘ಆಡಳಿತಾತ್ಮಕ ಗಡಿರೇಖೆಗಳ ಬದಲಾವಣೆ, ತನ್ನ ಯೋಜನೆಗಳ ಜಾರಿ ಮತ್ತು ಅನುಷ್ಠಾನಕ್ಕೆ ಉದ್ದೇಶಿತ ಹೊಸ ಯೋಜನಾ ಜಿಲ್ಲೆಗಳನ್ನು ಸಾಧನವಾಗಿ ಬಳಸಲಿದೆ. 2031ರ ವೇಳೆಗೆ ನೂತನ ತಂತ್ರಗಳ ಮೂಲಕ ಯೋಜನಾ ಜಿಲ್ಲೆಗಳ ವ್ಯಾಪ್ತಿ ವಿಸ್ತರಣೆ ಮಾಡಲಾಗುತ್ತದೆ’ ಎಂದು ತಿಳಿಸಿದೆ.

ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಒಂದೇ ಮಾರ್ಗದಲ್ಲಿ ಹಲವು ಸಲ ಸಂಚರಿಸುವ ವಾಹನಗಳಿಂದ ತೊಂದರೆ ಉಂಟಾಗುತ್ತಿದೆ. ಈ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಬಳಕೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಇಳಿಕೆ ಕಂಡುಬಂದಿದೆ.

ಸಂಚಾರ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ವಾಹನಗಳ ವೇಗ ಗಂಟೆಗೆ 5 ಕಿ.ಮೀ. ಗಿಂತ ಕಡಿಮೆ ಇರುತ್ತದೆ. ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮ ಮೆಟ್ರೊ 2ನೇ ಹಂತದ ಯೋಜನೆ ಜಾರಿಗೊಂಡರೂ  ಸಮಸ್ಯೆ ಬಗೆಹರಿಯುವುದಿಲ್ಲ.

ಈ ನಿಟ್ಟಿನಲ್ಲಿ ಬಿಡಿಎ ಯೋಜನೆಯೊಂದನ್ನು ರೂಪಿಸಿದೆ. ‘ಎಲ್ಲ ವರ್ಗದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಅವರ ಪ್ರಯಾಣಕ್ಕೆ ಒತ್ತು ನೀಡಲು ಉತ್ತಮ ಸಾರ್ವಜನಿಕ ಸೇವೆ ಮತ್ತು ವಾಹನೇತರ ಪ್ರಯಾಣ ವ್ಯವಸ್ಥೆ ಕಲ್ಪಿಸಲು ಹಲವಾರು ಹೊಸ ಅಂಶಗಳನ್ನು ಪರಿಚಯಿಸಲು ಮುಂದಾಗಿದೆ. ಪ್ರಯಾಣ ಬೇಡಿಕೆ ನಿರ್ವಹಣೆಯ ಅಂಶಗಳನ್ನು ಅಳವಡಿಸಿಕೊಂಡು ಹಾಗೂ ರಾಷ್ಟ್ರೀಯ ನಗರ ಸಾರಿಗೆ ನೀತಿಗೆ ಅನುಗುಣವಾಗಿ ಭೂ ಬಳಕೆಗೆ ಆದ್ಯತೆ ನೀಡಲಾಗುತ್ತದೆ’ ಎಂದು ಬಿಡಿಎ ತಿಳಿಸಿದೆ.

ಈಗಿರುವ ರಸ್ತೆಗಳ ಸುಧಾರಣೆಗೂ ಒತ್ತು ನೀಡಿದ್ದು, ಅಗತ್ಯ ಇರುವ ಕಡೆಗಳಲ್ಲಿ ಹೆಚ್ಚುವರಿ ವರ್ತುಲ ರಸ್ತೆಗಳನ್ನು ನಿರ್ಮಿಸುವುದು, ಸಾರ್ವಜನಿಕ ಸಾರಿಗೆ ಹೆಚ್ಚಿಸಲು ಸಲಹೆ ನೀಡಲಾಗುತ್ತದೆ. ಪ್ರಯಾಣಿಕ ರೈಲು ವ್ಯವಸ್ಥೆ, ಮಾನೊ ರೈಲು ಮತ್ತು ಬಿಆರ್‌ಟಿ ವ್ಯವಸ್ಥೆ ಕಲ್ಪಿಸಲು ಉತ್ತೇಜನ ನೀಡಲಾಗುತ್ತದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಬಿಡಿಎ ನಿರ್ಧರಿಸಿದೆ.

ಪ್ರಸ್ತುತ ನಗರದಲ್ಲಿ ಗೃಹ ಮತ್ತು ಗೃಹೇತರ ಬಳಕೆಗೆ ನಿತ್ಯ ಪೂರೈಕೆಯಾಗುತ್ತಿರುವ 155 ಕೋಟಿ ಲೀಟರ್‌ ನೀರಿನ ಪ್ರಮಾಣ 534 ಕೋಟಿ ಲೀಟರ್‌ಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ, ಕುಡಿಯುವ ನೀರಿಗೆ ಕೆರೆಯ ಮೂಲಗಳನ್ನು ಅವಲಂಬಿಸಬೇಕಿದೆ. ಈ ದಿಸೆಯಲ್ಲಿ ಟಿ.ಜಿ.ಹಳ್ಳಿ ಜಲಾಶಯದ ಪಾತ್ರ ಮುಖ್ಯವಾಗಿದೆ.

ನಗರಕ್ಕೆ ಅಗತ್ಯವಿರುವ ನೀರು ಪೂರೈಕೆ ಮಾಡಲು ಎತ್ತಿನಹೊಳೆ, ಹೇಮಾವತಿ ಕಾಲುವೆ ಹಾಗೂ ಲಿಂಗನಮಕ್ಕಿ ಜಲಾಶಯದಿಂದ ಕೆ.ಜಿ.ಹಳ್ಳಿ ಜಲಾಶಯಕ್ಕೆ ನೀರು ಹರಿಸುವ ಯೋಜನೆ ಕುರಿತು ಪ್ರಸ್ತಾಪಿಸಲು ಉದ್ದೇಶಿಸಿದೆ. ಮೇಕೆದಾಟು ಬಳಿ ಜಲಾಶಯ ನಿರ್ಮಾಣ ಹಾಗೂ ಕಾವೇರಿ ನದಿ ತಿರುವು ಕುರಿತು ಪರಿಷ್ಕೃತ ಮಹಾಯೋಜನೆಯಲ್ಲಿ ಪ್ರಸ್ತಾಪಿಸಲಿದೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆಗೂ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ.

ನಗರದಲ್ಲಿ ಪ್ರತಿದಿನ ಉತ್ಪಾದನೆಯಾಗುವ ತ್ಯಾಜ್ಯ 18,390 ಟನ್‌ಗೆ ಏರಿಕೆಯಾಗುವ ಸಂಭವವಿದೆ. ಹೀಗಾಗಿ ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಬೇಕಿದೆ. ಎರಡು ಕೋಟಿ ಜನಸಂಖ್ಯೆಗೆ ಅನುಗುಣವಾಗಿ ನಗರಕ್ಕೆ ಪ್ರತಿದಿನ 8,952 ಮೆಗಾವಾಟ್‌ ವಿದ್ಯುತ್‌ಗೆ ಬೇಡಿಕೆ ಬರಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲು ಬಿಡಿಎ ಮುಂದಾಗಿದೆ.

ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಪೂರೈಕೆ ಮಾಡಲು ಸಾಂಪ್ರದಾಯಿಕ ಶಕ್ತಿ ಮೂಲಗಳಿಂದ ಸಾಧ್ಯವಿಲ್ಲ. ಸೌರಶಕ್ತಿ ಹಾಗೂ ನವೀಕರಿಸಬಹುದಾದ ಶಕ್ತಿ ಮೂಲಗಳನ್ನು ಅನ್ವೇಷಿಸಲು ಬಿಡಿಎ ಶಿಫಾರಸು ಮಾಡಲಿದೆ.

ಆರ್‌ಎಂಪಿ ಮುಖ್ಯಾಂಶ
* ಬೆಂಗಳೂರು ಮಹಾನಗರ ವಲಯ (ಬಿಎಂಎ) ವ್ಯಾಪ್ತಿಯಲ್ಲಿ 42 ಹೊಸ ಯೋಜನಾ ಜಿಲ್ಲೆಗಳಿಗೆ ಸೂಚನೆ

* ಸಂಚಾರ ದಟ್ಟಣೆ ತೀವ್ರಗೊಳ್ಳಲಿದ್ದು, ಪ್ರಯಾಣಿಕ ರೈಲು, ಮಾನೊ ರೈಲು ಮತ್ತು ಬಿಆರ್‌ಟಿ ವ್ಯವಸ್ಥೆ ಕಲ್ಪಿಸಲು ಶಿಫಾರಸು
* ಎತ್ತಿನಹೊಳೆ, ಲಿಂಗನಮಕ್ಕಿ ಮತ್ತು ಹೇಮಾವತಿ ನದಿಯ ನೀರನ್ನು ಟಿ.ಜಿ.ಹಳ್ಳಿ ಜಲಾಶಯಕ್ಕೆ ಹರಿಸುವಂತೆ ಸೂಚನೆ
* ಮೇಕೆದಾಟು ಬಳಿ ನಿರ್ಮಿಸುತ್ತಿರುವ ಜಲಾಶಯಕ್ಕೆ ಕಾವೇರಿ ನದಿ ನೀರನ್ನು ಹರಿಸುವುದು
* ನಗರದಲ್ಲಿ ಪ್ರತಿದಿನ 18,390 ಟನ್‌ ಕಸ ಉತ್ಪಾದನೆ
* ನಗರಕ್ಕೆ ಪ್ರತಿದಿನ 8,952 ಮೆಗಾವಾಟ್‌ ವಿದ್ಯುತ್‌ ಅಗತ್ಯ

Comments are closed.