ಕರ್ನಾಟಕ

ಬಹ್ರೈನ್ ಕನ್ನಡಿಗ ಲೀಲಾಧರ್ ಬೈಕಂಪಾಡಿಗೆ ಕಲೆ – ಸಾಂಸ್ಕೃತಿಕ ಕ್ಷೇತ್ರದ ಕೊಡುಗೆಗಳಿಗಾಗಿ ‘ಸೃಷ್ಟಿ ಕಲಾಶ್ರೀ’ ಪ್ರಶಸ್ತಿ

Pinterest LinkedIn Tumblr

srishti-pic-1

ಬೆಂಗಳೂರು: ದೇಶ ಮತ್ತು ವಿದೇಶದಲ್ಲಿ ಗೈದ ಸಮಗ್ರ ಸಮಾಜಮುಖಿ ಚಟುವಟಿಕೆಗಳೂ ಸೇರಿದಂತೆ ಅತಿ ಎಳವೆಯಿಂದ ತೊಡಗಿ ಗತ ಸುಮಾರು 29 ವರ್ಷಗಳಿಂದ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಲ್ಲಿಸುತ್ತಾ ಬಂದ ಮೌಲಿಕ ಕೊಡುಗೆಗಳಿಗಾಗಿ ಬಹ್ರೈನ್ ವಾಸ್ತವ್ಯದ ಅನಿವಾಸಿ ಕನ್ನಡಿಗ ಲೀಲಾಧರ್ ಬೈಕಂಪಾಡಿಗೆ ಬೆಂಗಳೂರು ಮೂಲದ ‘ಸೃಷ್ಟಿ ಕಲಾ ಭೂಮಿ’ ಸಾಂಸ್ಕೃತಿಕ ಸಂಸ್ಥೆಯು ಇತ್ತೀಚೆಗೆ ಪ್ರತಿಷ್ಠಿತ ‘ಸೃಷ್ಟಿ ಕಲಾಶ್ರೀ’ ಪ್ರಶಸ್ತಿಯನ್ನಿತ್ತು ಗೌರವಿಸಿದೆ.

img-20161231-wa0052

img-20161231-wa0054

img-20161231-wa0055

srishti-pic-2

ಬೆಂಗಳೂರಿನ ಖ್ಯಾತ ಸಾಂಸ್ಕೃತಿಕ ಸಂಘಟಕ ಸಂಕಬೈಲು ಮಂಜುನಾಥ ಅಡಪ್ಪರ ಸಾರಥ್ಯದಲ್ಲಿ ಬೆಂಗಳೂರಿನ ರಾಜಾಜಿನಗರದ ಡಾ. ರಾಜ್ ಕುಮಾರ್ ಕಲಾಕ್ಷೇತ್ರದಲ್ಲಿ ಜರಗಿದ ‘ಸೃಷ್ಟಿ ಕಲಾ ಭೂಮಿ’ಯ 4ನೇ ವಾರ್ಷಿಕೋತ್ಸವದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗಿದ್ದು, ಸದ್ರಿ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಡಾ. ರಾಜೇಶ್ ಆಳ್ವ [ಪ್ರ. ಕಾರ್ಯದರ್ಶಿ, ವಿಶ್ವ ತುಳುವೆರೆ ಆಯನೊ, ಬದಿಯಡ್ಕ], ಮುಖ್ಯ ಅತಿಥಿಯಾಗಿ ಡಾ. ಕಿಶೋರ್ ಆಳ್ವ [ಖ್ಯಾತ ಉದ್ಯಮಿ, ಬೆಂಗಳೂರು] ಮತ್ತು ಗೌರವ ಅತಿಥಿಗಳಾಗಿ ಕರ್ನೂರು ಮೋಹನ್ ರೈ [ಖ್ಯಾತ ಸಂಘಟಕ, ಮುಂಬೈ] ಸಹಿತವಾಗಿ ಬೆಂಗಳೂರಿನ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಉಪಸ್ಥಿತರಿದ್ದರು.

ತುಳು – ಕನ್ನಡ ಮೂಲದ ಯೋಗ್ಯ ಕಲಾವಿದರು ಮತ್ತು ಕಲಾ ಸಂಸ್ಥೆಗಳನ್ನು ಬೆಂಗಳೂರಿಗೆ ಆಹ್ವಾನಿಸಿ ಉಚ್ಛ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವುದಕ್ಕೆ ಹೆಸರಾಗಿರುವ ಬೆಂಗಳೂರಿನ ‘ಸೃಷ್ಟಿ ಕಲಾ ಭೂಮಿ’ ಸಂಸ್ಥೆಯು, ಅರ್ಹ ಸಾಧಕರನ್ನು ದೇಶ – ವಿದೇಶಗಳಿಂದ ಆಯ್ದು ಸೂಕ್ತ ಪ್ರಶಸ್ತಿಯೊಂದಿಗೆ ಪುರಸ್ಕರಿಸುವುದಕ್ಕೂ ಜನಮನ್ನಣೆಯನ್ನು ಗಳಿಸಿದೆ. ಅದರಂತೆ ಈ ಬಾರಿ ಲೀಲಾಧರ್ ಬೈಕಂಪಾಡಿಯವರು ಈ ಸಂಸ್ಥೆಯ ‘ಸೃಷ್ಟಿ ಕಲಾಶ್ರೀ ಪ್ರಶಸ್ತಿ’ಗೆ ಭಾಜನರಾಗಿದ್ದು ಇದು ಅವರ ನಿರಂತರವಾದ ವೈವಿಧ್ಯಮಯ ಸೇವಾ ಚಟುವಟಿಕೆಗಳು ಮತ್ತು ಸಾಧನೆಗಳಿಗೆ ಅತ್ಯಲ್ಪ ಅವಧಿಯೊಳಗೆ ಸಂದ ಏಳನೆಯ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.

ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರವಾದ ಬಹ್ರೈನ್ ನಲ್ಲಿ ಕಳೆದ 19 ವರ್ಷಗಳಿಂದ ವಾಸ್ತವ್ಯವಿರುವ ಲೀಲಾಧರ್ ಬೈಕಂಪಾಡಿಯವರು ತನ್ನ ಬಹುಮುಖಿ ಸೇವೆ ಮತ್ತು ಸಾಧನೆಗಳಿಗಾಗಿ ಈಗಾಗಲೇ ರಾಷ್ಟ್ರೀಯ ಭೂಷಣ ಪ್ರಶಸ್ತಿ [ಬೆಂಗಳೂರು], ಸಮಾಜ ರತ್ನ ಪ್ರಶಸ್ತಿ [ಮಲೇಷಿಯಾ], ರಾಷ್ಟ್ರೀಯ ಏಕತಾ ಪ್ರಶಸ್ತಿ [ನವ ದೆಹಲಿ], ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ [ಬೆಂಗಳೂರು], ದ ಗ್ಲೋಬಲ್ ಅಚೀವರ್ಸ್ ಅವಾರ್ಡ್ [ಥಾಯ್ಲ್ಯಾಂಡ್], ಕರ್ನಾಟಕ ಸೌರಭ ಪ್ರಶಸ್ತಿ [ಮಂಗಳೂರು] ಮುಂತಾದ ಆರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿರುತ್ತಾರೆ.

ವೃತ್ತಿಯಲ್ಲಿ ಬಹ್ರೈನ್ ಮೂಲದ ಖಾಸಗಿ ಕಂಪನಿಯೊಂದರಲ್ಲಿ ವಿತ್ತ ಪ್ರಬಂಧಕರಾಗಿರುವ ಇವರು ಪ್ರವೃತ್ತಿಯಲ್ಲಿ ಓರ್ವ ಯುವ ತಥಾ ಸಾಂಸ್ಕೃತಿಕ ಸಂಘಟಕನಾಗಿ, ಸಾಮುದಾಯಿಕ ಹಾಗೂ ಸಾಮಾಜಿಕ ಮುಂದಾಳುವಾಗಿ, ಹವ್ಯಾಸಿ ಬರೆಹಗಾರನಾಗಿ, ರಂಗಕರ್ಮಿಯಾಗಿ, ವಾಗ್ಮಿಯಾಗಿ, ಸಮಾಜ ಸೇವಕನಾಗಿ ಎಲ್ಲೆಡೆಯಲ್ಲೂ ಜನಾನುರಾಗಿಯಾಗಿದ್ದಾರೆ. ಅನೇಕ ವರ್ಷಗಳಿಂದ ವೈವಿಧ್ಯಮಯ ಸೇವೆ ಮತ್ತು ಚಟುವಟಿಕೆಗಳ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ಭಾರತ ಮತ್ತು ಬಹ್ರೈನ್ ನಲ್ಲಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಸದಸ್ಯತ್ವವನ್ನು ಹೊಂದಿದ್ದು, ಅವುಗಳೊಂದಿಗೆ ನಿರಂತರವಾದ ಸಂಪರ್ಕವನ್ನಿರಿಸಿಕೊಂಡಿದ್ದಾರೆ ಇಲ್ಲವೇ ಸದಾ ಕ್ರಿಯಾಶೀಲರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Comments are closed.