ಬೆಂಗಳೂರು, ಜ. ೪- ಜನರ ಆರೋಗ್ಯ ಮತ್ತು ಬುದ್ದಿಯನ್ನು ಕೆಡಿಸುವ ಮದ್ಯದಿಂದ ಸಂಗ್ರಹಿಸಿದ ಪಾಪದ ಹಣದಿಂದ ಅಭಿವೃದ್ಧಿ ಕೆಲಸ ಮಾಡಬಾರದು. ಕೂಡಲೇ ರಾಜ್ಯದಲ್ಲಿ ಮದ್ಯಪಾನ ನಿಷೇಧ ಕಾನೂನು ಜಾರಿಗೆ ತರಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ಮದ್ಯಪಾನ ನಿಷೇಧ ಆಂದೋಲನ ಬಸವ ಕಲ್ಯಾಣದಿಂದ ಆರಂಭಿಸಿ ನಗರಕ್ಕೆ ಇಂದು ತಲುಪಿರುವ ಪಾದಯಾತ್ರೆ ಮೌರ್ಯ ವೃತ್ತದಲ್ಲಿ ಸಮಾಪ್ತಿಗೊಂಡಿತು. ಈ ವೇಳೆ ಮಾತನಾಡಿದ ಎಚ್.ಎಸ್. ದೊರೆಸ್ವಾಮಿ, ಅಭಿವೃದ್ಧಿಯ ಹೆಸರಿನಲ್ಲಿ ಮದ್ಯದಂಗಡಿಗಳನ್ನು ಹೆಚ್ಚಿಸುವುದು ಸರಿಯಲ್ಲ. ಜನರ ಜೇಬು ಕತ್ತರಿಸಿ ಅವರನ್ನು ಚಟಕ್ಕೆ ದೂಡಿ ಯಾವ ಸರ್ಕಾರಗಳು ಅಭಿವೃದ್ಧಿ ಕಾರ್ಯ ಮಾಡಬಾರದು. ಪಾಪದ ಹಣದಲ್ಲಿ ಆಡಳಿತ ನಡೆಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುವ ಮೊದಲು ಪಾನ ನಿಷೇಧ ಮಾಡುವುದಾಗಿ ಹೇಳಿದ್ದರು. ಆದರೆ ಇದೀಗ ಮದ್ಯದಂಗಡಿಗಳನ್ನು ಹೆಚ್ಚಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕುಡಿತದಿಂದ ಹಲವು ರೋಗಗಳು ಬರುತ್ತವೆ. ಸರಕಾರ ಆಸ್ಪತ್ರೆಗಳಿಗೆ ಖರ್ಚು ಮಾಡುವ ಹಣದಲ್ಲಿ ಹೆಚ್ಚು ಮಾಡಬೇಕಾಗುತ್ತದೆ. ಇದು ರಾಜ್ಯದ ಬೊಕ್ಕಸಕ್ಕೆ ಭಾರಿ ಹೊಡೆತ ನೀಡುತ್ತದೆ. ಮದ್ಯದಿಂದ ಬರುವ ಹಣಕ್ಕಿಂತ ಆಸ್ಪತ್ರೆಗಳಿಗೆ ಖರ್ಚು ಮಾಡುವ ಹಣ ಹೆಚ್ಚಾಗಿರುತ್ತದೆ. ಇದನ್ನು ಅಂಕಿ ಅಂಶಗಳೆ ಸ್ಪಷ್ಟಪಡಿಸುತ್ತಿವೆ ಎಂದು ಹೇಳಿದ ಅವರು, ಕುಡಿದ ವ್ಯಕ್ತಿಯಿಂದ ಹೆಚ್ಚಿನ ಕೆಲಸ ಮಾಡಿಸಲು ಸಾಧ್ಯವಿಲ್ಲ. ಆತ ಒಂದು ದಿನ ಕೆಲಸ ಮಾಡಿದರೆ 3 ದಿನ ರಜೆ ತೆಗೆದುಕೊಳ್ಳುತ್ತಾನೆ. ಆದ್ದರಿಂದ ಮದ್ಯದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹೇಳಿದರು.
ಮದ್ಯ ನಿಷೇಧ ಆಂದೋಲನ ರಾಯಚೂರು ಮತ್ತು ಗುಲ್ಬರ್ಗಾದಲ್ಲಿ ಆರಂಭಗೊಂಡಿತು. ಅಲ್ಲಿ ಮಹಳೆಯರೇ ಈ ಚಳುವಳಿಯ ನೇತೃತ್ವ ವಹಿಸಿ ಮದ್ಯದಂಗಡಿಗಳನ್ನು ಮುಚ್ಚುತ್ತಿದ್ದಾರೆ. ಮೊದಲು ಈ ಎರಡು ಜಿಲ್ಲೆಗಳಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ ಆಗಬೇಕು. ಮತ್ತೆ ಉಳಿದ ಜಿಲ್ಲೆಗಳಿಗೂ ಈ ಹೋರಾಟ ವಿಸ್ತರಿಸಬೇಕು ಎಂದು ಹೇಳಿದರು.
ಶಾಸಕ ವಿ.ಆರ್. ಪಾಟೀಲ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ದೇಶದಲ್ಲಿ ಮದ್ಯಪಾನ ನಿಷೇಧ ಆಗಬೇಕು ಎಂಬ ಕೂಗು ಕೇಳಿ ಬರುತ್ತಿದೆ. ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆಯಿಂದ ಇದು ಸಾಧ್ಯವಾಗಿಲ್ಲ. ಬಿಹಾರ ಚುನಾವಣೆ ಸಂದರ್ಭದಲ್ಲಿ ಈ ಕೂಗು ಸ್ವಲ್ಪ ಗಟ್ಟಿಯಾಗಿ ಕೇಳಿ ಬಂತು ಎಂದು ಹೇಳಿದರು.
ಬಸವ ಕಲ್ಯಾಣದಿಂದ 43 ದಿನಗಳ ಪಾದಯಾತ್ರೆ 800 ಕಿ.ಮೀ. ಚಲಿಸಿ ಬೆಂಗಳೂರಿಗೆ ಆಗಮಿಸಿದೆ. ಜನರ ಅಭಿಪ್ರಾಯಕ್ಕೆ ಪ್ರಚಾರ, ಸ್ಪಂದನೆ ನೀಡಿ ಮದ್ಯಪಾನ ನಿಷೇಧ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಆಂದೋಲನದ ಮುಖಂಡ ಅಭಯ್ ಮಾತನಾಡಿ, 2018ರ ಚುನಾವಣೆಯ ವೇಳೆಗೆ ಎಲ್ಲಾ ರಾಜಕೀಯ ಪಕ್ಷಗಳು ಮದ್ಯಪಾನ ನಿಷೇಧದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಚುನಾವಣಾ ಸಂದರ್ಭದಲ್ಲಿ ಈ ನಿಲುವಿನ ಆಧಾರದಲ್ಲಿ ಯಾವ ಪಕ್ಷಗಳಿಗೆ ಮತ ಹಾಕಬೇಕು ಎಂದು ನಾವು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದರು.
ಹೋರಾಟಗಾರ ರವಿಕೃಷ್ಣರೆಡ್ಡಿ ಮಾತನಾಡಿ, ಮದ್ಯಪಾನದಿಂದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಇದು ಜನರನ್ನು ಸಂಕಷ್ಟಕ್ಕೆ ಈಡು ಮಾಡಿ ಅಭಿವೃದ್ಧಿ ಕುಂಠಿತಗೊಳಿಸುತ್ತದೆ ಎಂದು ಹೇಳಿದರು.
ಧರಣಿಯಲ್ಲಿ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಲಿಬಾಬಾ, ಆಂದೋಲನದ ಮುಖ್ಯಸ್ಥ ಲಿಂಗೇಗೌಡ ಎಸ್.ಎಚ್., ಸಿ.ಆರ್. ಭಾಸ್ಕರ ಮತ್ತಿತರರು ಭಾಗವಹಿಸಿದ್ದರು.
ಕರ್ನಾಟಕ
Comments are closed.