ಕರ್ನಾಟಕ

ತೀವ್ರ ಬರಗಾಲದಲ್ಲೂ ಉಕ್ಕಿ ಹರಿದ ಜೀವಜಲ!

Pinterest LinkedIn Tumblr

ಸಾಂತೇನಹಳ್ಳಿ ಕಾಂತರಾಜ್

kereಹೊಳಲ್ಕೆರೆ: ಈಗ ಎಲ್ಲೆಡೆ ಬರಗಾಲ. ಹನಿ ನೀರಿಗೂ ಪರಿತಪಿಸುವ ಕಾಲ. ಕೆರೆಕಟ್ಟೆಗಳು ಬತ್ತಿಹೋಗಿವೆ. ಅಂತರ್ಜಲ ಪಾತಾಳ ಕಂಡಿದ್ದು, 800ರಿಂದ 1,000 ಅಡಿ ಆಳದ ಕೊಳವೆಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ. ಇಂಥ ಸ್ಥಿತಿಯಲ್ಲೂ ಇಲ್ಲೊಂದು ಊರಿನಲ್ಲಿ ಭೂಮಿಯಿಂದ ಕೆಲವೇ ಅಡಿ ಕೆಳಗೆ ಜೀವಜಲ ಉಕ್ಕುತ್ತಿದೆ.

ತಾಲ್ಲೂಕಿನ ಈಚಘಟ್ಟ ಗ್ರಾಮದ ಲಕ್ಷ್ಮೀದೇವಿ ಎಂಬ ರೈತಮಹಿಳೆಯ ಹೊಲದಲ್ಲಿ ಭೂಮಿಯಿಂದ ಕೇವಲ 10 ಅಡಿ ಆಳದಲ್ಲಿ ಜಲ ಉದ್ಭವವಾಗಿದ್ದು, ಎಲ್ಲರನ್ನೂ ಚಕಿತಗೊಳಿಸಿದೆ. ಈಚಘಟ್ಟ–ಮದ್ದೇರು ಗ್ರಾಮಗಳ ನಡುವೆ ಇರುವ ಈ ಹೊಲದಲ್ಲಿ ಜೀವಜಲ ಉಕ್ಕಿದ್ದು, ಸುತ್ತಲಿನ ಅನೇಕ ಗ್ರಾಮಗಳ ರೈತರಿಗೆ ವರದಾನವಾಗಿದೆ.

ಪವಾಡವಲ್ಲ: ಇಲ್ಲಿ ಭೂಮಿಯ ಮೇಲ್ಭಾಗದಲ್ಲೇ ಜಲ ಕಾಣಿಸಿಕೊಂಡಿರುವುದು ಯಾವುದೇ ಪವಾಡದಿಂದ ಅಲ್ಲ. ಗ್ರಾಮದ ಹಿರಿಯರು ಸುಮಾರು 40 ವರ್ಷಗಳ ಹಿಂದೆ ಮುಂದಾಲೋಚನೆಯಿಂದ ಕೈಗೊಂಡ ಘನಕಾರ್ಯ ಇದಕ್ಕೆ ಕಾರಣ.

‘1972ರಲ್ಲಿ ಬರಗಾಲ ಬಂದಾಗ ಗ್ರಾಮದ ಜನ, ದನ, ಕರುಗಳಿಗೆ ಕುಡಿಯಲು ನೀರು ಸಿಗುತ್ತಿರಲಿಲ್ಲ. ಗ್ರಾಮಸ್ಥರು ಒಂದು ಸಭೆ ನಡೆಸಿ, ಊರಿನ ಸಮೀಪದ ಗುಡ್ಡದಲ್ಲಿ ಗುಂಡಯ್ಯನ ಕಟ್ಟೆ ಎಂಬ ಬಾವಿ ತೋಡಿಸಿದರು. ಆಗ ಅಲ್ಲಿ ಜಲ ಬಂದು ಜನರ ದಾಹ ತಣಿಸಿತ್ತು. ಗುಂಡಯ್ಯನ ಕಟ್ಟೆ ತೋಡಿಸಿದ ನಂತರ ಅದು ಎಂದೂ ಬತ್ತಲಿಲ್ಲ. ಇಲ್ಲಿನ ನೀರಿನ ಸಂಗ್ರಹದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಯಿತು’ ಎನ್ನುತ್ತಾರೆ ಗ್ರಾಮದ ಹಿರಿಯರು.

‘ಇಂತಹ ಬರಗಾಲದಲ್ಲೂ ಗುಂಡಯ್ಯನಕಟ್ಟೆಯಲ್ಲಿ ನೀರು ತುಂಬಿದೆ. ನಮ್ಮ ಹೊಲ ಗುಂಡಯ್ಯನ ಕಟ್ಟೆಯ ಕೆಳಭಾಗದಲ್ಲಿದ್ದು, ಇಲ್ಲಿಯೂ ನೀರು ಸಿಗಬಹುದು ಎಂಬ ಊಹೆಯಿಂದ ಗುಂಡಿ ತೆಗೆಸಿದೆವು. ಜೆಸಿಬಿಯಲ್ಲಿ ಕೇವಲ ಐದು ಅಡಿ ತೆಗೆಸಿದಾಗ ನೀರು ಕಾಣಿಸಿತು. ಮತ್ತೆ ಒಂದೆರಡು ಅಡಿ ತೆಗೆದ ತಕ್ಷಣ ನೀರು ಉಕ್ಕಿತು’ ಎನ್ನುತ್ತಾರೆ ರೈತಮಹಿಳೆ ಲಕ್ಷ್ಮೀದೇವಿ.

ಗುಂಡಯ್ಯನ ಕಟ್ಟೆ ಇರುವ ಪ್ರದೇಶದ ಸುತ್ತಮುತ್ತ ಮಾತ್ರ ಅಂತರ್ಜಲ ಇದೆ. ಇಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಅಂತರ್ಜಲ ಬಹಳ ಕೆಳಗೆ ಇದೆ. ಸುಮಾರು 500 ಅಡಿ ಬೋರ್ ಕೊರೆಸಿದರೂ ನೀರು ಬರುವುದಿಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

₹ 300ಕ್ಕೆ ಒಂದು ಟ್ಯಾಂಕರ್: ಲಕ್ಷ್ಮೀದೇವಿ ತನ್ನ ಹೊಲದಲ್ಲಿ ಜೆಸಿಬಿಯಿಂದ 30×10 ಅಡಿ ವಿಸ್ತೀರ್ಣ ಹಾಗೂ 15 ಅಡಿ ಆಳವಿರುವ ಗುಂಡಿ ನಿರ್ಮಿಸಿದ್ದಾರೆ. ಇದರಲ್ಲಿ ಸದಾ 10 ಅಡಿ ನೀರು ಸಂಗ್ರಹವಾಗಿರುತ್ತದೆ. ಈಚಘಟ್ಟ ಸೇರಿದಂತೆ ಸುತ್ತಲಿನ ಬಂಜಗೊಂಡನಹಳ್ಳಿ, ದಗ್ಗೆ, ಚಿತ್ರಹಳ್ಳಿ, ಅನ್ನೇಹಾಳ್ ಮತ್ತಿತರ ಗ್ರಾಮಗಳ ರೈತರು ಇಲ್ಲಿಂದ ಟ್ಯಾಂಕರ್‌ಗಳಲ್ಲಿ ನೀರು ಕೊಂಡೊಯ್ದು ತೋಟಗಳಿಗೆ ಹರಿಸುತ್ತಾರೆ. ಒಂದು ಟ್ಯಾಂಕರ್ ನೀರು ತುಂಬಿಸಿಕೊಡಲು ₹ 300 ದರ ನಿಗದಿಪಡಿಸಿದ್ದು, ನಿತ್ಯ ಬೆಳಿಗ್ಗೆಯಿಂದ ಸಂಜೆಯವರೆಗೆ ನೀರು ಸಾಗಿಸಲಾಗುತ್ತದೆ.

‘ಡೀಸೆಲ್ ಮೋಟಾರ್ ಇಟ್ಟಿದ್ದು ನಾವೇ ಟ್ಯಾಂಕರ್‌ಗೆ ನೀರು ತುಂಬಿಸಿಕೊಡುತ್ತೇವೆ. ಡೀಸೆಲ್, ಮೋಟಾರ್ ಮತ್ತಿತರ ಖರ್ಚುಗಳಿಗಾಗಿ ₹ 300 ಪಡೆಯುತ್ತಿದ್ದೇವೆ. ನಿತ್ಯ ಸುಮಾರು 10ರಿಂದ 15 ಟ್ರ್ಯಾಕ್ಟರ್‌ಗಳು ನೀರು ಸಾಗಿಸುತ್ತವೆ. ಎಷ್ಟೇ ನೀರು ಹೊರ ತೆಗೆದರೂ ಮತ್ತೆ ಅಷ್ಟೇ ಪ್ರಮಾಣದ ನೀರು ಗುಂಡಿಯಲ್ಲಿ ಸಂಗ್ರಹ ಆಗುತ್ತದೆ’ ಎನ್ನುತ್ತಾರೆ ಹೊಲದ ಮಾಲೀಕರು.

‘ಈ ಪ್ರದೇಶದಲ್ಲಿ ಅಡಿಕೆ, ತೆಂಗು, ಬಾಳೆ, ಹೂ ಹಣ್ಣು, ತರಕಾರಿ ಸೇರಿದಂತೆ ಹೆಚ್ಚಾಗಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತದೆ. ₹300 ಕೊಡುವುದು ಮುಖ್ಯ ಅಲ್ಲ. ಹತ್ತಿರದಲ್ಲೇ ನೀರು ಸಿಗುತ್ತಿರುವುದು ನಮ್ಮ ಪುಣ್ಯ. ಇಲ್ಲಿ ನೀರು ಸಿಗದಿದ್ದರೆ ನಮ್ಮ ತೋಟಗಳೇ ಒಣಗಿ ಹೋಗುತ್ತಿದ್ದವು’ ಎನ್ನುತ್ತಾರೆ ಸುತ್ತಲಿನ ಗ್ರಾಮಗಳ ತೋಟಗಳ ಮಾಲೀಕರು.

‘ಇಲ್ಲಿನ 8 ಎಕರೆ ಜಮೀನು ಮೊದಲು ನಮ್ಮ ಗ್ರಾಮದ ರೈತರೊಬ್ಬರಿಗೆ ಸೇರಿತ್ತು. ಹಿಂದೆ ಈ ಜಮೀನಿನಲ್ಲಿ ಜೌಗು ಇದೆ ಎಂದು ಅವರು ಪಕ್ಕದ ಮದ್ದೇರು ಗ್ರಾಮದ ರೈತರೊಬ್ಬರಿಗೆ ಮಾರಾಟ ಮಾಡಿದ್ದರು. ಮತ್ತೆ ನಮ್ಮ ಅತ್ತೆ ಲಕ್ಷ್ಮೀದೇವಿ ಈ ಜಮೀನು ಖರೀದಿಸಿದ್ದರು. ಈಗ ಜಮೀನಿನಲ್ಲಿ ನೀರು ಸಿಗುತ್ತಿರುವುದರಿಂದ ಅದೃಷ್ಟ ಖುಲಾಯಿಸಿದಂತೆ ಆಗಿದೆ’ ಎನ್ನುತ್ತಾರೆ ರೈತಮಹಿಳೆ ಲಕ್ಷ್ಮೀದೇವಿ ಅವರ ಅಳಿಯ, ಈಚಘಟ್ಟ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ತಿಪ್ಪೇಸ್ವಾಮಿ.

***
ಕುಸಿದ ಅಂತರ್ಜಲ ಹಾಗೂ ವಿದ್ಯುತ್ ಸಮಸ್ಯೆಯಿಂದ ಇಲ್ಲಿನ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಬರಗಾಲದ ಪರಿಸ್ಥಿತಿಯಲ್ಲಿ ಇಲ್ಲಿ ನೀರು ಸಿಕ್ಕಿರುವುದು ಸುತ್ತಲಿನ ರೈತರಿಗೆ ವರದಾನವಾಗಿದೆ.
-ಯು.ಎಸ್.ತಿಪ್ಪೇಸ್ವಾಮಿ
ಈಚಘಟ್ಟ, ಗ್ರಾ.ಪಂ.ಉಪಾಧ್ಯಕ್ಷ

Comments are closed.