ಕರ್ನಾಟಕ

ಕಾಣೆಯಾಗಿರುವ ಗಂಡನನ್ನು ಹುಡುಕಲು ಕೆನಡಾದಿಂದ ಉದ್ಯೋಗ ತೊರೆದುಬಂದ ಬೆಂಗಳೂರಿನ ಮಹಿಳೆ

Pinterest LinkedIn Tumblr

girish-missing
ಬೆಂಗಳೂರು: ಕಾಣೆಯಾಗಿರುವ ತನ್ನ ಪತಿಯನ್ನು ಹುಡುಕಲು 28 ವರ್ಷದ ಮಹಿಳೆಯೊಬ್ಬರು ಕೆನಡಾದಿಂದ ಉದ್ಯೋಗ ತೊರೆದು ಭಾರತಕ್ಕೆ ಮರಳಿದ್ದಾರೆ. ಈಕೆಯ ಪತಿ ಕಳೆದ ತಿಂಗಳು 28ರಿಂದ ಕಾಣೆಯಾಗಿದ್ದಾರೆ.
ಬೆಂಗಳೂರಿನ ದಿವ್ಯಾ ವೆಂಕಟಪ್ಪ ಕೆನಡಾದ ಎಡ್ಮಂಟನ್ ವಿಮಾನ ನಿಲ್ದಾಣದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಅವರ ಪತಿ ಗಿರೀಶ್ ಕೂಡ ಎಡ್ಮಂಟನ್ ನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದರು. ಅವರು ಕಳೆದ ನವೆಂಬರ್ 28ರಂದು ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದರು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ದಿವ್ಯಾ, ನವೆಂಬರ್ 28ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಎಂದಿನಂತೆ ಗಿರೀಶ್ ಕೆಲಸಕ್ಕೆ ಹೋಗಿದ್ದರು. ಆದರೆ ಸಾಯಂಕಾಲ ಮನೆಗೆ ಹಿಂತಿರುಗಿ ಬರಲಿಲ್ಲ. ಕೆನಡಾ ಪೊಲೀಸರಿಗೆ ದೂರು ನೀಡಿದಾಗ ವಿಚಾರಣೆ ನಡೆಸಿದ ಅವರು ತಮ್ಮ ಪತಿ ಭಾರತಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ ಎಂದರು.
ಪೊಲೀಸರ ತನಿಖೆಯಿಂದ ಗಿರೀಶ್ ಸ್ಥಳೀಯ ವಿಮಾನದಲ್ಲಿ ಆಗಮಿಸಿ ಯಾವುದೋ ಸ್ಥಳಕ್ಕೆ ಹೋಗಿದ್ದಾರೆ. ನಂತರ ಅಮ್ಸ್ಟರ್ಡಾಮ್ ಗೆ ಪ್ರಯಾಣಿಸಿ ಅಲ್ಲಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸಿ ಹೋಗಿದ್ದಾರೆ. ನವೆಂಬರ್ 30ಕ್ಕೆ ಜೆಟ್ ಏರ್ ವೇಸ್ ವಿಮಾನದಲ್ಲಿ 12.30ರ ಮಧ್ಯರಾತ್ರಿ ಆಗಮಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಿಂದ ಎಲ್ಲಿಗೆ ಹೋಗಿದ್ದಾರೆ ಎಂಬ ಕುರಿತು ಮಾಹಿತಿಯಿಲ್ಲ.

ಪಶ್ಚಿಮ ವಲಯ ಡಿಸಿಪಿ ಅನುಚೇತ್ ಅವರನ್ನು ಸಂಪರ್ಕಿಸಿದ ದಿವ್ಯಾರಿಗೆ ಚಂದ್ರಾ ಲೇ ಔಟ್ ಪೊಲೀಸರ ಬಳಿ ಕೇಸು ದಾಖಲಿಸುವಂತೆ ಸಲಹೆ ನೀಡಿದ್ದಾರೆ.
ದಿವ್ಯಾ ಅವರ ಕುಟುಂಬದವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈಕೆ 2012ರಲ್ಲಿ ಉನ್ನತ ವ್ಯಾಸಂಗಕ್ಕೆಂದು ಕೆನಡಾಕ್ಕೆ ಹೋಗಿದ್ದರು. ನಂತರ ಅಲ್ಲಿಯೇ ಉದ್ಯೋಗ ದೊರಕಿತು. ಕೆನಡಾದ ಖಾಯಂ ವಾಸ್ತವ್ಯ ದಾಖಲೆಯೂ ಸಿಕ್ಕಿತ್ತು. ಕಳೆದ ವರ್ಷ ನವೆಂಬರ್ 30ರಂದು ಬೆಂಗಳೂರಿನ ಯುಬಿ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಎಂಬುವವರನ್ನು ಮದುವೆಯಾಗಿ ನಂತರ ಕೆನಡಾಕ್ಕೆ ಹೋಗಿದ್ದರು. ಕಳೆದ ಏಪ್ರಿಲ್ ನಿಂದ ಒಟ್ಟಿಗೆ ವಾಸಿಸುತ್ತಿದ್ದ ದಂಪತಿ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ಗಿರೀಶ್ ಮೂಲತಃ ಚಿಕ್ಕಮಗಳೂರಿನ ಕಡೂರಿನವರು. ಅವರಿಗೆ ಕೆನಡಾದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿತ್ತು. ಪುನಃ ಭಾರತಕ್ಕೆ ಹೋಗೋಣವೇ ಎಂದು ನಾನು ಪದೇ ಪದೇ ಕೇಳುತ್ತಿದ್ದೆ. ಆದರೆ ಅವರೇನೂ ಹೇಳಲಿಲ್ಲ. ಅಂತರ್ಮುಖಿಯಾದ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿರಲಿಲ್ಲ ಎಂದು ಬೇಸರದಿಂದ ನುಡಿಯುತ್ತಾರೆ ದಿವ್ಯಾ.
ಪ್ರಾಥಮಿಕ ತನಿಖೆಯಿಂದ ತಿಳಿದುಬಂದ ಅಂಶವೆಂದರೆ, ನವೆಂಬರ್ 28ರಂದು ಬೆಳಗ್ಗೆ ಗಿರೀಶ್ ತನ್ನ ಕಂಪೆನಿಗೆ ಅಸೌಖ್ಯದ ರಜೆ ನೀಡಬೇಕೆಂದು ಇಮೇಲ್ ಮಾಡಿದ್ದರು. ನವೆಂಬರ್ 20ರಂದು ರಾತ್ರಿ ಪತ್ರ ಪಡೆದುಕೊಂಡು ಹೊರಟಿದ್ದರು. ಆ ದಿನ ರಾತ್ರಿ ಕೆಲವು ವಿಮಾನಯಾನ ಸಿಬ್ಬಂದಿ ಅವರನ್ನು ನಿಲ್ದಾಣದಲ್ಲಿ ನೋಡಿದ್ದಾರೆ.
ಗಿರೀಶ್ ನ ಪೋಷಕರು ಕೂಡ ಅವರನ್ನು ಹುಡುಕುತಿದ್ದಾರೆ. ಗಿರೀಶ್ ತನ್ನ ಸ್ನೇಹಿತರು ಮತ್ತು ಸಂಬಂಧಿಕರು ಹೆಚ್ಚು ನೆಲೆಸಿರುವ ಶಿವಮೊಗ್ಗ,ಮಂಗಳೂರು ಅಥವಾ ಬಳ್ಳಾರಿಯಲ್ಲಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇತರ ಮೂಲಗಳಿಂದಲೂ ಅವರ ಹುಡುಕಾಟ ಮುಂದುವರಿದಿದೆ.

Comments are closed.