ಕರ್ನಾಟಕ

ಬೆನ್ನಿಗೆ ಚಾಕು ಚುಚ್ಚಿರುವ ಸಂಗತಿ ಸಾವನ್ನಪ್ಪಿದ ವಿದ್ಯಾರ್ಥಿಗೆ ಗೊತ್ತಾಗಿದ್ದು ಗಂಟೆ ನಂತರ!

Pinterest LinkedIn Tumblr

harsh
ಬೆಂಗಳೂರು: ಪಿಇಎಸ್ ಕಾಲೇಜು ಸಮೀಪದ ವಾಟರ್ ಟ್ಯಾಂಕ್ ಪಾರ್ಕ್‌ ಬಳಿ ದುಷ್ಕರ್ಮಿಗಳು ಡಿಪ್ಲೊಮಾ (ಮೆಕ್ಯಾನಿಕಲ್) ವಿದ್ಯಾರ್ಥಿ ಹರ್ಷ (19) ಎಂಬುವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.

ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಏಕಾಏಕಿ ಹರ್ಷ ಹಾಗೂ ಅವರ ಸ್ನೇಹಿತರ ಜತೆ ಜಗಳ ಪ್ರಾರಂಭಿಸಿದ್ದಾರೆ. ಈ ವೇಳೆ ಒಬ್ಬಾತ, ಕೆಳಗೆ ಬಿದ್ದಿದ್ದ ಹರ್ಷ ಅವರ ಬೆನ್ನಿಗೆ ಇರಿದಿದ್ದಾನೆ. ಬಲವಾಗಿ ಚುಚ್ಚಿದ್ದರಿಂದ ಚಾಕು ಶ್ವಾಸಕೋಶವನ್ನು ಹಾನಿಗೊಳಿಸಿದೆ. ಚಿಕಿತ್ಸೆಗೆ ಸ್ಪಂದಿಸದ ಹರ್ಷ, ರಾತ್ರಿ 12 ಗಂಟೆಗೆ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದರು.

ಗೊತ್ತೇ ಆಗಿರಲಿಲ್ಲ: ಗಲಾಟೆ ಸಮಯದಲ್ಲಿ ಎದುರಾಳಿ ಗುಂಪಿನವರು ತಮ್ಮ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ ಎಂಬ ಸಂಗತಿ ಹರ್ಷ ಅವರಿಗೆ ಗೊತ್ತಾಗಿದ್ದು ಒಂದು ಗಂಟೆಯ ನಂತರ!

‘ಗಲಾಟೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸುತ್ತಿದ್ದಂತೆಯೇ ಆರೋಪಿಗಳು ಪರಾರಿಯಾದರು. ಆದರೆ, ಬೆನ್ನಿಗೆ ಇರಿದಿರುವ ವಿಷಯ ತಿಳಿಯದ ಹರ್ಷ, ಸ್ನೇಹಿತನ ಬೈಕ್‌ ಹತ್ತಿ ಪಿಇಎಸ್ ಕಾಲೇಜು, ಬ್ಯಾಂಕ್‌ ಕಾಲೊನಿ, ಬನಶಂಕರಿ 1ನೇ ಹಂತ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಒಂದು ತಾಸು ಸುತ್ತಾಡಿದ್ದರು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ಮಧ್ಯಾಹ್ನ 2.30ರ ಸುಮಾರಿಗೆ ವಾಪಸ್ ಕಾಲೇಜಿನ ಬಳಿ ಬಂದಾಗ, ಇನ್ನೊಬ್ಬ ಸ್ನೇಹಿತ ಹರ್ಷ ಅವರ ಅಂಗಿ ರಕ್ತಸಿಕ್ತವಾಗಿರುವುದನ್ನು ಕಂಡಿದ್ದಾರೆ. ಆತ ಹೇಳಿದ ಬಳಿಕ ಹರ್ಷ ಅಂಗಿ ಕಳಚಿ ನೋಡಿದಾಗ ದೊಡ್ಡ ಪ್ರಮಾಣದ ಗಾಯವಾಗಿರುವುದು ಗೊತ್ತಾಗಿದೆ. ಕೂಡಲೇ ಅವರು ಸ್ನೇಹಿತರ ಜತೆ ಹನುಮಂತನಗರ 50ಅಡಿ ರಸ್ತೆಯ ಗಣಪತಿ ಕ್ಲಿನಿಕ್‌ಗೆ ಹೋಗಿದ್ದಾರೆ. ಈ ಹಂತದಲ್ಲಿ ಸ್ನೇಹಿತರು ಹರ್ಷ ತಂದೆ ಜಗದೀಶ್ ಅವರಿಗೆ ಕರೆ ಮಾಡಿ ಹೇಳಿದ್ದಾರೆ.

‘ಕ್ಲಿನಿಕ್‌ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಮಧ್ಯಾಹ್ನ 3 ಗಂಟೆಗೆ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಸಂಜೆ ಜಯದೇವ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಶ್ವಾಸಕೋಶಕ್ಕೂ ಹಾನಿಯಾಗಿದ್ದು ಬದುಕುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

‘ಆ ನಂತರ ಜಗದೀಶ್, ರಾತ್ರಿ 11.30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ಮುಟ್ಟಿಸಿದ್ದಾರೆ. ಹೇಳಿಕೆ ದಾಖಲಿಸಿಕೊಳ್ಳಲು ಆಸ್ಪತ್ರೆ ಬಳಿ ತೆರಳುವಷ್ಟರಲ್ಲಿ ಹರ್ಷ ಕೊನೆಯುಸಿರೆಳೆದಿದ್ದಾರೆ. ಹಂತಕರ ಪತ್ತೆಗೆ ಮೂವರು ಇನ್‌ಸ್ಪೆಕ್ಟರ್‌ಗಳ ವಿಶೇಷ ತಂಡಗಳು ರಚನೆಯಾಗಿವೆ’ ಎಂದುತನಿಖಾಧಿಖಾರಿಗಳು ಹೇಳಿದರು.

ತಂದೆ ಚಪಾತಿ ವ್ಯಾಪಾರಿ: ಹರ್ಷ, ಜಗದೀಶ್ ಹಾಗೂ ಲಕ್ಷ್ಮಿ ದಂಪತಿಯ ಹಿರಿಯ ಮಗ. ಈ ಕುಟುಂಬ ಶ್ರೀನಗರ ಸಮೀಪದ ಕಾಳಿದಾಸ ಲೇಔಟ್‌ನಲ್ಲಿ ನೆಲೆಸಿದೆ. ಶ್ರೀನಗರ 58ನೇ ಅಡ್ಡರಸ್ತೆಯಲ್ಲಿ ಮಳಿಗೆ ಹೊಂದಿರುವ ಜಗದೀಶ್, ಚಪಾತಿ ತಯಾರಿಸಿ ನಗರದ ಹೋಟೆಲ್‌ಗಳಿಗೆ ಸರಬರಾಜು ಮಾಡುತ್ತಾರೆ.

ತರಗತಿಗೆ ಹಾಜರಾಗಿರಲಿಲ್ಲ
‘ಮಧ್ಯಂತರ ರಜೆ ಮುಗಿದು ಡಿಸೆಂಬರ್ ಮೊದಲ ವಾರದಲ್ಲಿ ತರಗತಿಗಳು ಪುನರಾರಂಭವಾಗಿದ್ದವು. ಆದರೆ, ರಜೆ ಬಳಿಕ ಹರ್ಷ ತರಗತಿಗೆ ಹಾಜರಾಗಿರಲಿಲ್ಲ’ ಎಂದು ಕಾಲೇಜು ಆಡಳಿತ ಮಂಡಳಿಯವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

‘ಹಾಜರಾತಿ ಕಡಿಮೆ ಇರುವುದರಿಂದ ದಂಡ ಕಟ್ಟಬೇಕು ಎಂದು ಹೇಳಿದ್ದ ಮಗ, ಬೆಳಿಗ್ಗೆ ಹಣ ಪಡೆದುಕೊಂಡು ಕಾಲೇಜಿಗೆ ತೆರಳಿದ್ದ’ ಎಂದು ಮೃತರ ಪೋಷಕರು ಹೇಳಿಕೆ ಕೊಟ್ಟಿದ್ದಾಗಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡು ಗಲಾಟೆಗಳು
‘4 ದಿನಗಳ ಹಿಂದೆ ಬ್ಯಾಟರಾಯನಪುರದ ಮೈದಾನವೊಂದರಲ್ಲಿ ಕ್ರಿಕೆಟ್ ಆಡುವಾಗ ಹರ್ಷ ಸ್ಥಳೀಯ ಹುಡುಗರ ಜತೆ ಗಲಾಟೆ ಮಾಡಿಕೊಂಡಿದ್ದರು. ಎರಡು ದಿನಗಳ ಹಿಂದೆ ಜಯನಗರದ ಸೌತ್‌ ಎಂಡ್‌ ವೃತ್ತದಲ್ಲೂ ಕೆಲ ಯುವಕರ ಜತೆ ಜಗಳವಾಡಿದ್ದರು. ಅನುಮಾನದ ಮೇಲೆ ಆ ಹುಡುಗರನ್ನು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ನಡೆದಾಗ ಹರ್ಷ ಅವರ ಜತೆಗಿದ್ದ ಸ್ನೇಹಿತರಿಂದಲೂ ಹೇಳಿಕೆ ಪಡೆಯಲಾಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Comments are closed.