ಕರ್ನಾಟಕ

ಶಿಕ್ಷಣದ ಅಸಮಾನತೆ ನಿವಾರಣೆಗೆ 82 ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬರಗೂರರ ಪಂಚಸೂತ್ರ

Pinterest LinkedIn Tumblr
CM Siddaramaiah inaugurated 82nd All India Kannada Sahitya Sammelana in Raichur on Friday. Sammelana President Baraguru Ramachandrappa and others are seen. –KPN ### Raichur: 82 sahitya sammelana
CM Siddaramaiah

ಶಾಂತರಸ ಪ್ರಧಾನ ವೇದಿಕೆ, (ರಾಯಚೂರು), ಡಿ. ೨- ಶಿಕ್ಷಣದಲ್ಲಿನ ಅಸಮಾನತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನಾಧ್ಯಕ್ಷ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ತರಲು ಪಂಚಸೂತ್ರಗಳನ್ನು ರಾಜ್ಯದ ಮುಂದಿಟ್ಟಿದ್ದಾರೆ.

* ಶಿಕ್ಷಣದ ಅಸಮಾನತೆ ನಿವಾರಣೆಗೆ ಬರಗೂರರ ಪಂಚಸೂತ್ರ.

* ಸಮಾನ ಶಿಕ್ಷಣ ನೀತಿಗಾಗಿ ಆಂದೋಲನ ನಡೆಸಲು ಕರೆ.

* ಕಸಾಪ ನಾಯಕತ್ವ ವಹಿಸಿಕೊಳ್ಳಲು ಸಮ್ಮೇಳನಾಧ್ಯಕ್ಷರ ಸೂಚನೆ.

* ಅಂಗನವಾಡಿಯಿಂದ ಪ್ರೌಢಶಾಲೆವರೆಗೆ ಅವೈಜ್ಞಾನಿಕ ಶಿಕ್ಷಣ ಪದ್ಧತಿ.

* ಹಸುಗೂಸುಗಳ ಮನಸ್ಸಿನಲ್ಲೇ ಮೇಲರಿಮೆ, ಕೀಳರಿಮೆ ಕಳೆ.

* ಬಡವರಿಗೊಂದು, ಬಲ್ಲಿದರಿಗೊಂದು ಶಾಲೆಗಳು.

* ಕೆಲ ಮಕ್ಕಳಿಗೆ, ಸುಸಜ್ಜಿತ ಶಾಲೆ, ಮತ್ತೆ ಕೆಲ ಮಕ್ಕಳಿಗೆ ಸೋರುವ ಸೂರಿನ ಶಾಲೆಗಳು.

* ಗ್ರಾಮ ಪಂಚಾಯಿತಿಗೊಂದು ಸುಸಜ್ಜಿತ ಶಾಲೆ ಸ್ಥಾಪನೆಗೆ ಆಗ್ರಹ.

* ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ ಪರಿಕಲ್ಪನೆಗೆ ಒತ್ತಾಯ.

* ಉನ್ನತ ಶಿಕ್ಷಣದಲ್ಲೂ ಅಸಮಾನತೆ ಅರಾಜಕತೆ.

* ಕಂಪ್ಯೂಟರ್, ಲ್ಯಾಪ್‌ಟಾಪ್ ಬಳಕೆಗೆ ಬರಗೂರರ ಆಕ್ರೋಶ.

* ತಂತ್ರಜ್ಞಾನ ತರಗತಿಯಾಗಬೇಕು, ಗುರುವಾಗಬಾರದು.

ಬಿಸಿಲೂರಿನ ರಾಯಚೂರಿನಲ್ಲಿ ನಡೆದಿರುವ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಭಾಷಣ ಮಾಡಿದ ಅವರು, ಶಿಕ್ಷಣ ಪದ್ಧತಿಯಲ್ಲಿ ಸಮಾನತೆ ತರಲು ಐದು ಅಂಶಗಳನ್ನು ಪ್ರಸ್ತಾಪಿಸಿರುವ ಸಮ್ಮೇಳನಾಧ್ಯಕ್ಷರು ಪ್ರತಿ ಗ್ರಾಮ ಪಂಚಾಯಿತಿಗೊಂದು ಸುಸಜ್ಜಿತ ಹಾಗೂ ಸಕಲ ಸೌಲಭ್ಯವುಳ್ಳ ಏಕರೂಪದ ಮಾದರಿ ಶಾಲೆಗಳನ್ನು ಸ್ಥಾಪಿಸಬೇಕು. ಇದು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಒಳಗೊಂಡಿರಬೇಕು. ಉಳಿದ ಹಳ್ಳಿಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಕಿರಿಯ ಪ್ರಾಥಮಿಕ ಶಾಲೆಗಳಾಗಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿಗೆ ಇರುವ ಶಾಲೆಗೆ ಹತ್ತಿರದ ಊರುಗಳಿಂದ ಮಕ್ಕಳು ಬರಲು ಶಾಲಾ ವಾಹನಗಳ ವ್ಯವಸ್ಥೆ ಮಾಡಬೇಕು. ನಗರ ಪಟ್ಟಣಗಳಲ್ಲಿ ಪ್ರತಿ ವಾರ್ಡ್‌ಗೆ ಒಂದು ಇಂತಹ ಶಾಲೆ ಸ್ಥಾಪಿಸಬೇಕು. ಶಿಕ್ಷಣ ಇಲಾಖೆ ಇದರ ಹೊಣೆ ಹೊತ್ತುಕೊಂಡು ಸಮರೋಪಾದಿಯಲ್ಲಿ ಸಮಾನ ಶಿಕ್ಷಣದ ಬುನಾದಿ ಹಾಕಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದರು.

ಕನ್ನಡವನ್ನು ಒಳಗೊಂಡಂತೆ ಮಾತೃಭಾಷೆ ಶಾಲೆಗಳಲ್ಲಿ ಇಂಗ್ಲಿಷ್ ಒಂದನೇ ತರಗತಿಯಿಂದಲೇ ಒಂದು ಕಡ್ಡಾಯ ವಿಷಯವಾಗಬೇಕು. ಕನ್ನಡೇತರ ಶಾಲೆಗಳಲ್ಲಿ ಕನ್ನಡ ಒಂದು ಕಡ್ಡಾಯ ವಿಷಯವಾಗಬೇಕು ಎಂದು ತಿಳಿಸಿದರು.

ಬಹುಮುಖ್ಯವಾಗಿ ಸರ್ಕಾರವು ಪ್ರಾಥಮಿಕ ಪೂರ್ವ ಶಾಲೆಗಳನ್ನು ಸ್ಥಾಪಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗಲೇ ಅಂಗನವಾಡಿಗಳನ್ನು ಪ್ರಾಥಮಿಕ ಪೂರ್ವ ಶಾಲೆಗಳಾಗಿ ರೂಪಾಂತರಿಸಿ ಕ್ರಮಬದ್ಧಗೊಳಿಸುವಂತೆ ಮಾಡಿದ ಶಿಫಾರಸಿಗೆ ಅಂದಿನ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು ಎಂದು ಹೇಳಿದ ಡಾ. ಬರಗೂರು ರಾಮಚಂದ್ರಪ್ಪ, ಎಲ್.ಕೆ.ಜಿ, ಯು.ಕೆ.ಜಿ. ಯಂತೆ ಪ್ರಾಥಮಿಕ ಪೂರ್ವ ಶಾಲೆಗಳನ್ನು ಆರಂಭಿಸಿ ಅನಂತರ ಒಂದನೇ ತರಗತಿಯಿಂದ ಮಾತೃಭಾಷೆ ಅಥವಾ ರಾಜ್ಯ ಭಾಷಾ ಮಾಧ್ಯಮದ ಜೊತೆಗೆ ಇಂಗ್ಲಿಷನ್ನೂ ಒಂದು ಭಾಷೆಯಾಗಿ ಕಲಿಸಿದರೆ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಾಕಷ್ಟು ಕೊಡುಗೆ ನೀಡಿದಂತಾಗುತ್ತದೆ.

ಎಲ್.ಕೆ.ಜಿ, ಯು.ಕೆ.ಜಿ. ಮತ್ತು ಸರ್ಕಾರಿ ಪ್ರಾಥಮಿಕ ಪೂರ್ವ ಶಾಲೆಗಳಿಗೆ ಏಕರೂಪದ ಹೊಸ ಕಾಯಿದೆ ರೂಪಿಸಬೇಕು ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

ಮಾತೃಭಾಷೆ ಅಥವಾ ರಾಜ್ಯ ಭಾಷಾ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರುವ ಸಂಬಂಧ ಸಂವಿಧಾನ ತಿದ್ದುಪಡಿಗೆ ಒತ್ತಾಯ ಮತ್ತು ಹೋರಾಟಕ್ಕೆ ಅಣಿಯಾಗುವುದರ ಜೊತೆಜೊತೆಗೆ ಯಾವುದೇ ಭಾಷಾ ಮಾಧ್ಯಮದ ಶಾಲೆಗಳಲ್ಲಿ ಕನ್ನಡದ ಪರಿಸರವನ್ನು ನಿರ್ಮಾಣ ಮಾಡುವ ಕುರಿತು ಪರ್ಯಾಯ ಮಾರ್ಗಗಳನ್ನು ಶೋಧಿಸಬೇಕು.

ಖಾಸಗಿ ಶಿಕ್ಷಣ ಸಂಸ್ಥೆಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದೂ ಕೂಡ ತಿಳಿಸಿದರು. ಪ್ರಾಥಮಿಕ ಶಿಕ್ಷಣದಲ್ಲಿ ವಿಷಯವಾರು ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು. ಪ್ರಾಥಮಿಕ ಶಿಕ್ಷಣವನ್ನು ಅನಗತ್ಯ ಪ್ರಯೋಗಗಳ ಬಲಿಪೀಠದ ಮೇಲೆ ಪ್ರತಿಷ್ಠಾಪಿಸಬಾರದು ಎಂದು ಹೇಳಿರುವ ಬರಗೂರು ರಾಮಚಂದ್ರಪ್ಪ, ಶಾಲೆಗಳಲ್ಲಿ ಕಲಿಸುವ ವ್ಯಾಕರಣದ ಬಗ್ಗೆ ಮರುಚಿಂತನೆ ನಡೆಸಿ `ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ’ ಎಂಬ ಪರಿಕಲ್ಪನೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.

ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣಕ್ಕೆ ಒತ್ತು ನೀಡದ ಹೊರತು ಶಿಕ್ಷಣದ ಅಸಮಾನತೆ ತೊಲಗುವುದಿಲ್ಲ ಎಂದು ಬರಗೂರರು ಹೇಳಿದ್ದಾರೆ.

ಪ್ರಸ್ತುತ ಶಿಕ್ಷಣ ಪದ್ಧತಿಯಲ್ಲಿ ಅಸಮಾನತೆ ತಾಂಡವವಾಡುತ್ತಿದೆ. ಶೈಕ್ಷಣಿಕ ವ್ಯವಸ್ಥೆಯ ಒಡಲೊಳಗೆ ಅಸಮಾನತೆಯ ಆಯಾಮವನ್ನು ಇಟ್ಟುಕೊಂಡು ಮೇಲು – ಕೀಳರಿಮೆ ಇರುವ ಈ ಅವೈಜ್ಞಾನಿಕ ಪದ್ಧತಿ ರದ್ಧಾಗಬೇಕು. ಸಮಾನ ಶಿಕ್ಷಣ ನೀತಿಗಾಗಿ ದೊಡ್ಡ ಮಟ್ಟದ ಆಂದೋಲನವೇ ನಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ ಇದಕ್ಕೆ ಪ್ರೇರಕ ಶಕ್ತಿಯಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ಸಮಾನ ಶಿಕ್ಷಣ ನೀತಿಗಾಗಿ ನಡೆಯುವ ಆಂದೋಲನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು, ಸಾಮಾಜಿಕ ಚಿಂತಕರು, ವಿವಿಧ ಸಂಘಟನೆಗಳ ಚಳವಳಿಗಾರರು ಒಂದಾಗಿ ಈ ಚಳವಳಿಯನ್ನು ಮುನ್ನಡೆಸಬೇಕು ಎಂದು ಹೇಳಿದ್ದಾರೆ.

ಇವತ್ತಿನ ಶಿಕ್ಷಣ ಪದ್ಧತಿ ಪ್ರಕಾರ ಅಂಗನವಾಡಿಯಿಂದಲೇ ಅಸಮಾನತೆ ಆರಂಭವಾಗುತ್ತದೆ. ಒಂದೇ ವಯಸ್ಸಿನ ಹಸುಗೂಸುಗಳಲ್ಲಿ ಬಡ ಮಕ್ಕಳು ಅಂಗನವಾಡಿಗೆ ಬರುತ್ತಾರೆ. ಇತರರು ಎಲ್.ಕೆ.ಜಿ, ಯು.ಕೆ.ಜಿ. ಗೆ ಹೋಗುತ್ತಾರೆ. ಇಲ್ಲಿಂದಲೇ ಹಸುಗೂಸುಗಳ ಮನಸ್ಸಿನಲ್ಲಿ ಕೀಳರಿಮೆ ಮತ್ತು ಮೇಲರಿಮೆಗಳ ಕಳೆಯನ್ನು ಬೆಳೆಯುವ ಪದ್ಧತಿ ಅಮಾನವೀಯವಾದುದು ಎಂದು ತಮ್ಮ ಸಮ್ಮೇನಾಳಾಧ್ಯಕ್ಷರ ಭಾಷಣದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕ ಶಾಲೆಯಲ್ಲೂ ಇಂತಹದೇ ಪರಿಸ್ಥಿತಿ ಇದೆ. ಬಡವರಿಗೊಂದು, ಬಲ್ಲಿದರಿಗೊಂದು ಎಂಬಂತೆ ಸರ್ಕಾರಿ ಶಾಲೆ, ಖಾಸಗಿ ಶಾಲೆ, ಕನ್ನಡ ಅಥವಾ ಮಾತೃಭಾಷಾ ಮಾಧ್ಯಮ, ಆಂಗ್ಲ ಭಾಷಾ ಮಾಧ್ಯಮ ಎಂಬ ಶಿಕ್ಷಣ ವಿಧಾನವು ಅಸಮಾನತೆಯಿಂದ ಹೊರತಾಗಿಲ್ಲ ಎಂದು ಹೇಳಿದ್ದಾರೆ.

ಪ್ರೌಢಶಾಲೆಗೆ ಬಂದರೂ ಇದೇ ಹಾದಿಯ ಜೊತೆಗೆ ಮಾದರಿ ಶಾಲೆಗಳೆಂಬ ಪ್ರತ್ಯೇಕ ವ್ಯವಸ್ಥೆ ಇದೆ. ಮೊರಾರ್ಜಿ ಶಾಲೆ, ರಾಣಿ ಚನ್ಮಮ್ಮ ಶಾಲೆ, ಕೇಂದ್ರದ ನವೋದಯ ಶಾಲೆ ಹೀಗೆ ಕೆಲವರಿಗೆ ಸುಸಜ್ಜಿತ ಮಾದರಿ ಶಾಲೆಗಳು, ಅನೇಕರಿಗೆ ಅದೇ ಹಳೆಯ ಸೋರುವ ಸೂರಿನ ಶಾಲೆಗಳು ಇವೆ ಎಂದು ಇಡೀ ಶಿಕ್ಷಣ ವ್ಯವಸ್ಥೆಯ ಬಗ್ಗೆ ತರಾಟೆಗೆ ತೆಗೆದುಕೊಂಡರು.

ಉನ್ನತ ಶಿಕ್ಷಣದ ಬಗ್ಗೆಯೂ ತಮ್ಮ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಪ್ರಸ್ತಾಪಿಸಿರುವ ಅವರು, ಇಲ್ಲಿಯೂ ಅಸಮಾನತೆ ಅರಾಜಕತೆಗಳಿವೆ. ಆಡಳಿತಾತ್ಮಕ ಸುಧಾರಣೆಗಳನ್ನೇ ಶೈಕ್ಷಣಿಕ ಸುಧಾರಣೆಗಳೆಂದು ಭ್ರಮಿಸಿದವರ ಬೌದ್ಧಿಕ ರಾಜಕಾರಣಕ್ಕೆ ಉನ್ನತ ಶಿಕ್ಷಣವೇ ಬಲಿಯಾಗುತ್ತಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಒಂದೇ ಕಾಯಿದೆ ಜಾರಿಗೊಳಿಸುವುದು ಅತ್ಯಂತ ಅಪಾಯಕಾರಿ ಆಲೋಚನೆ ಎಂದು ಅವರು ಸರ್ಕಾರದ ನೀತಿಯ ಬಗ್ಗೆ ಎಚ್ಚರಿಕೆ ನೀಡಿದರು.

ಉನ್ನತ ಶಿಕ್ಷಣದಲ್ಲಷ್ಟೇ ಅಲ್ಲ, ಪ್ರಾಥಮಿಕ ಪ್ರೌಢಶಿಕ್ಷಣದಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸುವ ಪ್ರಯತ್ನಗಳು ನಡೆದಿವೆ. ತರಗತಿಗಳಲ್ಲಿ ತಂತ್ರಜ್ಞಾನವು ಪೂರಕವಾಗಿರಬೇಕೆ ಹೊರತು ತಂತ್ರಜ್ಞಾನವೇ ತರಗತಿಯಾಗಬಾರದು ಗುರುವಾಗಬಾರದು. ಗುರುವಿಗೆ ಸಹಾಯಕ ಮಾತ್ರವಾಗಿರಬೇಕು ಎಂದು ಹೇಳಿದ್ದಾರೆ.

ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಮೂಲಕ ಪಾಠಗಳನ್ನು ರವಾನಿಸುವ ಯೋಜನೆ ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಕಡಿದು ಹಾಕುತ್ತದೆ. ಇದರಿಂದ ಕಂಪನಿಗಳಿಗೆ ಲಾಭದಾಯಕವಾಗುತ್ತದೆ. ಅಂದ ಮಾತ್ರಕ್ಕೆ ನಾನು ತಂತ್ರಜ್ಞಾನ ವಿರೋಧಿಯಲ್ಲ. ನನ್ನ ದೃಷ್ಟಿಯಲ್ಲಿ ತಂತ್ರಜ್ಞಾನವು ಜ್ಞಾನವಾಗಬೇಕೆ ಹೊರತು ಉದ್ಯಮದ ತಂತ್ರ ಮಾತ್ರವಾಗಬಾರದು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಜಡಗೋಡೆ ನಿರ್ಮಾಣವಾಗಬಾರದು, ಯಾಂತ್ರಿಕವೂ ಆಗಬಾರದು ಎಂದು ಅಭಿಪ್ರಾಯಪಟ್ಟರು.

Comments are closed.