ಕರ್ನಾಟಕ

ನಾಡಾ ಚಂಡಮಾರುತದಿಂದಾಗಿ ಶಾಲಾ – ಕಾಲೇಜುಗೆ ರಜೆ ಘೋಷಣೆ : ಅರೆಸೇನಾಪಡೆ, ಅಗ್ನಿಶಾಮಕದಿಂದ ಸಾರ್ವಜನಿಕರ ರಕ್ಷಣೆಗೆ ಸನ್ನದ್ಧ

Pinterest LinkedIn Tumblr

cyclone_images

ಚೆನ್ನೈ, : ತಮಿಳುನಾಡು ಕರಾವಳಿ ಮೇಲೆ ನಾಡಾ ಚಂಡಮಾರುತ ಅಪ್ಪಳಿಸಿದೆ. ರಾಜ್ಯದ ಹಲವೆಡೆ ಬೆಳಗ್ಗೆಯಿಂದಲೇ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವರುಣನ ರುದ್ರನರ್ತನದಿಂದ ಜನರು ಕಂಗಾಲಾಗಿದ್ದಾರೆ. ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡಿನ ದಕ್ಷಿಣ ಭಾಗದಲ್ಲಿರುವ ನಾಗಪಟ್ಟಣಂ, ತಂಜಾವೂರು, ಮಧುರಂತಕಂ, ಮೇಲ್‍ಮರವೂತ್ತೂರು, ತಿರುವಾಯೂರು, ಕಡಲೂರು ಮೊದಲಾದ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಪುದುಚೇರಿಯಲ್ಲೂ ಸಹ ವರುಣನ ಆರ್ಭಟ ಮುಂದುವರೆದಿದೆ. ಸಮುದ್ರದಲ್ಲಿ ಬಿರುಗಾಳಿಯೊಂದಿಗೆ ದೊಡ್ಡ ಅಲೆಗಳು ಕಂಡುಬಂದಿವೆ. ತಮಿಳುನಾಡಿನ ಮೇಲೆ ಅಪ್ಪಳಿಸಿರುವ ನಾಡಾ ಚಂಡಮಾರುತದಿಂದ ಆಂಧ್ರಪ್ರದೇಶ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ತಮಿಳುನಾಡಿನ ವಿವಿಧೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಂಡಮಾರುತದ ಭೀತಿಯಿಂದಾಗಿ ಕರಾವಳಿ ಭಾಗದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭಾರೀ ಮಳೆಯಿಂದಾಗಿ ಸಂಭವಿಸಬಹುದಾದ ಪರಿಸ್ಥಿತಿಯನ್ನು ಎದುರಿಸಿಲು ರಾಜ್ಯವಾಪಿ ಕಟ್ಟೆಚ್ಚರ ವಹಿಸಲಾಗಿದೆ.

ಅರೆಸೇನಾಪಡೆಗಳು, ಅಗ್ನಿಶಾಮಕ ಸಿಬ್ಬಂದಿ ಸಾರ್ವಜನಿಕರ ರಕ್ಷಣೆಗೆ ಸನ್ನದ್ಧರಾಗಿದ್ದಾರೆ. ಭಾರೀ ಬಿರುಗಾಳಿಯೊಂದಿಗೆ ತಮಿಳುನಾಡು ಮತ್ತು ಪುದುಚೇರಿ ಮೇಲೆ ನಾಡಾ ಚಂಡಮಾರುತ ಅಪ್ಪಳಿಸಲಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.

Comments are closed.