ಕರ್ನಾಟಕ

ದೇವರ ಹುಂಡಿಯಲ್ಲಿ ಕುಟುಂಬ ವಿಚಾರ, ಅನೈತಿಕ ಸಂಬಂಧ, ವಿರಹ ವೇದನೆಯ ಪತ್ರಗಳು

Pinterest LinkedIn Tumblr

devaruಬೆಂಗಳೂರು: ದೇವರ ಹುಂಡಿಗೆ ಐನೂರು ಸಾವಿರ ರೂಪಾಯಿಯ ಕಂತೆ ಕಂತೆ ಹಾಕ್ತಿರೋದೆ ದೊಡ್ಡ ಸುದ್ದಿಯಾಗ್ತಿದೆ. ಆದ್ರೆ ದೇವರ ಹುಂಡಿಯಲ್ಲಿ ಭಕ್ತರು ಹಾಕುವ ಚಿತ್ರ ವಿಚಿತ್ರ ಬೇಡಿಕೆಯ ಪತ್ರಗಳು ಮುಜರಾಯಿ ಇಲಾಖೆಯವರನ್ನ, ಅರ್ಚಕರನ್ನ ಆಶ್ಚರ್ಯಚಕಿತರನ್ನಾಗಿ ಮಾಡಿದೆ.

ಹೌದು. ಸಿಲಿಕಾನ್ ಸಿಟಿಯಲ್ಲಿರುವ ಬನಶಂಕರಿ ದೇವಿ ದೇವಸ್ಥಾನದಲ್ಲಿ ಇಂತಹ ಚಿತ್ರ ವಿಚಿತ್ರ ಬೇಡಿಕೆಗಳಿರುವ ಪತ್ರಗಳು ಹುಂಡಿಗೆ ಬಿದ್ದಿವೆ. ಐನೂರು ಸಾವಿರ ರೂ. ನೋಟು ನಿಷೇಧದ ನಂತರ ತರಾತುರಿಯಲ್ಲಿ ಹುಂಡಿ ತೆರೆಯುತ್ತಿರುವ ಮುಜರಾಯಿ ಇಲಾಖೆ ಹಾಗೂ ದೇಗುಲದ ಸಿಬ್ಬಂದಿಗೆ ಈಗ ಐನೂರು ಸಾವಿರ ಕಂತೆ ಕಂತೆಯ ಮಧ್ಯೆ ಭಕ್ತರ ಪತ್ರಗಳ ಕಾಟ ಶುರುವಾಗಿದೆ. ಕುಟುಂಬ ವಿಚಾರ, ಅನೈತಿಕ ಸಂಬಂಧ, ವಿರಹ ವೇದನೆಯಿಂದ ಹಿಡಿದು ಪಾರ್ಕಿಂಗ್ ಶುಲ್ಕದ ಬಗ್ಗೆನೂ ಪತ್ರ ಬರೆದಿದ್ದು, ಅಧಿಕಾರಿಗಳೇ ಬೇಸ್ತು ಬಿದ್ದಿದ್ದಾರೆ.
ನನ್ನ ಗಂಡನಿಗೆ ಫೋನು, ಮೆಸೇಜ್ ಮಾಡ್ತಾಳೆ: `ನೋಡಮ್ಮ ಈ ಹುಡ್ಗಿ ಫೋಟೋನೂ ಇಟ್ಟಿದ್ದೀನಿ ಜೊತೆಗೆ. ಸಾಕಷ್ಟು ವರ್ಷದಿಂದ ನನ್ನ ಗಂಡನಿಗೆ ಫೋನು ಮೆಸೇಜ್ ಮಾಡ್ತಿದ್ದಾಳೆ. ದಯವಿಟ್ಟು ನನ್ನ ಗಂಡನಿಂದ ಈ ರಾಕ್ಷಸಿಯನ್ನು ದೂರ ಮಾಡು ತಾಯಿ. ನನ್ನ ಗಂಡನಿಗೆ ಒಳ್ಳೆ ಬುದ್ಧಿ ಕೊಡವ್ವ. ಅವಳ ಫೋನು ಮೆಸೇಜ್ ಬರದ ಹಾಗೆ ನೋಡ್ಕೋ’ ಅಂತ ಮಹಿಳೆಯೊಬ್ಬರು ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ.

ಮಾಂಗಲ್ಯ ಕಾಣಿಕೆ: ಮತ್ತೊಂದು ಪತ್ರದಲ್ಲಿ, `ಅಮ್ಮ ನಿನ್ನನ್ನೇ ನಂಬಿದ್ದೇನೆ. ನನ್ನ ಗಂಡ ಇನ್ನುಂದೆ ನಾನು ಹೇಳಿದ್ದನ್ನೇ ಮಾಡ್ಬೇಕು. ಹಂಗಾದ್ರೆ ನಿಂಗೆ ಮಾಂಗಲ್ಯ ಕಾಣಿಕೆಯಾಗಿ ಹಾಕುತ್ತೇನೆ’ ಅಂತ ಬರೆದಿದ್ದಾರೆ.

ಪಾರ್ಕಿಂಗ್ ಶುಲ್ಕದ ಕಾಟ: `ಅಮ್ಮಾ ಎಲ್ಲಿ ಹೋದರೂ ಪಾರ್ಕಿಂಗ್ ಶುಲ್ಕದ ಕಾಟ. ನಿನ್ನ ಸನ್ನಿಧಿಯಲ್ಲಿ ಪಾರ್ಕಿಂಗ್‍ಗೆ ದುಡ್ಡು ತಗೋತಾರೆ. ಅವ್ರಿಗೆಲ್ಲಾ ಕೆಟ್ಟದು ಮಾಡಮ್ಮ. ಪಾರ್ಕಿಂಗ್‍ಗೆ ಯಾರು ದುಡ್ಡು ತೆಗೆದುಕೊಳ್ಳದ ಹಾಗೆ ಮಾಡು ತಾಯಿ’ ಅಂತ ಪಾರ್ಕಿಂಗ್ ಶುಲ್ಕ ಕಟ್ಟಿ ಬೇಸತ್ತ ವ್ಯಕ್ತಿಯೊಬ್ಬರು ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾರೆ.

ಮಂಜುಗೆ ಕಾವ್ಯ ನೆನಪು: `ಮಂಜು ವೆಡ್ಸ್ ಕಾವ್ಯ. ಇಬ್ಬರು ಒಟ್ಟಿಗೆ ಇರುವಂತೆ ಮಾಡು. ಅವಳ ಮನಸಿನಲ್ಲಿ ಮಂಜು ಇರಲಿ. ಮಂಜುಗೂ ಕಾವ್ಯ ಬಗ್ಗೆ ಅನುಮಾನ ಬಾರದೇ ಇರಲಿ. ನಾಗರಭಾವಿಯಲ್ಲಿ ನಮ್ಮದು ಲವ್ವಾಯ್ತು. ಈಗ ಕಟ್ ಆಗಿದೆ. ಕಾವ್ಯಳ ನೆನಪು. ಅವಳು ಮಂಜುಗೆ ಫೋನ್, ಮೆಸೇಜ್ ಮಾಡಲಿ’ ಎಂದು ಗೆಳತಿಯಿಂದ ದೂರವಾದ ವ್ಯಕ್ತಿಯೊಬ್ಬ ಪತ್ರ ಬರೆದಿದ್ದಾನೆ

ಸರ್ಕಾರಿ ಕೆಲ್ಸ ಇರೋ ಗಂಡನೇ ಬೇಕು: `ಬನಶಂಕರಿಯಮ್ಮ ನಂಗೆ ಸರ್ಕಾರಿ ಹುದ್ದೆಯ ಗಂಡನೇ ಸಿಗುವ ಹಾಗೆ ಮಾಡು. ಹಂಗೇ ಮಾಡಿದ್ರೆ ನಿಂಗೆ ಒಳ್ಳೆ ಸೀರೆ ಕೊಡಿಸುತ್ತೇನೆ’ ಅಂತ ಪತ್ರ ಬರೆದಿದ್ದಾರೆ.

ಹೀಗೆ, ಭಕ್ತರು ಅವರಿಗಿಷ್ಟ ಬಂದಿದ್ದನ್ನು ಪತ್ರದ ಮುಖಾಂತರ ಬರೆದು ಹಾಕೋದು ಜಾಸ್ತಿಯಾಗಿದೆ. ಅದಕ್ಕೆ ಈ ಪರಿ ಪತ್ರ ಬರುತ್ತಿದೆ ಅಂತಾರೆ ಮುಜರಾಯಿಯವರು. ಇನ್ನು ಕೆಲವು ಮಹಿಳೆಯರು ಬೇಡಿಕೆ ಈಡೇರಿದೆ ಅಂತಾ ಪತ್ರ ಬರೆದು ಆರವತ್ತರಿಂದ ಎಪ್ಪತ್ತು ಗ್ರಾಂ ತೂಕದ ಆಭರಣವನ್ನು ಹಾಕಿದ್ದಾರೆ.

ಒಟ್ಟಿನಲ್ಲಿ ದೇವರಿಗೆ ಬರೆದ ಕಾಗದ ದೇವರಿಗೆ ತಲುಪುತ್ತೋ ಇಲ್ವೋ. ಆದ್ರೇ ಬರೆದವರಿಗೆ ದೇವರವ್ನೆ ಬಿಡು ಗುರು ಅಂತಾ ತಮ್ಮ ಮನಸಿನ ಭಾವನೆ ಹಂಚಿಕೊಂಡ ನೆಮ್ಮದಿ ಸಿಗಬಹುದೇನೊ.

Comments are closed.