ಕರ್ನಾಟಕ

ಹೊಸ ₹500ರ ಕೆಲವು ನೋಟುಗಳಲ್ಲಿ ಮುದ್ರಣ ಶೇಡ್‌

Pinterest LinkedIn Tumblr

tappuagalu-finalಬೆಂಗಳೂರು: ಹಳೆಯ ನೋಟುಗಳ ರದ್ದತಿಯ ಬಳಿಕ ಆರ್‌ಬಿಐ ಚಲಾವಣೆಗೆ ತಂದಿರುವ ಹೊಸ ₹500 ಮುಖಬೆಲೆಯ ಕೆಲವು ನೋಟುಗಳಲ್ಲಿ ಮುದ್ರಣ ದೋಷ ಕಂಡುಬಂದಿದೆ. ನೋಟಿನ ಸಂಖ್ಯೆಯ ಸ್ಥಾನ ಬದಲಾಗಿರುವುದು, ಮಹಾತ್ಮ ಗಾಂಧಿ ಚಿತ್ರ ಅಲುಗಿರುವುದು, ರಾಷ್ಟ್ರಲಾಂಛನ ಪಕ್ಕಕ್ಕೆ ಸರಿದಿರುವುದು ಸೇರಿದಂತೆ ಹಲವು ದೋಷಗಳು ಕಾಣಿಸಿಕೊಂಡಿವೆ.

‘ಹೆಚ್ಚಿನ ಸಂಖ್ಯೆಯಲ್ಲಿ ನೋಟು ಮುದ್ರಣ ಮಾಡುತ್ತಿರುವುದರಿಂದ ಈ ದೋಷಗಳು ಉಂಟಾಗಿವೆ. ಈ ನೋಟುಗಳನ್ನೂ ಜನ ಚಲಾವಣೆ ಮಾಡಬಹುದು. ಇಲ್ಲವೇ ಅವನ್ನು ಆರ್‌ಬಿಐ ಶಾಖೆಗಳಲ್ಲಿ ವಾಪಸ್‌ ನೀಡಿ, ಬೇರೆ ನೋಟುಗಳನ್ನು ಪಡೆಯಬಹುದು’ ಎಂದು ಆರ್‌ಬಿಐ ವಕ್ತಾರೆ ಅಲ್ಪನಾ ಕಲ್ಲಿವಾಲಾ ತಿಳಿಸಿದ್ದಾರೆ.

‘ಪಾಕಿಸ್ತಾನದಲ್ಲಿ ನೋಟುಗಳನ್ನು ಮುದ್ರಿಸುವ ವ್ಯವಸ್ಥಿತ ಜಾಲವೇ ಇದೆ. ಮುದ್ರಣ ದೋಷವಿರುವ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಬೇಕು. ಇಲ್ಲವಾದರೆ ನಕಲಿ ನೋಟುಗಳ ಹಾವಳಿ ಹೆಚ್ಚಲಿದೆ’ ಎನ್ನುತ್ತಾರೆ ಗೃಹ ಇಲಾಖೆಯ ನಿವೃತ್ತ ಕಾರ್ಯದರ್ಶಿ ಜಿ.ಕೆ.ಪಿಳ್ಳೈ.

‘ಮುದ್ರಣ ದೋಷವಿರುವ ಎಲ್ಲಾ ನೋಟುಗಳನ್ನು ಆರ್‌ಬಿಐ ವಾಪಸ್‌ ಪಡೆಯಬೇಕು. ಈ ನೋಟುಗಳು ಚಲಾವಣೆಯಲ್ಲಿದ್ದರೆ ನಕಲಿ ನೋಟು ಮುದ್ರಣ ಮಾಡುವವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ನಕಲಿಗೂ ಅಸಲಿಗೂ ವ್ಯತ್ಯಾಸ ಗುರುತಿಸಲು ಜನರಿಗೆ ಗೊಂದಲವಾಗಲಿದೆ’ ಎಂಬುದು ಆರ್ಥಿಕ ತಜ್ಞರೊಬ್ಬರ ಅಭಿಪ್ರಾಯ.

ಇದಲ್ಲದೆ ಕೆಲ ಹೊಸ ನೋಟುಗಳು ಸರಿಯಾಗಿ ಮುದ್ರಣವಾಗದಿರುವುದು ಕಂಡುಬಂದಿದೆ. ಕೆಲ ನೋಟುಗಳ ಬಣ್ಣ ಶೇಡ್‌ ಆಗಿದೆ.

2013ರ ಜನವರಿಯಿಂದ 2016ರ ಸೆಪ್ಟೆಂಬರ್‌ವರೆಗೆ ಭಾರತದಲ್ಲಿ ₹ 155.11 ಕೋಟಿಯಷ್ಟು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೂ ನಕಲಿ ನೋಟುಗಳ ಹಾವಳಿಗೆ ಪೂರ್ತಿಯಾಗಿ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ನಕಲಿ ನೋಟುಗಳು ನೇಪಾಳ, ಬಾಂಗ್ಲಾದೇಶ ಮತ್ತಿತರ ದೇಶಗಳ ಮೂಲಕ ಭಾರತ ಸೇರುತ್ತವೆ ಎನ್ನಲಾಗುತ್ತಿದೆ.

ಏನೇನು ದೋಷಗಳು
* ಮುದ್ರಣ ಶೇಡ್‌ ಆಗಿದೆ

* ನೋಟಿನ ಸಂಖ್ಯೆಯ ಸ್ಥಾನ ಬದಲಾಗಿದೆ

* ರಾಷ್ಟ್ರಲಾಂಛನದ ಪಕ್ಕಕ್ಕೆ ಸರಿದಿದೆ

* ಮಹಾತ್ಮ ಗಾಂಧಿ ಭಾವಚಿತ್ರ ಎಡಕ್ಕೆ ಸರಿದಿದೆ

* ರಿಸರ್ವ್‌ ಬ್ಯಾಂಕ್‌ ಲಾಂಛನ ಸರಿದಿದೆ

* ಆರ್‌ಬಿಐ ಗವರ್ನರ್‌ ಘೋಷಣೆ ಭದ್ರತಾ ಎಳೆಗೆ ಅಂಟಿದೆ

Comments are closed.