ಬೆಂಗಳೂರು, ನ. ೧೩ – ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸಲು ಮೊದಲು ತಾಯಂದಿರು ಪೌಷ್ಠಿಕ ಆಹಾರ ಸೇವಿಸಬೇಕು. ಆದ್ದರಿಂದ ಗರ್ಭಿಣಿ ಮಹಿಳೆಯರಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ನಿರ್ಧರಿಸಲಾಗಿದೆ.
ಪ್ರಾಯೋಗಿಕವಾಗಿ ನಾಲ್ಕು ತಾಲ್ಲೂಕುಗಳಲ್ಲಿ ಜಾರಿಯಲ್ಲಿದ್ದು, ಅದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ನಗರದ ಕಬ್ಬನ್ ಉದ್ಯಾನವನದಲ್ಲಿ ಏರ್ಪಡಿಸಿರುವ ಎರಡು ದಿನಗಳ ಮಕ್ಕಳ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಯಂದಿರು ಪೌಷ್ಠಿಕರಾಗಿದ್ದರೆ ಮಕ್ಕಳು ಪೌಷ್ಠಿಕರಾಗಿರುತ್ತಾರೆ. ಆದ್ದರಿಂದ ಮಧ್ಯಾಹ್ನದ ಬಿಸಿಯೂಟವನ್ನು ಗರ್ಭಿಣಿಯರಿಗೂ ನೀಡಲು ಸರ್ಕಾರ ನಿರ್ಧರಿಸಿದೆ.
ಇದರೊಂದಿಗೆ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಮಾತೃ ಪುಷ್ಠಿವರ್ಧನೆಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಳೆದು ಹೋಗುತ್ತಿರುವ ಸಾಂಸ್ಕೃತಿಕ ವೈಭವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಮಕ್ಕಳ ಹಬ್ಬ ಏರ್ಪಡಿಸಲಾಗಿದೆ. ಇಲ್ಲಿ ಪ್ರದರ್ಶನಗೊಳ್ಳುತ್ತಿರುವ ಮಕ್ಕಳ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸು ಮುದಗೊಳ್ಳುತ್ತಿದೆ.
ಎಲ್ಲ ಮಕ್ಕಳಲ್ಲೂ ಪ್ರತಿಭೆಗಳು ಅಡಗಿರುತ್ತವೆ. ಅವುಗಳಿಗೆ ಸೂಕ್ತ ವೇದಿಕೆ ದೊರೆತಾಗ ಅವುಗಳು ಹರಳುತ್ತವೆ ಎಂದು ಹೇಳಿದರು. ಕಳೆದ ವರ್ಷ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿತ್ತು. ಆದರೆ, ಈ ಬಾರಿ ವೈಜ್ಞಾನಿಕ ಮತ್ತು ತಾಂತ್ರಿಕ ಜಗತ್ತಿನ ಕುರಿತ ಜ್ಞಾನವೃದ್ಧಿ ಕಾರ್ಯಕ್ರಮಕ್ಕೆ ಆಧ್ಯತೆ ನೀಡಲಾಗಿದೆ ಎಂದು ಹೇಳಿದರು.
ಶಾಸಕ ಎನ್.ಎ ಹ್ಯಾರೀಸ್ ಮಾತನಾಡಿ, ಇಂತಹ ಮಕ್ಕಳ ಹಬ್ಬಗಳನ್ನು ರಾಜ್ಯದ ಎಲ್ಲ ಕಡೆಗಳಲ್ಲೂ ನಡೆಸಬೇಕು. ಮಾತ್ರವಲ್ಲ ಬಾಲಭವನದಲ್ಲಿ ನಿರಂತರವಾಗಿ ಇಂತಹ ಕಾರ್ಯಕ್ರಮ ಏರ್ಪಡಿಸಬೇಕು.
ಒಂದು ಇಲಾಖೆಯಿಂದ ಮಾತ್ರ ಮಕ್ಕಳ ಅಭಿವೃದ್ಧಿ ಸಾಧ್ಯವಿಲ್ಲ. ಎಲ್ಲ ಇಲಾಖೆಗಳು ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಎಂ. ದೀಪಾ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವಾ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಭಾಯಿ, ಕಿಚ್ಚಳ್ಳಿ ಶ್ರೀನಿವಾಸ, ಬಾಲಭವನದ ಅಧ್ಯಕ್ಷೆ ಡಾ. ಅಂಜಲಿ ನಿಂಬಾಳ್ಕರ್, ವೇದವ್ಯಾಸ ಮತ್ತಿತರರು ಹಾಜರಿದ್ದರು. ವಿವಿಧ ಜಿಲ್ಲೆಗಳಿಂದ ನೂರಾರು ಮಕ್ಕಳು ಆಗಮಿಸಿದ್ದರು.