ಕರ್ನಾಟಕ

2000 ರೂ. ಹೊಸ ನೋಟಿಗೆ ಚಿಲ್ಲರೆ ಸಿಗದೆ ಪರದಾಟ

Pinterest LinkedIn Tumblr

notetst-2000-fiಬೆಂಗಳೂರು: ₹500 ಮತ್ತು ₹1000 ಮುಖಬೆಲೆಯ ಹಳೆಯ ನೋಟುಗಳ ಚಲಾವಣೆ ರದ್ದಾಗಿದೆ. ಹಳೆಯ ನೋಟುಗಳನ್ನು ಬದಲಿಸಿಕೊಂಡು ಹೊಸ ನೋಟುಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದೂ ಆಗಿದೆ. ಈಗೇನಿದ್ದರೂ ಚಿಲ್ಲರೆಗಾಗಿ ವ್ಯಥೆ ಪಡುವ ಸಮಯ!

ಹೌದು. ₹2000 ಮುಖಬೆಲೆಯ ನೋಟುಗಳು ಹಲವರ ಕೈಗೆ ಬಂದು ಅವರಿಗೆ ಹೊಸತನದ ಸಂಭ್ರಮ ಕೊಟ್ಟು ಈಗ ಅವರ ಜೇಬಿಗಿಳಿದಿವೆ. ಆದರೆ, ಹೊಸ ನೋಟುಗಳ ಜತೆಗೆ ಹೊಸ ಸಮಸ್ಯೆಯೂ ಹುಟ್ಟಿಕೊಂಡಿದೆ. ಅದೇ, ₹2000 ನೋಟಿಗೆ ಚಿಲ್ಲರೆ ಸಿಗದ ಸಮಸ್ಯೆ.

‘ಬ್ಯಾಂಕ್‌ನಲ್ಲಿ ಸರದಿ ಸಾಲಿನಲ್ಲಿ ನಿಂತ ಆಯಾಸವನ್ನೆಲ್ಲಾ ಹೊಸ ₹2000ದ ನೋಟು ಮರೆಸಿತ್ತು. ಮೊದಲ ಬಾರಿಗೆ ಹೊಸ ನೋಟು ಮುಟ್ಟಿದಾಗ ಏನೋ ಎಂದು ರೀತಿಯ ಖುಷಿಯಾಗಿತ್ತು. ಆದರೆ, ಈಗ ಚಿಲ್ಲರೆ ಸಿಗದೆ ಪರದಾಡುವಂತಾಗಿದೆ’ ಎನ್ನುತ್ತಾರೆ ಮಹಾಲಕ್ಷ್ಮೀ ಲೇಔಟ್‌ನ ಮಣಿಕಂಠ.

‘ದೊಡ್ಡ ವ್ಯವಹಾರಗಳಿಗೆ ಎರಡು ಸಾವಿರದ ನೋಟು ಕೊಡಬಹುದು. ಆದರೆ, ದಿನಸಿ, ತರಕಾರಿ ಕೊಳ್ಳಲು ಎರಡು ಸಾವಿರ ಕೊಟ್ಟರೆ ಚಿಲ್ಲರೆ ಇಲ್ಲ ಎನ್ನುತ್ತಿದ್ದಾರೆ. ಎರಡು ಸಾವಿರದ ಹೊಸ ನೋಟು ಸಿಕ್ಕಾಗ ಇದ್ದ ಖುಷಿಯನ್ನೆಲ್ಲಾ ಚಿಲ್ಲರೆ ಸಮಸ್ಯೆ ನುಂಗಿಕೊಂಡಿತು’ ಎಂಬುದು ಕೋರಮಂಗಲದ ಭರತ್‌ ಅವರ ಮಾತು.

‘ಬ್ಯಾಂಕ್‌ಗಳಲ್ಲೂ ₹100, ₹50ರ ನೋಟುಗಳನ್ನು ಕೊಡುತ್ತಿಲ್ಲ. ಮೊದಲು ಒಂದು ಸಾವಿರದ ನೋಟಿಗೆ ಚಿಲ್ಲರೆ ಸಿಗುವುದೇ ಕಷ್ಟವಾಗಿತ್ತು. ಈಗ ಎರಡು ಸಾವಿರದ ನೋಟಿಗೆ ಚಿಲ್ಲರೆ ಹುಡುಕುವುದು ಹೇಗೆ?’ ಎಂಬುದು ಅವರ ಪ್ರಶ್ನೆ.

‘ಆದಷ್ಟು ಬೇಗ ಬ್ಯಾಂಕ್‌ಗಳಲ್ಲಿ ಚಿಲ್ಲರೆ ಹಣ ಲಭ್ಯವಾಗುವಂತೆ ಮಾಡಬೇಕು. ಎಟಿಎಂಗಳು ಬೇಗ ಕಾರ್ಯಾಚರಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

Comments are closed.