ಬೆಂಗಳೂರು, ನ. ೧೦ – ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರದಲ್ಲಿ ನೊಂದ ಪದವಿ ವಿದ್ಯಾರ್ಥಿಯೊಬ್ಬ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ವಿಜಯನಗರದ ಪಂಚಶೀಲ ಬ್ಲಾಕ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ವಿಜಯನಗರದ ಸರ್ಕಾರಿ ಕಾಲೇಜಿನಲ್ಲಿ 2ನೇ ವರ್ಷದ ಬಿ.ಎ ಪದವಿ ವಿದ್ಯಾರ್ಥಿ ನವೀನ್ ಕುಮಾರ್ (22) ನೇಣಿಗೆ ಶರಣಾದವರು.
ತಂದೆ ಶ್ರೀನಿವಾಸ್, ತಾಯಿ ಮೀನಾ ಅವರು ಕೆಲಸಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ನವೀನ್ ರಾತ್ರಿ 8ರ ಸುಮಾರಿನಲ್ಲಿ ಫ್ಯಾನಿಗೆ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರದಲ್ಲಿ ನೊಂದಿದ್ದ ನವೀನ್ ನೇಣಿಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಾಫ್ಟ್‌ವೇರ್ ಉದ್ಯೋಗಿ ಮನೆ ಕಳವು
ಬೆಂಗಳೂರು, ನ. ೧೦ – ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯೊಬ್ಬರ ಮನೆಗೆ ಬೀಗ ಮುರಿದು ನುಗ್ಗಿರುವ ದುಷ್ಕರ್ಮಿಗಳು ಮೂರೂವರೆ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ರಾಮಮೂರ್ತಿ ನಗರದ ಕಸ್ತೂರಿ ನಗರದಲ್ಲಿ ನಡೆದಿದೆ.
ಕಸ್ತೂರಿನಗರದ ಮೊದಲ ಕ್ರಾಸ್‌ನ ಸಾಫ್ಟ್‌ವೇರ್ ಉದ್ಯೋಗಿಗಳಾದ ವಿದ್ಯಾ ಮತ್ತು ಅವರ ಪತಿ ನಿನ್ನೆ ಮಧ್ಯಾಹ್ನ 1ರ ವೇಳೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು.
ಕೆಲಸ ಮುಗಿಸಿಕೊಂಡು ರಾತ್ರಿ 10ರ ವೇಳೆ ವಾಪಸ್ಸಾಗಿ ನೋಡಿದಾಗ ಮನೆಯ ಬೀಗ ಮುರಿದು ನುಗ್ಗಿದ್ದ ದುಷ್ಕರ್ಮಿಗಳು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ನಗದೂ ಸೇರಿ 3.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವರದಕ್ಷಿಣೆ ಕಿರುಕುಳ ಮಹಿಳೆ ನೇಣು
ಬೆಂಗಳೂರು, ನ. ೧೦ – ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ನೇಣಿಗೆ ಶರಣಾಗಿರುವ ದುರ್ಘಟನೆ ಬನಶಂಕರಿಯ ಯಾಕೂಬ್ ನಗರದಲ್ಲಿ ನಡೆದಿದೆ.
ಯಾಕೂಬ್ ನಗರದ ಯಾಸ್ಮಿನ್ (25) ಮೃತಪಟ್ಟವರು. 5 ವರ್ಷಗಳ ಹಿಂದೆ ಮರಗೆಲಸ ಮಾಡುತ್ತಿದ್ದ ಸೈಯ್ಯದ್ ಬಾಬು ಅವರನ್ನು ವಿವಾಹವಾಗಿದ್ದ ಯಾಸ್ಮಿನ್‌ಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಇತ್ತೀಚೆಗೆ ಬಾಬು ತವರಿನಿಂದ ಹಣ ತರುವಂತೆ ಪತ್ನಿ ಯಾಸ್ಮಿನ್‌ಗೆ ಪೀಡಿಸಿ ಕಿರುಕುಳ ನೀಡುತ್ತಿದ್ದು, ಅದನ್ನು ಆಕೆ ತಂದೆ-ತಾಯಿಗೆ ತಿಳಿಸಿದ್ದರು. ವರದಕ್ಷಿಣೆ ವಿಚಾರವಾಗಿ ಆಗಾಗ ದಂಪತಿ ನಡುವೆ ಜಗಳ ನಡೆಯುತ್ತಿತ್ತು.
ಜಗಳದಿಂದ ನೊಂದ ಯಾಸ್ಮಿನ್ ನೇಣಿಗೆ ಶರಣಾಗಿದ್ದು, ಈ ಸಂಬಂಧ ಯಾಸ್ಮಿನ್ ಅವರ ಪೋಷಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಬನಶಂಕರಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ. ಶರಣಪ್ಪ ಅವರು ತಿಳಿಸಿದ್ದಾರೆ.
Comments are closed.