ಬೆಂಗಳೂರು, ನ. ೧೦- ಅನೂರ್ಜಿತಗೊಂಡಿರುವ ರೂ. 500 ಹಾಗೂ 1000 ಮೌಲ್ಯದ ನೋಟುಗಳ ವಿನಿಮಯ, ಠೇವಣಿ ಪ್ರಕ್ರಿಯೆಗೆ ಬ್ಯಾಂಕುಗಳು ಇಂದಿನಿಂದ ಚಾಲನೆ ನೀಡಿದ್ದು, ಜನರು ರಾಜ್ಯದಾದ್ಯಂತ ಬ್ಯಾಂಕುಗಳು, ಅಂಚೆಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ನೋಟುಗಳ ವಿನಿಮಯ ಹಾಗೂ ಠೇವಣಿ ಹೂಡುವ ಕಾರ್ಯದಲ್ಲಿ ಮಗ್ನರಾಗಿದ್ದು, ಎಲ್ಲೆಡೆ ಕಂಡುಬಂತು.
ಮಂಗಳವಾರ ಮಧ್ಯರಾತ್ರಿಯಿಂದ ಈ ಮೌಲ್ಯದ ನಗದಿನ ಮೇಲೆ ನಿಷೇಧ ವಿಧಿಸಿದ ನಂತರ ಬುಧವಾರ, ಸಾರ್ವಜನಿಕರ ವ್ಯವಹಾರಕ್ಕೆ ರಜೆ ಘೋಷಿಸಲಾಗಿತ್ತು. ಇಂದು ಬ್ಯಾಂಕುಗಳು ಮತ್ತೆ ಗ್ರಾಹಕರ ಸೇವೆಗೆ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಎಲ್ಲ ಶಾಖೆಗಳ ಮುಂದೆ ಭಾರಿ ಜನ ಸಂದಣಿ ಜಮಾವಣೆಗೊಂಡಿತ್ತು. ಹಳೆಯ ನೋಟುಗಳನ್ನು ಬದಲಾಯಿಸಿಕೊಡುವ ಕ್ರಮಕ್ಕೆ ಚಾಲನೆ ದೊರೆತಿದ್ದರೂ ಕೂಡ ಇಂಥ ಅವಕಾಶಕ್ಕೆ ಒಂದು ಮಿತಿಯನ್ನು ಅಳವಡಿಸಲಾಗಿದೆ. ಪ್ರತಿ ದಿನ ನಾಲ್ಕು ಸಾವಿರ ರೂಪಾಯಿ ವಿನಿಮಯಕ್ಕೆ ಮಾತ್ರ ಈ ಅವಕಾಶ. ಹಳೆಯ ಐನೂರು ನೋಟಿಗೆ ಬದಲು ಹೊಸ 500ರ ನೋಟು ಹಾಗೂ 2000 ರೂ. ನೋಟು ದಕ್ಕಲಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಬ್ಯಾಂಕುಗಳು ತಮ್ಮ ಕೆಲಸದ ಸಮಯವನ್ನು ಬದಲಾಯಿಸಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರ ವರೆಗೆ ಅವು ಕಾರ್ಯ ನಿರ್ವಹಿಸಲಿವೆ. ಇದಲ್ಲದೆ ಈ ಶನಿವಾರ ಹಾಗೂ ಭಾನುವಾರಗಳಂದು ಕೂಡ ಅವು ಕಾರ್ಯ ನಿರ್ವಹಿಸಲಿವೆ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲದೆ, ಅಂಚೆ ಕಚೇರಿ, ಖಾಸಗಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳು ಕೂಡ ಹಳೆಯ ನಗದು ವಿನಿಮಯ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಹಳೆಯ ನಗದು ಹಣವನ್ನು ವಿನಿಯೋಗಿಸಿಕೊಳ್ಳುವ ಉದ್ದೇಶಕ್ಕಾಗಿ ಸಾರ್ವಜನಿಕರು ಅಧಿಕೃತ ದಾಖಲಾತಿಯನ್ನು ಹಾಜರುಪಡಿಸಬೇಕಾಗಿದೆ. ಆಧಾರ್‌ಕಾರ್ಡ್, ಮತದಾರ ಪತ್ರ, ಪ್ಯಾನ್‌ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಪಾಸ್‌ಪೋರ್ಟ್ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ತೋರಿಸಿ ವಿನಿಮಯ ಮಾಡಿಕೊಳ್ಳಬಹುದು
ಅನೇಕ ಕಡೆಗಳಲ್ಲಿ ಬ್ಯಾಂಕುಗಳು ಬಾಗಿಲು ತೆಗೆಯುವ ಮೊದಲೇ ಜನರು ನೂರಾರು ಸಂಖ್ಯೆಯಲ್ಲಿ ಹಳೆಯ ರೂ. 500, 1000 ನೋಟುಗಳೊಂದಿಗೆ ಕಾದುಕೊಂಡು ನಿಂತಿರುವುದು ಕಂಡುಬಂತು. ಈ ವಿನಿಮಯ ಪ್ರಕ್ರಿಯೆಗೆ ಬರುವ ಡಿಸೆಂಬರ್ 30ರ ವರೆಗೆ ಕಾಲಾವಕಾಶ ಇದ್ದಕೂ ಕೂಡ ಜನರು ತಂಡೋಪ ತಂಡಗಳಲ್ಲಿ ಬರುತ್ತಲೇ ಇದ್ದರು.
ಹೀಗೆ ಹರಿದು ಬರುತ್ತಿದ್ದ ಜನ ಪ್ರವಾಹವನ್ನು ನಿಯಂತ್ರಿಸುವುದಕ್ಕಾಗಿ ಬ್ಯಾಂಕುಗಳ ಭದ್ರತಾ ಸಿಬ್ಬಂದಿ ಹೆಣಗಾಡುವಂತಾಯಿತು. ಅಲ್ಲದೆ ಹಳೆಯ ನಗದು ನವೀಕರಿಸಿಕೊಳ್ಳುವುದಕ್ಕಾಗಿ ಡಿಸೆಂಬರ್ 30ರ ವರೆಗೆ ಕಾಲಾವಕಾಶವಿದ್ದು, ಅನಗತ್ಯವಾಗಿ ಅವಸರ, ಆತಂಕಪಡುವ ಅಗತ್ಯ ಇಲ್ಲ ಎಂದು ಬ್ಯಾಂಕ್ ಸಿಬ್ಬಂದಿ ತಿಳಿ ಹೇಳುತ್ತಿದ್ದರೂ ಯಾರು ಕಿವಿಗೊಡದೆ ಹಣ ವಿನಿಮಯಕ್ಕೆ ಮುಗಿಬಿದ್ದರು.
ದೆಹಲಿ ವರದಿ
500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮೌಲ್ಯೀಕರಿಸಲಾಗಿದ್ದು, ಇಂದು ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ನೋಟು ಬದಲಾವಣೆಗಾಗಿ ಜನಜಂಗುಳಿಯೇ ನೆರೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 3,400 ಮಂದಿ ಅರೆಸೇನಾಪಡೆ ಮತ್ತು ದೆಹಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಇಂದಿನಿಂದ ಎಲ್ಲಾ ಬ್ಯಾಂಕುಗಳು ಕಾರ್ಯಾರಂಭ ಮಾಡಿದ್ದು, ಯಾವುದೇ ನೂಕು ನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಒದಗಿಸಲಾಗಿದೆ.
1200 ಮಂದಿ ಅರೆ ಸೇನಾಪಡೆ ಮತ್ತು 2,200 ಮಂದಿ ದೆಹಲಿ ಪೊಲೀಸರನ್ನು ನಿಯೋಜಿಸಲಾಗಿದೆ. ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗೃಹ ಸಚಿವಾಲಯದ ಸಾವಿರಕ್ಕೂ ಅಧಿಕ ಮಂದಿಯನ್ನು ನಿಯೋಜಿಸಲಾಗಿದೆ.
200 ಕ್ರಿಪ್ರ ಕಾರ್ಯಪಡೆಯನ್ನು ನಗರದ ನಾನಾ ಕಡೆ ನಿಯೋಜಿಸಲಾಗಿದೆ. ಶನಿವಾರ ಮತ್ತು ಭಾನುವಾರವೂ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ.
ಉಳಿತಾಯ ಖಾತೆಗಳಿಗೆ ಠೇವಣಿ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿದೆ. ಹೀಗೆ ಬ್ಯಾಂಕ್‌ಗೆ ಕಟ್ಟುವ ಹಣದ ಪ್ರಮಾಣದ ಮೇಲೆ ಯಾವುದೇ ರೀತಿಯ ನಿರ್ಬಂಧವೂ ಇಲ್ಲ. ಅದಾಗ್ಯೂ ನಿಯಮಾವಳಿಗಳ ರೀತ್ಯಾ ನಿಗದಿಪಡಿಸಲಾಗಿರುವ ಪ್ರಮಾಣಕ್ಕಿಂತ ಅಧಿಕ ಪ್ರಮಾಣದ ಹಣ ಭರ್ತಿ ಮಾಡುವವರ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಗಾವಲು ಇದ್ದೆ ಇದೆ.
ವಿನಿಮಯ ಸಲುವಾಗಿ ಅವಕಾಶ ಕಲ್ಪಿಸಿರುವ ಅವಧಿಯಲ್ಲಿ ಒಬ್ಬರು ಗರಿಷ್ಠ ಎಂದರೆ ಎರಡೂವರೆ ಲಕ್ಷ ರೂಪಾಯಿವರೆಗೆ ತುಂಬಬಹುದು. ಒಂದು ವೇಳೆ ಈ ಮೊತ್ತ ಹೆಚ್ಚಾದಲ್ಲಿ ಅದು ಆದಾಯದ ಒಂದು ಭಾಗ ಎಂದು ಋಜುವಾತುಪಡಿಸಬೇಕು.
ಹಾಗೊಂದು ಪಕ್ಷ ಬ್ಯಾಂಕ್‌ಗೆ ಕಟ್ಟಿರುವ ಹೆಚ್ಚುವರಿ ಹಣ ನಿಗದಿತ ಆದಾಯಕ್ಕೆ ಸರಿ ಹೊಂದದೆ ಹೋದಲ್ಲಿ ಆ ಬಾಬ್ತಿಗೆ ತೆರಿಗೆ ಹಾಗೂ ಶೇ.200ರಷ್ಟು ದಂಡ ವಿಧಿಸಲಾಗುವುದು.
ಹತ್ತು ಲಕ್ಷ ರೂಪಾಯಿಗಿಂತ ಹೆಚ್ಚು ಠೇವಣಿ ಇರಿಸಿರುವವರಂತೂ ಆದಾಯ ಕರ ಇಲಾಖೆ ಅಧಿಕಾರಿಗಳ ಹದ್ದಿನ ಕಣ್ಣುಗಳಿಂದ ಪಾರಾಗುವಂತೆಯೆ ಇಲ್ಲ. ಇಂಥ ಭಾರಿ ಪ್ರಮಾಣದ ಠೇವಣಿಗೆ ಸೂಕ್ತ ದಾಖಲಾತಿಗಳನ್ನು ಹೊಂದಿರಬೇಕು. ಪ್ರಸಕ್ತ ಹಣಕಾಸು ವರ್ಷ ಪೂರ್ಣಗೊಳ್ಳುವುದಕ್ಕೆ ಮೊದಲು ಅವುಗಳನ್ನು ಸಂಬಂಧಿಸಿದವರಿಗೆ ಒದಗಿಸಬೇಕು. ಒಂದು ಪಕ್ಷ ಹಾಗೆ ಮಾಡಲು ಸಾಧ್ಯವಾಗದೆ ಹೋದಲ್ಲಿ ಇಲಾಖೆ ದಂಡನೆ ಕ್ರಮಗಳಿಗೆ ಗುರಿಯಾಗಬೇಕು.
ಗ್ರಾಹಕರು ತಮ್ಮ ಉಳಿತಾಯ ಖಾತೆಗಳಿಗೆ ಹಣ ಪಾವತಿಸುವುದಕ್ಕೆ ಯಾವುದೇ ರೀತಿಯ ನಿರ್ಬಂಧ ಇಲ್ಲದೆ ಹೋದರೂ ಬರುವ 24ರ ವರೆಗೆ ಗರಿಷ್ಠ ಹತ್ತು ಸಾವಿರ ರೂಪಾಯಿವರೆಗೆ ಹಣವನ್ನು ಪಡೆದುಕೊಳ್ಳಬಹುದು. ನ. 24ರ ನಂತರ ಹೀಗೆ ಹಿಂದಕ್ಕೆ ಪಡೆಯಬಹುದಾದ ಹಣದ ಪ್ರಮಾಣವನ್ನು ಹೆಚ್ಚಿಸಲಾಗುವುದು. ಆದರೆ, ಚೆಕ್, ಡಿಡಿ, ಆನ್‌ಲೈನ್ ಮೂಲಕ ಹಣಕಾಸಿನ ವ್ಯವಹಾರಗಳಿಗೆ ಇಂಥ ಯಾವ ರೀತಿಯ ನಿಬಂಧನೆಗಳು ಸದ್ಯಕ್ಕೆ ಇಲ್ಲ.
ಹಳೆಯ ನೋಟುಗಳ ಚಲಾವಣೆಗೆ ಇನ್ನೆರಡು ದಿನಗಳ ಕಾಲಾವಕಾಶವನ್ನು ಒದಗಿಸಲಾಗಿದೆ. ಶುಕ್ರವಾರ ಹಾಗೂ ಶನಿವಾರ ಕೂಡ ಹಳೆಯ ನೋಟುಗಳನ್ನು ಸರ್ಕಾರಿ ಆಸ್ಪತ್ರೆ, ಔಷಧಿ, ಅಂಗಡಿ, ರೈಲು, ಬಸ್, ವಿಮಾನ ನಿಲ್ದಾಣಗಳು, ಗ್ರಾಹಕರ ಸಹಕಾರ ಸಂಘ, ಹಾಲಿನ ಬೂತ್, ಚಿತಾಗಾರ ಹಾಗೂ ಪೆಟ್ರೋಲ್ ಬಂಕ್‌ಗಳಲ್ಲಿ ಈ ಸೌಲಭ್ಯ ಉಂಟು.
2 ಗಂಟೆಗಳಲ್ಲಿ ನಗದು ಖಾಲಿ!
ಹಳೆಯ ರೂ. 500, 1000 ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯ ಪ್ರಕ್ರಿಯೆ ಆರಂಭಗೊಂಡ ಕೇವಲ ಎರಡು ಗಂಟೆಗಳಲ್ಲಿ ಹೊಸ ನೋಟುಗಳು ಖಾಲಿ ಆಗಿವೆ.
ಎಲ್ಲ ಬ್ಯಾಂಕುಗಳಲ್ಲಿ ಹಣ ವಿನಿಮಯ ಮಾಡಿಕೊಳ್ಳಬಹುದೆಂಬ ಅಧಿಕೃತ ಹೇಳಿಕೆ ನಂಬಿ ಶ್ರೀನಗರದ ಕರ್ನಾಟಕ ಬ್ಯಾಂಕ್‌ಗೆ ಧಾವಿಸಿದ್ದ ಗ್ರಾಹಕರು ಅಲ್ಲಿ ಅಂಥ ಸೌಲಭ್ಯ ಇಲ್ಲ ಎಂದು ತಿಳಿದು ಬ್ಯಾಂಕ್‌ಗೆ ಹಿಡಿಶಾಪ ಹಾಕುತ್ತ ಬೇರೆ ಬ್ಯಾಂಕ್‌ನತ್ತ ತೆರಳಿದರು.
ಹೊಸ ನಗದು ಮುಗಿದು ಹೋಗಿದ್ದರಿಂದ ಎಷ್ಟೋ ಬ್ಯಾಂಕುಗಳ ಮುಂದೆ, ಹೊಸ ನಗದು ಖಾಲಿ ಎಂಬ ನಾಮಫಲಕಗಳನ್ನು ಹಾಕಿದ್ದು ಕಂಡುಬಂತು.
ಹತ್ತು ಸಾವಿರ ರೂಪಾಯಿ ಮೊತ್ತದ ಚೆಕ್ ಹಿಡಿದುಕೊಂಡು ಬಂದವರಿಗೂ ಅದೇ ಗತಿ ಕಾದಿದ್ದು ಅರಿವಿಗೆ ಬಂತು.