ಬೆಂಗಳೂರು, ನ.೯- ದೇಶದಲ್ಲಿ ಕಳೆದ ಮಧ್ಯರಾತ್ರಿಯಿಂದ ೫೦೦ ಹಾಗೂ ೧೦೦೦ ರೂ.ಗಳ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಂಡಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಈ ನಿರ್ಧಾರದ ಕುರಿತು ಯಾವುದೇ ಪಕ್ಷ ಪ್ರತಿಕ್ರಿಯೆ ನೀಡದೆ ದೂರ ಉಳಿದಿರುವುದು ಅಚ್ಚರಿಯನ್ನುಂಟು ಮಾಡಿದೆ.
ಪ್ರಧಾನಿ ಮೋದಿ ನೋಟುಗಳ ರದ್ದತಿ ಘೋಷಣೆ ಮಾಡುತ್ತಿದ್ದಂತೆ ರಾಜ್ಯ ರಾಜಕೀಯ ಪಕ್ಷಗಳು ತಲ್ಲಣಗೊಂಡಿರುವ ಅನುಮಾನ ಮೂಡಿದೆ. ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ಯಾವುದೇ ಅಧಿಕೃತ ಕಾರ್ಯಕ್ರಮಗಳು ಇಂದು ನಿಗದಿಯಾಗಿಲ್ಲ, ಯಾವ ನಾಯಕರ ಪತ್ರಿಕಾಗೋಷ್ಠಿಗಳೂ ಇಲ್ಲ.
ದೊಡ್ಡ ಮಟ್ಟದ ಆದೇಶ ಹೊರಬಿದ್ದು, ಐನೂರು, ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಂಡಿದ್ದರೂ ಮೂರು ಪಕ್ಷಗಳಿಂದ ಯಾವುದೇ ಅಧಿಕೃತ ಹೇಳಿಕೆ, ಪ್ರತಿಕ್ರಿಯೆಗಳು ಇನ್ನೂ ಹೊರಬಂದಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈ ಕುರಿತು ಪ್ರತಿಕ್ರಿಯೆ ನೀಡಬೇಕಿತ್ತು. ಆದರೆ ನೀಡಿಲ್ಲ. ಸಣ್ಣಪುಟ್ಟ ವಿಚಾರಗಳಿಗೆಲ್ಲಾ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸುತ್ತಿದ್ದರು. ಆದರೆ, ಈವರೆಗೆ ಯಾವುದೇ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆಗೊಳಿಸಿಲ್ಲ. ಪ್ರಧಾನಿ ಮೋದಿ ಅವರ ಪ್ರತಿ ಹೆಜ್ಜೆಯನ್ನೂ ಬೆಂಬಲಿಸುತ್ತಿದ್ದ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಈ ವಿಷಯದಲ್ಲಿ ಮೌನವಹಿಸಿದ್ದಾರೆ. ಬೆಂಬಲವನ್ನು ವ್ಯಕ್ತಪಡಿಸದೇ, ವಿರೋಧವನ್ನೂ ವ್ಯಕ್ತಪಡಿಸದೇ ಕುಳಿತಿದ್ದಾರೆ.
ಇನ್ನೂ ಆಡಳಿತ ಪಕ್ಷ ಕಾಂಗ್ರೆಸ್ ಕೂಡ ಇದಕ್ಕೆ ಹೊರತಲ್ಲ. ಮೋದಿಯವರ ಪ್ರತಿಯೊಂದು ಹೆಜ್ಜೆಯನ್ನೂ ವಿರೋಧಿಸಿಕೊಂಡೇ ಬರುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ಕೂಡ ಪರ ವಿರೋಧದ ಹೇಳಿಕೆ ನೀಡಿಲ್ಲ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಕೂಡ ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಮೋದಿ ನಡೆಯನ್ನು ಟೀಕಿಸುವ, ವಿರೋಧಿಸುವ ಹಾಗೂ ಸಮರ್ಥಿಸುವುದು ಸೇರಿದಂತೆ ಯಾವುದೇ ಹೇಳಿಕೆಯನ್ನೂ ನೀಡದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.