ಕರ್ನಾಟಕ

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ: ಜ್ಞಾನ ಆಯೋಗ ಶಿಫಾರಸು

Pinterest LinkedIn Tumblr
Higher Education Minister Basavaja Rayareddy releasing the Karnataka State Education Policy- 2013 organized by Karnataka Jnana Aayoga at Vidhana Soudha in Bengaluru on Saturday. Jnana Aayoga Chairman Dr K Kasturirangan, Primary & Secondary Education Minister Thanveer Set and others also seen.-Photo/ Kotekar
Hi

ಬೆಂಗಳೂರು: ಮಕ್ಕಳಿಗೆ 1ರಿಂದ 4ನೇ ತರಗತಿವರೆಗೆ ಮಾತೃಭಾಷೆ ಇಲ್ಲವೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು. ಈ ಹಂತದಲ್ಲಿ ಇಂಗ್ಲಿಷ್‌ ಅನ್ನು ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂದು ಡಾ.ಕೆ. ಕಸ್ತೂರಿರಂಗನ್‌ ನೇತೃತ್ವದ ‘ಕರ್ನಾಟಕ ಜ್ಞಾನ ಆಯೋಗ’ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕರ್ನಾಟಕ ಜ್ಞಾನ ಆಯೋಗ ಸಿದ್ಧಪಡಿಸಿರುವ ಶಿಕ್ಷಣ ನೀತಿ ಕರಡನ್ನು ಕಸ್ತೂರಿರಂಗನ್‌ ಅವರು ಶನಿವಾರ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರಿಗೆ ಸಲ್ಲಿಸಿದರು.

ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು. 5ನೇ ತರಗತಿಯಿಂದ ಶಿಕ್ಷಣ ಮಾಧ್ಯಮದ ಆಯ್ಕೆ ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ಇರಬೇಕು. ಅಲ್ಲದೆ, ಮಕ್ಕಳ ಆಯ್ಕೆಗೆ ಅನುಗುಣವಾಗಿ ಇನ್ನೆರಡು ಭಾಷೆಗಳನ್ನು ಹೆಚ್ಚುವರಿಯಾಗಿ ಕಲಿಯಲು ಅವಕಾಶ ಕೊಡಬೇಕು ಎಂದು ಶಿಫಾರಸು ಮಾಡಲಾಗಿದೆ.

ಪ್ರಾಥಮಿಕ ಶಿಕ್ಷಣ ಮಾತೃಭಾಷೆ ಅಥವಾ ರಾಜ್ಯ ಭಾಷೆಯಲ್ಲಿ ಇರಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ‘ಮಗುವಿನ ಶಿಕ್ಷಣ ಮಾಧ್ಯಮ ಕುರಿತು ಪಾಲಕರೇ ನಿರ್ಧರಿಸಬೇಕು. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು’ ಎಂದು ಸುಪ್ರೀಂಕೋರ್ಟ್‌ 2014ರ ಮೇ ನಲ್ಲಿ ತೀರ್ಪು ನೀಡಿತ್ತು.

ಶಿಕ್ಷಣ ನೀತಿ ರೂಪಿಸುವಂತೆ ರಾಜ್ಯ ಸರ್ಕಾರ 2015ರ ಮೇ ನಲ್ಲಿ ಕರ್ನಾಟಕ ಜ್ಞಾನ ಆಯೋಗಕ್ಕೆ ಕೋರಿತ್ತು. ಅದರಂತೆ ಆಯೋಗದ ಸದಸ್ಯರು ಹಲವು ಸಲ ಸಭೆ ಸೇರಿ ಚರ್ಚಿಸಿದ ಬಳಿಕ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದ್ದಾರೆ.

ಆಯೋಗದ ವರದಿಯಲ್ಲಿ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ 70, ಉನ್ನತ ಶಿಕ್ಷಣ ಕುರಿತು 79 ಮತ್ತು ಶಿಕ್ಷಣ ಆಡಳಿತಕ್ಕೆ ಸಹಕಾರಿಯಾಗುವ 16 ಶಿಫಾರಸುಗಳನ್ನು ಸೇರಿಸಲಾಗಿದೆ.

ವರದಿ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಾ.ಕಸ್ತೂರಿ ರಂಗನ್‌, ಮಕ್ಕಳಿಗೆ ರಾಷ್ಟ್ರೀಯ ಮತ್ತು ಜಾಗತಿಕ ಗುಣಮಟ್ಟದ ಶಿಕ್ಷಣ ಮಾತೃಭಾಷೆಯಲ್ಲಿಯೇ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಸಂಸ್ಥೆಗಳು ಆರ್ಥಿಕ ಚಟುವಟಿಕೆ ಕೇಂದ್ರಗಳೂ ಆಗಿವೆ. ಮುಂದಿನ ದಿನಗಳಲ್ಲಿ ಪಾಲಕರ ವಾರ್ಷಿಕ ಆದಾಯದಲ್ಲಿ ಶೇ 20ರಿಂದ 30ರಷ್ಟು ಮಕ್ಕಳ ಶಿಕ್ಷಣಕ್ಕೆ ವ್ಯಯಿಸಬೇಕಾಗುತ್ತದೆ ಎಂದೂ ಹೇಳಿದರು.

ಇತ್ತೀಚೆಗೆ ವಿಷಯಾಧಾರಿತ ವಿವಿಗಳು ಸ್ಥಾಪನೆ ಆಗುತ್ತಿವೆ. ಒಂದು ವಿವಿಯಲ್ಲಿ ಎಂಜಿನಿಯರಿಂಗ್‌, ವೈದ್ಯಕೀಯ, ಕಾನೂನು, ಕೌಶಲಾಭಿವೃದ್ಧಿ ಸೇರಿದಂತೆ ಸಮಗ್ರ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳ ಸ್ವರೂಪ ಬದಲಾಯಿಸುವ ಶಿಫಾರಸುಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು.

ಪ್ರಮುಖ ಶಿಫಾರಸುಗಳು–ಶಾಲಾ ಶಿಕ್ಷಣ
* ಪ್ರತಿ ಮಗು/ವಿದ್ಯಾರ್ಥಿಗೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಅದೇ ರೀತಿ ಖಾಸಗಿ ಶಿಕ್ಷಣ ವಲಯದಲ್ಲೂ ಸರ್ಕಾರ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಬೇಕು.

* ರಾಜ್ಯದಲ್ಲಿ ಲಿಂಗತಾರತಮ್ಯ ಹೋಗಲಾಡಿಸಲು ವಿದ್ಯಾರ್ಥಿನಿಯರಿಗೆ ಪದವಿವರೆಗಿನ ಶಿಕ್ಷಣವನ್ನು ಖಾತ್ರಿ ಮಾಡಬೇಕು

* ಪಿಯುವರೆಗೆ (12ನೇ ತರಗತಿ) ಎಲ್ಲ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ವಿದ್ಯಾರ್ಥಿಗಳ ಹುಟ್ಟು ಅಥವಾ ಭೌಗೋಳಿಕ ಕಾರಣಕ್ಕೆ ಶಿಕ್ಷಣ ಹಕ್ಕಿನಿಂದ ವಂಚನೆ ಆಗಬಾರದು

* ಖಾಸಗಿ ಶಾಲೆಗಳ ಆರಂಭಕ್ಕೂ ಅನುಮತಿ ನೀಡಬೇಕು. ಅದರ ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಾಪನೆಗೂ ಹೆಚ್ಚಿನ ಉತ್ತೇಜನ ನೀಡಬೇಕು.

* ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸಬೇಕು. ಆದರೆ, ಅದರಲ್ಲಿ ರಾಜ್ಯದ ಇತಿಹಾಸ, ಸಂಸ್ಕೃತಿ, ಭೌಗೋಳಿಕ ಪರಿಚಯ ಕಡ್ಡಾಯವಾಗಿ ಇರಬೇಕು.

* ಶಿಕ್ಷಕರಾಗಿ ನೇಮಕ ಆಗುವವರು ಕನಿಷ್ಠ ಬಿ.ಇಡಿ ಪದವಿ ಪಡೆದಿರಬೇಕು. ಈಗಿರುವ ಶಿಕ್ಷಕರಿಗೂ ಬಿ.ಇಡಿ ಪದವಿ ಪಡೆಯಲು ಅವಕಾಶ ನೀಡಬೇಕು.

* ಪ್ರತಿ ವರ್ಷ ಶೇ 1ರಷ್ಟು ಶಿಕ್ಷಕರಿಗೆ ವಿದೇಶಗಳಿಗೆ ಕಳುಹಿಸಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ನೀಡಬೇಕು

* ಖಾಸಗಿ ವಲಯದ ಬಂಡವಾಳ ಹರಿದು ಬರಲು ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು

ಉನ್ನತ ಶಿಕ್ಷಣ
* ಆಡಳಿತ, ಶಿಕ್ಷಣ ಮತ್ತು ಹಣಕಾಸು ವಿಷಯದಲ್ಲಿ ವಿಶ್ವವಿದ್ಯಾಲಯಗಳಿಗೆ ಸಂಪೂರ್ಣ ಸ್ವಾಯತ್ತತೆ ಇರಬೇಕು

* ವಿಶ್ವವಿದ್ಯಾಲಯ/ ಸಂಸ್ಥೆಗಳ ಕಾರ್ಯಕ್ಷಮತೆ ಆಧಾರದ ಮೇಲೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು

* ರಾಜ್ಯದ ವಿದ್ಯಾರ್ಥಿ ಯಾವುದೇ ವಿವಿಯಲ್ಲಿ ಪ್ರವೇಶ ಪಡೆಯುವ ವ್ಯವಸ್ಥೆ ಇರಬೇಕು. ಪ್ರತಿ ವಿವಿ ಶೇ 50ರಷ್ಟು ಸೀಟುಗಳನ್ನು ತನ್ನ ಭೌಗೋಳಿಕ ವ್ಯಾಪ್ತಿಯ ಹೊರಗಿನ ವಿದ್ಯಾರ್ಥಿಗಳಿಗೆ ಕೊಡಬೇಕು.

* ಎಲ್ಲ ವಿವಿಗಳಲ್ಲಿ ಶಿಕ್ಷಣ ಸಂಶೋಧನೆಗೆ ಸಂಬಂಧಿಸಿದ ವಿಭಾಗವನ್ನು ಕಡ್ಡಾಯವಾಗಿ ಹೊಂದಿರಬೇಕು

* ಉತ್ತಮ ಪ್ರಾಧ್ಯಾಪಕರನ್ನು ಗುರುತಿಸುವ ಕಾರ್ಯ ಆಗಬೇಕು

* ಸ್ಮಾರ್ಟ್‌ ತರಗತಿ, ಡಿಜಿಟಲ್‌ ಬೋಧನೆ, ಡಿಜಿಟಲ್‌ ಗ್ರಂಥಾಲಯ ಸೇರಿ ಆಧುನಿಕ ತಂತ್ರಜ್ಞಾನ ಮಾಧ್ಯಮಗಳನ್ನು ಹೆಚ್ಚಾಗಿ ಬಳಸಬೇಕು

* ಕೈಗಾರಿಕೆ, ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವದ ಮೂಲಕ ವಿವಿಗಳು ಹಣ ಸಂಗ್ರಹಣೆಗೆ ಅವಕಾಶ ನೀಡಬೇಕು

ಆಡಳಿತ ಸುಧಾರಣೆ
* ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಕೌಶಲ ಅಭಿವೃದ್ಧಿ, ಹಣಕಾಸು ಸಚಿವರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಿ, ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ಸುಲಭವಾಗಿ ಜಾರಿಮಾಡಬೇಕು.

* ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ವ್ಯಾಪ್ತಿಗೆ ಖಾಸಗಿ ವಿಶ್ವವಿದ್ಯಾಲಯಗಳನ್ನೂ ಸೇರಿಸಬೇಕು.

* ಶಾಲಾ ಶಿಕ್ಷಣ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಪರಿಷತ್‌ ರಚಿಸಬೇಕು.

* ಎಲ್ಲ ವಿಭಾಗಗಳಲ್ಲಿ ಗುಣಮಟ್ಟದ ಶಿಕ್ಷಣ, ಬೋಧಕರು, ಇತರೆ ಸಿಬ್ಬಂದಿ, ಮುಂತಾದವುಗಳ ಪರಿಶೀಲನೆ ಮತ್ತು ಮೌಲ್ಯಮಾಪನಕ್ಕೆ ಕರ್ನಾಟಕ ರಾಜ್ಯ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚನೆಯಾಗಬೇಕು.

*–*–*
* ಡಾ.ಕಸ್ತೂರಿರಂಗನ್‌ ಅವರ ತಂಡ ಮಹತ್ವದ ಶಿಫಾರಸುಗಳನ್ನು ನೀಡಿದೆ. ಅದನ್ನು ಒಂದೆರಡು ತಿಂಗಳಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಿ, ಜಾರಿಗೊಳಿಸುತ್ತೇವೆ.
–ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ

* ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಮಹತ್ವದ ಶಿಫಾರಸುಗಳನ್ನು ಮಾಡಲಾಗಿದೆ. ತಕ್ಷಣಕ್ಕೆ ಮತ್ತು ದೀರ್ಘಾವಧಿಗೆ ಏನು ಮಾಡಬೇಕೆಂದು ಪರಿಶೀಲಿಸಲಾಗುವುದು
–ತನ್ವೀರ್‌ ಸೇಠ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

Comments are closed.