ಕರ್ನಾಟಕ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅನ್ನಭಾಗ್ಯ ಯೋಜನೆಯ 8 ಸಾವಿರ ಲಾರಿಗಳ ಮುಷ್ಕರ

Pinterest LinkedIn Tumblr

truckಬೆಂಗಳೂರು, ನ. ೬- ಲೋಡಿಂಗ್ – ಅನ್‌ಲೋಡಿಂಗ್, ಸಂಚಾರ ವೆಚ್ಚ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅನ್ನಭಾಗ್ಯ ಯೋಜನೆಯ ಪಡಿತರ ಆಹಾರಧಾನ್ಯಗಳನ್ನು ಸರಬರಾಜು ಮಾಡುವ 8 ಸಾವಿರಕ್ಕೂ ಹೆಚ್ಚು ಲಾರಿಗಳು ನಿನ್ನೆಯಿಂದ ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆಯ ಪಡಿತರ, ಪೊಲೀಸ್ ಕ್ವಾಟ್ರಸ್‌ಗೆ ಸರಬರಾಜು ಮಾಡುವ ಆಹಾರಧಾನ್ಯ ಹಾಗೂ ಬಿಸಿಯೂಟಕ್ಕೆ ಸರಬರಾಜು ಮಾಡುವ ಆಹಾರಧಾನ್ಯಗಳನ್ನು ಸರಬರಾಜು ಮಾ‌ಡುವ ಲಾರಿಗಳು ಮುಷ್ಕರ ಕೈಗೊಂಡಿರುವುದರಿಂದ ಆಹಾರ ಸರಬರಾಜು ಮೇಲೆ ಪರಿಣಾಮ ಬೀರಿದ್ದು, ರಾಜ್ಯದ ಕೆಲವೆಡೆ ಆಹಾರ ಧಾನ್ಯಗಳ ಕೊರತೆ ಎದುರಾಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಅನ್ನಭಾಗ್ಯ ಯೋಜನೆ ಪಡಿತರ ಸರಬರಾಜು ಮಾಡುವ 8 ಸಾವಿರ ಲಾರಿ ಮಾಲೀಕರಿಗೆ 175 ಕೋಟಿಗೂ ಹೆಚ್ಚು ಬಾಕಿ ಹಣ ಸರ್ಕಾರದಿಂದ ಬಿಡುಗಡೆ ಮಾಡಬೇಕಾಗಿದ್ದು, ಆ ಹಣ ಬಿಡುಗಡೆಯಾಗುವ ತನಕ ಮುಷ್ಕರವನ್ನು ಮುಂದುವರಿಸುವುದಾಗಿ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.
ಮಾತುಕತೆಗೆ ಸಿದ್ಧ
ಲಾರಿ ಮಾಲೀಕರ ಸಂಘ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧವಿದೆ. ಆದರೆ, ಲಾರಿ ಮಾಲೀಕರಿಗೆ ಬರಬೇಕಾಗಿರುವ ಬಾಕಿ ಹಣವನ್ನು ಬಿಡುಗಡೆಮಾಡುವತನಕ ಮುಷ್ಕರವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ನಿನ್ನೆ 10 ಸಾವಿರ ಟನ್ ಆಹಾರಧಾನ್ಯ ಸರಬರಾಜು ಮಾಡಿಲ್ಲ. ಇಂದೂ ಕೂಡ 10 ಸಾವಿರ ಟನ್ ಆಹಾರಧಾನ್ಯ ಸರಬರಾಜು ಮಾಡಿಲ್ಲ. ಇದರಿಂದಾಗಿ ಆಹಾರಧಾನ್ಯ ಪೂರೈಕೆ ಮೇಲೆ ವ್ಯತ್ಯಯ ಕಂಡು ಬಂದಿದೆ.
ಸರ್ಕಾರ ಸುಮ್ಮನೆ ನಾಟಕವಾಡುವುದನ್ನು ಬಿಟ್ಟು ಬಾಕಿ ಹಣ ಬಿಡುಗಡೆಗೆ ಮುಂದಾಗಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ನಮ್ಮ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಪ್ರತಿ ತಿಂಗಳು ರಾಜ್ಯಾದ್ಯಂತ 2 ಲಕ್ಷ ಟನ್ ಪಡಿತರ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲಾಗುತ್ತಿದ್ದು, ನಿನ್ನೆ ಹಾಗೂ ಇಂದು 20 ಸಾವಿರ ಟನ್ ಆಹಾರ ಧಾನ್ಯವನ್ನು ಪೂರೈಕೆ ಮಾಡಿಲ್ಲ ಎಂದರು.
ಲಾರಿ ಮಾಲೀಕರಿಗೆ ಲೋಡಿಂಗ್ -ಅನ್‌ಲೋಡಿಂಗ್ ಹಾಗೂ ಸಾಗಾಣೆ ವೆಚ್ಚವನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

Comments are closed.