ಬಂಗಾರಪೇಟೆ: ಹಾಸನ ಮೂಲದ ಹನ್ನೊಂದು ಜನ ಡಕಾಯಿತರ ತಂಡವನ್ನು ಬಂಗಾರಪೇಟೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪಟ್ಟಣ ಹೊರವಲಯದ ಅಕ್ಕಮ್ಮನದಿನ್ನೆಯ ರಾಮಕೃಷ್ಣಪ್ಪ ಅವರ ತೋಟದ ಮನೆಯಲ್ಲಿ ಡಕಾಯಿತಿ ಮಾಡಿ ನಗ ನಾಣ್ಯ ದೋಚಿದ್ದರು.
ಪ್ರೇಮಾ, ಪ್ರತಾಪ್, ಅನಿಲ್ ಕುಮಾರ್, ನಾಗೇಗೌಡ, ಹರೀಶ್, ಸುನಿಲ್ ಕುಮಾರ್, ರಘು, ಮಧು, ಮಾರಿಮುತ್ತು, ಸಂತೋಷ್ ಹಾಗೂ ಆರ್.ಮಂಜುನಾಥ್ ಆರೋಪಿಗಳೆಂದು ಗುರುತಿಸಲಾಗಿದೆ. ಇನ್ನೂ 5 ಜನ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ತಿಳಿಸಿದರು.
ಹಾಸನದಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ಆರೋಪಿಗಳು ಇದೇ ಮೊದಲ ಬಾರಿಗೆ ಡಕಾಯಿತಿ ಮಾಡುವ ಕೆಲಸಕ್ಕೆ ಮುಂದಾಗಿದ್ದರು.
ರಾಮಕೃಷ್ಣಪ್ಪ ಅವರ ಮನೆಯಲ್ಲಿ ₹ 80 ಕೋಟಿ ಕಪ್ಪು ಹಣವಿದೆ ಎಂದು ಪ್ರಮುಖ ಆರೋಪಿ ಪ್ರೇಮಾ ಅವರಿಗೆ ಯಾರೋ ಮಾಹಿತಿ ನೀಡಿದ್ದರು. ಈ ಹಣ ದೋಚಬೇಕು ಎಂದು ಯೋಜನೆ ರೂಪಿಸಿದ ಪ್ರೇಮಾ ತನ್ನ ಗಂಡ ಹಾಗೂ ಇತರರ ಗುಂಪು ಕಟ್ಟಿಕೊಂಡು ಬಂದು ಸೆಪ್ಟಂಬರ್ 19 ರಾತ್ರಿ ದರೋಡೆಗೆ ಹೊಂಚು ಹಾಕಿ ಕಾರ್ಯಾಚರಣೆ ನಡೆಸಿದ್ದರು.
ರಾಮಕೃಷ್ಣಪ್ಪ ಮನೆಯಲ್ಲಿ ನಾಯಿಗಳಿದ್ದರಿಂದ ದರೋಡೆ ವಿಫಲವಾಗಿತ್ತು. ಮತ್ತೆ 4 ದಿನಗಳ ನಂತರ ಬಂದ ಈ ತಂಡ ನಾಯಿಗಳಿಗೆ ನಿಂಬೆ ಹಣ್ಣಿನಲ್ಲಿ ಮದ್ದು ಹಾಕಿ ಪ್ರಜ್ಞೆ ತಪ್ಪಿಸಿ ಮನೆಯ ಒಳಗೆ ಹೋಗಿದ್ದರು.
ಕೋಟಿಲಿಂಗ ದರ್ಶನಕ್ಕೆ ಬಂದಿದ್ದು ದಾರಿ ತಪ್ಪಿ ಇಲ್ಲಿಗೆ ಬಂದಿದ್ದೇವೆ ಕುಡಿಯಲು ನೀರು ಕೊಡಿ ಎಂದು ಮನೆಯವರನ್ನು ಕೇಳಿದ್ದಾರೆ. ಮನೆ ಮಾಲೀಕರು ಬಾಗಿಲು ತೆಗೆದ ಬಳಿಕ ಅವರನ್ನು ಹಾಗೂ ಮನೆಯವರನ್ನು ಕೈಕಾಲು ಕಟ್ಟಿಹಾಕಿ ಚಾಕು ತೋರಿಸಿ ಮನೆಯಲ್ಲಿದ್ದ ₹ 5ಲಕ್ಷ ನಗದು 197 ಗ್ರಾಂ ಚಿನ್ನ ದೋಚಿಕೊಂಡು ಪರಾರಿಯಾಗಿದ್ದರು ಎಂದು ಎಸ್ಪಿ ಪ್ರಕರಣದ ವಿವರ ನೀಡಿದರು.
ಇವರೆಲ್ಲರೂ ಹಾಸನದಲ್ಲಿ ಬೀದಿ ಬದಿ ವ್ಯಾಪಾರಿಗಳಾಗಿದ್ದಾರೆ. ಎಲ್ಲರನ್ನು ಹಾಸನದಲ್ಲೇ ಬಂಧಿಸಲಾಗಿದೆ.