ಮಂಗಳೂರು: ಗರ್ಭಕೋಶ ತೆಗೆಸುವ ಮುನ್ನ ಯೋಚಿಸಬೇಕು ಮತ್ತು ಆಪ್ತ ವೈದ್ಯರೊಡನೆ, ಕುಟುಂಬ ವೈದ್ಯರೊಡನೆ ಸಮಾಲೋಚಿಸಬೇಕು. ಇನ್ನೊಬ್ಬ ತಜ್ಞವೈದ್ಯರ ಎರಡನೇ ಸಲಹೆ ಪಡೆಯಲು ಹಿಂದೆ ಬೀಳಬಾರದು. ನಿಮಗಿರುವ ಮುಟ್ಟಿನ ತೊಂದರೆಗೂ ಗರ್ಭಕೋಶ ತೆಗೆಯುವುದಕ್ಕೂ ಯಾವುದೇ ಸಂಬಂಧವಿಲ್ಲ. ಮುಟ್ಟಿನ ತೊಂದರೆಯಾಗಿರುವುದು ಹಾರ್ಮೋನ್‌ಗಳ ವ್ಯತ್ಯಾಸದಿಂದ.
ಹಾರ್ಮೋನ್‌ಗಳ ವ್ಯತ್ಯಾಸವನ್ನು ಸರಿದೂಗಿಸಲು ಮತ್ತು ಮುಟ್ಟಿನ ದೋಷವನ್ನು ಸರಿಪಡಿಸಲು ಮಾಲಾ–ಡಿ ಮಾತ್ರೆಯನ್ನು ೩ ರಿಂದ ೬ ತಿಂಗಳು ತೆಗೆದುಕೊಳ್ಳುವುದರಿಂದ ಸವಸ್ಯೆಯನ್ನು ಸರಿಪಡಿಸಬಹುದು. ಹೊಟ್ಟೆನೋವಿಗೆ ನೋವು ನಿವಾರಕ ಔಷಧಿಯನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ: Meftal Spas. ಯಾವುದಕ್ಕೂ ನೀವು ಒಮ್ಮೆ ಸ್ತ್ರೀರೋಗ ತಜ್ಞವೈದೈರನ್ನು ಕಾಣುವುದು ಒಳ್ಳೆಯದು.
ಶೇ. 10ರಿಂದ 15 ಮಹಿಳೆಯರು ಒಂದಲ್ಲಾ ಒಂದು ರೀತಿಯ ತೊಂದರೆಗೆ ತುತ್ತಾಗುತ್ತಾರೆ. ಗರ್ಭಕೋಶವನ್ನು ೩ ರೀತಿಯಲ್ಲಿ ತೆಗೆಯಬಹುದು.
1. ತೆರೆದ ಉದರ ಶಸ್ತ್ರ ಚಿಕಿತ್ಸೆಯ ಮುಖಾಂತರ.
2. ಲ್ಯಾಪ್ರೊಸ್ಕೋಪಿ (ಉದರದರ್ಶಕ)ಯ ಮುಖಾಂತರ.
3. ಯೋನಿಯ ಮುಖಾಂತರ ಗರ್ಭಕೋಶವನ್ನು ತೆಗೆಯಬಹುದು.
ಸಮಸ್ಯೆಗಳು:
1. ಸೋಂಕು ಉಂಟಾಗುತ್ತದೆ: ಜನನೇಂದ್ರಿಯ ಸೋಂಕು ಉಂಟಾಗುತ್ತದೆ.
2. ಸಂಭೋಗ ಕ್ರಿಯೆ ಕಷ್ಟವಾಗುತ್ತದೆ: ಯೋನಿಯು ಸಂಕುಚಿತಗೊಂಡು ಅದರ ಆಳ (Depth) ಕಡಿಮೆಯಾಗಿ ಆಕೆಯ ಗಂಡನಿಗೆ ಸಂಭೋಗ ಸುಖ ಮತ್ತು ತೃಪ್ತಿ ಸಿಗುವುದಿಲ್ಲ. ಮಹಿಳೆಗೆ ಅತೀವ ಯಾತನೆ ಉಂಟಾಗುತ್ತದೆ.
3. ಮೂತ್ರಕೋಶದ ತೊಂದರೆಗಳು: ಈ ಸಮಸ್ಯೆಯಿಂದ ಮೂತ್ರ ವಿಸರ್ಜನೆ ಕಷ್ಟವಾಗುತ್ತದೆ ಮತ್ತು ಅನಿಯಂತ್ರಿತ ಮುತ್ರ ವಿಸರ್ಜನೆಯಾಗುತ್ತದೆ.
4. ರಕ್ತ ಹೆಪ್ಪುಗಟ್ಟುತ್ತದೆ.
5. ಶಸ್ತ್ರಚಿಕಿತ್ಸೆ ಸಮಯದಲ್ಲಿ ಅಕ್ಕಪಕ್ಕದ ಅಂಗಾಂಗಗಳಿಗೆ (ಮುತ್ರಕೋಶ, ಮುತ್ರನಾಳ, ಕರುಳು) ಪೆಟ್ಟು ತಗಲುವ ಸಾಧ್ಯತೆಯಿರುತ್ತದೆ.
6. ಮಾನಸಿಕ ಖಿನ್ನತೆ: ತನ್ನಲ್ಲಿ ಏನೋ ಕಳೆದುಕೊಂಡ ಅನುಭವವಾಗಿ ಅದೇ ಮನಸ್ಸಿನಲ್ಲಿ ಬೇರೂರಿಬಿಟ್ಟಿರುತ್ತದೆ. ಇದರಿಂದ ಮಾನಸಿಕ ಅಸಮತೋಲನಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
7. ಯೋನಿರಸದ ಉತ್ಪಾದನೆ ಕುಗ್ಗುತ್ತದೆ.
8. ಋತುಬಂಧನ ಚಿಹ್ನೆಗಳು: ಗರ್ಭಕೋಶನ್ನು ತೆಗೆಯುವುದರಿಂದ ಶೀಘ್ರ ಋತುಬಂಧಕ್ಕೆ ಗುರಿಯಾಗಬಹುದು.
9. ಕೆಲವು ಸಾರಿ ಗರ್ಭಕೋಶದ ಜೊತೆ ಅಂಡಾಶಯಗಳನ್ನು ತೆಗೆಯುತ್ತಾರೆ. ಆಗ ಹಾರ್ಮೋನ್‌ಗಳ ಕೊರತೆ ಉಂಟಾಗಿ ಶೀಘ್ರ ಮುಪ್ಪಾಗುತ್ತಾರೆ.
ಈ ಎಲ್ಲಾ ಸಮಸ್ಯೆಗಳನ್ನು ನೋಡಿದರೆ ಗರ್ಭಕೋಶವನ್ನು ತೆಗೆಯುವ ಬದಲು ಇತರೆ ಪರಿಹಾರಗಳಿವೆಯೇ ಎಂದು ತಿಳಿದುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ಬೇರೆ ಯಾವುದೇ ಪರಿಹಾರವೇ ಇಲ್ಲವೆಂದಾಗ ಮಾತ್ರ ಗರ್ಭಕೋಶವನ್ನು ತೆಗೆಸಬಹುದು.
ನಿಧಾನ ಮುಟ್ಟು : ನಿಮ್ಮ ಮಾಸಿಕ ಮುಟ್ಟು ಸರಿಯಾಗಿ ಆಗದದಿರುವುದಕ್ಕೆ “ನಿಧಾನ ಮುಟ್ಟು” (Oligomenorrhea) ಎಂದು ಕರೆಯುತ್ತಾರೆ. ಈ ರೀತಿಯ ಸಮಸ್ಯೆಗಳಲ್ಲಿ ಮುಟ್ಟು ತಿಂಗಳಿಗೆ ಸರಿಯಾಗಿ ಆಗದೆ ೧,೨ ಅಥವಾ ೩ ತಿಂಗಳಿಗೆ ಒಂದು ಬಾರಿ ಆಗುತ್ತಿರುತ್ತದೆ. ಇದಕ್ಕೆ ಪ್ರಮುಖ ಕಾರಣಗಳು.
1. ಅಂಡಾಶಯದ ನೀರ್ಗಂಟುಗಳು.
2. ಹಾರ್ಮೋನ್ ವ್ಯತ್ಯಾಸ-ಮುಖ್ಯವಾಗಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರೊನ್ ಹಾರ್ಮೋನ್‌ನ ವ್ಯತ್ಯಾಸ.
3. ಮಾನಸಿಕ ಮತ್ತು ದೈಹಿಕ ಒತ್ತಡ, ಆಯಾಸ.
4. ಖಾಯಿಲೆಗಳಿಂದ: ಧೀರ್ಘಕಾಲ ಜ್ವರ ಇತ್ಯಾದಿ.
5. ಪುರುಷ ಪ್ರಧಾನ ಹಾರ್ಮೋನಾದ ಆಂಡ್ರೋಜೆನ್ ಹೆಚ್ಚಾಗಿ ಉತ್ಪಾದಿಸಲ್ಪಟ್ಟಿರುವುದು.
6. ಅಪೌಷ್ಟಿಕತೆ.
ಒಂದು ಮುಟ್ಟಿನ ಅವಧಿಗೂ ಮತ್ತೊಂದು ಮುಟ್ಟಿನ ಅವಧಿಗೂ ೩೫ ದಿನಗಳ ಅಂತರವಿರುತ್ತದೆ. ಹೇಳಬೇಕೆಂದರೆ ೧ ವರ್ಷದಲ್ಲಿ ೪ ಅಥವಾ ೫ ಬಾರಿ ಮಾತ್ರ ಮುಟ್ಟಾಗುತ್ತಾರೆ. ಇದೇ ಅದರ ಚಿಹ್ನೆಗಳು.
ಇದರಿಂದಾಗಿ ಮುಂದೆ ಗರ್ಭ ಧರಿಸಲು ತೊಂದರೆ ಉಂಟಾಗುತ್ತದೆ ಮತ್ತು ಬಂಜೆತನದ ಸಮಸ್ಯೆ ಕಂಡುಬರಬಹುದು.
1. ಕೀಳ್ಗುಳಿ ಸ್ಕ್ಯಾನಿಂಗ್ (Pelvic Scanning)
2. ರಕ್ತ ಮತ್ತು ಮುತ್ರ ಪರೀಕ್ಷೆ.
3. ಹಾರ್ಮೋನ್ ಪರೀಕ್ಷೆಗಳನ್ನು ಮಾಡಿಸುವುದರಿಂದ ಕಂಡುಹಿಡಿಯಬಹುದು.
ಈ ಸಮಸ್ಯೆಗೆ ಕಾರಣಗಳನ್ನು ಅವಲಂಬಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಂದರೆ
1. ಪೌಷ್ಠಿಕ ಆಹಾರದ ನೇವನೆ.
2. ಹಾರ್ಮೋನ್ ತೊಂದರೆಗೆ ಹಾರ್ಮೋನ್ ಚಿಕಿತ್ಸೆ.
3. ಮಾನಸಿಕ ಒತ್ತಡಗಲಿಗೆ ಸೈಕೋಥೆರಪಿ (Psycotherapy)
4. ಅಂಡಾಶಯದಲ್ಲಿ ಗಂಟುಗಳಾಗಿದ್ದರೆ, ಗಂಟು, ಗಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಲಾಗುತ್ತದೆ.
ಈ ಸಮಸ್ಯೆ ಒಂದರಂತೆ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳುವುದರಿಂದ ಸಮಸ್ಯೆ ಬಾರದಂತೆ ನಿಯಂತ್ರಿಸಬಹುದಾಗಿದೆ.
1. ಈ ಸಮಸ್ಯೆ ಪ್ರಾರಂಭದಲ್ಲಿರುವಾಗಲೇ ತಜ್ಞವೈದ್ಯರನ್ನು ಕಾಣಬೇಕು.
2. ದೇಹವನ್ನು ಸಮತೋಲನದಲ್ಲಿರಿಸಿಕೊಳ್ಳಬೇಕು.
3. ಮಾದಕ ದ್ರವ್ಯಗಳನ್ನು ದೇವಿಸಬಾರದು.
4. ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಿಕೋಳ್ಳಬೇಕು.
ಮುಟ್ಟಾದಾಗ ಹೊಟ್ಟೆನೋವು ಬರುತ್ತದೆಯೆಂದು ತಿಳಿಸಿದ್ದೀರಿ. ಮೊದಲು ಮುಟ್ಟುನೋವು ಬರಲು ಕಾರಣಗಳೇನೆಂದು ತಿಳಿದುಕೊಳ್ಳೋಣ.
ಮುಟ್ಟಿನ ನೋವು ಬರಲು ಹಲವಾರು ಕಾರಣಗಳಿವೆ:
1. ಒಳಜನನೇಂದ್ರಿಯಗಳಲ್ಲಿ ಸೋಂಕು ತಗುಲಿದಾಗ ಅವುಗಳಲ್ಲಿ ರಕ್ತ ಚಲನೆಯಾಗುವುದು ಹೆಚ್ಚಾಗುತ್ತದೆ. ರಕ್ತದ ಪೂರೈಕೆ ಹೆಚ್ಚಾಗುವುದರಿಂದ ನೋವು ಉಂಟಾಗುತ್ತದೆ.
2. ಗರ್ಭಕೋಶವು ಸಂಕುಚಿತಗೊಂಡಾಗ ತನ್ನ ಒಳವರಿ (Endometrium)ಯನ್ನು ಕಳಚಿ ಹಾಕುತ್ತದೆ. ಹೀಗಾಗುವಾಗ ಗರ್ಭಕೋಶವು ಸಂಕುಚಿತಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ ರಕ್ತದ ಕಡಿಮೆ ಪೂರೈಕೆಯಿಂದಾಗಿ ಗರ್ಭಾಶಯದಲ್ಲಿ ಎಳೆತವುಂಟಾಗಿ ನೋವು ಬರುತ್ತದೆ.
3. ಗರ್ಭಕಂಠವು ಕಿರಿದಾದಾಗ ಸ್ರಾವವು ಸರಾಗವಾಗಿ ಆಗದೇ ಗರ್ಭಕೋಶದ ಒಳಗೆ ಮುಟ್ಟಿನ ರಕ್ತ (Menstraul Blood) ಶೇಖರಣೆಯಾಗಿ ಹೆಪ್ಪುಗಟ್ಟಿ ಹೊರಗೆ ಬರುವುದಕ್ಕೆ ಆಗದೇ ಇರುವ ಸಂದರ್ಭದಲ್ಲಿ ನೋವು ಬರುತ್ತದೆ. ಹೀಗೆ ಶೇಖರಣೆಯಾದ ರಕ್ತವನ್ನು ಹೊರಹಾಕಲು ಗರ್ಭಕೋಶವು ತೀವ್ರತರವಾಗಿ ಸಂಕುಚಿತಗೊಳ್ಳಲು ಪ್ರಯತ್ನಿಸಿ ನೋವುಂಟಾಗುತ್ತದೆ.
4. ಗರ್ಭಕೋಶದಲ್ಲಿನ ನ್ಯೂನತೆಗಳಿಂದಲೂ ಸಹ ನೋವುಂಟಾಗುತ್ತದೆ. ಉದಾಹರಣೆಗೆ ನಾರುಗಂಟು, ಒಳವರಿಯ ಗಂಟು, ಕಿರಿದಾದ ಗರ್ಭಕಂಠ ಮತ್ತು ಸ್ಥಾನಪಲ್ಲಟಗೊಂಡ ಗರ್ಭಕೋಶ ಇಂತಹ ಸಮಸ್ಯೆಗಳಿದ್ದಾಗ ನೋವು ಉಂಟಾಗುತ್ತದೆ ಮತ್ತು ನೋವಿನ ತೀವ್ರತೆಯು ಹೆಚ್ಚೆರುತ್ತದೆ.
5. ಅಂಡಾಶಯಗಳಲ್ಲಿ ಕಂಡುಬರುವ ಗಡ್ಡೆ, ಗಂಟು, ದುರ್ಮಾಂಸಗಳೂ ಸಹ ಮುಟ್ಟು ನೋವಿಗೆ ಕಾರಣವಾಗುತ್ತದೆ.
6. ಕೀಳ್ಗುಳಿ ಸೋಂಕು ಖಾಯಿಲೆಯಿಂದ (Pelivic Inflammatory Disease) ಒಳಜನನೇಂದ್ರಿಯಗಳಲ್ಲಿ ಸೋಂಕು ಉಂಟಾಗಿ ಒಳಜನನೇಂದ್ರಿಯಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಬಿಳಿಸೆರಗು ಕಾಣಿಸಿಕೊಳ್ಳುತ್ತದೆ. ಗರ್ಭಕೋಶದ ಒಳಗೆ ಯಾವುದಾದರೂ ಹೊರವಸ್ತು ಸೇರಿಸಿಕೊಂಡಾಗ ಮತ್ತು ವಂಕಿ ಅಳವಡಿಸಿದಾಗ ಕೆಲವು ಸಾರಿ ಸೋಂಕುಂಟಾಗಿ ಬಿಳಿಸೆರಗು ಕಂಡುಬರುತ್ತದೆ ಮತ್ತು ನೋವು ಉಂಟಾಗುತ್ತದೆ.
7. ಹುಟ್ಟಿನಿಂದ ಕಂಡುಬರುವ ಅಥವಾ ಜನನದಿಂದಲೇ ಇರುವಂತಹ ಕೆಲವೊಂದು ದೈಹಿಕ ದೋಷಗಳಿಂದ ಈ ಸವಸ್ಯೆ ಉಂಟಾಗಬಹುದು.
8. ಕನ್ಯಾಪೊರೆ ಹರಿಯದೇ ಇರುವುದು ನೋವಿಗೆ ಮತ್ತೊಂದು ಕಾರಣ.
9. ಕೆಲವು ಸಾರಿ ಜನನೇಂದ್ರಿಯಗಳಲ್ಲಿ ಅಲ್ಲದೇ ಅಕ್ಕಪಕ್ಕದ ಅಂಗಾಂಗಗಳಲ್ಲಿ ತೊಂದರೆ. ಉದಾಹರಣೆಗೆ: ಅಪೆಂಡಿಸೈಟಿಸ್ ಖಾಯಿಲೆ ಮುಟ್ಟು ನೋವನ್ನು ಹೋಲುತ್ತದೆ.
ಪುಸ್ತಕ: ನಮ್ಮ ಮನೆಯ ಮಲ್ಲಿಗೆ