ಕರ್ನಾಟಕ

ದಾವಣಗೆರೆ: ತರಕಾರಿ ಮಾರುಕಟ್ಟೆಯ 20 ಮಳಿಗೆ ಭಸ್ಮ

Pinterest LinkedIn Tumblr

davanagereದಾವಣಗೆರೆ: ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು 20 ಮಳಿಗೆಗಳು ಸುಟ್ಟು ಕರಕಲಾಗಿವೆ. ದುರ್ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಮೂರು ಕೋಟಿ ರೂಪಾಯಿಗಿಂತಲೂ ಹೆಚ್ಚು ನಷ್ಟ ಸಂಭವಿಸಿರಬಹುದು ಎಂದು ವ್ಯಾಪಾರಿಗಳು ಅಂದಾಜು ಮಾಡಿದ್ದಾರೆ. ಸೋಮವಾರ ಬೆಳಗಿನಜಾವ 1 ಗಂಟೆಯ ಬಳಿಕ ಮಳಿಗೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲ ಕ್ಷಣಗಳಲ್ಲೇ ಬೆಂಕಿ ಅಕ್ಕ ಪಕ್ಕದ ಮಳಿಗೆಗಳಿಗೂ ವ್ಯಾಪಿಸಿದೆ. ಇದನ್ನು ಗಮನಿಸಿದ ಸ್ಥಳಿಯರು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಳಿಕ ನೆರೆಯ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಹೆಚ್ಚುವರಿಯಾಗಿ ಅಗ್ನಿಶಾಮಕ ದಳದ ವಾಹನಗಳನ್ನು ತರಿಸಿಕೊಳ್ಳಲಾಗಿದೆ. ಒಟ್ಟು 9 ವಾಹನಗಳನ್ನು ಬಳಸಿಕೊಂಡು ಬೆಳಗಿನಜಾವ ಮೂರು ಗಂಟೆ ಹೊತ್ತಿಗೆ ಬೆಂಕಿ ಅಕ್ಕ ಪಕ್ಕ ವ್ಯಾಪಿಸುವುದನ್ನು ತಡೆಗಟ್ಟಲಾಗಿದೆ. ಬೆಳಿಗ್ಗೆ 6 ಗಂಟೆ ಹೊತ್ತಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮಾ ನೇತೃತ್ವದಲ್ಲಿ 45 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಲಕ್ಷ್ಮೀ ಪೂಜೆ ಮಾಡಲಾಗಿತ್ತು. ದೀಪದ ಕಿಡಿ ಸಿಡಿದು ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

Comments are closed.