ಕರ್ನಾಟಕ

ನರ್ಸಿಂಗ್ ಹೋಂಗೆ ಮೂಗುದಾರ: ಆರೋಗ್ಯ ಸಚಿವ ಕೆ.ಆರ್. ರಮೇಶ್‌ಕುಮಾರ್

Pinterest LinkedIn Tumblr

ramesh kumarಬೆಂಗಳೂರು, ಅ. ೨೭- ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಶೋಷಣೆ ಮಾಡುತ್ತಿರುವುದು, ಯದ್ವಾತದ್ವಾ ದರ ವಸೂಲಿ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಖಾಸಗಿ ವೈದ್ಯಕೀಯ ಆಸ್ಪತ್ರೆಗಳಲ್ಲಿ ರೋಗಿಗಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ತರಲು ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಕಾಯ್ದೆಯ ಸ್ವರೂಪ ಹೇಗಿರಬೇಕು, ಈ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಮರ್ಶಿಸಿ ವರದಿ ನೀಡಲು ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾ. ವಿಕ್ರಂಜಿತ್ ಸೇನ್ ನೇತೃತ್ವದಲ್ಲಿ ಶಾಸನ ಬದ್ಧ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಈ ಸಮಿತಿಯಲ್ಲಿ ವೈದ್ಯಕೀಯ ಹಾಗೂ ಕಾನೂನು ಕ್ಷೇತ್ರದಲ್ಲಿ ಪರಿಣಿತಿಯುಳ್ಳ ತಜ್ಞರು, ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗಣ್ಯ ನಾಗರಿಕರು ಸದಸ್ಯರುಗಳಾಗಿದ್ದು, ಇನ್ನು 8 ವಾರದಲ್ಲಿ ಈ ಸಮಿತಿ ವರದಿ ನೀಡಲಿದೆ ಎಂದರು.
ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದುಬಾರಿ ದರ ವಸೂಲಿ ಮಾಡಿ ಶೋಷಣೆ ಮಾಡುವುದನ್ನು ತಪ್ಪಿಸಲು ಪ್ರತಿ ಚಿಕಿತ್ಸೆಯ ದರ ಪಟ್ಟಿಯನ್ನು ಪ್ರದರ್ಶಿಸುವುದನ್ನು ಕಡ್ಡಾಯ ಮಾಡಲಾಗುವುದು. ಜತೆಗೆ ವಿವಿಧ ವೈದ್ಯಕೀಯ ಚಿಕಿತ್ಸೆ ತಪಾಸಣೆ, ವೈದ್ಯರ ಶುಲ್ಕ ಎಲ್ಲವನ್ನು ರೋಗಿಗಳ ಗಮನಕ್ಕೆ ತರುವುದನ್ನು ಕಡ್ಡಾಯ ಮಾಡಲಾಗುವುದು. ಹಾಗಾಗಿಯೇ ಈಗಿರುವ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದರು.
ಈ ಖಾಸಗಿ ಆಸ್ಪತ್ರೆಗಳು ಲಾಭಗಳಿಕೆಗೆ ಮಾತ್ರ ಸೀಮಿತವಾಗಬಾರದು. ವೃತ್ತಿ ಸಂಹಿತೆಯನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ ಈ ವೃತ್ತಿ ಸಂಹಿತೆಯನ್ನು ಉಲ್ಲಂಘನೆ ಮಾಡುವ ವ್ಯಕ್ತಿ ಅಥವಾ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ರಮೇಶ್‌ಕುಮಾರ್ ಹೇಳಿದರು.
ಉತ್ತಮ ಗುಣಮಟ್ಟದ ಚಿಕಿತ್ಸೆ ಎಲ್ಲರಿಗೂ ಲಭ್ಯವಾಗಬೇಕು. ಮೊದಲು ಚಿಕಿತ್ಸೆ ನಂತರ ಹಣ ಎಂಬ ಸಂಕಲ್ಪದಿಂದ ಈ ಕಾಯ್ದೆಯನ್ನು ರಚಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

Comments are closed.