ಕರ್ನಾಟಕ

ಆತಂಕ ಹಾಗೂ ಖಿನ್ನತೆಗಳಿಗೆ ಯೋಗ ಚಿಕಿತ್ಸೆ

Pinterest LinkedIn Tumblr

Yoga

ಮಂಗಳೂರು: ಇಂದು ಯೋಗಾಭ್ಯಾಸದ ಹತ್ತು ಹಲವು ರೂಪಗಳು ಪ್ರಚಲಿತವಿದ್ದು, ಅವುಗಳಲ್ಲಿ ಪ್ರತಿಯೊಂದೂ ತನ್ನ ಶ್ರೇಷ್ಠತೆಯನ್ನೂ, ಪರಿಶುದ್ಧತೆಯನ್ನೂ ಹೇಳಿಕೊಳ್ಳುತ್ತಿರುವಾಗ, ಪ್ರಾಚೀನ ಭಾರತದಲ್ಲಿ ಋಷಿ-ಮುನಿಗಳು ಮಾಡುತ್ತಿದ್ದ ಯೋಗಾಭ್ಯಾಸಕ್ಕೂ ಈ ಆಧುನಿಕ ಯೋಗ ವಿಧಾನಗಳಿಗೂ ಏನಾದರೂ ಸಾಮ್ಯತೆಗಳಿವೆಯೇ?

ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಮತ್ತು ಕಾಹಿಲೆಗಳನ್ನು ತಡೆಯುವಲ್ಲಿ ಅಥವಾ ಗುಣಪಡಿಸುವಲ್ಲಿ ಯೋಗವು ಪರಿಣಾಮಕಾರಿಯೆಂದು ನಿಸ್ಸಂದೇಹವಾಗಿ ಶ್ರುತಪಡಿಸುವ ಆಧಾರಗಳೇನಾದರೂ ಲಭ್ಯವಿವೆಯೇ?

ಯೋಗಾಭ್ಯಾಸವು ಸಂಪೂರ್ಣವಾಗಿ ಸುರಕ್ಷಿತವೇ?

ಭಾರತದ ಪ್ರಾಚೀನ ವಿದ್ಯೆಯಾದ ಯೋಗವು ಇಂದು ಬಹುರೂಪಿಯಾಗಿ ವಿಶ್ವಾದ್ಯಂತ ಹರಡಿರುವುದು ಮೇಲ್ನೋಟಕ್ಕೇ ಕಾಣಿಸುತ್ತದೆ. ಪತ್ರಿಕೆಗಳ ಆರೋಗ್ಯ ಅಂಕಣಗಳಿಂದ ಟಿವಿ ಚಾನಲ್ ಗಳ ವರೆಗೆ, ಭಾರತದಿಂದ ಅಮೆರಿಕದವರೆಗೆ, ಮಕ್ಕಳಿಂದ ವೃದ್ಧರವರೆಗೆ ಎಲ್ಲೆಲ್ಲೂ ವ್ಯಾಪಕವಾಗಿ ಯೋಗವು ಸರ್ವಸಮ್ಮತವಾಗಿ ಬಿಟ್ಟಿದೆಯೆಂದೇ ಬಿಂಬಿಸಲಾಗುತ್ತಿದೆ. ವಿಜ್ಞಾನ, ಗಣಿತ, ತತ್ವಶಾಸ್ತ್ರ, ಕಲೆ ಇವೇ ಮುಂತಾದ ಕ್ಷೇತ್ರಗಳಿಗೆ ಪ್ರಾಚೀನ ಭಾರತದ ಕೊಡುಗೆಗಳೆಲ್ಲ ನಗಣ್ಯವಾಗಿ ಯೋಗಶಾಸ್ತ್ರವೇ ಮನುಕುಲಕ್ಕೆ ಭಾರತದ ಅತಿ ಶ್ರೇಷ್ಠವಾದ ಕೊಡುಗೆಯೆಂದು ಹೇಳಲಾಗುತ್ತಿದೆ. ತಪಸ್ವಿಗಳ ಯೋಗಾಭ್ಯಾಸವು ಇಂದು ಹಲವರಿಗೆ ಕೋಟಿಗಟ್ಟಲೆ ವ್ಯವಹಾರದ ಹೆಬ್ಬಾಗಿಲನ್ನೇ ತೆರೆದಿಟ್ಟಂತಾಗಿದೆ.

ಕೆಲವರು ಅಪ್ಪಟ ವ್ಯಾವಹಾರಿಕ ಶೈಲಿಯಲ್ಲಿ ವಿಶಿಷ್ಟವಾದ, ಪೇಟೆಂಟ್ ಯುಕ್ತ, ಹವಾನಿಯಂತ್ರಿತ ಯೋಗ ‘ಸ್ಟುದಿಯೋ’ಗಳನ್ನು ನಡೆಸುತ್ತಿದ್ದರೆ, ಜನರ ಮರ್ಮವನ್ನು ಅರ್ಥಮಾಡಿಕೊಳ್ಳುವಲ್ಲಿ ನಿಷ್ಣಾತರಾದ ಇನ್ನು ಕೆಲವರು ಯೋಗಾಭ್ಯಾಸದ ಒಂದೆರಡು ವಿಧಗಳನ್ನು ಅಲ್ಪಸ್ವಲ್ಪ ರೂಪಾಂತರಿಸಿ, ಅದಕ್ಕೊಂದು ವಿಶೇಷವಾದ ನಾಮಕರಣ ಮಾಡಿ, ತಲೆಕೂದಲು-ಗಡ್ದಗಳನ್ನು ಅತ್ತಿಂದಿತ್ತ ಇಳಿಬಿಟ್ಟು, ಕಿರುನಗೆ ಬೀರಿ, ಶ್ರೀ ಶ್ರೀ ಯಾ ಮಹಾಪೂಜನೀಯ ಬಿರುದಾಂಕಿತ ಜಗದ್ಗುರುಗಳಾಗಿ ಮೆರೆಯುತ್ತಿದ್ದಾರೆ.

ಬಹುಷಃ ಇವರೆಲ್ಲರ ‘ಅದ್ಭುತ ಕೆಲಸಗಳಿಂದ’ ಪ್ರೇರೇಪಿತರಾಗಿ ಕೇಂದ್ರ ಹಾಗೂ ಕೆಲ ರಾಜ್ಯ ಸರಕಾರಗಳ ಮಂತ್ರಿಗಳು ಶಾಲಾ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಕಡ್ಡಾಯ ಯೋಗ ಶಿಕ್ಷಣವನ್ನು ಆರಂಭಿಸುವ ನಿರ್ಧಾರಕ್ಕೆ ಬಂದಂತಿದೆ. ಭಾರತ ಮೂಲದ ಎಲ್ಲವನ್ನೂ ‘ರಕ್ಷಿಸುವ’ ಏಕಸ್ವಾಮ್ಯತೆ ತಮ್ಮದೆಂದು ಹೇಳಿಕೊಳ್ಳುವ ಕೆಲ ಶಕ್ತಿಗಳು ಯೋಗವನ್ನೂ ತಮ್ಮ ಬಗಲಿಗೇರಿಸಿಕೊಂಡಿದ್ದು, ಯೋಗದ ಬಗ್ಗೆ ಯಾರಾದರೂ ಏನನ್ನಾದರೂ ಸಂಶಯಗಳನ್ನು ವ್ಯಕ್ತಪಡಿಸಿದರೆ ಅಂತಹವರನ್ನು ಹಿಂದೂ ವಿರೋಧಿಗಳೆಂದೂ, ದೇಶಪ್ರೇಮವಿಲ್ಲದವರೆಂದೂ, ದೇಶದ್ರೋಹಿಗಳೆಂದೂ ಕೂಡಲೇ ಜರೆಯಲಾಗುತ್ತದೆ.

ಯೋಗ ಅಂದರೇನು?

ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಯೋಗಾಭ್ಯಾಸವು ಪ್ರಚಲಿತವಿದ್ದು, ವರ್ಷಗಟ್ಟಲೆ ತಪಸ್ಸಿನಲ್ಲಿ ತೊಡಗಿ ಬಲು ಕಠಿಣವಾದ ಜೀವನಕ್ರಮವನ್ನು ಪಾಲಿಸುತ್ತಿದ್ದ ಋಷಿ-ಮುನಿಗಳು ತಮ್ಮ ಧ್ಯಾನಕಾಲದಲ್ಲಿ ಅದನ್ನು ಬಳಸುತ್ತಿದ್ದಿರಬೇಕು. ಕ್ರಿ.ಪೂ.2ನೇ ಶತಮಾನದಲ್ಲಿ ಪತಂಜಲಿ ಮುನಿ ಬರೆದ ‘ಯೋಗ ಸೂತ್ರಗಳು’ ಈ ಧ್ಯಾನವಿಧಾನಗಳನ್ನೆಲ್ಲ ಒಳಗೊಂಡ ಯೋಗಶಾಸ್ತ್ರದ ಮೂಲಗ್ರಂಥವೆಂದು ಪರಿಗಣಿಸಲ್ಪಟ್ಟಿದೆ. ಅಲ್ಲಿಂದೀಚೆಗೆ ಯೋಗಾಶಾಸ್ತ್ರದಲ್ಲಿ ಹಲವು ಬಗೆಯ ಬೆಳವಣಿಗೆಗಳಾಗಿದ್ದು, ಹಠ ಯೋಗವು ಪತಂಜಲಿಯ ರಾಜ ಯೋಗವನ್ನು ಸಾಧಿಸುವುದಕ್ಕಿರುವ ಮೆಟ್ಟಲೆಂದೂ, ಉನ್ನತ ಧ್ಯಾನಾಭ್ಯಾಸಕ್ಕೆ ದೇಹವನ್ನು ಅಣಿಗೊಳಿಸುವ ದೈಹಿಕ ಶುದ್ಧೀಕರಣದ ಹಂತವೆಂದೂ ಸ್ವಾತ್ಮರಾಮರು ತಮ್ಮ ಗ್ರಂಥವನ್ನು ಪರಿಚಯಿಸುತ್ತಾರೆ.

ಇಂದು ಪತಂಜಲಿಯ ರಾಜ ಯೋಗ ಹಾಗೂ ಸ್ವಾತ್ಮರಾಮರ ಹಠ ಯೋಗಗಳಲ್ಲದೆ ಇನ್ನೂ ಅಸಂಖ್ಯಾತ ಯೋಗ ಹಾಗೂ ಧ್ಯಾನ ವಿಧಾನಗಳು ಕಾಣಸಿಗುತ್ತವೆ: ಅಗ್ನಿ ಯೋಗ, ಅನಾಹತ ಯೋಗ, ಆರ್ಟಿಸ್ಟಿಕ್ ಯೋಗ, ಅಷ್ಟಾಂಗ ವಿನ್ಯಾಸ ಯೋಗ, ಭಕ್ತಿ ಯೋಗ, ಬಿಕ್ರಂ ಯೋಗ ಅಥವಾ ಹಾಟ್ ಯೋಗ, ಡಿಸ್ಕೋ ಯೋಗ, ‘ಬಾಬಾ’ ರಾಮದೇವನ ದಿವ್ಯ ಯೋಗ, ಡ್ರೀಂ ಯೋಗ, ಹಿಪ್ ಹಾಪ್ ಯೋಗ, ಇಂಟೆಗ್ರಲ್ ಯೋಗ, ಐಯ್ಯಂಗಾರ್ ಯೋಗ, ಜ್ಞಾನ ಯೋಗ, ಕರ್ಮ ಯೋಗ, ಕ್ರಿಯಾ ಯೋಗ, ಕುಂಡಲಿನಿ ಯೋಗ, ನಾಟ್ಯ ಯೋಗ, ಪವರ್ ಯೋಗ, ರಿಸ್ಟೊರಟಿವ್ ಯೋಗ, ಪ್ರಭಾಕರ ಋಷಿಯ ಸಿದ್ಧ ಸಮಾಧಿ ಯೋಗ, ನರೋಪನ ಆರು ಯೋಗ, ಸಹಜ ಯೋಗ, ಸಿಲ್ವರ್ ಯೋಗ, ಶಿವಾನಂದ ಯೋಗ, ರವಿಶಂಕರನ ಸುದರ್ಶನ ಕ್ರಿಯೆ, ಸುರತ್ ಶಬ್ದ ಯೋಗ, ಮಹೇಶ್ ಯೋಗಿಯ ಟ್ರಾಂಸೆಂಡೆಂಟಲ್ ಮೆಡಿಟೇಶನ್, ವಿನಿಯೋಗ, ಯಂತ್ರ ಯೋಗ, ಯೋಗ ನಿದ್ರಾ ಇತ್ಯಾದಿ ಉದಾಹರಣೆಗಳಾಗಿವೆ.

ಈ ವಿವಿಧ ಯೋಗ ವಿಧಾನಗಳ ಗುಣ ವಿಶೇಷಗಳೂ, ಜನಪ್ರಿಯತೆಯೂ ಅವುಗಳ ಪ್ರವರ್ತಕರ ವ್ಯವಹಾರ ಹಾಗೂ ಸಂವಹನ ಕೌಶಲ್ಯಗಳಿಗೆ ಅನುಗುಣವಾಗಿದೆಯೆನ್ನುವುದನ್ನು ಬೇರೆ ಹೇಳ ಬೇಕಾಗಿಲ್ಲ. ಬಾಬಾ ರಾಮದೇವ್ ಸ್ವಾಮಿ ಮಹಾರಾಜರು ಏಳು ವಿಧದ ಪ್ರಾಣಾಯಮಗಳನ್ನು, ಅದರಲ್ಲೂ ವಿಶೇಷವಾಗಿ ಕಪಾಲಭಾತಿಯನ್ನು ಕಲಿಸುವವರಾದರೆ, ಮಹಾಪೂಜನೀಯರಾದ ಶ್ರೀ ಶ್ರೀ ರವಿಶಂಕರ್ ಅವರು ‘ಸುದರ್ಶನ ಕ್ರಿಯೆ ಎಂಬ ಅತ್ಯಂತ ಪ್ರಭಾವಶಾಲಿಯಾದ ಉಸಿರಾಟದ ವಿಧಾನವನ್ನು ಜಗತ್ತಿಗೆ ಸಮರ್ಪಿಸುವುದಕ್ಕಾಗಿ ಹತ್ತು ದಿನಗಳ ಕಾಲ ಆಳವಾದ ಚಿಂತನೆ ಹಾಗೂ ಮೌನದಲ್ಲಿ’ ಕಳೆಯಬೇಕಾಯಿತಂತೆ.

ಇಂದು ಪ್ರಚಲಿತವಿರುವ ‘ಯೋಗ’ದಲ್ಲಿ ಇಷ್ಟೊಂದು ವೈವಿಧ್ಯತೆಯಿರುವಾಗ, ನೀವು ಕಲಿತಿರುವುದು ಯಾ ಮಾಡುತ್ತಿರುವುದು ನಿಜಕ್ಕೂ ಭಾರತದ ಪ್ರಾಚೀನ ಯೋಗವೇ? ಅಲ್ಲದೆ, ತಪಸ್ವಿಗಳ ಅಭ್ಯಾಸವಾಗಿ ರೂಪತಳೆದ ಯೋಗವು ನಮಗೆ ಅಗತ್ಯವೇ?

ಯೋಗದಿಂದ ಪ್ರಯೋಜನಗಳಿವೆಯೇ?

ಧ್ಯಾನದತ್ತ ತಮ್ಮ ಗಮನವನ್ನು ಕೇಂದ್ರೀಕರಿಸಲು ನೆರವಾಗಲೆಂದು ಋಷಿ-ಮುನಿಗಳು ಬಳಸುತ್ತಿದ್ದ ಯೋಗಾಭ್ಯಾಸವು ಇಂದು ‘ಸರ್ವರೋಗ ನಿವಾರಕ ವಿಜ್ಞಾನ’ವಾಗಿ ಬೆಳೆದಿರುವುದಿದೆ.ಯೋಗವು ವಿಶ್ವದ ಆರೋಗ್ಯದ ಚರಿತ್ರೆಯಲ್ಲಿಯೇ ಮೊತ್ತ ಮೊದಲನೆಯವನಾಗಿದಾಗಿದೆ. ಆಧುನಿಕ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಬೇನೆ, ರಕ್ತನಾಳಗಳಲ್ಲಿ ತೊಡಕು, ಬೊಜ್ಜು, ಅಸ್ತಮಾ, ಶ್ವಾಸನಾಳಗಳ ಕಾಹಿಲೆ, ಬಿಳಿತೊನ್ನು, ಖಿನ್ನತೆ, ಪಾರ್ಕಿನ್ಸನ್ ಕಾಹಿಲೆ, ನಿದ್ರಾಹೀನತೆ, ತಲೆಶೂಲೆ, ಥೈರಾಯ್ಡ್ , ಸಂಧಿವಾತ, ಕತ್ತು ನೋವು, ಹೆಪಟೈಟಿಸ್, ಮೂತ್ರ ಪಿಂಡಗಳ ವೈಫಲ್ಯ, ಕ್ಯಾನ್ಸರ್, ಯಕೃತ್ತಿನ ವೈಫಲ್ಯ, ಗಾಳಿ, ಮಲಬದ್ಧತೆ, ಆಮ್ಲೀಯತೆ ಇವೇ ಮುಂತಾದ ಮಾರಕ ರೋಗಗಳಿಂದ ಬಳಲುತ್ತಿರುವ ಸಹಸ್ರಾರು ಜನರಿಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾನೆ.

ಆದರೆ ಯೋಗಾಭ್ಯಾಸದಿಂದ ಆರೋಗ್ಯಪಾಲನೆಗೆ ಏನಾದರೂ ಪ್ರಯೋಜನಗಳಿರುವ ಬಗ್ಗೆ ನಿಸ್ಸಂದೇಹವಾದ ಪುರಾವೆಗಳೆಲ್ಲಿ?
ಮನುಷ್ಯನ ಆರೋಗ್ಯ ಹಾಗೂ ಕಾಹಿಲೆಗಳ ಮೇಲೆ ಯೋಗಾಭ್ಯಾಸದ ಪರಿಣಾಮಗಳ ಬಗ್ಗೆ ಹಲವಾರು ಸಂಶೋಧನೆಗಳನ್ನು ನಡೆಸಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಸಹಜವಾಗಿಯೇ ಭಾರತದಲ್ಲಿಯೇ ನಡೆಸಲಾಗಿದ್ದು, ಕೆಲವನ್ನು ದೆಹಲಿಯ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಎ ಐ ಐ ಎಂ ಎಸ್), ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮುಂತಾದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಹಾಗೂ ಅನ್ಯ ದೇಶಗಳಲ್ಲಿಯೂ ನಡೆಸಲಾಗಿದೆ. ಈ ಸಂಶೋಧನೆಗಳ ಹೆಚ್ಚಿನ ವರದಿಗಳು ಭಾರತದ ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದರೆ, ಕೆಲವೊಂದು ವಿದೇಶೀ ಪತ್ರಿಕೆಗಳಲ್ಲಿ, ಮುಖ್ಯವಾಗಿ ಬದಲಿ ಹಾಗೂ ಪೂರಕ ಚಿಕಿತ್ಸಾ ಪದ್ಧತಿಗಳ ಪತ್ರಿಕೆಗಳಲ್ಲಿ, ಪ್ರಕಟಗೊಂಡಿವೆ. ಈ ಅಧ್ಯಯನಗಳಲ್ಲಿ ಬೆರಳೆಣಿಕೆಯ ಕೆಲವನ್ನು ಬಿಟ್ಟರೆ ಮತ್ತೆಲ್ಲವೂ ಸಣ್ಣ ಪ್ರಮಾಣದ, ಅಲ್ಪಾವಧಿಯ, ಯಾದೃಚ್ಛಿಕವಲ್ಲದ, ನಿಯಂತ್ರಿತವಲ್ಲದ, ವೀಕ್ಷಕನ ಪಕ್ಷಪಾತಕ್ಕೆ ಅವಕಾಶವಿರುವಂತೆ ತೆರೆದ, ಸೇರ್ಪಡೆ ಹಾಗೂ ಹೊರಗಿಡುವಿಕೆಗೆ ಸ್ಪಷ್ಟವಾದ ಮಾನದಂಡಗಳನ್ನು ಗುರುತಿಸಿಲ್ಲದ, ಯೋಗಾಭ್ಯಾಸದ ಸ್ಪಷ್ಟ ವಿಧಾನಗಳನ್ನು ಗುರುತಿಸಿಲ್ಲದ, ಅಡ್ಡ ಪರಿಣಾಮಗಳ ಬಗ್ಗೆ ಹಾಗೂ ಅಧ್ಯಯನವನ್ನು ಮಧ್ಯದಲ್ಲಿಯೇ ತೊರೆದು ಹೋದವರ ಬಗ್ಗೆ ಮಾಹಿತಿಯನ್ನು ಒದಗಿಸದ ಅಧ್ಯಯನಗಳಾಗಿವೆ.

ಉಸಿರಾಟ, ಹೃದಯದ ಗತಿ, ರಕ್ತದೊತ್ತಡ, ಸ್ವಾಯತ್ತ ನರಮಂಡಲ, ರೋಗರಕ್ಷೆ ಇವೇ ಮುಂತಾದ ದೈಹಿಕ ಕಾರ್ಯಗಳ ಮೇಲೆ ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಮೇದಸ್ಸಿನ ತೊಂದರೆಗಳು, ಅರ್ಬುದ ರೋಗಗಳು, ಅಸ್ತಮಾ, ದಮ್ಮು, ಅಪಸ್ಮಾರ, ಭಾವನೆಗಳು, ಆತಂಕ, ಖಿನ್ನತೆ, ಇಚ್ಚಿತ್ತ ವಿಕಲತೆ, ಗೀಳು ರೋಗ, ಅವಧಾನ ನ್ಯೂನತೆ, ತಿನ್ನುವ ತೊಂದರೆಗಳು, ಕರುಳಿನ ರೋಗಗಳು, ಮೇದೋಜೀರಕಾಂಗದ ಉರಿಯೂತ, ಗರ್ಭಿಣಿಯರು, ಋತುಬಂಧ, ಸ್ನಾಯುವೇದನೆ, ಮಾದಕ ದ್ರವ್ಯವ್ಯಸನ, ಸಂಧಿವಾತ, ಬೆನ್ನು ನೋವು, ಥೈರಾಯ್ಡ್ ಕಾಹಿಲೆಗಳು, ನಿದ್ರೆ, ಪಾರ್ಶ್ವವಾಯು, ಮಲ್ಟಿಪ್ಲ್ ಸ್ಕ್ಲಿರೋಸಿಸ್, ಮುಂಗೈ ನೋವು, ಮೂತ್ರಜನಕಾಂಗದ ಕಾಹಿಲೆಗಳು, ವೃದ್ಧಾಪ್ಯ, ತಲೆಶೂಲೆ, ಕ್ಷಯ, ಫೈಲೇರಿಯ ಇತ್ಯಾದಿ ರೋಗಗಳ ಮೇಲೆ ಯೋಗಾಭ್ಯಾಸದ ಪರಿಣಾಮಗಳ ಬಗ್ಗೆ ಅಧ್ಯಯನಗಳನ್ನು ನಡೆಸಲಾಗಿದೆ. ಈ ಅಧ್ಯಯನಗಳಲ್ಲಿ ಒಂದು ನಿರ್ದಿಷ್ಟವಾದ ಯೋಗವಿಧಾನದ ಬದಲಾಗಿ ಅಷ್ಟಾಂಗ ಯೋಗ, ಸಹಜ ಯೋಗ, ಹಠ ಯೋಗ, ಕುಂಡಲಿನಿ ಯೋಗ, ಐಯ್ಯಂಗಾರ್ ಯೋಗ, ಸಿಲ್ವರ್ ಯೋಗ, ರೆಸ್ಟೊರೇಟಿವ್ ಯೋಗ, ಸಿದ್ಧ ಸಮಾಧಿ ಯೋಗ, ಸುದರ್ಶನ ಕ್ರಿಯೆ, ಇಂಟೆಗ್ರೇಟೆಡ್ ಯೋಗ ಇವೇ ಮುಂತಾದ ವಿಧಾನಗಳನ್ನೂ, ಶವಾಸನ, ಶೀರ್ಷಾಸನ, ಕಪಾಲಭಾತಿ, ಕುಂಜಲ ಕ್ರಿಯೆ, ಅನುಲೋಮ ವಿಲೋಮ ಪ್ರಾಣಾಯಾಮ, ಮುಖ ಭಸ್ತ್ರಿಕ ಮತ್ತಿತರ ಪ್ರತ್ಯೇಕ ಆಸನಗಳನ್ನೂ, ಮಂತ್ರ, ವಿಪಾಸನ, ಟ್ರಾಂಸೆಂಡೆಂಟಲ್ ಮೆಡಿಟೇಶನ್ ಮುಂತಾದ ಧ್ಯಾನ ವಿಧಗಳನ್ನೂ ಬಳಸಿಕೊಳ್ಳಲಾಗಿದೆ.

ಪ್ರಕಟಗೊಂಡಿರುವ ಎಲ್ಲಾ ಅಧ್ಯಯನಗಳ ವಿವರಗಳನ್ನು ಇಲ್ಲಿ ಒದಗಿಸಲು ಸಾಧ್ಯವಿಲ್ಲದಿರುವುದರಿಂದ, ಈ ಅಧ್ಯಯನಗಳ ಬಗ್ಗೆ ಲಭ್ಯವಿರುವ ವಿಮರ್ಶೆಗಳ ವರದಿಗಳ ಸಾರಾಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ. ಇವೆಲ್ಲವೂ, ಯೋಗಾಭ್ಯಾಸದ ಬಗ್ಗೆ ಹೆಚ್ಚಾಗಿ ಯೋಗ ತಜ್ಞರೇ ನಡೆಸಿದ ಅಧ್ಯಯನಗಳಲ್ಲಿ ಹಾಗೂ ಅವುಗಳ ಬಗ್ಗೆ ತಜ್ಞರು ನಡೆಸಿದ ವಿಶ್ಲೇಷಣೆಗಳಲ್ಲಿ ವ್ಯಕ್ತಗೊಂಡಿರುವ ಅಭಿಪ್ರಾಯಗಳೇ ಆಗಿದ್ದು ಲೇಖಕನ ಸ್ವಂತ ಅಭಿಪ್ರಾಯಗಳನ್ನು ಇದರಲ್ಲಿ ತೂರಿಸಿಲ್ಲವೆನ್ನುವುದನ್ನು ಮೊದಲಲ್ಲೇ ಸ್ಪಷ್ಟಪಡಿಸುತ್ತೇನೆ.

ಯೋಗವೂ ಸೇರಿದಂತೆ ಐದು ಧ್ಯಾನ ವಿಧಾನಗಳ ಕುರಿತು 1956ರಿಂದ 2005ರವರೆಗೆ ಪ್ರಕಟಗೊಂಡ 813 ಸಂಶೋಧನಾ ಬರಹಗಳನ್ನು ವಿಶ್ಲೇಷಿಸಿ ಮರಿಯಾ ಒಸ್ಪಿನಾ ಮತ್ತಿತರರು ಪ್ರಕಟಿಸಿರುವ ವರದಿಯನುಸಾರ, ಈ ಅಧ್ಯಯನಗಳ ಒಟ್ಟಾರೆ ಗುಣಮಟ್ಟವು ಕಳಪೆಯಾಗಿದ್ದು, ಬಹುಪಾಲು ಬರಹಗಳಲ್ಲಿ ಅಧ್ಯಯನಗಳ ಸ್ವರೂಪದ ಬಗ್ಗೆ ಪಾರದರ್ಶಕವಾದ ವಿವರಣೆಗಳೇ ಲಭ್ಯವಿರಲಿಲ್ಲ. ಯೋಗ ಅಥವಾ ಟ್ರಾಂಸೆಂಡೆಂಟಲ್ ಮೆಡಿಟೇಶನ್ ಗಳಿಂದ ಅಧಿಕ ರಕ್ತದೊತ್ತಡ, ಬೊಜ್ಜು ಹಾಗೂ ಕೊಲೆಸ್ಟರಾಲ್ ಮೇಲೆ ಯಾವುದೇ ಗಣನೀಯವಾದ ಪರಿಣಾಮಗಳೂ ಈ ಅಧ್ಯಯನಗಳಲ್ಲಿ ಕಂಡುಬರಲಿಲ್ಲ. ಆದ್ದರಿಂದ ಲಭ್ಯವಿರುವ ಸಂಶೋಧನೆಗಳ ಆಧಾರದಲ್ಲಿ ಯೋಗಾಭ್ಯಾಸವು ಈ ಕಾಹಿಲೆಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯೆಂದು ಹೇಳಲಾಗದು.

ಯೋಗ ಮತ್ತು ಮಧುಮೇಹ

ಯೋಗಾಭ್ಯಾಸದಿಂದ ಮಧುಮೇಹ ನಿಯಂತ್ರಣದ ಮೇಲಾಗುವ ಪರಿಣಾಮಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದ್ದು, ಇವುಗಳನ್ನು ವಿಶ್ಲೇಷಿಸಿ ಇನ್ನೆಸ್ ಮತ್ತಿತರರು ಇನ್ನೆಸ್ ಹಾಗೂ ವಿನ್ಸೆಂಟ್ ಯಾಂಗ್ ಅಲ್ಜಸಿರ್ ಮತ್ತು ಅಲೆಕ್ಸಾಂಡರ್ ಅವರೆಲ್ಲ ತಯಾರಿಸಿರುವ ವರದಿಗಳಲ್ಲಿ, ಈ ಅಧ್ಯಯನಗಳು ಅಲ್ಪ ಕಾಲಾವಧಿಯವುಗಳಾಗಿದ್ದು, ಮಧುಮೇಹ ನಿಯಂತ್ರಣದ ಮೇಲೆ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಯಾವುದೇ ಮಾಹಿತಿಯು ಅವುಗಳಲ್ಲಿ ಲಭ್ಯವಿಲ್ಲದಿರುವುದರಿಂದ ಯೋಗಾಭ್ಯಾಸದಿಂದ ಮಧುಮೇಹದ ಚಿಕಿತ್ಸೆಯಲ್ಲಿ ಆಗಬಹುದಾದ ಪ್ರಯೋಜನಗಳ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಾಗದೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಅಧ್ಯಯನಗಳಲ್ಲಿ ಭಾಗವಹಿಸಿದವರಿಗೆ ಆಗಿರಬಹುದಾದ ತೊಂದರೆಗಳ ಬಗೆಗೆ ಯಾವುದೇ ಮಾಹಿತಿಯಿಲ್ಲದಿರುವುದನ್ನೂ ವಿಶ್ಲೇಷಕರು ಗುರುತಿಸಿದ್ದಾರೆ. ಈ ಕಾರಣಗಳಿಂದಾಗಿ ಮಧುಮೇಹದ ಚಿಕಿತ್ಸೆಯಲ್ಲಿ ಯೋಗಾಭ್ಯಾಸವನ್ನು ಬಳಸಬಹುದೆನ್ನುವ ಸಲಹೆಯನ್ನು ನೀಡುವ ಮೊದಲು ಸಾಕಷ್ಟು ದೊಡ್ದದಾದ, ದೀರ್ಘಕಾಲೀನ ಅಧ್ಯಯನಗಳ ಅಗತ್ಯವಿದೆಯೆನ್ನುವುದು ಅವರೆಲ್ಲರ ಅಭಿಪ್ರಾಯವಾಗಿದೆ.

ಯೋಗ ಮತ್ತು ಕ್ಯಾನ್ಸರ್

ಕ್ಯಾನ್ಸರ್ ರೋಗಿಗಳಲ್ಲಿ ಯೋಗದ ಪ್ರಯೋಜನಗಳ ಬಗ್ಗೆ ನಡೆಸಲಾಗಿರುವ ಅಧ್ಯಯನಗಳನ್ನು ಸ್ಮಿತ್ ಹಾಗೂ ಪುಕಾಲ್ ವಿಶ್ಲೇಷಿಸಿದ್ದಾರೆ. ಈ ಅಧ್ಯಯನಗಳಲ್ಲಿ ಭಾಗಿಗಳಾಗಿದ್ದವರು ಬಹುತೇಕ ಮಹಿಳೆಯರಾಗಿದ್ದು, ಸ್ತನದ ಕ್ಯಾನ್ಸರ್ ನಿಂದ ಬಳಲುತ್ತಿದ್ದವರಾಗಿದ್ದರು. ಈ ಅಧ್ಯಯನಗಳ ವೈಧಾನಿಕ ಗುಣಮಟ್ಟಗಳು ವಿಭಿನ್ನವಾಗಿದ್ದುವಲ್ಲದೆ, ಬಳಸಲಾದ ಯೋಗವಿಧಾನದಲ್ಲೂ ವ್ಯತ್ಯಾಸಗಳಿದ್ದವು. ಈ ಕಾರಣಗಳಿಂದಾಗಿ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯೋಗವನ್ನು ಬಳಸಬಹುದೆನ್ನುವ ಬಗ್ಗೆ ಈಗಲೇ ಖಚಿತವಾಗಿ ಏನನ್ನೂ ಹೇಳುವಂತಿಲ್ಲವೆಂದು ಸ್ಮಿತ್ ಹಾಗೂ ಪುಕಾಲ್ ಅಭಿಪ್ರಾಯ ಪಡುತ್ತಾರೆ.

ಯೋಗ ಮತ್ತು ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡದ ನಿಯಂತ್ರಣದಲ್ಲಿ ಯೋಗದ ಪಾತ್ರದ ಕುರಿತು ನಡೆಸಲಾಗಿರುವ ಅಧ್ಯಯನಗಳಲ್ಲಿ ಕೇವಲ ರಕ್ತದೊತ್ತಡದ ಮೇಲಿನ ಪರಿಣಾಮಗಳನ್ನಷ್ಟೇ ಪರಿಗಣಿಸಲಾಗಿದೆಯಲ್ಲದೆ, ರೋಗಿಯ ಮೇಲಾಗುವ ಒಟ್ಟಾರೆ ಪರಿಣಾಮಗಳ ಬಗೆಗಾಗಲೀ, ಸಾವು ಅಥವಾ ಇತರ ತೊಂದರೆಗಳ ಬಗೆಗಾಗಲೀ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಆದ್ದರಿಂದ ಕೇವಲ ಯೋಗವನ್ನಷ್ಟೇ ಬಳಸಿ ಅಧಿಕ ರಕ್ತದೊತ್ತಡದ ಚಿಕಿತ್ಸೆಯನ್ನು ಮಾಡುವುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಹಾಗೂ ಹಾಗೆ ಮಾಡುವುದಿದ್ದರೆ ರಕ್ತದೊತ್ತಡವನ್ನೂ, ಅದರಿಂದಾಗ ಬಹುದಾದ ತೊಂದರೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರಬೇಕಾದುದು ಅತ್ಯಗತ್ಯವೆನ್ನುವುದು ಡೋಷ್ ಅವರ ಅಭಿಮತವಾಗಿದೆ.

ಅಪಸ್ಮಾರಕ್ಕೆ ಯೋಗಚಿಕಿತ್ಸೆ

ಅಪಸ್ಮಾರಕ್ಕೆ ಯೋಗಚಿಕಿತ್ಸೆಯ ಬಗ್ಗೆ ಲಭ್ಯವಿರುವ ಅಧ್ಯಯನಗಳಲ್ಲಿ ಹಲವು ನ್ಯೂನತೆಗಳಿದ್ದು ಅವುಗಳ ಗುಣಮಟ್ಟವು ಅಪೇಕ್ಷಣೀಯ ಮಟ್ಟದಲ್ಲಿಲ್ಲದಿರುವುದರಿಂದ ಅಪಸ್ಮಾರಕ್ಕೆ ಯೋಗಚಿಕಿತ್ಸೆಯ ಬಗ್ಗೆ ಯಾವುದೇ ನಂಬಲರ್ಹವಾದ ಸಲಹೆಗಳನ್ನು ನೀಡುವಂತಿಲ್ಲವೆಂದು ಈ ಅಧ್ಯಯನಗಳನ್ನು ವಿಶ್ಲೇಷಿಸಿದ ನಂದನ್ ಯಾರ್ಡಿ ಹಾಗೂ ಕೊಕ್ರೇನ್ ವಿಮರ್ಶಕರಾದ ರಾಮರತ್ನಂ ಮತ್ತಿತರರು ಅಭಿಪ್ರಾಯ ಪಡುತ್ತಾರೆ.

ಆತಂಕ ಹಾಗೂ ಖಿನ್ನತೆಗಳಿಗೆ ಯೋಗ ಚಿಕಿತ್ಸೆ

ಆತಂಕ ಮತ್ತು ಖಿನ್ನತೆಗಳ ಚಿಕಿತ್ಸೆಯಲ್ಲಿ ಯೋಗಾಭ್ಯಾಸದ ಬಳಕೆಯ ಬಗೆಗೆ ನಡೆಸಲಾದ ಅಧ್ಯಯನಗಳನ್ನು ವಿಶ್ಲೇಷಿಸಿದ ಪಿಲ್ಕಿಂಗ್ಟನ್ ಮತ್ತಿತರರು ಜರ್ಮ್ , ಕಿರ್ಕ್ ವುಡ್ ಮತ್ತಿತರರು ಹಾಗೂ ಕೊಕ್ರೇನ್ ವಿಮರ್ಶಕರು ಈ ಅಧ್ಯಯನಗಳಲ್ಲಿ ಏಕರೂಪತೆಯ ಕೊರತೆ, ಕಳಪೆ ಗುಣಮಟ್ಟ, ಅಲ್ಪ ಕಾಲದ ವಿವರಗಳು ಹಾಗೂ ಅಡ್ಡ ಪರಿಣಾಮಗಳ ಬಗ್ಗೆ ಸೂಕ್ತ ಮಾಹಿತಿಯ ಕೊರತೆಗಳಿಂದಾಗಿ ಯೋಗಾಭ್ಯಾಸದಿಂದ ಆತಂಕ ಮತ್ತು ಖಿನ್ನತೆಗಳ ಚಿಕಿತ್ಸೆಯಲ್ಲಿ ಯಾವುದೇ ಪ್ರಯೋಜನವಾಗಬಹುದೆಂಬುದನ್ನು ನಿಖರವಾಗಿ ಹೇಳುವಂತಿಲ್ಲವೆಂಬ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.

ಅಸ್ತಮಾಕ್ಕೆ ಯೋಗಚಿಕಿತ್ಸೆ

ಅಸ್ತಮಾ ಚಿಕಿತ್ಸೆಯಲ್ಲಿ ಬದಲಿ ಪದ್ಧತಿಗಳ ಪ್ರಯೋಗವು ಸಾಮಾನ್ಯವಾಗಿದ್ದು 30-40%ಕ್ಕೂ ಹೆಚ್ಚು ರೋಗಿಗಳು ಒಂದಲ್ಲೊಂದು ಬದಲಿ ಚಿಕಿತ್ಸೆಯ ಮೊರೆ ಹೋಗಿರುತ್ತಾರೆ. ಅಸ್ತಮಾ ಚಿಕಿತ್ಸೆಯಲ್ಲಿಯೂ ಯೋಗ ಹಾಗೂ ಇನ್ನಿತರ ‘ಉಸಿರಾಟ ಚಿಕಿತ್ಸೆ’ಗಳನ್ನು ಸಾಕಷ್ಟು ಜನ ಪ್ರಯತ್ನಿಸುತ್ತಾರೆ. ಆದರೆ ಇಂತಹಾ ಪ್ರಯತ್ನಗಳಿಂದ ಯಾರಿಗೆ, ಹೇಗೆ, ಎಷ್ಟೊಂದು ಪ್ರಯೋಜನಗಳಿವೆಯೆನ್ನುವ ಬಗ್ಗೆ ಯಾವುದೇ ಸ್ಪಷ್ಟವಾದ ಪುರಾವೆಯೂ ಲಭ್ಯವಿಲ್ಲ. ಕೊಕ್ರೇನ್ ವಿಮರ್ಶೆಗೊಳಪಟ್ಟ ಎರಡು ಅಧ್ಯಯನಗಳಲ್ಲಿ ವಿಭಿನ್ನ ಯೋಗ ವಿಧಾನಗಳನ್ನು ಅಳವಡಿಸಲಾಗಿತ್ತು; ಒಂದರಲ್ಲಿ, 16 ವಾರಗಳ ಅವಧಿಗೆ, ವಾರಕ್ಕೆ ಮೂರು ಸಲ, ಪ್ರತಿ ಬಾರಿ 45 ನಿಮಿಷಗಳಂತೆ ಯೋಗಾಭ್ಯಾಸವಿದ್ದರೆ, ಇನ್ನೊಂದರಲ್ಲಿ ಎರಡು ವಾರಗಳಲ್ಲಿ 2.5 ಗಂಟೆಗಳ ಯೋಗಾಭ್ಯಾಸವಿತ್ತು ಹಾಗೂ ಈ ಎರಡು ಅಧ್ಯಯನಗಳ ಪರಿಣಾಮಗಳಲ್ಲೂ ಭಿನ್ನತೆಗಳಿದ್ದವು. ಹೀಗಾಗಿ, ಅಸ್ತಮಾದಲ್ಲಿ ಯೋಗಾಭ್ಯಾಸದ ಪರಿಣಾಮಗಳ ಬಗ್ಗೆ ಈ ಅಧ್ಯಯನಗಳ ಆಧಾರದಲ್ಲಿ ಏನನ್ನೂ ಹೇಳುವುದು ಅಸಾಧ್ಯವೆನ್ನುವುದು ವಿಮರ್ಶಕರ ಅಭಿಪ್ರಾಯವಾಗಿದೆ. ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ಥಾಮಸ್ ರಿಟ್ಜ್ ಲೇನ್ ಡಿಜೆ , ಕ್ಲಾಡಿಯಾ ಸ್ತ್ಯೂರರ್ ಮತ್ತಿತರರ ವಿಮರ್ಶೆಗಳಲ್ಲೂ ಅಸ್ತಮಾ ಚಿಕಿತ್ಸೆಯಲ್ಲಿ ಯೋಗದ ಪ್ರಯೋಜನಗಳ ಬಗೆಗೆ ನಡೆಸಲಾಗಿರುವ ಅಧ್ಯಯನಗಳು ಅಲ್ಪಾವಧಿಯವುಗಳೂ, ಅಪರ್ಯಾಪ್ತವೂ ಆಗಿರುವುದರಿಂದ ಯೋಗದ ಉಪಯುಕ್ತತೆಯ ಬಗ್ಗೆ ಖಚಿತವಾದ ತೀರ್ಮಾನಕ್ಕೆ ಬರುವಂತಿಲ್ಲವೆಂದೂ, ಕೆಲವು ಅಧ್ಯಯನಗಳಲ್ಲಿ ಮಧ್ಯದಲ್ಲಿಯೇ ಬಿಟ್ಟು ಹೋದವರ ಸಂಖ್ಯೆಯು ಸಾಕಷ್ಟು ದೊಡ್ಡದಿದ್ದು, ಯೋಗಾಭ್ಯಾಸದಿಂದಾಗಿರಬಹುದಾದ ತೊಂದರೆಗಳ ಬಗ್ಗೆ ಸಾಕಷ್ಟು ಮಾಹಿತಿ ದೊರೆಯುವುದಿಲ್ಲವೆಂದೂ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.

ದೀರ್ಘ ಕಾಲದ ನೋವಿಗೆ ಯೋಗಾಭ್ಯಾಸ

ಹಿರಿ ವಯಸ್ಕರಲ್ಲಿ ದೀರ್ಘ ಕಾಲದ ನೋವಿಗೆ ಯೋಗಾಭ್ಯಾಸವೂ ಸೇರಿದಂತೆ ಮನೋದೈಹಿಕ ಚಿಕಿತ್ಸಾಕ್ರಮಗಳಿಂದಾಗುವ ಪ್ರಯೋಜನಗಳ ಬಗೆಗಿನ ಎಂಟು ಅಧ್ಯಯನಗಳ ವಿಮರ್ಶೆಯಲ್ಲ ಇವ್ಯಾವುವೂ ಸಾಕಷ್ಟು ಗಟ್ಟಿಯಾದ ಪುರಾವೆಯನ್ನು ಒದಗಿಸುವುದಿಲ್ಲವೆಂದೂ, ಈ ಕುರಿತು ದೊಡ್ಡ ಅಧ್ಯಯನಗಳ ಅಗತ್ಯವಿದೆಯೆಂದೂ ಹೇಳಲಾಗಿದೆ.

ಮಕ್ಕಳಲ್ಲಿ ಯೋಗಾಭ್ಯಾಸ

ಯೋಗಾಭ್ಯಾಸದಿಂದ ಮಕ್ಕಳ ದೇಹ ಹಾಗೂ ಜೀವನ ಗುಣಮಟ್ಟದ ಮೇಲಾಗುವ ಪರಿಣಾಮಗಳ ಬಗೆಗೆ ನಡೆಸಲಾಗಿರುವ 24 ಅಧ್ಯಯನಗಳನ್ನು ವಿಶ್ಲೇಷಿಸಿರುವ ಗಲಾಂಟಿನೋ ಮತ್ತಿತರರು ತಮ್ಮ ವರದಿಯಲ್ಲಿ ಇವುಗಳ ಪೈಕಿ ಯಾವೊಂದು ಅಧ್ಯಯನವೂ ಅತ್ಯುತ್ತಮ ಗುಣಮಟ್ಟದ್ದಾಗಿರಲಿಲ್ಲವೆಂದೂ, ಮಕ್ಕಳ ಬೆಳವಣಿಗೆಯ ಸಾಕಷ್ಟು ಕಾಲಾವಧಿಯನ್ನು ಅಧ್ಯಯನಕ್ಕೆ ಒಳಪಡಿಸಿಲ್ಲವೆಂದೂ, ಬಳಸಲಾದ ವಿಧಾನಗಳಲ್ಲಿ ಬಹಳಷ್ಟು ಭಿನ್ನತೆಗಳಿದ್ದವೆಂದೂ, ಮಕ್ಕಳಲ್ಲಿ ಯೋಗದ ಸುರಕ್ಷತೆಯ ಬಗ್ಗೆ ಸಾಕಷ್ಟು ಮಾಹಿತಿಯಿಲ್ಲದಿದ್ದು ಆ ಬಗ್ಗೆ ಖಚಿತವಾಗಿ ಹೇಳುವಂತಿಲ್ಲವೆಂದೂ, ಮಕ್ಕಳಲ್ಲಿ ಯೋಗಾಭ್ಯಾಸದ ಗುಣಾವಗುಣಗಳ ಬಗ್ಗೆ ಏನನ್ನೇ ಹೇಳಲು ಈ ಅಧ್ಯಯನಗಳು ಅಪರ್ಯಾಪ್ತವೆಂದೂ ಹೇಳಿದ್ದಾರೆ.

ಯೋಗ ಮತ್ತು ಸ್ಮರಣ ಶಕ್ತಿ

ಯೋಗಾಭ್ಯಾಸದಿಂದ ಏಕಾಗ್ರತೆ ಹಾಗೂ ಸ್ಮರಣ ಶಕ್ತಿಯ ಮೇಲೆ ಅಪಾರವಾದ ಪ್ರಯೋಜನಗಳಿವೆಯೆನ್ನುವುದು ಸಾಮಾನ್ಯವಾದ ನಂಬಿಕೆಯಷ್ಟೇ ಅಲ್ಲ, ಅದುವೇ ಯೋಗಾಭ್ಯಾಸದ ಮೂಲ ಉದ್ದೇಶವೆಂದು ಯೋಗಶಿಕ್ಷಕರಿಂದ ಹಿಡಿದು ಅದನ್ನೀಗ ಮಕ್ಕಳ ಮೇಲೆ ಹೇರಲು ಹೊರಟಿರುವ ನಮ್ಮ ಸರಕಾರಗಳ ಅಂಬೋಣ. ಆಶ್ಚರ್ಯದ ಸಂಗತಿಯೆಂದರೆ, ಯೋಗಾಭ್ಯಾಸದಿಂದ ಸ್ಮರಣ ಶಕ್ತಿಯಾಗಲೀ, ಏಕಾಗ್ರತೆಯಾಗಲೀ ಬಲಗೊಳ್ಳುತ್ತದೆಯೆಂದು ದೃಢಪಡಿಸುವ ಯಾವುದೇ ಅಧ್ಯಯನಗಳು ಲಭ್ಯವಿಲ್ಲ! ಕೆಲವು ಸಣ್ಣ, ಅಲ್ಪ ಕಾಲದ ಅಧ್ಯಯನಗಳಲ್ಲಿ ಸ್ಮರಣ ಶಕ್ತಿಯ ಮೇಲೆ ಮಿತವಾದ ಪ್ರಭಾವವನ್ನು ಗುರುತಿಸಲಾಗಿದ್ದರೆ ಇನ್ನು ಕೆಲವು ಅಧ್ಯಯನಗಳಲ್ಲಿ ಯಾವುದೇ ಪ್ರಯೋಜನಗಳು ಕಂಡುಬಂದಿಲ್ಲ.

ಸುದರ್ಶನ ಕ್ರಿಯೆಯ ಬಗ್ಗೆ ಅಧ್ಯಯನಗಳು

ರವಿಶಂಕರನ ಸುದರ್ಶನ ಕ್ರಿಯೆಯ ಪ್ರಯೋಜನಗಳ ಬಗೆಗೂ ಕೆಲವು ವರದಿಗಳು ಪ್ರಕಟವಾಗಿದ್ದು, ಇವುಗಳನ್ನು ದೃಢಪಡಿಸಬೇಕಾದರೆ ಇನ್ನಷ್ಟು ದೊಡ್ದದಾದ, ನಿಯಂತ್ರಿತವಾದ, ಗಟ್ಟಿ ವಿನ್ಯಾಸವುಳ್ಳ ಅಧ್ಯಯನಗಳ ಅಗತ್ಯವಿದೆಯೆಂದು ಅವುಗಳಲ್ಲಿ ಹೆಚ್ಚಿನವುಗಳ ಲೇಖಕರೇ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಿದ್ದರೂ, ತಮ್ಮ ಕಾರ್ಯಕ್ರಮಗಳ ಅತ್ಯುತ್ತಮ ಪ್ರಯೋಜನಗಳನ್ನು ಸ್ವತಂತ್ರ ವೈದ್ಯಕೀಯ ಅಧ್ಯಯನಗಳು ದೃಢಪಡಿಸಿದ್ದು, ಆರ್ಟ್ ಆಫ್ ಲಿವಿಂಗ್ ನಡೆಸುವ ಕಾರ್ಯಾಗಾರಗಳು ವಿಶ್ವದೆಲ್ಲೆಡೆ ಅಷ್ಟೊಂದು ಜನಪ್ರಿಯವಾಗಿರುವುದಕ್ಕೆ ನಿದರ್ಶನವೆಂದು ಸಂಸ್ಥೆಯು ಯಾವುದೇ ಹಿಂಜರಿಕೆಯಿಲ್ಲದೆ ಹೇಳಿಕೊಂಡಿದೆ!

ಯೋಗದ ಬಗೆಗೆ ನಡೆಸಲಾಗಿರುವ ಅಧ್ಯಯನಗಳ ಗುಣಮಟ್ಟದ ಬಗ್ಗೆ ಕೆಲವು ಯೋಗತಜ್ಞರಿಗೇ ತೃಪ್ತಿಯಿಲ್ಲ. ಅಮೆರಿಕಾದ ಫಿಲಡೆಲ್ಫಿಯಾದಲ್ಲಿರುವ ಬಿ ಕೆ ಎಸ್ ಐಯ್ಯಂಗಾರ್ ಯೋಗ ಕೇಂದ್ರದ ನಿರ್ದೇಶಕರಾಗಿರುವ ಮರಿಯನ್ ಗಾರ್ಫಿಂಕ್ಲ್ ಹೇಳುವಂತೆ, ಬದಲಿ ಚಿಕಿತ್ಸಾ ವಿಧಾನಗಳ ಬಗ್ಗೆ ಸುಸ್ಪಷ್ಟವಾದ, ನಿಯಂತ್ರಿತ ಅಧ್ಯಯನಗಳನ್ನು ನಡೆಸಿಲ್ಲವಾದ್ದರಿಂದ ಅವುಗಳ ಉಪಯುಕ್ತತೆಯ ಬಗ್ಗೆ ಸಾಕಷ್ಟು ಪ್ರಬಲ ಆಧಾರಗಳು ಅಲಭ್ಯವಿದ್ದು, ಇದು ಮುಂದಿನ ಅಧ್ಯಯನಗಳಿಗೂ ತೊಡಕಾಗಬಹುದು. ಹೆಚ್ಚಿನ ಬದಲಿ ಚಿಕಿತ್ಸೆಗಳನ್ನು ವೈಜ್ಞಾನಿಕ ಮಾನದಂಡಗಳ ಅಧ್ಯಯನಗಳಲ್ಲಿ ಪರೀಕ್ಷಿಸಲು ಸಾಧ್ಯವಿಲ್ಲ, ಬದಲಾಗಿ ನಂಬಿಕೆ, ಅಲ್ಲಿಲ್ಲೊಂದು ಉದಾಹರಣೆಗಳು ಮತ್ತು ಅವುಗಳದ್ದೇ ಆದ ಸಿದ್ದಾಂತಗಳನ್ನೇ ನೆಚ್ಚಿಕೊಂಡು ಅವುಗಳ ಬಳಕೆಯನ್ನು ಮುಂದುವರಿಸಬೇಕೆಂಬ ವಾದಗಳಿದ್ದರೂ, ಉಪಯುಕ್ತತೆ ಹಾಗೂ ಸುರಕ್ಷತೆಯ ಬಗ್ಗೆ ಸಾಕಷ್ಟು ಪ್ರಬಲವಾದ ಆಧಾರಗಳಿಲ್ಲದೆ ಅವುಗಳನ್ನು ಬಳಸಬೇಕೆನ್ನುವುದು ಒಪ್ಪತಕ್ಕಂತಹುದಲ್ಲ ಹಾಗೂ ಈ ಬಗ್ಗೆ ಹೆಚ್ಚಿನ ಅಧ್ಯಯನಗಳು ಅತ್ಯಗತ್ಯ ಎಂದವರು ಹೇಳುತ್ತಾರೆ.

ಹೀಗಿರುವಾಗ, ಯೋಗವು ಅಬಾಲವೃದ್ಧರಾಗಿ ಸರ್ವರಿಗೂ, ಸರ್ವರೋಗಗಳ ನಿಯಂತ್ರಣಕ್ಕೂ, ನಿವಾರಣೆಗೂ ಅತ್ಯುಪಯುಕ್ತವೆಂದು ಹೇಳುವುದನ್ನು ನಾವು ನಂಬಬೇಕಾದ ಅಗತ್ಯವಿದೆಯೇ?

ನಮಗೆ ಯೋಗಾಭ್ಯಾಸದ ಅಗತ್ಯವಿದೆಯೇ?

ಪ್ರಾಚೀನ ಭಾರತದಲ್ಲಿ ತಪಸ್ವಿಗಳಾಗಿ ಬಹಳ ಕಠಿಣವಾದ ಜೀವನಕ್ರಮವನ್ನು ಪಾಲಿಸುತ್ತಿದ್ದ ಋಷಿ-ಮುನಿಗಳೂ, ಯೋಗಿಗಳೂ ಮಾಡುತ್ತಿದ್ದ ಯೋಗಾಭ್ಯಾಸವು ಇಂದಿನ ಜನಸಾಮಾನ್ಯರ ನಿತ್ಯಜೀವನಕ್ಕೆ ಹೇಗೆ ಹೊಂದಿಕೆಯಾಗುತ್ತದೆ ಎನ್ನುವುದು ಸ್ಪಷ್ಟವಿಲ್ಲ.

ಪ್ರಾಚೀನ ಯೋಗದ ಪ್ರಯೋಜನಗಳನ್ನು ಒದಗಿಸುವ ಭರವಸೆಯನ್ನು ನೀಡುವ ಹಲವಾರು ಯೋಗವಿಧಾನಗಳು ಈಗ ಪ್ರಚಲಿತವಿದ್ದು,ಯೋಗದ ಬಗ್ಗೆ ನಡೆಸಲಾಗಿರುವ ಅಧ್ಯಯನಗಳಲ್ಲಿ ಬಳಸಲಾಗಿರುವ ಯೋಗ ವಿಧಾನಗಳು, ಸನ್ನಿವೇಶಗಳು, ರೋಗನಮೂನೆಗಳು ಹಾಗೂ ಮಾನದಂಡಗಳು ತೀರಾ ವಿಭಿನ್ನವಾಗಿದ್ದು, ಅವುಗಳಲ್ಲಿ ಯಾವುದೇ ಸಾಮ್ಯತೆಗಳಿಲ್ಲ. ಈ ಅಧ್ಯಯನಗಳ ಬಗ್ಗೆ ನಡೆಸಲಾಗಿರುವ ಎಲ್ಲಾ ವಿಶ್ಲೇಷಣೆಗಳು ಕೂಡಾ, ಈ ಅಧ್ಯಯನಗಳ ಕಳಪಯಾದ ಗುಣಮಟ್ಟ ಹಾಗೂ ಅಸಮರ್ಪಕವಾದ ಮಾನದಂಡಗಳನ್ನು ಎತ್ತಿ ತೋರಿಸಿವೆ. ಇಂತಹಾ ಅಧ್ಯಯನಗಳ ಆಧಾರದಲ್ಲಿ ಯೋಗಾಭ್ಯಾಸದ ಪ್ರಯೋಜನಗಳು ಯಾ ಸುರಕ್ಷತೆಯ ಬಗ್ಗೆ ಯಾವುದೇ ಖಚಿತವಾದ ನಿರ್ಧಾರಗಳನ್ನು ಹೇಳಲಾಗದು.

ಯೋಗದ ಬಗೆಗಿನ ಹಲವು ಅಧ್ಯಯನಗಳಲ್ಲಿ, ಅವನ್ನು ತೊರೆದು ಹೋದವರ ಸಂಖ್ಯೆಯು ಬಹಳ (ಕೆಲವೊಂದರಲ್ಲಿ ಶೇ.50ರಷ್ಟು) ಹೆಚ್ಚಿದ್ದು, ತೊರೆಯುವಿಕೆಗೆ ಕಾರಣಗಳ ಬಗೆಗಾಗಲೀ, ವ್ಯತಿರಿಕ್ತವಾದ ಪರಿಣಾಮಗಳ ಬಗೆಗಾಗಲೀ ಅವುಗಳಲ್ಲಿ ಯಾವುದೇ ಮಾಹಿತಿಯು ಲಭ್ಯವಿಲ್ಲ. ಇನ್ನೊಂದೆಡೆ, ಯೋಗಾಭ್ಯಾಸದಿಂದ ಹಲತರದ ಗಂಭೀರವಾದ ತೊಂದರೆಗಳುಂಟಾಗಿರುವ ಬಗ್ಗೆ ಸಾಕಷ್ಟು ವರದಿಗಳಿದ್ದು, ಯೋಗಾಭ್ಯಾಸದಲ್ಲಿ ಸಮಸ್ಯೆಗಳಾಗಬಹುದು ಹಾಗೂ ಸಾಕಷ್ಟು ಮುಂಜಾಗ್ರತೆಗಳನ್ನು ವಹಿಸುವುದು ಅಗತ್ಯವೆಂದು ಕೆಲವು ಯೋಗತಜ್ಞರೇ ಹೇಳುತ್ತಾರೆ.

ಮಕ್ಕಳಲ್ಲಿ ಯೋಗಾಭ್ಯಾಸದ ಬಗೆಗೆ ಸಣ್ಣ ಪ್ರಮಾಣದ, ಅಲ್ಪ ಕಾಲಾವಧಿಯ, ತೆರೆದ ಅಧ್ಯಯನಗಳಷ್ಟೇ ನಡೆದಿದ್ದು, ಮಕ್ಕಳಲ್ಲಿ ಯೋಗದಿಂದಾಗುವ ತೊಂದರೆಗಳ ಬಗ್ಗೆ ಯಾವ ಅಧ್ಯಯನಗಳಲ್ಲೂ ಮಾಹಿತಿಯಿಲ್ಲ; ಅಷ್ಟೇ ಅಲ್ಲ, ಅತಿ ಕಿರಿಯ ಮಕ್ಕಳಲ್ಲಿ ಯಾವ ಅಧ್ಯಯನಗಳೂ ನಡೆದಿಲ್ಲ. ಆದ್ದರಿಂದ ಮಕ್ಕಳಲ್ಲಿ ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ ಹಾಗೂ ಸುರಕ್ಷತೆಯ ಬಗ್ಗೆ ನಂಬಲರ್ಹವಾದ ಮಾಹಿತಿಯಿಲ್ಲ.
ಆದ್ದರಿಂದ ಈ ಕೆಳಗಿನ ಸಲಹೆಗಳು ಸಮುಚಿತವೆನಿಸಬಹುದು:

ಕೆಲವರಿಗೆ ವೈಯಕ್ತಿಕ ನೆಲೆಯಲ್ಲಿ, ಸೀಮಿತವಾಗಿ, ಯೋಗವು ಪ್ರಯೋಜನಕರವೆಂದು ಕಂಡುಬರಬಹುದು ಮತ್ತು ಯೋಗಾಭ್ಯಾಸವನ್ನು ಮಾಡಬಯಸುವ ಅಂತಹವರು ತಮ್ಮ ದೇಹಸ್ಥಿತಿ ಹಾಗೂ ಅದರ ಅಗತ್ಯಗಳಿಗೆ ಸರಿಹೊಂದುವ ಯೋಗಾಭ್ಯಾಸದ (ಪ್ರಾಣಾಯಾಮ, ಆಸನಗಳು ಇತ್ಯಾದಿಗಳ) ವಿಧಗಳ ಬಗ್ಗೆ ವೈದ್ಯರು ಹಾಗೂ ನುರಿತ, ಆಸಕ್ತ ಯೋಗತಜ್ಞರ ಸಲಹೆಯನ್ನು ಪಡೆದು ಯೋಗಾಭ್ಯಾಸವನ್ನು ಮಾಡಬಹುದು.
ಸರ್ವರಿಗೂ, ಸಕಲ ಸಂದರ್ಭಗಳಲ್ಲೂ, ಸರ್ವ ರೋಗಗಳಿಗೂ ಯೋಗವು ಪ್ರಯೋಜನಕರವೆಂದು ಅಥವಾ ಅದು ಸಂಪೂರ್ಣವಾಗಿ ಸುರಕ್ಷಿತವೆಂದು ಹೇಳುವುದಕ್ಕೆ ಯಾವುದೇ ಪುರಾವೆಯು ಲಭ್ಯವಿಲ್ಲದಿರುವುದರಿಂದ ಅಂತಹಾ ನಂಬಿಕೆಯೊಂದಿಗೆ ಯೋಗಾಭ್ಯಾಸಕ್ಕೆ ತೊಡಗುವುದು ಸರಿಯಲ್ಲ.

ಮಕ್ಕಳಲ್ಲಿ ಯೋಗಾಭ್ಯಾಸದ ಸುರಕ್ಷತೆಯ ಬಗ್ಗೆ ಯಾವುದೇ ಮಾಹಿತಿಯು ಲಭ್ಯವಿಲ್ಲ. ಹುಟ್ಟಿನಿಂದ ಇರಬಹುದಾದ ಹೃದ್ರೋಗಗಳು, ಅಸ್ತಮಾ, ಸಂಧಿಗಳಲ್ಲಿ, ಅದರಲ್ಲೂ ವಿಶೇಷವಾಗಿ ಬೆನ್ನೆಲುಬಿನಲ್ಲಿ, ತೊಂದರೆಗಳಿರುವ ಮಕ್ಕಳಲ್ಲಿ ಯೋಗಾಭ್ಯಾಸವು ಗಂಭೀರವಾದ ಪರಿಣಾಮಗಳನ್ನುಂಟು ಮಾಡಬಹುದು. ಯೋಗಾಭ್ಯಾಸಕ್ಕೆ ಬರೆಹೊಟ್ಟೆಯಲ್ಲಿರಬೇಕಾದ ಹಾಗೂ ಸಮರ್ಪಕವಾದ ಬಟ್ಟೆಗಳನ್ನು ಧರಿಸಬೇಕಾದ ಅಗತ್ಯವಿರುವುದು ಹಾಗೂ ಋತುಸ್ರಾವದ ವೇಳೆಯಲ್ಲಿ ಹುಡುಗಿಯರು ಯೋಗಾಭ್ಯಾಸವನ್ನು ಮಾಡಬಾರದೆನ್ನುವ ಮಿತಿಗಳಿರುವುದರಿಂದ ಕಡ್ಡಾಯ ಯೋಗಶಿಕ್ಷಣವು ಮಕ್ಕಳಿಗೆ ಹಾಗೂ ಹೆತ್ತವರಿಗೆ ಹಲವು ತರಹದ ತೊಂದರೆಗಳನ್ನೂ, ಮುಜುಗರವನ್ನೂ ಉಂಟುಮಾಡುವುದು ಖಂಡಿತ.

ಆದ್ದರಿಂದ ನುರಿತ ಯೋಗ ಶಿಕ್ಷಕರ ನೇರ ಭಾಗವಹಿಸುವಿಕೆ ಹಾಗೂ ನಿಗಾವಣೆಗಳಿಲ್ಲದೆ ಸಾಮೂಹಿಕ ಶಿಬಿರಗಳಲ್ಲಿ, ಶಾಲೆಗಳಲ್ಲಿ ಅಥವಾ ಟಿವಿಯ ಮುಂದೆ ನಿಂತು ಯೋಗಾಭ್ಯಾಸವನ್ನು ಮಾಡುವುದರಿಂದ ಯಾವುದೇ ಪ್ರಯೋಜನವಾಗದು, ಮಾತ್ರವಲ್ಲ, ಅದರಿಂದ ತೊಂದರೆಗಳೂ ಆಗಬಹುದು.

ಹಾಗೆಯೇ, ಕೇಂದ್ರ ಸರಕಾರವು ಯೋಚಿಸುತ್ತಿರುವಂತೆ ಹಾಗೂ ಕೆಲ ರಾಜ್ಯ ಸರಕಾರಗಳು ಈಗಾಗಲೇ ಸಿದ್ಧತೆ ನಡೆಸಿರುವಂತೆ, ದೈಹಿಕ ಶಿಕ್ಷಕರ ಮೂಲಕ ಒಂದನೇ ತರಗತಿಯಿಂದಲೇ ಕಡ್ಡಾಯವಾಗಿ ಯೋಗಾಭ್ಯಾಸವನ್ನು ಮಾಡುವುದು ಯಾವುದೇ ಸಂದರ್ಭದಲ್ಲೂ ಅಪೇಕ್ಷಣೀಯವಲ್ಲ.

Comments are closed.