ಗದಗ: ಮಹದಾಯಿ- ಕಳಸಾ ಬಂಡೂರಿ ಬಗ್ಗೆ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರು ಇದೀಗ ಆಧ್ಯಾತ್ಮದತ್ತ ವಾಲುತ್ತಿದ್ದಾರೆ. ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ನದಿ ನೀರಿನ ಯೋಜನೆ ಜಾರಿಗೆ ಆಗ್ರಹಿಸಿ ರೈತ ವೇದಿಕೆಯಲ್ಲಿ ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ.
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಹದಾಯಿ-ಕಳಸಾಬಂಡೂರಿ ಯೋಜನೆಗಾಗಿ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ 460 ನೇ ದಿನಕ್ಕೆ ಕಾಲಿಟ್ಟಿದೆ. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದ ರಾಜ್ಯ ರೈತ ಸೇನೆಯ ಮುಖಂಡ ವೀರೇಶ ಸೊಬರದಮಠ, ರೈತರ ಏಳಿಗೆಗಾಗಿ ಮನೆ-ಕುಟುಂಬ ತೊರೆದು ಮಠಾಧೀಶರ ನೇತೃತ್ವದಲ್ಲಿ ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗದಗ ಜಗದ್ಗುರು ತೋಂಟದ ಸಿದ್ದಲಿಂಗ ಶ್ರೀಗಳು ಕಾವೇರಿ ಹಾಗೂ ಮಹದಾಯಿ ನ್ಯಾಯಾಧಿಕರಣದ ವಿರುದ್ಧ ಹರಿಹಾಯ್ದರು.
ಸಂಸಾರಿಕ ಜೀವನ ಮತ್ತು ಕೌಟುಂಬಿಕ ಜಂಜಾಟದಿಂದ ನನಗೆ ಹೋರಾಟದಲ್ಲಿ ಸಂಪೂರ್ಣವಾಗಿ ಧುಮುಕಲು ಆಗ್ತಾ ಇಲ್ಲ. ಈ ಕಾರಣಕ್ಕಾಗಿಯೇ ನಾನು ಮಹದಾಯಿ-ಕಳಸಾಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನನ್ನನ್ನೇ ನಾನು ಮುಡಿಪಾಗಿಡಲು ಸನ್ಯಾಸತ್ವ ಸ್ವೀಕಾರ ಮಾಡುತ್ತಿದ್ದೇನೆ ಎಂದು ಸನ್ಯಾಸತ್ವ ಸ್ವೀಕಾರ ಮಾಡಿದ ರೈತ ಮುಖಂಡ ಹೇಳಿದ್ರು.
ಹೋರಾಟದ ಹೆಸರಿನಲ್ಲಿ ರೈತರ ಮತ್ತು ದಾನಿಗಳ ದೇಣಿಗೆಯಿಂದ ಬಂದ ಲಕ್ಷಾಂತರ ಹಣವನ್ನು ವೀರೇಶ ಸೊಬರದಮಠ ದುರ್ಬಳಕೆ ಮಾಡಿದ್ದಾರೆ. ಈ ಸನ್ಯಾಸತ್ವದ ನಾಟಕವೂ ಇದಕ್ಕಾಗಿಯೇ ಎಂದು ನರಗುಂದದಲ್ಲಿ ಸದ್ದಿಗೋಷ್ಠಿ ನಡೆಸಿದ ಮತ್ತೊಂದು ಬಣದ ಹೋರಾಟಗಾರರು ಆರೋಪಿಸಿದ್ದಾರೆ. ಕೆಲ ದಿನಗಳ ಕಾಲ ಹೋರಾಟದಿಂದ ಹಿಂದೆ ಸರಿದಿದ್ದ ವೀರೇಶ್ ಸೊಬರದಮಠ, ಇದೀಗ ಏಕಾಏಕಿ ಪ್ರತಕ್ಷ್ಯವಾಗಿ ಸನ್ಯಾಸ ದೀಕ್ಷೆ ಹೆಸರಿನಲ್ಲಿ ಹಣ ಸುಲಿಗೆ ಮಾಡ್ತಾ ಇದ್ದಾರೆ ಎಂದು ಕೆಲವು ರೈತರು ಆರೋಪಿಸಿದ್ದಾರೆ. ಸನ್ಯಾಸ ದೀಕ್ಷೆ ಹೆಸರಿನಲ್ಲಿ ಹಣ ವಸೂಲಿ ಮಾಡಲು ಸೊಬರದಮಠ ಹೊಸ ತಂತ್ರವನ್ನು ಅನುಸರಿಸುತ್ತಿದ್ದು, ರಾಜಕೀಯವಾಗಿ ಡ್ರಾಮಾ ಮಾಡಲು ಮುಂದಾಗಿದ್ದಾರೆ ಎಂದು ಕೆಲ ರೈತರು ಗಂಭೀರವಾದ ಆರೋಪ ಮಾಡಿದ್ದಾರೆ.
ಮಹದಾಯಿ-ಕಳಸಾ ಯೋಜನೆ ತಾರ್ಕಿಕ ಹಂತಕ್ಕೆ ಬರಲಿ. ಇಂತಹ ಆರೋಪ-ಪ್ರತ್ಯಾರೋಪಗಳು ಯೋಜನೆಯನ್ನು ನುಂಗದಿರಲಿ. ಸರ್ಕಾರ ಮಹದಾಯಿಗೂ ನ್ಯಾಯಸಮ್ಮತಿಸಲಿ ಎನ್ನುವ ಆಶಯ ಎಲ್ಲರದ್ದು.